ರೇವಣ್ಣ ಕುಟುಂಬಕ್ಕೆ ಶಾಕ್: ಹಾಸನ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೆ, ಇದಕ್ಕೆ ಬದ್ಧ ಎಂದ ಕುಮಾರಸ್ವಾಮಿ
ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಸಿದ್ಧವಾಗುತ್ತಿದೆ. ಈ ಹಿಂದೆಯೇ ಪಕ್ಷದ ಕಾರ್ಯಕರ್ತರಿಗೆ ಅದ್ಯತೆ ಎಂದು ಹೇಳಿದ್ದೆ. ಅದೇ ಮಾತು ಈಗಲೂ ಹೇಳುತ್ತೇನೆ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಗೆ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಬೇಸಿಗೆಯಲ್ಲಿ ಸೂರ್ಯನ ತಪಮಾನ ಹೆಚ್ಚುವಂತೆ, ಮೂರು ರಾಜಕೀಯ ಪಕ್ಷಗಳ ನಾಯಕರ ಅಬ್ಬರದ ಪ್ರಚಾರ ಹೆಚ್ಚುತ್ತಿದೆ. ಪ್ರದೇಶಿಕ ಪಕ್ಷ ಜಾತ್ಯಾತೀತ ಜನತಾದಳ (JDS) ಪಂಚರತ್ನ ಯಾತ್ರೆ ಮೂಲಕ ಮತಗಳ ಕ್ರೋಢೀಕರಣಕ್ಕೆ ಮುಂದಾಗಿದೆ. ಇನ್ನು ಹಾಸನ ವಿಧಾನಸಭಾ ಕ್ಷೇತ್ರದ (Hassan Assembly Constituency) ಮೇಲೆ ರಾಜ್ಯದ ಚಿತ್ತ ನೆಟ್ಟಿದೆ. ಕ್ಷೇತ್ರ ಟಿಕೆಟ್ ವಿಚಾರವಾಗಿ ದೊಡ್ಡಗೌಡರ ಕುಂಟುಂಬದಲ್ಲೇ ಬಿರುಕು ಬಿಟ್ಟಿದೆ. ಹಾಸನ ಟಿಕೆಟ್ ತನಗೆ ನೀಡಬೇಕೆಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ (HD Revanna) ಪತ್ನಿ ಭವಾನಿ ರೇವಣ್ಣ (Bhavani Revanna) ಪಟ್ಟು ಹಿಡಿದಿದ್ದು, ಮಾಜಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿಯವರಿಗೆ (HD Kumaraswamy) ಸಂಕಷ್ಟ ತಂದಿದೆ. ಸದ್ಯ ಈ ವಿಚಾರ ಈಗಾಗಲೆ ಮಾಜಿ ಪ್ರಧಾನಿ ದೇವೇಗೌಡರ ಪಿಚ್ನಲ್ಲಿದ್ದು, ಗೌಡರು ಯಾರತ್ತ ಬ್ಯಾಟ್ ಬೀಸುತ್ತಾರೆ, ಟಿಕೆಟ್ನ್ನು ಯಾರು ಕ್ಯಾಚ್ ಹಿಡಿತಾರೆ ಎಂದು ಕಾದು ನೋಡಬೇಕಿದೆ. ಈ ಮಧ್ಯೆ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಮಾತ್ರ ತಮ್ಮ ನಿರ್ಧಾರಕ್ಕೆ ಕಟಿಬದ್ಧರಾಗಿದ್ದು, ಕಾರ್ಯಕರ್ತನಿಗೆ ಹಾಸನ ಕ್ಷೇತ್ರದ ಟಿಕೆಟ್ ಎಂಬ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಗ್ರಾಮದಲ್ಲಿ ಮಾತನಾಡಿದ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಸಿದ್ಧವಾಗುತ್ತಿದೆ. ಈ ಹಿಂದೆಯೇ ಪಕ್ಷದ ಕಾರ್ಯಕರ್ತರಿಗೆ ಅದ್ಯತೆ ಎಂದು ಹೇಳಿದ್ದೆ. ಅದೇ ಮಾತು ಈಗಲೂ ಹೇಳುತ್ತೇನೆ, ಪಕ್ಷದ ಕಾರ್ಯಕರ್ತರಿಗೆ ಆದ್ಯತೆ ಎಂದು ಘೋಷಿಸಿದ್ದಾರೆ.
ಇದನ್ನೂ ಓದಿ: ಅರಕಲಗೂಡು ಕ್ಷೇತ್ರದಿಂದ ಎ. ಮಂಜು ಸ್ಪರ್ಧೆ: ಹೆಚ್ಡಿ ರೇವಣ್ಣ ಘೋಷಣೆ
ಹಾಸನ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಮಾರ್ಚ್ ದಿನಾಂಕ 18ನ್ನು ಖಾಲಿ ಇಟ್ಟದ್ದೇನೆ ಅದು ಯಾಕೆಂದು ನಿಮಗೂ ಅರ್ಥ ಆಗಿರಬಹುದು. ಈ ಮೂಲಕ ” ಪರೋಕ್ಷವಾಗಿ ಮಾರ್ಚ್ 18ಕ್ಕೆ ಹಾಸನದಲ್ಲಿ ಪಂಚರತ್ನ ಯಾತ್ರೆ ನಡೆಸಿ ಮಾಜಿ ಶಾಸಕ ದಿವಂಗತ ಎಚ್.ಎಸ್.ಪ್ರಕಾಶ್ ಪುತ್ರ ಸ್ವರೂಪ್ಗೆ ಟಿಕೇಟ್ ಎಂಬ ಸಂದೇಶ ಕೊಟ್ಟಿದ್ದಾರೆ”.
ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:56 pm, Mon, 13 March 23