ಕಾಂಗ್ರೆಸ್ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಕೈಯಲ್ಲಿ ಕಂತೆಕಂತೆ ನೋಟು
ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನೆಲೆ ಕೊಂಡವಾಡಿ ಚಂದ್ರಶೇಖರ್ ಅವರು ಇಂದು ತುಮಕೂರಿನಲ್ಲಿ ಜೆಡಿಎಸ್ ಸೇರಿದರು. ಕುಮಾರಸ್ವಾಮಿ ಸಮ್ಮುಖದಲ್ಲಿ ತಮ್ಮ ಬೆಂಬಲಿಗರೊಂದಿಗೆ ದಳ ಸೇರಿದರು.
ತುಮಕೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಒಂದು ತಿಂಗಳಷ್ಟೇ ಬಾಕಿ ಇದೆ. ದಿನಗಳು ಉರುಳುತ್ತಿದ್ದಂತೆ ಬಂಡಾಯ ಏಳುವವರ ಸಂಖ್ಯೆ ಹೆಚ್ಚುತ್ತಿದ್ದು, ಕೆಲವರು ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ವಂಚಿತರು ತಮ್ಮ ಬೆಂಬಲಿಗರೊಂದಿಗೆ ಪಕ್ಷಾಂತರವಾಗುತ್ತಿದ್ದಾರೆ. ಅದರಂತೆ ತುಮಕೂರಿನಲ್ಲಿ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಯಾಗಿದ್ದ ಕೊಂಡವಾಡಿ ಚಂದ್ರಶೇಖರ್ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ (JDS) ಸೇರ್ಪಡೆಗೊಂಡರು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ಕಾರ್ಯಕ್ರಮದಲ್ಲಿ ತಮ್ಮ ಕಾರ್ಯಕರ್ತರಿಗೆ ಕುಮಾರಸ್ವಾಮಿ ಹಣ ನೀಡಲು ಮುಂದಾದ ಘಟನೆಯೂ ನಡೆದಿದೆ.
ಜಿಲ್ಲೆಯ ಮಧುಗಿರಿ ತಾಲೂಕಿನ ಕೈಮರ ಗ್ರಾಮ ನಡೆದ ಕಾಂಗ್ರೆಸ್ ಮುಖಂಡರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಕೈಯಲ್ಲಿ ನೋಟುಗಳ ಕಂತೆ ಪತ್ತೆಯಾಗಿದೆ. ಅಲ್ಲದೆ, ಕಾರ್ಯಕರ್ತನಿಗೆ ಹಣ ನೀಡಲು ಕರೆದು 500 ರೂಪಾಯಿ ಮುಖಬೆಲೆಯ ನೋಟು ಹೊರತೆಗೆದಿದ್ದಾರೆ. ಈ ವೇಳೆ ಕ್ಯಾಮರಾ ನೋಡಿದ ಕುಮಾರಸ್ವಾಮಿ, ಕಾರ್ಯಕರ್ತನನ್ನು ವಾಪಸ್ ಹಿಂದೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಕಾರ್ಯಕರ್ತನೇ ಹಾಸನದ ಜೆಡಿಎಸ್ ಅಭ್ಯರ್ಥಿ, ಬ್ಲ್ಯಾಕ್ಮೇಲ್ ನನ್ನ ಹತ್ತಿರ ನಡೆಯಲ್ಲ: ಭವಾನಿ ರೇವಣ್ಣಗೆ ಕುಮಾರಸ್ವಾಮಿ ಟಾಂಗ್
ಚುನಾವಣೆಯಲ್ಲಿ ಗೆದ್ದು ಸ್ಪಷ್ಟ ಬಹುಮತದ ಮೂಲಕ ಅಧಿಕಾರ ಹಿಡಿಯಲು ಶತಾಯ ಗತಾಯವಾಗಿ ಪ್ರಯತ್ನಿಸುತ್ತಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರೆ ಪಕ್ಷಗಳು ಮತದಾರರನ್ನ ಸೆಳೆಯಲು ಬೇಕಾದ ಎಲ್ಲಾ ತಂತ್ರಗಾರಿಗೆಳನ್ನು ಬಳಸುತ್ತಿದ್ದಾರೆ. ಚುನಾವಣೆಗೆ ಇನ್ನೇನು ಎರಡು ಮೂರು ತಿಂಗಳು ಬಾಕಿ ಇವೆ ಎಂದಾಗಲೇ ಆರಂಭವಾಗಿದ್ದು ಕುಕ್ಕರ್ ಪಾಲಿಟಿಕ್ಸ್, ತವಾ ಪಾಲಿಟಿಕ್ಸ್, ಸೀರೆ ಹಂಚಿಕೆ ಪಾಲಿಟಿಕ್ಸ್. ಇದೀಗ ಚುನಾವಣೆಗೆ ಒಂದು ತಿಂಗಳಷ್ಟೇ ಬಾಕಿ ಇರುವಾಗ ಹಣ ಹಂಚಿಕೆ ಪಾಲಿಟಿಕ್ಸ್ ಆರಂಭವಾಗಿದೆ.
ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಹಾಗೂ ಮತದಾರರಿಗೆ ಹಣ ಹಂಚುವ ಯತ್ನಗಳು ನಡೆಯುತ್ತಿವೆ. ಮತದಾರರಿಗೆ ಕುಕ್ಕರ್, ತವಾ, ಸೀರೆ ಹಂಚಿಕೆ ನಂತರ ಇದೀಗ ಹಣ ಹಂಚುವ ಯತ್ನ ಅಲ್ಲಲ್ಲಿ ನಡೆಯುತ್ತಿದೆ. ಈ ಹಿಂದೆ ಕಾರ್ಯಕರ್ತರ ಮೇಲೆ ಡಿಕೆ ಶಿವಕುಮಾರ್ ಹಣ ಎಸೆದಿರುವುದು, ಹಣ ನೀಡದ ಬಿಜೆಪಿ ಮುಖಂಡರ ಮೇಲೆ ಕಾರ್ಯಕರ್ತರು ಗರಂ ಆಗಿರುವುದು ಗೊತ್ತೇ ಇದೆ. ಈ ನಡುವೆ ಕುಮಾರಸ್ವಾಮಿ ಅವರು ಕಾರ್ಯಕರ್ತರಿಗೆ ಹಣ ನೀಡಲು ಮುಂದಾದ ಪ್ರಸಂಗವೂ ನಡೆಯಿತು. ಈ ಹಿಂದೆ ಜೆಡಿಎಸ್ ಮುಖಂಡರೊಬ್ಬರು ಪಕ್ಷದ ರಾಜ್ಯಾಧ್ಯಕ್ಷರು ಪ್ರಚಾರ ನಡೆಸುತ್ತಿದ್ದಾಗ ಸಿಎಂ ಇಬ್ರಾಹಿಂ ಅವರ ದೃಷ್ಟಿ ತೆಗೆದು ನೋಟುಗಳನ್ನು ಮೇಲಕ್ಕೆ ಎಸೆದಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ