ರಾಜಕೀಯ ನಿವೃತ್ತಿ ಘೋಷಿಸಿದ ಕಾಂಗ್ರೆಸ್ ಹಿರಿಯ ನಾಯಕ ವಿಆರ್ ಸುದರ್ಶನ್
ಬಿಜೆಪಿಯಲ್ಲಿ ಕೆಲ ನಾಯಕರು ರಾಜಕೀಯ ಹಾಗೂ ಚುನಾವಣೆ ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಇದೀಗ ಕಾಂಗ್ರೆಸ್ನಲ್ಲೂ ಸಹ ಓರ್ವ ನಾಯಕ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಕೋಲಾರ: ಮಾಜಿ ಸಭಾಪತಿ ಹಾಗೂ ಕೋಲಾರ ಕಾಂಗ್ರೆಸ್ (Congress) ಟಿಕೆಟ್ ಆಕಾಂಕ್ಷಿಯಾಗಿದ್ದ ವಿ.ಆರ್ ಸುದರ್ಶನ್ (V.R Sudarshan) ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಇಂದು(ಏಪ್ರಿಲ್ 15) ಕೋಲಾರದಲ್ಲಿ (Kolar) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಬೇಸರ ತರಿಸಿದೆ. ಹಾಗಾಗಿ ಚುನಾವಣಾ (Election) ರಾಜಕೀಯಕ್ಕೆ (Politics) ನಿವೃತ್ತಿ ಘೋಷಣೆ ಮಾಡುತ್ತಿರುವುದಾಗಿ ಘೋಷಣೆ ಮಾಡಿದರು.
ವಿದ್ಯಾರ್ಥಿಯಾಗಿದ್ದಾಗಿನಿಂದ ಸಾರ್ವಜನಿಕವಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. 1976 ರಿಂದ ರಾಜಕೀಯ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದೆ. ಆದರೆ ಇನ್ನು ಮುಂದೆ ಜನಪರ ಹಾಗೂ ಸಂವಿಧಾನ ಬದ್ಧ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತೇನೆ. ರಾಜಕೀಯ ಚುನಾವಣಾ ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಹಲವು ದಿನಗಳಿಂದ ಈ ಕುರಿತು ಯೋಚನೆ ಮಾಡಿದ್ದೆ. ರಾಜಕೀಯ ನಿವೃತ್ತಿ ಹೊಂದಲು ಇದು ಒಳ್ಳೆಯ ಸಮಯ ಎಂದು ಈಗ ಘೋಷಣೆ ಮಾಡುತ್ತಿದ್ದೇನೆ. ಮುಂದಿನ ಬೆಳವಣಿಗೆ ಕುರಿತು ಏಪ್ರಿಲ್ 25 ರ ನಂತರ ಮಾತನಾಡುತ್ತೇನೆ. ಸೆಲ್ಯೂಟ್ ಟು ಕಾಂಗ್ರೆಸ್, ಬೆಸ್ಟ್ ವಿಷಸ್ ಟು ಪೀಪಲ್ ಆಫ್ ಕರ್ನಾಟಕ ಎಂದು ಹೇಳಿದರು.
ಕಾಂಗ್ರೆಸ್ಸಿನ ಹಿರಿಯ ನಾಯಕ ವಿ. ಅರ್ ಸುದರ್ಶನ್ ಅವರು ಈ ಬಾರಿಯ ಕೋಲಾರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಿದ್ದರಾಮಯ್ಯನವರು ಸ್ಪರ್ಧೆ ಮಾಡಿದರೆ ಬೆಂಬಲಿಸುವುದಾಗಿ ಹೇಳಿದ್ದರು. ಒಂದು ವೇಳೆ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಿಲ್ಲವಾದರೆ ತಮಗೆ ಟಿಕೆಟ್ ಬೇಕೆಂದು ಬೇಡಿಕೆ ಇಟ್ಟಿದ್ದರು. ಆದ್ರೆ, ಕಾಂಗ್ರೆಸ್ 3ನೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೋಲಾರಕ್ಕೆ ಕೊತ್ತನೂರು ಮಂಜುನಾಥ್ ಅವರಿಗೆ ಮಣೆ ಹಾಕಿದೆ. ಹೀಗಾಗಿ ಸುದರ್ಶನ್ ಬೇಸರಗೊಂಡು ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಮುಖ್ಯ ವಕ್ತಾರ ಹುದ್ದಗೆ ರಾಜೀನಾಮೆ ನೀಡಿದ್ದರು. ಅಲ್ಲದೇ ಕಳೆದ ಅಂದರೆ 2018ರ ವಿಧಾನಸಭೆ ಚುನಾವಣೆಯಲ್ಲೂ ಸಹ ಕೋಲಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗಲೂ ಅವರಿಗೆ ಟಿಕೆಟ್ ಕೈತಪ್ಪಿತ್ತು. ಆದ್ದರಿಂದ ಬೇಸರಗೊಂಡು ಕರ್ನಾಟಕ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ