ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ಸಿಟಿ ರವಿ ಆಪ್ತ ಫಾರ್ಮ್ ಹೌಸ್ ಸೀಕ್ರೆಟ್ ಬಿಚ್ಚಿಟ್ಟ
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಹೆಚ್.ಡಿ.ತಮ್ಮಯ್ಯ ಸಿ.ಟಿ.ರವಿ ವಿರುದ್ಧ ತೊಡೆತಟ್ಟಿದ್ದಾರೆ. ಅಲ್ಲದೇ ಸಿಟಿ ರವಿ ಫಾರ್ಮ್ ಹೌಸ್ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ.
ಚಿಕ್ಕಮಗಳೂರು: ಇತ್ತೀಚೆಗಷ್ಟೇ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ(CT Ravi)ವಿರುದ್ಧ ಅಸಮಾಧಾನಗೊಂಡಿದ್ದ ಲಿಂಗಾಯತ ಸಮುದಾಯದ ಮುಖಂಡ ಹೆಚ್.ಡಿ.ತಮ್ಮಯ್ಯ (HD Thammaiah) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೈ ಹಿಡಿಯುತ್ತಿದ್ದಂತೆಯೇ ಸಿ.ಟಿ.ರವಿ ವಿರುದ್ಧ ತೊಡೆತಟ್ಟಿದ್ದಾರೆ. ಬಿಜೆಪಿ ಬೈಕ್ ರ್ಯಾಲಿ ,ನಡ್ಡಾ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಶಾಸಕ ಸಿ.ಟಿ.ರವಿ ವಿರುದ್ಧ ಬದಲಾವಣೆ ಸಂಕಲ್ಪ ಎಂದು ವಾರ್ ಆರಂಭಿಸಿರುವ ತಮ್ಮಯ್ಯ ಸಹ ಬೈಕ್ ರ್ಯಾಲಿ ನಡೆಸಿದರು. ಚಿಕ್ಕಮಗಳೂರು ನಗರದ ಕರ್ತಿಕೆರೆಯಿಂದ ಕಾಂಗ್ರೆಸ್ ಕಚೇರಿವರೆಗೆ ಬೈಕ್ ರ್ಯಾಲಿ ಮಾಡಿ ಸಿಟಿ ರವಿಗೆ ಟಾಂಗ್ ಕೊಟ್ಟರು. ಇನ್ನು ಬೈಕ್ ರ್ಯಾಲಿಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಇನ್ನು ಇದೇ ಮಾತನಾಡಿದ ಅವರು, ರವಿಯವರು ನನ್ನ ಜೊತೆ ಬಹಳ ವಿಷಯ ಹಂಚಿಕೊಂಡಿದ್ದಾರೆ. ನಾನು ಅವನ್ನೆಲ್ಲಾ ಈಗ ಹೇಳಲ್ಲ. ಸಿ.ಟಿ.ರವಿ ಒಮ್ಮೆ ಅವರ ಆತ್ಮವನ್ನು ಮುಟ್ಟಿ ನೋಡಿಕೊಳ್ಳಲಿ. ಅವರು ಪಕ್ಷದಲ್ಲೇ ಇದ್ದು ಮೂಡಿಗೆರೆ ಕ್ಷೇತ್ರದ ಬಗ್ಗೆ ಯಾವ ರೀತಿ ನಡೆದುಕೊಂಡಿದ್ದಾರೆ ಎಂದು ಆ ಶಾಸಕರೇ ಹೇಳಿದ್ದಾರೆ. 2004, 2008, 2108ರಲ್ಲಿ ಯಾರ ಹೆಸರೇಳಿಕೊಂಡು ನೀವು ಗೆದ್ದದ್ದು ನೀವು. ಯಡಿಯೂರಪ್ಪ ಹೆಸರು ಹೇಳಿಕೊಂಡು ಗೆದ್ದು, ಈಗ ನೀವು ಲೇವಡಿ ಮಾಡುತ್ತಿರುವುದು ಯಾರನ್ನು ಎಂದು ಗುಡುಗಿದರು.
ದೇವೇಗೌಡರು, ಸಿದ್ದರಾಮಯ್ಯ, ಯಡಿಯೂರಪ್ಪ ಈ ರಾಜ್ಯ ಕಂಡ ಮಹಾನ್ ನಾಯಕರು. ಅವರ ಬಗ್ಗೆ ಮಾತನಾಡಬೇಡಿ ಎಂದು ಅಂದೂ ಹೇಳಿದ್ದೆ, ಇಂದೂ ಹೇಳುತ್ತೇನೆ. ಆ ಮೂರು ಜನದ ಬಗ್ಗೆ ಕೇವಲವಾಗಿ ಏಕೆ ಮಾತನಾಡುತ್ತೀರಿ, ಅವರಿಂದ ನೀವು ಸಹಾಯ ಪಡೆದಿಲ್ಲವೆ? ಅವರಿಂದ ಸಹಾಯ ಪಡೆದಿಲ್ಲ, ಯಡಿಯೂರಪ್ಪನ ಹೆಸರೇಳಿ ಗೆದ್ದಿಲ್ಲ ಎಂದು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಮೊನ್ನೆ ನಿಮ್ಮ ಫಾರ್ಮ್ ಹೌಸ್ನ ಸಭೆಯಲ್ಲಿ ಕಾರ್ಯಕರ್ತರನ್ನು ಯಾವುದಕ್ಕೆ ಹೋಲಿಸಿದ್ದೀರಾ. ಕತ್ತೆ ಅಡ್ಡೆ ಹೊತ್ಕಂಡು ಹೋಗುತ್ತಿದ್ದರೆ ಕತ್ತೆಗೆ ಗೌರವ ಕೊಡುತ್ತಾರೆ, ಅಡ್ಡೆಗಲ್ಲ ಎಂದು ಯಡಿಯೂರಪ್ಪನವರಿಗೆ ಹೇಳಿದ್ದೀರಿ, ನಮ್ಮ ಕಾರ್ಯಕರ್ತರಿಗೂ ಅದೇ ರೀತಿ ಹೇಳಿದ್ದೀರಿ ಎಂದು ಗಂಭೀರ ಆರೋಪ ಮಾಡಿದರು.
ಓರ್ವ ಅಧಿಕಾರಿ, ಗುತ್ತಿಗೆದಾರ ಈ ಊರಿಗೆ ಬರಲು ಸಿದ್ದರಿಲ್ಲ. ನಮ್ಮ ಹಳೇ ನಾಯಕರು ಸಾರ್ವಜನಿಕವಾಗಿ ಬರಲಿ ಉತ್ತರ ನೀಡುತ್ತೇನೆ ಎಂದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿರುವ ಸಿಟಿ ರವಿ, ರಾಜಕೀಯದಲ್ಲಿ ಮೋಸ ಮಾಡಬೇಕೆಂದು ಕೆಲ ಜನ ಇರುತ್ತಾರೆ. ಎಲ್ಲವನ್ನೂ ಅನುಭವಿಸಿ ಉಂಡ ಮನೆಗೆ ದ್ರೋಹ ಬಗೆಯುತ್ತಾರೆ. ರಾಣಿ ಚೆನ್ನಮ್ಮಗೆ ಮೋಸ ಮಾಡಿದ್ದ ಮಲ್ಲಪ್ಪಶೆಟ್ಟಿ.ಎಲ್ಲಿವರೆಗೆ ನನ್ನ ಮೇಲೆ ಜನರ ಪ್ರೀತಿಯ ರಕ್ಷಾ ಕವಚ ಇರುತ್ತೋ ಅಲ್ಲಿವರೆಗೆ ಯಾರೂ ಏನೂ ಮಾಡಲಾಗದು ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರಿದ ಆಪ್ತ ಹೆಚ್.ಡಿ.ತಮ್ಮಯ್ಯನನ್ನು ಮಲ್ಲಪ್ಪಶೆಟ್ಟಿಗೆ ಹೋಲಿಸಿ ತಿರುಗೇಟು ನೀಡಿದರು.