‘ಕ್ಯಾಶ್ ಆನ್ ಡೆಲಿವರಿ’ ಕೊಡಲು ಬಂತು ಹೊಸ ತಂಡ; ಈ ಚಿತ್ರದಲ್ಲಿದೆ ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್
ಇತ್ತೀಚೆಗೆ ಡೆಲಿವರಿ ಬಾಯ್ಗಳ ಮೇಲೆ ಹಲ್ಲೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಇವರ ಕೊಲೆ ಕೂಡ ಆಗಿದೆ. ಈ ರೀತಿಯ ವಿಚಾರಗಳನ್ನೇ ಇಟ್ಟುಕೊಂಡು ದಿವ್ಯಶ್ರೀ ಅವರು ಕಥೆ ಬರೆದಿದ್ದಾರೆ.
ಚಿತ್ರರಂಗದಲ್ಲಿ ದಿನ ಹೊಸಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ದೊಡ್ಡ ಬಜೆಟ್ ಚಿತ್ರಗಳ ಜೊತೆಗೆ ಹೊಸ ತಂಡಗಳು ಕೂಡ ಭಿನ್ನ ಪ್ರಯೋಗ ಮಾಡಲು ಪ್ರಯತ್ನಿಸುತ್ತವೆ. ಈಗ ಇಂಥದ್ದೇ ಪ್ರಯೋಗಕ್ಕೆ ‘ಕ್ಯಾಶ್ ಆನ್ ಡೆಲಿವರಿ’ ಸಿನಿಮಾ (Cash On Delivery Movie) ತಂಡ ಮುಂದಾಗಿದೆ. ಕಾಮಿಡಿ, ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ. ಗೋವಿಂದೇ ಗೌಡ (GG) ಮೊದಲಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅವರ ಪತ್ನಿ ದಿವ್ಯಶ್ರೀ ಮೋಹನ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ.
ಡೆಲಿವರಿ ಬಾಯ್ ಆಗಿ ಕೆಲಸ ಮಾಡುವವರು ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ವಸ್ತುವನ್ನು, ಆಹಾರವನ್ನು ಮನೆ ಬಾಗಿಲಿಗೆ ತಲುಪಿಸುತ್ತಾರೆ. ಮಳೆ, ಚಳಿಗಾಳಿ ಮಧ್ಯೆಯೇ ಗ್ರಾಹಕರಿಗೆ ಸರಿಯಾದ ಸಮಯಕ್ಕೆ ವಸ್ತುವನ್ನು ತಲುಪಿಸುತ್ತಾರೆ. ಆದರೆ, ಇತ್ತೀಚೆಗೆ ಡೆಲಿವರಿ ಬಾಯ್ಗಳ ಮೇಲೆ ಹಲ್ಲೆ ಆಗುತ್ತಿದೆ. ಕೆಲವು ಕಡೆಗಳಲ್ಲಿ ಇವರ ಕೊಲೆ ಕೂಡ ಆಗಿದೆ. ಈ ರೀತಿಯ ವಿಚಾರಗಳನ್ನೇ ಇಟ್ಟುಕೊಂಡು ದಿವ್ಯಶ್ರೀ ಅವರು ಕಥೆ ಬರೆದಿದ್ದಾರೆ.
‘ಪಿಜ್ಜಾ ಡೆಲಿವರಿ ಬಾಯ್ಗೆ ಯುವತಿಯಿಂದ ಕಿರುಕುಳ ಆಗಿತ್ತು. ಇದಲ್ಲದೆ, ಆ್ಯಪಲ್ ಮೊಬೈಲ್ಗಾಗಿ ಡೆಲಿವರಿ ಬಾಯ್ ಕೊಲೆ ಆಗಿತ್ತು. ಗೋವಿಂದೇ ಗೌಡ ಅವರು ಈ ಚಿತ್ರದಲ್ಲಿ ಡೆಲಿವರಿ ಬಾಯ್ ಪಾತ್ರ ಮಾಡುತ್ತಿದ್ದಾರೆ. ಅವರು ಡೆಲಿವರಿ ಕೊಡಲು ಹೋದಾಗ ಕ್ರೈಂ ಒಂದರಲ್ಲಿ ಸಿಲುಕಿಕೊಳ್ಳುತ್ತಾರೆ. ಚಿತ್ರದ ಕಥೆ ಡೆಲಿವರಿ ಬಾಯ್ ಮೇಲೆ ಸಾಗುತ್ತದೆ. ಸಸ್ಪೆನ್ಸ್ ಥ್ರಿಲ್ಲರ್ ಜೊತೆ ಕಾಮಿಡಿ ಕೂಡ ಚಿತ್ರದಲ್ಲಿದೆ’ ಎಂದು ದಿವ್ಯಶ್ರೀ ಹೇಳಿದ್ದಾರೆ.
ಕಡ್ಡಿಪುಡಿ ಚಂದ್ರು, ಸುಂದರ್, ಮಿಮಿಕ್ರಿ ಗೋಪಿ, ಉಷಾ ಕೋಕಿಲ, ಪ್ರಕಾಶ್ ತುಂಬಿನಾಡು, ಅನುಷಾ, ರಘುರಾಮನ್ ಕೊಪ್ಪ ಮೊದಲದಾವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ ಈ ಚಿತ್ರಕ್ಕೆ ಯೋಗರಾಜ್ ಭಟ್ ಅವರು ಹಾಡುಗಳನ್ನು ಬರೆಯುತ್ತಿದ್ದಾರೆ. ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಮೊದಲಾದ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಇರುವ ದಕ್ಷಿತ್ ಅವರು ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ‘ಅಂಬುಜ’ ಸಿನಿಮಾ ನಿರ್ಮಾಪಕ ಕಾಶಿನಾಥ್ ಮಡಿವಾಳರ್ ಈ ಹೊಸ ಪ್ರಯತ್ನಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಮುರುಳೀಧರ್ ಛಾಯಾಗ್ರಹಣ, ಪ್ರಸನ್ನ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಇದನ್ನೂ ಓದಿ: ‘ಸುದೀಪ್ ಸಹಾಯವನ್ನು ಒಂದೇ ನಿಮಿಷದಲ್ಲಿ ವ್ಯರ್ಥ ಮಾಡಿದ್ರು’; ಬೇಸರ ಹೊರಹಾಕಿದ ನಟ ರಾಜೀವ್
ದಿವ್ಯಶ್ರೀ ಹಾಗೂ ಗೋವಿಂದೇ ಗೌಡ ಅವರು ‘ಕಾಮಿಡಿ ಕಿಲಾಡಿಗಳು’ ಮೂಲಕ ಹೆಚ್ಚು ಪರಿಚಿತರಾದರು. ‘ಕೆಜಿಎಫ್ 2’ ಮೊದಲಾದ ಸಿನಿಮಾಗಳಲ್ಲಿ ದಿವ್ಯಶ್ರೀ ನಟಿಸಿದ್ದಾರೆ. ಈಗ ಅವರು ಕಥೆ ಬರೆಯುವ ಸಾಹಸಕ್ಕೆ ಮುಂದಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಶೂಟಿಂಗ್ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:34 pm, Sat, 8 April 23