Nikhil Kumaraswamy: ಬಿಜೆಪಿಗೆ ಸುದೀಪ್ ಬೆಂಬಲ, ನಮ್ಮಲ್ಲೂ ಸ್ಟಾರ್ ಇದ್ದಾರೆಂದ ನಿಖಿಲ್ ಕುಮಾರಸ್ವಾಮಿ
ನಟ ಸುದೀಪ್ ಬಿಜೆಪಿಗೆ ಬೆಂಬಲ ನೀಡಿರುವ ಕುರಿತಾಗಿ ಪ್ರತಿಕ್ರಿಯಿಸಿರುವ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ನಮ್ಮಲ್ಲೂ ಸ್ಟಾರ್ ಪ್ರಚಾರಕರಿದ್ದಾರೆ ಎಂದಿದ್ದಾರೆ.
ನಟ ಸುದೀಪ್ (Sudeep), ತಾವು ಬಸವರಾಜ ಬೊಮ್ಮಾಯಿ ಅವರಿಗೆ ಬೆಂಬಲ ನೀಡುತ್ತಿರುವುದಾಗಿಯೂ, ಅವರು ಸೂಚಿಸಿದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡುವುದಾಗಿಯೂ ಮಾಡಿರುವ ಘೋಷಣೆ, ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ. ಮಾತ್ರವೇ ಅಲ್ಲದೆ, ಸುದೀಪ್ ಬಿಜೆಪಿ ಪರವಾಗಿ ನಿಂತ ಕಾರಣ, ಇದೀಗ ತಮ್ಮ ಪರವಾಗಿಯೂ ಸ್ಟಾರ್ ನಟರನ್ನು ಕರೆತರುವ ಯತ್ನಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಆರಂಭಿಸಿದೆ ಎನ್ನಲಾಗುತ್ತಿದೆ. ಈ ಬಗ್ಗೆ ನಟ, ರಾಜಕಾರಣಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಪ್ರತಿಕ್ರಿಯೆ ನೀಡಿದ್ದಾರೆ.
ಸುದೀಪ್, ಬಿಜೆಪಿಗೆ ಬೆಂಬಲ ಘೋಷಿಸಿರುವ ಬಗ್ಗೆ ಮಾತನಾಡಿರುವ ನಿಖಿಲ್ ಕುಮಾರಸ್ವಾಮಿ, ಅಪಾರವಾದ ಅಭಿಮಾನಿಗಳ ಬಳಗ ಇರುವ ಸ್ಟಾರ್ ನಟರು, ಸೆಲೆಬ್ರಿಟಿಗಳು ಚುನಾವಣೆ ಸಂದರ್ಭದಲ್ಲಿ ಯಾವುದಾದರೂ ರಾಜಕೀಯ ಪಕ್ಷದ ಪರವಹಿಸಿ ಪ್ರಚಾರ ಮಾಡುವುದು ಸಹಜ. ಸುದೀಪ್ ಅವರು ಬಿಜೆಪಿಗೆ ಬೆಂಬಲ ನೀಡುತ್ತಿರುವುದಾಗಿ ಹೇಳಿದ್ದಾರೆ. ನಾನು ಅವರ ಹೇಳಿಕೆಗಳನ್ನು ಗಮನಿಸಿದ್ದೇನೆ. ಬಿಜೆಪಿ ಅನ್ನೋದಕ್ಕಿಂತ ಹೆಚ್ಚಾಗಿ ಬೊಮ್ಮಾಯಿ ಅವರ ಮೇಲಿರುವ ಬಾಂಧವ್ಯ, ಸಂಬಂಧದಿಂದ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ, ಆ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ” ಎಂದಿದ್ದಾರೆ.
ನಿಮ್ಮ ಪಕ್ಷದಿಂದಲೂ ಯಾರಾದರೂ ಸ್ಟಾರ್ ನಟರು ಪ್ರಚಾರ ಮಾಡಲಿದ್ದಾರಾ? ಎಂಬ ಪ್ರಶ್ನೆಗೆ ಉತ್ತರಿಸಿದ ನಿಖಿಲ್ ಕುಮಾರಸ್ವಾಮಿ, ”ನಮ್ಮ ಪಕ್ಷದ ಕಾರ್ಯಕರ್ತರೇ ನಮ್ಮ ಸ್ಟಾರ್ ಪ್ರಚಾರಕರು. ದೇವಗೌಡ ಸಾಹೇಬ್ರೇ ನಮಗೆ, ನಮ್ಮ ಪಕ್ಷಕ್ಕೆ ದೊಡ್ಡ ಸ್ಟಾರ್ ಪ್ರಚಾರಕರು. ಹೀಗಾಗಿ ಯಾರ ಜೊತೆಗೂ ಆ ರೀತಿಯಲ್ಲಿ ಮಾತುಕತೆ ಆಗಿಲ್ಲ ಜೆಡಿಎಸ್ ಪಕ್ಷದ ಪರ ಪ್ರಚಾರ ಮಾಡಲು ಯಾವ ಸ್ಟಾರ್ ಅನ್ನೂ ಸಹ ಸಂಪರ್ಕ ಮಾಡಿಲ್ಲ” ಎಂದು ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಸುದೀಪ್ ಹಾಗೂ ಕುಮಾರಸ್ವಾಮಿ ಅವರ ಮಧ್ಯೆ ಉತ್ತಮ ಬಾಂಧವ್ಯವೇ ಇದೆ. ಹಿಂದೊಮ್ಮೆ ಕುಮಾರಸ್ವಾಮಿ ಅವರು ಸುದೀಪ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಆ ಸಂದರ್ಭದಲ್ಲಿ ನಿಖಿಲ್ ಕುಮಾರಸ್ವಾಮಿ ಸಹ ಅವರೊಟ್ಟಿಗಿದ್ದರು. ಸುದೀಪ್ ಹಾಗೂ ನಿಖಿಲ್ ನಡುವೆಯೂ ಉತ್ತಮ ಬಾಂಧವ್ಯವಿದೆ.
ಇದನ್ನೂ ಓದಿ: ಇತ್ತ ಬಿಜೆಪಿ ಪರ ಕಿಚ್ಚನ ಅಬ್ಬರದ ಪ್ರಚಾರಕ್ಕೆ ಮುಹೂರ್ತ ಫಿಕ್ಸ್: ಅತ್ತ ಜೆಡಿಎಸ್ನಿಂದ ಸುದೀಪ್ಗೆ ಶಾಕ್!
ಇನ್ನು ನಿಖಿಲ್ ಕುಮಾರಸ್ವಾಮಿ, ಸಿನಿಮಾಗಳ ಮೂಲಕ ಜನಪ್ರಿಯತೆ ಗಳಿಸಿಕೊಂಡು ಬಳಿಕ ರಾಜಕೀಯಕ್ಕೂ ಎಂಟ್ರಿ ಕೊಟ್ಟವರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧಿಸಿ ಸುಮಲತಾ ಅಂಬರೀಶ್ ವಿರುದ್ಧ ಸೋಲನುಭವಿಸಿದ್ದಾರೆ. ಇದೀಗ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧರಾಗಿದ್ದು, ರಾಮನಗರ ಅಥವಾ ಚನ್ನಪಟ್ಟಣ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ