ಟೆಂಡರ್ ಮೂಲಕ ಗುತ್ತಿಗೆದಾರರಿಂದ ಬಿಜೆಪಿ ಹಣ ಸಂಗ್ರಹ: ಕೇಂದ್ರ ಚುನಾವಣೆ ಆಯೋಗಕ್ಕೆ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ದೂರು
ಚುನಾವಣೆಗೂ ಮುನ್ನ 20 ಸಾವಿರ ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್, ಕೂಡಲೇ ಟೆಂಡರ್ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದ್ದಾರೆ.
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹೊಸ್ತಿಲಲ್ಲಿ ಸರ್ಕಾರ 20 ಸಾವಿರ ಕೋಟಿ ರೂ. ಟೆಂಡರ್ ಆಹ್ವಾನಿಸಿರುವುದು ಚುನಾವಣ ಅಕ್ರಮಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿ ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ (Syed Naseer Hussain) ಕೇಂದ್ರ ಚುನಾವಣಾ ಆಯೋಗಕ್ಕೆ (Election Commission Of India) ದೂರು ನೀಡಿದ್ದಾರೆ. ಬಳಿಕ ಮಾತನಾಡಿದ ಅವರು, ಚುನಾವಣೆಗೂ ಮುನ್ನ 20 ಸಾವಿರ ಕೋಟಿ ರೂ. ಟೆಂಡರ್ ಕರೆಯಲಾಗಿದೆ. ಈ ಟೆಂಡರ್ ಮೂಲಕ ಗುತ್ತಿಗೆದಾರರಿಂದ ಹಣ ಸಂಗ್ರಹ ಮಾಡಲಾಗುತ್ತಿದೆ. ಇದೇ ಹಣವನ್ನು ಚುನಾವಣೆಗೆ ಬಳಸಿಕೊಳ್ಳಲು ಬಿಜೆಪಿ ಸಿದ್ಧತೆ ನಡೆಸಿದೆ. ಹೀಗಾಗಿ ಕೂಡಲೇ ಟೆಂಡರ್ಗೆ ತಡೆ ನೀಡುವಂತೆ ಆಯೋಗಕ್ಕೆ ಮನವಿ ಮಾಡಿದ್ದೇವೆ. ಅಲ್ಲದೆ, 6-7 ವರ್ಷದಿಂದ ಒಂದೇ ಕಡೆ ಇರುವ ಅಧಿಕಾರಿಗಳ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಯ ಯೋಜನೆಗಳ ಸಂಬಂಧ 20 ಸಾವಿರ ಕೋಟಿ ರೂ. ಟೆಂಡರ್ ಆಹ್ವಾನಿಸಲಾಗಿದೆ. ಈ ಆದೇಶವನ್ನು ಕಳೆದ ತಿಂಗಳು ಮಾರ್ಚ್ನಲ್ಲಿ ಹೊರಡಿಸಲಾಗಿತ್ತು. ಈ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸಫಲ ಬಿಡ್ಡರ್ಗಳಿಂದ ಶೇ 40 ಕಮಿಷನ್ ಸಂಗ್ರಹಿಸಲು ಇಲಾಖೆಗಳು ಹಲವು ಟೆಂಡರ್ಗಳನ್ನು ಕರೆದಿದ್ದು, ಆ ಹಣವನ್ನು ಚುನಾವಣೆಗೆ ಬಳಸಲು ಬಿಜೆಪಿ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ ವಿಮಾನ ನಿಲ್ದಾಣದ ಕಮಲ ಚಿಹ್ನೆ ಮುಚ್ಚುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಮನವಿ
ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಧಿಕಾರಿಗಳು, ಸಚಿವರು, ಶಾಸಕರು, ಸಂಸದರು ಹಿಂದಿನ ದಿನಾಂಕ ಹಾಕಿ ಟೆಂಡರ್ ಕರೆದು ಹಣ ಪಡೆಯಲು ಮುಂದಾಗಿದ್ದಾರೆ. ಸರ್ಕಾರದ ಈ ನಡೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಅಲ್ಲದೆ, ಮುಕ್ತ ಹಾಗೂ ಪಾರದರ್ಶಕ ಚುನಾವಣೆಗಾಗಿ ಇತ್ತೀಚೆಗೆ ಹೊರಡಿಸಲಾದ ಟೆಂಡರ್ಗಳನ್ನು ರದ್ದುಗೊಳಿಸುವಂತೆ ಕೋರಿದ್ದರು.
ವಸತಿ ಯೋಜನೆಗಳು 972 ಕೋಟಿ ರೂ., ಓಬಳಾಪುರ- ಸೋಮಕ್ಕನ ಮಠ ರಸ್ತೆ ಯೋಜನೆ 1,682 ಕೋಟಿ ರೂ., ರಾಯಚೂರು ವಿಭಾಗದ ಯೋಜನೆ 1,633 ಕೋಟಿ, ಸೋಮಕ್ಕನಮಠ ಕುಣಿಗಲ್ ರಸ್ತೆ ಯೋಜನೆ 968 ಕೋಟಿ, ಹಾಸನ ಚತುಷ್ಪಥ 1,318 ಕೋಟಿ, ಶಿರಾಡಿ ಘಾಟ್ ರಸ್ತೆ ಯೋಜನೆ 1,976 ಕೋಟಿ ರೂ., ಬೆಳಗಾವಿ ಹುನಗುಂದ ರಸ್ತೆ ಕಾಮಗಾರಿ 1,044 ಕೋಟಿ, ಹೊಸಪೇಟೆ-ಬಳ್ಳಾರಿ ರಸ್ತೆ ಯೋಜನೆ 1,015 ಕೋಟಿ, ಬೈಪಾಸ್ ಕಾಮಗಾರಿಗಳಿಗೆ 1,167 ಕೋಟಿ, ಇತರೆ ಸಿವಿಲ್ ಕಾಮಗಾರಿಗಳಿಗೆ 1,000 ಕೋಟಿ ರೂ., ಇತರೆ ಕಾಮಗಾರಿಗಳಿಗೆ 1,500 ಕೋಟಿ ರೂ. ಸೇರಿದಂತೆ ಕೆಲ ಟೆಂಡರ್ಗಳನ್ನು ರದ್ದುಗೊಳಿಸುವಂತೆ ಕೋರಿದ್ದರು. ಇದೇ ವೇಳೆ ಕೆಲವು ವರ್ಷಗಳಿಂದ ಒಂದೇ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವರ್ಗಾವಣೆಗೆ ಮನವಿ ಮಾಡಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Mon, 10 April 23