ತುಮಕೂರು: ಗ್ರಾಮೀಣ ಜನರನ್ನು ಲೂಟಿ ಮಾಡಿದ ಹಿರಿಮೆ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಇದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬಡವರು ಮತ್ತು ಗ್ರಾಮೀಣ ಪ್ರದೇಶಗಳೆರಡೂ ದಾಖಲೆ ಮಟ್ಟದಲ್ಲಿ ಅಭಿವೃದ್ಧಿಯಾಗುತ್ತಿವೆ. ರೈತರ ಬ್ಯಾಂಕ್ ಖಾತೆಗೆ ನೇರವಾಗಿ 2.5 ಲಕ್ಷ ಕೋಟಿ ರೂ. ಹಣ ವರ್ಗಾವಣೆ ಮಾಡಿದ್ದೇವೆ. ತುಮಕೂರಿನಲ್ಲಿ (Tumkur) 3 ಲಕ್ಷ ರೈತರು ಸುಮಾರು 700 ಕೋಟಿ ರೂ.ಗಳನ್ನು ಪಡೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ವಿಧಾನಸಭಾ ಚುನಾವಣೆ ಪ್ರಚಾರ ನಿಮಿತ್ತ ತುಮಕೂರು ಗ್ರಾಮಾಂತರ ಭಾಗದ ಸರ್ಕಾರಿ ಕಾಲೇಜು ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯಿಂದ ಮಾತ್ರ ಕರ್ನಾಟಕದ ಅಭಿವೃದ್ಧಿ ಸಾಧ್ಯ ಎಂದರು.
ಬೃಹತ್ ಸಂಖ್ಯೆಯಲ್ಲಿ ಸೇರಿದ ಜನರಿಗೆ ನಮಸ್ಕರಿಸಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ, ಸಿದ್ಧಗಂಗಾ ಮಠ, ಆದಿಚುಂಚನಗಿರಿ ಮಠದ ಶ್ರೀಗಳನ್ನು ಸ್ಮರಿಸಿದರು. ಸಾಧುಸಂತರ ಹಾಗೂ ಜನರ ಆಶೀರ್ವಾದದಿಂದ ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು. ರೋಡ್ಶೋ ಹಾಗೂ ಸಮಾವೇಶದಲ್ಲಿ ಸೇರಿದ ಜನಸಂಖ್ಯೆ ನೋಡಿದಾಗಲೇ ಬಿಜೆಪಿ ಸರ್ಕಾರ ಖಚಿತ ಎಂಬುದನ್ನು ತೋರಿಸತ್ತದೆ ಎಂದರು.
ಬಿಜೆಪಿ ಸಮಾವೇಶದಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ಕಾಂಗ್ರೆಸ್ ತುಷ್ಟೀಕರಣದ ಗುಲಾಮ ಆಗಿ ಪರಿವರ್ತನೆಗೊಂಡಿದೆ ಎಂದರು. ಕರ್ನಾಟಕವನ್ನು ಜೆಡಿಎಸ್, ಕಾಂಗ್ರೆಸ್ ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಿಜೆಪಿಯಿಂದ ಮಾತ್ರ ಕರ್ನಾಟಕ ಜೊತೆ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಪವಿತ್ರ ಭೂಮಿ ಸಿದ್ಧಗಂಗಾ ಶ್ರೀಗಳ ಸಾನಿಧ್ಯಕ್ಕೆ ಬಂದಿದ್ದೇನೆ ಎಂದು ಹೇಳಿದ ಮೋದಿ, ಬಿಜೆಪಿ ಅನ್ನ, ಅಕ್ಷರ, ಆದಾಯ ಇತ್ಯಾದಿ 7 ಅಭಿವೃದ್ಧಿಯ ಸಂಕಲ್ಪ ಹೊಂದಿದೆ ಎಂದರು. ತುಮಕೂರಿನಲ್ಲಿ ಅನೇಕ ಯೋಜನೆಗಳ ಶಿಲಾನ್ಯಾಸ, ಉದ್ಘಾಟನೆ, ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿದೆ. ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ವೇಗದ ಗತಿ ನೀಡಿದೆ ಎಂದರು.
ದೇಶದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ, ಮಹಿಳೆಯರ ಕಲ್ಯಾಣಕ್ಕಾಗಿ ಬಿಜೆಪಿ ಸರ್ಕಾರ ಹಲವು ಯೋಜನೆ ತಂದಿದೆ ಎಂದು ಪ್ರಧಾನಿ ಮೋದಿ ತುಮಕೂರಿನಲ್ಲಿ ಹೇಳಿದರು. 2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಅಭಿವೃದ್ಧಿ ವೇಗ ಹೆಚ್ಚಿದೆ ಎಂದು ಹೇಳಿದ ಮೋದಿ, 3 ಕೋಟಿಗೂ ಹೆಚ್ಚು ಮನೆಗಳು ಮಹಿಳೆಯರ ಹೆಸರಿನಲ್ಲಿವೆ. ದೇಶದ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ, ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಮೂಲಕ ರಸ್ತೆ ಅಭಿವೃದ್ಧಿ ಮಾಡತ್ತಿದ್ದೇವೆ, ತುಮಕೂರು ಜಿಲ್ಲೆಯ 1.5 ಲಕ್ಷ ಕುಟುಂಬಗಳಿಗೆ ನಲ್ಲಿ ನೀರು ಕಲ್ಪಿಸಿದ್ದೇವೆ ಎಂದರು.
ಬಡವರ ಮಕ್ಕಳು ಏಳಿಗೆಯಾಗಬೇಕು ಎಂಬುವುದು ನಮ್ಮ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ನವರು ಬಡವರ ಮಕ್ಕಳ ಉದ್ಧಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು. ಕಾಂಗ್ರೆಸ್, ಜೆಡಿಎಸ್ ಕರ್ನಾಟಕದ ಯುವಕರ ಭವಿಷ್ಯಕ್ಕೆ ತಡೆಯೊಡ್ಡುತ್ತಿವೆ. ಕರ್ನಾಟಕದ ಯುವಕರ ಭವಿಷ್ಯದ ಬಗ್ಗೆ ಅವರಿಗೆ ದೂರದೃಷ್ಟಿ ಇಲ್ಲ. ಕಾಂಗ್ರೆಸ್ 85% ಕಮಿಷನ್ ಪಡೆದು ದೇಶವನ್ನು ಹಾಳು ಮಾಡಿದೆ ಎಂದು ಟೀಕಿಸಿದರು.
ಸಮಾವೇಶಕ್ಕೂ ಮುನ್ನ ಹಲಿಪ್ಯಾಡ್ನಿಂದ ಸಮಾವೇಶದ ಸ್ಥಳದವರೆಗೆ ರೋಡ್ ಶೋ ನಡೆಸಿದರು.
ಇದಕ್ಕೂ ಮುನ್ನ ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ್ದ ಮೋದಿ, ಬಜರಂಗಬಲಿ ವಿಚಾರ ಪ್ರಸ್ತಾಪಿಸಿದ್ದಾರೆ. ಜತೆಗೆ ಕಾಂಗ್ರೆಸ್, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಲ್ಲದೆ, ಬಿಜೆಪಿ ಮರಳಿ ಅಧಿಕಾರಕ್ಕೆ ಬಂದ ನಂತರ ಕರ್ನಾಟಕವನ್ನು ನಂಬರ್ 1 ರಾಜ್ಯ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಬಳ್ಳಾರಿಯ ನಿಮ್ಮ ಪ್ರೀತಿ, ಉತ್ಸಾಹ ನಾನು ಎಂದೂ ಮರೆಯುವುದಿಲ್ಲ ಎಂದ ಮೋದಿ, ಬಿಜೆಪಿ ಬುಡಕಟ್ಟು ಸಮುದಾಯವನ್ನು ಸಶಕ್ತೀಕರಣಗೊಳಿಸಿದೆ. ಕಾಂಗ್ರೆಸ್ ಬುಡಕಟ್ಟು ಸಮುದಾಯಕ್ಕೆ ಅವಮಾನ ಮಾಡ್ತಿದೆ. ಸಮಾಜದ ವಂಚಿತ ಜನರ ಅಭಿವೃದ್ಧಿಯನ್ನು ಕಾಂಗ್ರೆಸ್ ಎಂದೂ ಸಹಿಸುವುದಿಲ್ಲ. ಬುಡಕಟ್ಟು ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ರೆ ಅಪಮಾನಿಸುತ್ತಾರೆ. ಆದಿವಾಸಿ ಮಹಿಳೆ ರಾಷ್ಟ್ರಪತಿ ಆದ್ರೆ ಕಾಂಗ್ರೆಸ್ನವರಿಗೆ ಹೊಟ್ಟೆಕಿಚ್ಚು. ಹಿಂದುಳಿದವರ ಅಭಿವೃದ್ಧಿ ಕಾಂಗ್ರೆಸ್ ಪಕ್ಷ ಎಂದೂ ಸಹಿಸುವುದಿಲ್ಲ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ: Narendra Modi: ಹನುಮನ ಜನಿಸಿದ ನಾಡಲ್ಲೇ ಮತ್ತೆ ಬಜರಂಗಬಲಿ ಘೋಷಣೆ; ಪ್ರಧಾನಿ ಮೋದಿ ತಂತ್ರಗಾರಿಕೆ ಏನು?
ಸುಡಾನ್ನಲ್ಲಿ ಆಂತರಿಕ ಯುದ್ಧ ನಡೆಯುತ್ತಿದೆ. ಸುಡಾನ್ನಲ್ಲಿ ಸಿಲುಕಿದ್ದ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸುರಕ್ಷಿತವಾಗಿ ಕರೆತಂದಿದ್ದೇವೆ. ‘ಆಪರೇಷನ್ ಕಾವೇರಿ’ ಮೂಲಕ ಸ್ವದೇಶಕ್ಕೆ ಕರೆತಂದಿದ್ದೇವೆ ಎಂತಹ ಕಠಿಣ ಸಂದರ್ಭದಲ್ಲೂ ಸುರಕ್ಷಿತವಾಗಿ ಕರೆತಂದಿದ್ದೇವೆ. ಎಂತಹ ಸಂದರ್ಭದಲ್ಲೂ ಮೋದಿ ಸರ್ಕಾರ ನಿಮ್ಮ ರಕ್ಷಣೆಗೆ ಇದೆ ಎಂದು ಮೋದಿ ಹೇಳಿದ್ದಾರೆ. ಜತೆಗೆ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆಯೂ ಪ್ರಸ್ತಾಪಿಸಿದರು. ಪಾಕಿಸ್ತಾನದಿಂದ ಸುರಕ್ಷಿತವಾಗಿ ಅಭಿನಂದನ್ರನ್ನು ಕರೆತಂದಿದ್ದೇವೆ. ಸಾವಿರಾರು ವಿದ್ಯಾರ್ಥಿಗಳನ್ನು ಉಕ್ರೇನ್ನಿಂದ ಕರೆತರಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳು, ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ನಾವು ಕರೆತಂದಿದ್ದೇವೆ ಎಂದು ಹೇಳಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ