Fighter Ravi: ತಪ್ಪಿದ ಬಿಜೆಪಿ ಟಿಕೆಟ್, ರೌಡಿಶೀಟರ್ ಫೈಟರ್ ರವಿ ಬಿಜೆಪಿಗೆ ರಾಜೀನಾಮೆ

|

Updated on: Apr 15, 2023 | 6:29 PM

ಇತ್ತೀಚೆಗೆ ಬಿಜೆಪಿ ಸೇರಿದ್ದ ಅಪರಾಧ ಹಿನ್ನೆಲೆಯುಳ್ಳ ಫೈಟರ್ ರವಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಇಂದು ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿ.

Fighter Ravi: ತಪ್ಪಿದ ಬಿಜೆಪಿ ಟಿಕೆಟ್, ರೌಡಿಶೀಟರ್ ಫೈಟರ್ ರವಿ ಬಿಜೆಪಿಗೆ ರಾಜೀನಾಮೆ
ಫೈಟರ್ ರವಿ ಬಿಜೆಪಿಗೆ ರಾಜೀನಾಮೆ
Follow us on

ಬೆಂಗಳೂರು: ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಅಸಮಾಧಾನಗೊಂಡ ರೌಡಿಶೀಟರ್ ಫೈಟರ್ ರವಿ (Fighter Ravi) ಇಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರನಡೆದಿದ್ದಾರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ (BJP) ರಾಜ್ಯ ಕಚೇರಿಗೆ ತೆರಳಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ರೌಡಿ ಲೋಕದಿಂದ ರಾಜಕೀಯಕ್ಕೆ ಲೋಕಕ್ಕೆ ಎಂಟ್ರಿಕೊಡುವ ನಿನ್ನೆಲೆ ಕಳೆದ ಎರಡು ವರ್ಷಗಳಿಂದ ಮಂಡ್ಯದ ನಾಗಮಂಗಲ (Nagamangala) ವಿಧಾನಸಭಾ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದರು. ಮಾತ್ರವಲ್ಲದೆ, ಬಿಜೆಪಿಯ ಘಟಾನುಘಟಿ ನಾಯಕರ ಸಮ್ಮುಖದಲ್ಲೇ ಬಿಜೆಪಿ ಸೇರ್ಪಡೆಯಾಗಿದ್ದರು. ವಿಜಯ ಸಂಕಲ್ಪ ಯಾತ್ರೆಯಲ್ಲಿ ಫೈಟರ್ ರವಿಗೆ ಟಿಕೆಟ್ ಪಕ್ಕ ಎಂಬ ಸಂದೇಶವನ್ನು ಸ್ವತಃ ಪಕ್ಷದ ರಾಜ್ಯಾಧ್ಯಕ್ಷರೇ ಹೇಳಿಕೆ ನೀಡಿದ್ದರು. ಆದರೆ ನಂತರದ ರಾಜಕೀಯ ಬೆಳವಣಿಗೆಯಿಂದಾಗಿ ಪಕ್ಷಕ್ಕೆ ಆದ ಡ್ಯಾಮೇಜ್ ಸರಿಡಿಸಲು ಮುಂದಾದ ಬಿಜೆಪಿ ರೌಡಿಶೀಟರ್​ಗಳಿಗೆ ಟಿಕೆಟ್ ನಿರಾಕರಿಸಿದೆ.

ಮಲ್ಲಿಕಾರ್ಜುನ ಅಲಿಯಾಸ್ ಫೈಟರ್ ರವಿ ಕಳೆದೆರಡು ವರ್ಷಗಳಿಂದ ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಈ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಅದರಂತೆ 2022ರ ನವೆಂಬರ್ ತಿಂಗಳಲ್ಲಿ ಸಚಿವರಾದ ಅಶ್ವತ್ಥ ನಾರಾಯಣ, ಗೋಪಾಲಯ್ಯ, ನಾರಾಯಣಗೌಡ ಅವರ ಸಮ್ಮುಖದಲ್ಲಿ ಮಂಡ್ಯದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಮಾತ್ರವಲ್ಲದೆ, ಇತ್ತೀಚೆಗೆ ನಾಗಮಂಗಲದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ್ದ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನಾಗಮಂಗಲ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಮಲ್ಲಿಕಾರ್ಜುನ್ ಫೈಟರ್ ರವಿ ಅವರ ಗೆಲುವು ನಿಶ್ಚಿತ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ಬಿಜೆಪಿಗೆ ಗುಡ್​ ಬೈ ಹೇಳಿ ಜೆಡಿಎಸ್​ ಸೇರ್ಪಡೆಯಾದ ಎಬಿ ಮಾಲಕರೆಡ್ಡಿ

ಕ್ರಿಕೆಟ್ ಬುಕ್ಕಿಂಗ್‌ನಲ್ಲಿ ಕುಖ್ಯಾತಿ ಪಡೆದಿದ್ದ ಹಾಗೂ ಅಪರಾಧ ಹಿನ್ನೆಲೆಯುಳ್ಳ ಫೈಟರ್ ರವಿ ಇತ್ತೀಚೆಗೆ ಬಿಜೆಪಿ ಸೇರಿದ್ದರು. 2010 ರಿಂದಲೂ ಕ್ರಿಕೆಟ್ ಬುಕ್ಕಿಯಾಗಿದ್ದ ರವಿ, ಹಲವು ಬಾರಿ ಕ್ರಿಕೆಟ್ ಬುಕ್ಕಿ ಕೇಸಲ್ಲಿ ಅರೆಸ್ಟ್ ಆಗಿ ಜಾಮೀನು ತಗೊಂಡು ಹೊರಗಡೆ ಬಂದಿದ್ದರು.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜ್ಯ ರಾಜಕಾರಣಕ್ಕೆ ರೌಡಿಗಳ ಎಂಟ್ರಿ ಆರಂಭವಾಯಿತು. ಬಿಜೆಪಿ ಜೆಡಿಎಸ್ ಪಕ್ಷಗಳಿಗೆ ಅನೇಕ ರೌಡಿಶೀಟರ್​ಗಳು ಸೇರ್ಪಡೆಯಾಗಲು ಮುಂದಾಗಿದ್ದು, ಕೆಲವೆಡೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ. ಚಾಮರಾಜಪೇಟೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಲೆಂಟ್ ಸುನೀಲ ಹಾಗೂ ನಾಗಮಂಗಲ ಟಿಕೆಟ್ ಆಕಾಂಕ್ಷಿಯಾಗಿದ್ದ ಫೈಟರ್ ರವಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಭಾರೀ ಟೀಕೆ ವ್ಯಕ್ತವಾದ ಬೆನ್ನಲ್ಲೇ ಬೆಂಗಳೂರು ಬಿಜೆಪಿ ಘಟಕ ಸೈಲೆಂಟ್ ಸುನೀಲನ ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ರದ್ದುಗೊಳಿಸಲಾಯಿತು. ಇದೀಗ ಫೈಟರ್ ರವಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿಯಿಂದ ಹೊರನಡೆದಿದ್ದಾರೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:29 pm, Sat, 15 April 23