ಚಿಕ್ಕಮಗಳೂರು: ಡಿಕೆ ಶಿವಕುಮಾರ್ ಎದುರೇ ಅಸಮಾಧಾನ ಹೊರಹಾಕಿದ ಹೆಚ್ಡಿ ತಮ್ಮಯ್ಯ
ಬಿಜೆಪಿ ಏಜೆಂಟ್ ಎಂದು ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ವಿಚಾರವಾಗಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಹೆಚ್ಡಿ ತಮ್ಮಯ್ಯ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಬಿಜೆಪಿ ಏಜೆಂಟ್ ಎಂದು ತಮ್ಮ ವಿರುದ್ಧ ಅಪಪ್ರಚಾರ ನಡೆಯುತ್ತಿರುವ ವಿಚಾರವಾಗಿ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಹೆಚ್ಡಿ ತಮ್ಮಯ್ಯ (HD Thammaiah) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎದುರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ತಮ್ಮಯ್ಯಗೆ ಟಿಕೆಟ್ ನೀಡಬಾರದು ಎಂದು ಒಂದು ಬಣ ಆಕ್ಷೇಪ ವ್ಯಕ್ತಪಡಿಸಿದೆ. ತಮ್ಮಯ್ಯಗೆ ಟಿಕೆಟ್ ನೀಡುವ ವಿಚಾರವಾಗಿ ಪ್ರತಿಭಟನೆಗಳೂ ನಡೆದಿವೆ. ಈ ಮಧ್ಯೆ, ತಮ್ಮಯ್ಯ ಅವರು ಬಿಜೆಪಿ ಏಜೆಂಟ್ ಎಂಬ ಆರೋಗಳೂ ಕೇಳಿಬಂದಿದ್ದವು. ಇದರಿಂದ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ.
ತಮ್ಮ ವಿರುದ್ಧದ ಅಪಪ್ರಚಾರದ ವಿಚಾರವಾಗಿ ಶೃಂಗೇರಿಯಲ್ಲಿ ಡಿಕೆ ಶಿವಕುಮಾರ್ ಬಳಿ ಪ್ರಸ್ತಾಪಿಸಿದ ತಮ್ಮಯ್ಯ, ಹೆಚ್ಡಿ ತಮ್ಮಯ್ಯನನ್ನು ನಾವೇ ಕಾಂಗ್ರೆಸ್ಗೆ ಕಳುಹಿಸಿದ್ದೇವೆ ಎಂಬುದಾಗಿ ಅವರು ಹೇಳುತ್ತಾರೆ. ಈ ಮೂಲಕ ನನ್ನ ವಿರುದ್ಧ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಷಡ್ಯಂತ್ರ ಮಾಡಿ ಚುನಾವಣೆಗೆ ಸಿದ್ಧರಾಗಿದ್ದಾರೆ. ಶಾರದಾಂಬೆ ಸನ್ನಿಧಾನದಲ್ಲಿ ಸತ್ಯ ಹೇಳುವೆ, ಒಳಒಪ್ಪಂದ ಮಾಡಿಕೊಂಡಿಲ್ಲ ಎಂದು ತಮ್ಮಯ್ಯ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ನಲ್ಲೇ ಕೆಲವರು ಬಿಜೆಪಿ ಪ್ರಾಯೋಜಿತ ವ್ಯಕ್ತಿಗಳು ಇದ್ದಾರೆ. ಈ ಹಿಂದೆ ಕಾಂಗ್ರೆಸ್ ಸೋಲಲು ಅವರ ಪಾತ್ರವಿದೆ. ಸಿಟಿ ರವಿ ಜತೆ ಯಾಱರು ಒಳಒಪ್ಪಂದ ಮಾಡಿಕೊಂಡಿದ್ದಾರೆಂದು ಗೊತ್ತಿದೆ. ಒಂದು ಕಾಲದಲ್ಲಿ ರವಿ ಆಪ್ತನಾಗಿ ಇದ್ದುದರಿಂದ ಇದೆಲ್ಲವೂ ಚೆನ್ನಾಗಿ ಗೊತ್ತಿದೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಯಾರೇ ‘ಕೈ’ ಅಭ್ಯರ್ಥಿಯಾದರೂ ಗೆಲ್ಲಬೇಕು. ಕಾಂಗ್ರೆಸ್ನಲ್ಲಿರುವ ಬಿಜೆಪಿ ಚೇಲಾಗಳು ನನ್ನ ವಿರುದ್ಧ ಆರೋಪ ಮಾಡುತ್ತಿವೆ ಎಂದು ತಮ್ಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಟಿ ರವಿ, ಅವರ ಭಾವನ ಕುಟುಂಬ ಮಾಡಿರುವ ಹಗರಣ ಬಯಲಿಗೆ ಎಳೆಯುತ್ತೇನೆ ಎಂದೂ ತಮ್ಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಚಿಕ್ಕಮಗಳೂರು ಲಿಂಗಾಯತ ಮುಖಂಡ; ಸಿಟಿ ರವಿಗೆ ತಲೆ ಬಿಸಿ
ಸಿಟಿ ರವಿ ಆಪ್ತರಾಗಿದ್ದ ತಮ್ಮಯ್ಯ ಇತ್ತೀಚೆಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಇವರು ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ತಮ್ಮಯ್ಯ ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಚಿಕ್ಕಮಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳೂ ಬಿರುಸುಗೊಂಡಿವೆ.
ಚಿಕ್ಕಮಗಳೂರಿನಲ್ಲಿ ಹೇಗಿದ್ದರೂ ಸಿಟಿ ರವಿನೇ ಗೆಲ್ಲೋದು ಸರ್ ಎಂದು ಕಾಂಗ್ರೆಸ್ ಮುಖಂಡ ರಸೂಲ್ ಖಾನ್ ಹೇಳಿದ್ದಾರೆ ಎನ್ನಲಾದ ಆಡಿಯೋ ಇತ್ತೀಚೆಗೆ ವೈರಲ್ ಆಗಿತ್ತಿ. ಆಡಿಯೋ ವೈರಲ್ ಆಗುತ್ತಿದ್ದಂತೆ ರಸೂಲ್ ಖಾನ್ ಅವರನ್ನು ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ವಜಾ ಮಾಡಿತ್ತು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ