ಹಾಸನ ಜೆಡಿಎಸ್​ ಟಿಕೆಟ್​ ಫೈಟ್: ಭವಾನಿ ರೇವಣ್ಣ-ಸ್ವರೂಪ್​ ಮಧ್ಯೆ ತೇಲಿಬಂತು ಹೊಸ ಹೆಸರು

|

Updated on: Mar 15, 2023 | 10:18 AM

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್​ಗಾಗಿ ಸ್ವರೂಪ್​ ಹಾಗೂ ಭವಾನಿ ರೇವಣ್ಣ ನಡುವೆ ಪೈಪೋಟಿ ನಡೆದಿದ್ದು, ಇವರಿಬ್ಬರ ಮಧ್ಯೆ ಹೊಸ ಹೆಸರು ತೇಲಿಬಂದಿದೆ.

ಹಾಸನ ಜೆಡಿಎಸ್​ ಟಿಕೆಟ್​ ಫೈಟ್: ಭವಾನಿ ರೇವಣ್ಣ-ಸ್ವರೂಪ್​ ಮಧ್ಯೆ ತೇಲಿಬಂತು ಹೊಸ ಹೆಸರು
ಭವಾನಿ, ಹೆಚ್​ಡಿಕೆ, ಸ್ವರೂಪ್​
Follow us on

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ (Hassan JDS Ticket Fight) ಗೊಂದಲ ಹೊಸ ತಿರುವು ಪಡೆದುಕೊಂಡಿದೆ. ಸ್ವರೂಪ್ (Swaroop) ಹಾಗೂ ಭವಾನಿ ರೇವಣ್ಣ(Bahavani Revanna) ಹೆಸರಿನ ನಡುವೆ ಮತ್ತೊಂದು ಹೆಸರು ತೇಲಿಬಂದಿದೆ. ಸಾಮಾನ್ಯ ಕಾರ್ಯಕರ್ತ ಹೆಸರಿನಲ್ಲಿ ಅಂತಿಮವಾಗಿ ಸ್ವರೂಪ್​ಗೆ ಟಿಕೆಟ್​ ನೀಡಿದರೆ ಭವಾನಿ ಬೆಂಬಲಿಗರು ಸಿಡಿದೇಳು ಭೀತಿ ಇದೆ. ಇನ್ನು ಭವಾನಿಗೆ ಟಿಕೆಟ್​ ನೀಡಿದರೆ ಸ್ವರೂಪ್​ ಬೆಂಬಲಿಗರು ಅಸಮಾಧಾನಗೊಳ್ಳುವ ಸಾಧ್ಯತೆಗಳು ಇವೆ. ಈ ಹಿನ್ನೆಲೆಯಲ್ಲಿ  ಈ ಇಬ್ಬರನ್ನು ಹೊರತುಪಡಿಸಿ ಹೊಸ ಮುಖಕ್ಕೆ ಮಣೆ ಹಾಕಲು ಜೆಡಿಎಸ್​(JDS)  ವರಿಷ್ಠರು ತಂತ್ರ ರೂಪಿಸಿದ್ದಾರೆ.

ಇದನ್ನೂ ಓದಿ: ರೇವಣ್ಣ ಕುಟುಂಬಕ್ಕೆ ಶಾಕ್: ಹಾಸನ ಟಿಕೆಟ್​ ಸಾಮಾನ್ಯ ಕಾರ್ಯಕರ್ತನಿಗೆ, ಇದಕ್ಕೆ ಬದ್ಧ ಎಂದ ಕುಮಾರಸ್ವಾಮಿ

ಜೆಡಿಎಸ್​ನ ಹಿರಿಯ ನಾಯಕ, ಹಾಸನ ನಗರಾಭಿವೃದ್ಧಿ ಪ್ರಾದಿಕಾರದ ಮಾಜಿ ಅದ್ಯಕ್ಷ ಕೆ.ಎಂ.ರಾಜೇಗೌಡ ಅವರನ್ನು ಕಣಕ್ಕಿಳಿಸಲು ಜೆಡಿಎಸ್ ಮುಖಂಡರು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದೀಗ ಆ ಹೆಸರು ಕ್ಷೇತ್ರದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಹಾಸನ ಜಿಲ್ಲಾ ರಾಜಕಾರಣದಲ್ಲಿ ಸಂಚನ ಮೂಡಿಸಿದೆ. ತಮ್ಮನ್ನ ಕಡೆಗಣಿಸಿ ಸ್ಚರೂಪ್ ಟಿಕೆಟ್​ ಪಡೆದರೆ ತಮ್ಮ ನಾಯಕತ್ವ ಜಿಲ್ಲೆಯಲ್ಲಿ ಕುಗ್ಗಿದಂತಾಗುತ್ತದೆ ಎಂದು ಅರಿತ ರೇವಣ್ಣ, ತಮ್ಮ ಆಪ್ತ, ಹಾಗೂ ಮಖ್ಯವಾಗಿ ದೇವೇಗೌಡರ ಜೊತೆಗೂ ಒಡನಾಟ ಇರುವ ರಾಜೇಗೌಡರ ಹೆಸರು ಪ್ರಸ್ತಾಪಿಸಿದ್ದಾರೆ.

ಹಾಸನದ ಅಭ್ಯರ್ಥಿಯನ್ನು ಅಂತಿಮಗೊಳಿಸಬೇಕಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಬದಲಾದ ಸನ್ನಿವೇಶದಲ್ಲಿ ಕೆ.ಎಂ.ರಾಜೇಗೌಡ ಅವರನ್ನು ಹಾಸನದಿಂದ ಕಣಕ್ಕಿಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಎಚ್.ಡಿ.ರೇವಣ್ಣ ಅವರು ಕೆ.ಎಂ.ರಾಜೇಗೌಡ ಅವರೊಂದಿಗೆ ಈಗಾಗಲೇ ಎರಡು ಬಾರಿ ಗೌಪ್ಯವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಈ ಮೂಲಕ ಸಾಮಾನ್ಯ ಕಾರ್ಯರ್ತರಿಗೆ ಟಿಕೆಟ್​ ನೀಡುವುದಾಗಿ ಕುಮಾರಸ್ವಾಮಿ ಹೇಳುತ್ತಲೇ ಇದ್ದಾರೆ. ಈ ಹಿನ್ನೆಲೆಯಲ್ಲಿ ಭವಾನಿಗೆ ಟಿಕೆಟ್​ ಸಿಗದಿದ್ದರೆ ಸ್ವರೂಪ್​ಗೂ ಬೇಡ. ಸಾಮಾನ್ಯ ಕಾರ್ಯಕರ್ತರಿಗೆ ಕೊಡುವುದಾದರೆ ರಾಜೇಗೌಡಗೆ ಟಿಕೆಟ್​ ಕೊಡಿ ಎಂದು ರೇವಣ್ಣ ಕುಮಾರಸ್ವಾಮಿ ಹಾಗೂ ಸ್ವೂರಪ್​ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಒಪ್ಪಿದ ಕೆ.ಎಂ.ರಾಜೇಗೌಡ ಅವರು ಹಾಸನದಲ್ಲಿ ತಮ್ಮ ಬೆಂಬಲಿಗರೊಂದಿಗೆ ಟೆಂಪಲ್ ರನ್ ಆರಂಭಿಸಿದ್ದಾರೆ. ಎಚ್.ಡಿ.ರೇವಣ್ಣ ಪ್ರಸ್ತಾಪಿಸಿದ ರಾಜೇಗೌಡ ಅವರ ಉಮೇದುವಾರಿಕೆಗೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಸಿರು ನಿಶಾನೆ ತೋರಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ದೇವೇಗೌಡ ಮತ್ತು ಹೆಚ್.ಡಿ.ಕುಮಾರಸ್ವಾಮಿ ಅವರ ಬಳಿಯೂ ಕೆ.ಎಂ.ರಾಜೇಗೌಡರ ಸಾಧಕ-ಬಾಧಕಗಳ ಬಗ್ಗೆ ಎಚ್.ಡಿ.ರೇವಣ್ಣ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:11 am, Wed, 15 March 23