AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನಾರ್ಧನ ರೆಡ್ಡಿ ವಿರುದ್ದ ತೊಡೆತಟ್ಟಿದ ಕೇಸರಿ ಕಲಿಗಳು; ಗದ್ದುಗೆ ಹಿಡಿಯಲು ಸಾಲು ಸಾಲು ಕಾರ್ಯಕ್ರಮ ಆಯೋಜನೆ

ಮಾಜಿ ಸಚಿವ ಜನಾರ್ಧನ ರೆಡ್ಡಿ ಅಖಾಡ ಗಟ್ಟಿಗೊಳಿಸುತ್ತಿದ್ದಂತೆ. ಇತ್ತ ಕೇಸರಿ ಬ್ರಿಗೇಡ್ ಕೂಡ ರೆಡ್ಡಿ ಅಖಾಡದಲ್ಲಿ ರಣಕಹಳೆ ಮೊಳಗಿಸಿದೆ. ಶತಾಯಗತಾಯ ಗಂಗಾವತಿಯಲ್ಲಿ ಬಿಜೆಪಿ ಮತ್ತೇ ಗೆಲ್ಲಬೇಕೆಂದು ಪಣತೊಟ್ಟಿದೆ. ಹೀಗಾಗಿಯೇ ಸಿಎಂ ಬೊಮ್ಮಾಯಿ ಖುದ್ದು ಅಖಾಡಕ್ಕಿಳಿದಿದ್ದಾರೆ.

ಜನಾರ್ಧನ ರೆಡ್ಡಿ ವಿರುದ್ದ ತೊಡೆತಟ್ಟಿದ ಕೇಸರಿ ಕಲಿಗಳು; ಗದ್ದುಗೆ ಹಿಡಿಯಲು ಸಾಲು ಸಾಲು ಕಾರ್ಯಕ್ರಮ ಆಯೋಜನೆ
ಜನಾರ್ಧನ ರೆಡ್ಡಿ
ಕಿರಣ್ ಹನುಮಂತ್​ ಮಾದಾರ್
|

Updated on: Mar 15, 2023 | 1:47 PM

Share

ಕೊಪ್ಪಳ: ಮಾಜಿ ಸಚಿವ, ಕೆಆರ್​ಪಿಪಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ(G. Janardhana Reddy) ಸ್ಪರ್ಧೆಯಿಂದ ಕೊಪ್ಪಳದ ಗಂಗಾವತಿ ಕ್ಷೇತ್ರ ರಾಜ್ಯದ ಹೈವೊಲ್ಟೇಜ್ ಕ್ಷೇತ್ರವಾಗಿ ಮಾರ್ಪಟ್ಟಿದೆ. ಸದ್ಯ ಗಂಗಾವತಿ ಕ್ಷೇತ್ರದಲ್ಲಿ ಬಿಜೆಪಿಯ ಪರಣ್ಣ ಮುನವಳ್ಳಿ ಶಾಸಕರಿದ್ದಾರೆ. ಆದರೆ ಜನಾರ್ಧನ ರೆಡ್ಡಿ ಗಂಗಾವತಿಯಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಿದ ಬಳಿಕ ಇಲ್ಲಿ ಬಿಜೆಪಿ‌ ಸ್ವಲ್ಪ ಕಾಲ ಮಂಕಾಗಿತ್ತು. ಹೌದು ಬಿಜೆಪಿಯ ಬೂತ್ ಮಟ್ಟದ ಕಾರ್ಯಕರ್ತರನ್ನ ಬಿಡದೇ ರೆಡ್ಡಿ ತಮ್ಮತ್ತ ಸೆಳೆದಿದ್ದರು.‌ ಹೀಗಾಗೆ ಖುದ್ದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ರೆಡ್ಡಿಯನ್ನ ಕಟ್ಟಿ ಹಾಕುವಂತೆ ಅಮಿತ್ ಶಾ ಗೆ ದೂರು ನೀಡಿದ್ದರು. ಅದಕ್ಕಾಗಿ ನಿನ್ನೆಯಿಂದ ಕೇ‌ಸರಿ ಬ್ರಿಗೇಡ್ ಸಾಲು ಸಾಲು ಕಾರ್ಯಕ್ರಮ ಆಯೋಜ‌ನೆ ಮಾಡುವ ಮೂಲಕ ರೆಡ್ಡಿಗೆ ಟಕ್ಕರ್ ನೀಡಿದೆ.

ಇನ್ನು ನಿನ್ನೆ(ಮಾ.14)ಸಿಎಂ ಬೊಮ್ಮಾಯಿ ಖುದ್ದು ಅಂಜನಾದ್ರಿ ಅಸ್ತ್ರವನ್ನಿಟ್ಟುಕೊಂಡು ಅಖಾಡಕ್ಕಿಳಿದಿದ್ದಾರೆ. ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮೊದಲಿಗೆ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಪರ್ವತದಲ್ಲಿ 21 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆ ನೆರವೇರಿಸಿದ ಸಿಎಂ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಫಲಾನುಭವಿಗಳ ಸಮಾವೇಶ ನಡೆಸಿ ಮತಬೇಟೆಯಾಡಿದ್ರು. ಅಲ್ಲಿಯೆ ಅಬ್ಬರಿಸಿದ ಸಿಎಂ ಬೊಮ್ಮಾಯಿ‌ ಇಷ್ಟು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಜನರ ಬಳಿ ಹೋಗಿಲ್ಲ. ನಮ್ಮ ಸರ್ಕಾರ ಜನರ ಹತ್ತಿರ ಹೋಗಿದೆ. ನೇರವಾಗಿ ನಮ್ಮ ಸರ್ಕಾರದ ಯೋಜನೆ ಜನರಿಗೆ ಸಿಕ್ಕಿದೆ ಎಂದು ಕುಟುಕಿದ್ರು.‌ ಅಲ್ಲದೇ ಎಸ್ಸಿ, ಎಸ್ಟಿ ಮೀಸಲಾತಿ ಹೆಚ್ಚಳ ಮಾಡೋಕೆ ನಂಗೆ ಕೆಲವೊಬ್ಬರು ಹೆದರಿಸಿದ್ರು.‌ ಆದರೆ ನಾನು ಆ ಸಮುದಾಯಕ್ಕೆ ಜೇನಿನ ಸಿಹಿ ನೀಡಿದ್ದೇನೆ ಎಂದರು.

ಇದನ್ನೂ ಓದಿ:ಪ್ರಜಾಧ್ವನಿ ಸಮಾವೇಶ ರದ್ದು ಬೆನ್ನಲ್ಲೇ ಸಿಎಂ ಭೇಟಿಯಾದ ಕೈ ಶಾಸಕಿ, ಕುತೂಹಲ ಮೂಡಿಸಿದ ಕುಸುಮಾ ಶಿವಳ್ಳಿ ನಡೆ

ಬೆಳಿಗ್ಗೆ ಬೆಂಗಳೂರಿನಿಂದ ನೇರವಾಗಿ ರಾಮಭಕ್ತ ಹನುಮ ಜನಿಸಿದ ಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಬಂದ ಸಿಎಂ ಬೊಮ್ಮಾಯಿ, ಹಿಂದೂ ಮತಬ್ಯಾಂಕ್ ರೆಡ್ಡಿ ಕಡೆ ವಾಲದಂತೆ ಪ್ರಯತ್ನ ನಡೆಸಿದ್ದರು. ಅಂಜನಾದ್ರಿಯನ್ನ ಬಿಜೆಪಿಯೇ ಅಭಿವೃದ್ಧಿ ಮಾಡಿದ್ದು, ಎನ್ನುವ ಸಂದೇಶದ ಮೂಲಕ ಹನುಮ ಭಕ್ತರ ಮತಬ್ಯಾಂಕ್​ಗೆ ಕೈ ಹಾಕಿದ್ದಾರೆ. ಆ ಮೂಲಕ ಗಣಿಧಣಿ ರೆಡ್ಡಿ ಬಿಜೆಪಿ ಮತಬ್ಯಾಂಕ್ ಛಿದ್ರ ಮಾಡದಂತೆ ಸಂದೇಶ ನೀಡಿದ್ರು. ಈ ವೇಳೆ ಸಿಎಂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಅಷ್ಟೇ ಅಲ್ಲ ಮುಂದಿನ ಬಾರಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕನಕಗಿರಿ ಶಾಸಕ ಬಸವರಾಜ ದಡೇಸೂಗುರ್​ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಇನ್ನು ನಿನ್ನೆಯಷ್ಟೇ ಗಂಗಾವತಿಗೆ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಿನ್ನಲೆಯಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಭೇಟಿ ನೀಡಿ, ಪರಣ್ಣ ಮುನವಳ್ಳಿ ಪರ ಬ್ಯಾಟಿಂಗ್ ಮಾಡಿದ್ದರು. ಇಂದು ರಾಜ್ಯದ ಸಿಎಂ ಬೊಮ್ಮಾಯಿ ಸಹ ಗಂಗಾವತಿಗೆ ಆಗಮಿಸಿ ಪರಣ್ಣ ಮುನವಳ್ಳಿ ಪರ ಪ್ರಚಾರ ಮಾಡಿದರು. ಒಟ್ಟಿನಲ್ಲಿ ರೆಡ್ಡಿ ಆಗಮನದಿಂದ ಕಳೆಕುಂದಿದ್ದ ಬಿಜೆಪಿ ಇದೀಗ ರಾಜ್ಯ, ರಾಷ್ಟ್ರ ನಾಯಕರನ್ನ ಕರೆಸುವ ಮೂಲಕ ಮತ್ತೇ ಗಂಗಾವತಿಯಲ್ಲಿ ಬಿಜೆಪಿ ವಿಜಯ ಪತಾಕೆ ಹಾರಿಸಲು ಸಿದ್ಧವಾಗಿದೆ. ಆದರೆ ಮತದಾರ ಪ್ರಭು ಗಾಲಿ ಉರಳಿಸುತ್ತಾನೋ ಅಥವಾ ಕಮಲ ಅರಳಿಸುತ್ತಾನೋ ಕಾದು ನೋಡಬೇಕು.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ