ಚಾಮರಾಜನಗರ: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Election 2023) ಮೇ 10 ರಂದು 224 ಕ್ಷೇತ್ರಗಳಲ್ಲಿ ಯಶಸ್ವಿ ಮತದಾನ ನಡೆದಿದೆ. ಸದ್ಯ ಎಲ್ಲರ ಚಿತ್ತ ನಾಳೆಯ ಮತ ಎಣಿಕೆ ಮತ್ತು ಫಲಿತಾಂಶದ ಮೇಲಿದೆ. ಇದರ ಮಧ್ಯೆ ರಾಜ್ಯದಲ್ಲಿ ಬೆಟ್ಟಿಂಗ್ ಕೂಡ ಜೋರಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳ ಮೇಲೆ ಬೆಟ್ಟಿಂಗ್ ಮಾಡಲಾಗುತ್ತಿದೆ. ಈ ವಿಚಾರವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪುರಸಭೆ ಸದಸ್ಯನ ಮನೆ ಮೇಲೆ ಶುಕ್ರವಾರ ಪೊಲೀಸರು ದಾಳಿ ಮಾಡಿದ್ದಾರೆ. ಕಿರಣ್ ಪುರಸಭೆ ಸದಸ್ಯ. ಚುನಾವಣೆಯಲ್ಲಿ ಯಾರು ಗೆಲುತ್ತಾರೆ ಎಂದು ಸುಮಾರು 1 ಕೋಟಿ ರೂ. ಬೆಟ್ಟಿಂಗ್ ಕಟ್ಟಲು ಆಹ್ವಾನ ನೀಡಿದ್ದ ಎನ್ನಲಾಗಿದೆ.
ಮೈಸೂರಿನ ಪಿರಿಯಾಪಟ್ಟಣದಲ್ಲಿ ಕೂಡ ಬೆಟ್ಟಿಂಗ್ ಭರಾಟೆ ಹೆಚ್ಚಾಗಿದೆ. ನಿವೇಶನ, ಹೊಲ, ಗದ್ದೆ, ನಗದು ವಿಡಿಯೋ ಮಾಡಿ ಬೆಟ್ಟಿಂಗ್ ಕಟ್ಟಲು ಸವಾಲು ಹಾಕಲಾಗಿದೆ. ಯುವಕರು, ವೃದ್ದರು ಯಾರೂ ಬೇಕಾದರೂ
ತಾಕತ್ತಿದ್ದರೆ ಇದ್ದರೆ ಬೆಟ್ಟಿಂಗ್ ಕಟ್ಟಿ ಬನ್ನಿ ಅಂತಾ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಪರ ಚಾಲೆಂಜ್ ಮಾಡಲಾಗಿದೆ.
ಇದನ್ನೂ ಓದಿ: ಕೊಪ್ಪಳ: 4.3 ಎಕರೆ ಬತ್ತದ ಗದ್ದೆ, 50 ಲಕ್ಷ ಬೆಲೆ ಬಾಳುವ ಬಿಲ್ಡಿಂಗ್ ಬೆಟ್ಟಿಂಗ್
ವರುಣದಲ್ಲಿಯೂ ಸಹ ವಿ. ಸೋಮಣ್ಣ ಪರ ಬೆಟ್ಟಿಂಗ್ ಜೋರಾಗಿದ್ದು, 3, 300 ಚದರಡಿ ನಿವೇಶನ ಬಾಜಿ ಕಟ್ಟಲು ಅಭಿಮಾನಿಯೊಬ್ಬರು ಸಿದ್ಧವಾಗಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿ ಬಹಿರಂಗ ಸವಾಲು ಎಸೆದಿದ್ದಾರೆ. ವಿ. ಸೋಮಣ್ಣ, ಸಿದ್ದರಾಮಯ್ಯ ವಿರುದ್ದ ಗೆಲುವು ಸಾಧಿಸುತ್ತಾರೆ. 25 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ. ಈ ಸಂಬಂಧ ಬಾಜಿ ಕಟ್ಟುವವರು ಇದ್ದರೆ ಕಟ್ಟಿ. ನನ್ನ ಕೋಟ್ಯಾಂತರ ಬೆಲೆ ಬಾಳುವ ನಿವೇಶನ ಅಗ್ರಿಮೆಂಟ್ ಮಾಡಿಕೊಡುತ್ತೇನೆ ಎಂದು ಸೋಮಣ್ಣ ಬೆಂಬಲಿಗನ ವಿಡಿಯೋ ವೈರಲ್ ಆಗಿದೆ.
ಮಂಡ್ಯ: ಮತದಾನದ ಬಳಿಕ ಮಂಡ್ಯದಲ್ಲಿ ಬೆಟ್ಟಿಂಗ್ ಮಾಡಲಾಗುತ್ತಿದ್ದು, ಮಂಡ್ಯದ ನಾಗಮಂಗಲದಲ್ಲಿ ಜೆಡಿಎಸ್, ಕಾಂಗ್ರೆಸ್ ಗೆಲುವಿಗೆ ಬೆಟ್ಟಿಂಗ್ ನಡೆಯುತ್ತಿದೆ. ಬಚ್ಚಿಕೊಪ್ಪಲು ಗ್ರಾಮದಲ್ಲಿ ಜೆಡಿಎಸ್, ಕಾಂಗ್ರೆಸ್ ಅಭಿಮಾನಿಗಳಿಂದ ಮೇಕೆ, ಕುರಿಗಳನ್ನು ಪಣಕ್ಕಿಡಲಾಗಿದೆ. ಮಂಡ್ಯ ಎಸ್ಪಿ ಖಡಕ್ ಸೂಚನೆ ಬಳಿಕವು ಬೆಟ್ಟಿಂಗ್ ನಿಲ್ಲುತ್ತಿಲ್ಲ.
ಇದನ್ನೂ ಓದಿ: Betting on candidates: ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಎರಡು ದಿನ ಬಾಕಿಯಿರುವಾಗಲೇ ಮೈಸೂರಲ್ಲಿ ಜೋರಾಯ್ತು ರಾಜಕೀಯ ಬೆಟ್ಟಿಂಗ್!
ಕೊಪ್ಪಳದಲ್ಲೂ ಕೋಟಿಗಟ್ಟಲೆ ಬಾಜಿ ಕಟ್ಟಲು ಶಿವರಾಜ ತಂಗಡಗಿ ಬೆಂಬಲಿಗರು ಮುಂದಾಗಿದ್ದಾರೆ. ಜಿಲ್ಲೆಯ ಕನಕಗಿರಿ ಮತಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಕಾರಟಗಿಯ ಸತ್ಯ ಪ್ರಕಾಶ ಚೌದರಿ ಅಂದಾಜು 1.5 ಕೋಟಿ ಮೌಲ್ಯದ ಆಸ್ತಿ ಬೆಟ್ಟಿಂಗ್ ಕಟ್ಟಲು ಮುಂದಾಗಿದ್ದು, ಬೆಟ್ಟಿಂಗ್ ಕಟ್ಟುವವರು ಇಂದು(ಮೇ.12) ಸಂಜೆಯವರೆಗೆ ಸಂಪರ್ಕ ಮಾಡಿ ಎಂದು ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಚೆಲ್ಲೂರು ಕ್ಯಾಂಪ್ ಕಾಲುವೆ ಪಕ್ಕದ ಸರ್ವೆ ನಂಬರ್ 115ಬಿಪಿ 4.3 ಎಕರೆ ಬತ್ತದ ಗದ್ದೆ ( ಅಂದಾಜು 1 ಕೋಟಿ ), 50 ಲಕ್ಷ ಬೆಲೆ ಬಾಳುವ ಬಿಲ್ಡಿಂಗ್ ಪಂದ್ಯಕ್ಕೆ ಇಟ್ಟಿದ್ದಾರೆ.
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ