ಕ್ಷೇತ್ರದಲ್ಲಿ ನಮ್ಮನ್ನ ವಿರೋಧಿಸುವ ಜನರು ಇರುತ್ತಾರೆ, ಇದಕ್ಕೆ ತಲೆ ಕೆಡಿಸಿಕೊಳ್ಳಬಾರದು: ನಿಖಿಲ್ ಕುಮಾರಸ್ವಾಮಿ
ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಅವರನ್ನು ಮಹಿಳೆಯರು ತಾರಾಟೆಗೆ ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್, ಕ್ಷೇತ್ರದಲ್ಲಿ ನಮ್ಮನ್ನ ವಿರೋಧಿಸುವ ಜನರು ಇರುತ್ತಾರೆ, ಇದಕ್ಕೆಲ್ಲ ತಲೆಕೆಡಿಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ರಾಮನಗರ: ಕ್ಷೇತ್ರದಲ್ಲಿ ನಮ್ಮನ್ನ ವಿರೋಧಿಸುವ ಜನರು ಇರುತ್ತಾರೆ, ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಎಂದು ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದ್ದಾರೆ. ಮೂಲಭೂತ ಸೌಕರ್ಯ ಒದಗಿಸದೇ ಪ್ರಚಾರಕ್ಕೆ ಬಂದ್ರೆ ಓಟ್ ಕೊಡಲ್ಲ ಎಂದು ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮದ ಕೆಲವು ಮಹಿಳೆಯರು ನಿಖಿಲ್ ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಬಗ್ಗೆ ಅವ್ವೇರಹಳ್ಳಿ ಗ್ರಾಮದಲ್ಲಿ ಟಿವಿ9 ಜೊತೆ ಮಾತನಾಡಿದ ನಿಖಿಲ್, ಕ್ಷೇತ್ರದಲ್ಲಿ ನಮ್ಮನ್ನ ವಿರೋಧಿಸುವ ಜನರು ಇರುತ್ತಾರೆ. ಕ್ಷೇತ್ರದಲ್ಲಿ ಒಂದು ಲಕ್ಷ ಜನ ನಮಗೆ ವೋಟ್ ಹಾಕಿದರೆ ಉಳಿದವರು ಬೇರೆ ಪಕ್ಷಗಳಿಗೆ ಹಾಕಿರುತ್ತಾರೆ. ಕಾಮನ್ ಇದು ತಲೆ ಕೆಡಿಸಿಕೊಳ್ಳಬಾರದು. ಆದರೆ ಕ್ಷೇತ್ರದ ಎಲ್ಲರೂ ನಮ್ಮ ಜನರೇ. ಆಶ್ವಾಸನೆ ಎಲ್ಲರೂ ಕೊಟ್ಟು ಹೋಗುತ್ತಾರೆ. ನಾನು ಕೆಲಸ ಮಾಡಿ ಮುಖ ತೋರಿಸುತ್ತೇನೆ ಎಂದಿದ್ದೇನೆ. ನಾನು ಆಶ್ವಾಸನೆ ಕೊಡುವುದಿಲ್ಲ. ಸುಳ್ಳು ವಿಚಾರ ಚರ್ಚೆ ಮಾಡಲ್ಲ ಎಂದರು.
ನಮ್ಮ ಮತದಾರರು ನಮ್ಮ ಕುಟುಂಬದ ಸದಸ್ಯರು ಇದ್ದ ಹಾಗೆ. ನಾನೇ ನಮ್ಮ ಮುಖಂಡರಿಗೆ ಹೇಳಿದ್ದೇನೆ. ಕೆಲವು ಕಡೆ ಕೆಲಸ ಆಗಿರುತ್ತದೆ, ಮತ್ತೊಂದೆಡೆ ಕೆಲಸ ಆಗಿರಲ್ಲ. ಅದನ್ನ ಇಲ್ಲ ಎಂದು ಹೇಳುವುದಿಲ್ಲ. ಅಭಿವೃದ್ಧಿ ಎಂಬುದು ನಿರಂತರ ಅದು ನಿಂತ ನೀರಲ್ಲ. ಒಂದೇ ದಿನ ಏನು ಮಾಡಲು ಆಗಲ್ಲ, ಸಹಜವಾಗಿ ಜನ ಕೇಳುತ್ತಾರೆ. ಜನಪ್ರತಿನಿಧಿ ಆದವರು ಅವರ ಸಮಸ್ಯೆ ಕೇಳಿ ಉತ್ತರ ಕೊಟ್ಟು ಕೆಲಸ ಮಾಡಿಸುವುದು ನಮ್ಮ ಧರ್ಮ. ತಾಳ್ಮೆ ಇಲ್ಲದೆ ಹೋದರೆ ರಾಜಕೀಯಕ್ಕೆ ಬರಬಾರದು ಎಂದರು.
ಹಾರೋಹಳ್ಳಿ, ಮರಳವಾಡಿ ಹೋಬಳಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ನಿಖಿಲ್, ಯಾರೆಲ್ಲ ಪಕ್ಷ ಬಿಟ್ಟು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ ಅವರೆಲ್ಲ ಕುಮಾರಸ್ವಾಮಿ ಅವರಿಂದ ಅನುಕೂಲ ಪಡೆದುಕೊಂಡಿದ್ದಾರೆ. ಬೇರೆ ಪಕ್ಷಗಳಿಂದಲೂ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಇದು ಚುನಾವಣೆ ಸಮಯದಲ್ಲಿ ಸಹಜ ಪ್ರಕ್ರಿಯೆಯಾಗಿದೆ. ಪಕ್ಷ ಸಂಘಟನೆ ಮಾಡಲು ನಮ್ಮ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ನಾನು ಪ್ರತಿನಿತ್ಯ ಕ್ಷೇತ್ರದ ಮನೆ ಮನೆಗಳಿಗೆ ಭೇಟಿ ಕೊಟ್ಟು ಕ್ಷೇತ್ರದ ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ ಎಂದರು.
ಇದನ್ನೂ ಓದಿ: ಪ್ರಚಾರಕ್ಕೆ ಬಂದ ನಿಖಿಲ್ ಕುಮಾರಸ್ವಾಮಿಗೆ ತರಾಟೆಗೆ ತೆಗೆದುಕೊಂಡ ಮಹಿಳೆಯರು: ವಿಡಿಯೋ ನೋಡಿ
ಕಾಂಗ್ರೆಸ್ ಏನೇ ಅಪರೇಷನ್ ಮಾಡಿದರೂ ಅದಕ್ಕೆ ಮಹತ್ವ ಕೊಡಲ್ಲ. ಜನ ನಮ್ಮ ಕೆಲಸ ಗುರುತಿಸುತ್ತಾರೆ. ಜನ ನಮ್ಮ ಕೈ ಬಿಡುವುದಿಲ್ಲ ಎಂಬ ಆತ್ಮವಿಶ್ವಾಸ ಇದೆ. ದೇವೇಗೌಡರ ಗರಡಿಯಲ್ಲಿ ರಾಜಕೀಯವಾಗಿ ಬೆಳೆದು, ತಿಂದು, ಉಂಡು ಎತ್ತರವಾಗಿ ಬೆಳೆದು ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿ ಇದ್ದಾರೆ. ಇದು ನಮ್ಮ ಪಕ್ಷಕ್ಕೆ ಒಂದು ಶಾಪ. ಆದರೆ ಕಾರ್ಯಕರ್ತರ, ಜನರ ಆಶೀರ್ವಾದ ಪಕ್ಷದ ಮೇಲೆ ಇದೆ ಎಂದರು.
ಇಂದು(ಏಪ್ರಿಲ್ 10) ರಾಮನಗರ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಹಾರೋಹಳ್ಳಿ ತಾಲೂಕಿನ ದೊಡ್ಡಬಾದಿಗೆರೆ ಗ್ರಾಮದಲ್ಲಿ ಪ್ರಚಾರಕ್ಕೆ ಬಂದಾಗ ನಮಗೆ ಕುಡಿಯುವ ನೀರಿನ ಸೌಲಭ್ಯ ಇಲ್ಲ, ಚರಂಡಿ ವ್ಯವಸ್ಥೆ ಇಲ್ಲ. ನಿಮ್ಮ ತಾಯಿ ಬಂದು ಗುದ್ದಲಿ ಪೂಜೆ ಮಾಡಿದ್ದರು. ಆದರೆ ಕೆಲಸ ಪೂರ್ಣ ಆಗಿಲ್ಲ. ನಮ್ಮ ಗ್ರಾಮದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ. ಹಾಗಾಗಿ ನಾವು ಮತಹಾಕಲ್ಲ ಎಂದು ನಿಖಿಲ್ಗೆ ಮಹಿಳೆಯರು ಕ್ಲಾಸ್ ತೆಗೆದುಕೊಂಡಿದ್ದರು. ಈ ವೇಳೆ ಸಮಾಧಾನದಿಂದಲೇ ಮಹಿಳೆಯರ ಸಮಸ್ಯೆ ಆಲಿಸಿದ ನಿಖಿಲ್, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:50 pm, Mon, 10 April 23