ಮತಗಟ್ಟೆ ಬಳಿ ಕೇಸರಿ ಶಾಲು ಹಾಕಿ ಬಿಜೆಪಿ ಪರ ಪ್ರಚಾರ ಆರೋಪ; ಕಾಂಗ್ರೆಸ್​ ಅಭ್ಯರ್ಥಿ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ಯುದ್ಧ

|

Updated on: May 11, 2023 | 7:02 AM

ರಾಜ್ಯ ವಿಧಾನಸಭೆ ಚುನಾವಣೆಗೆ ನಿನ್ನೆ(ಮೇ.10) ಮತದಾನ ನಡೆದಿದೆ. ಚುನಾವಣೆ ಘೋಷಣೆಗೂ ಮುನ್ನ ಹಾಗೂ ಚುನಾವಣಾ ಪ್ರಚಾರ ಅಖಾಡದಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಧರ್ಮ ದಂಗಲ್ ಶುರುವಾಗಿತ್ತು. ಅದರಲ್ಲೂ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷೇಧ ಮಾಡ್ತೀವಿ ಎಂಬ ಅಂಶ ಸೇರ್ಪಡೆ ಮಾಡಿದ್ದೆ ತಡ ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರು. ನಿನ್ನೆ(ಮೇ.10) ಮತದಾನದ ವೇಳೆ ಇದೇ ಧರ್ಮದ ವಿಚಾರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ಯುದ್ಧವಾಗಿ ಹೈಡ್ರಾಮಾವೇ ನಡೆದು ಹೋಗಿದೆ. ಅಷ್ಟಕ್ಕೂ ವಾಗ್ಯುದ್ಧ ನಡೆಯಲು ಕಾರಣವಾದರೂ ಏನು ಅಂತೀರಾ? ಈ ಸ್ಟೋರಿ ನೋಡಿ.

ಮತಗಟ್ಟೆ ಬಳಿ ಕೇಸರಿ ಶಾಲು ಹಾಕಿ ಬಿಜೆಪಿ ಪರ ಪ್ರಚಾರ ಆರೋಪ; ಕಾಂಗ್ರೆಸ್​ ಅಭ್ಯರ್ಥಿ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ಯುದ್ಧ
ಡಾ. ಅಂಜಲಿ ನಿಂಬಾಳ್ಕರ್​
Follow us on

ಬೆಳಗಾವಿ: ಜಿಲ್ಲೆಯ ಖಾನಾಪುರ (Khanapur) ಕ್ಷೇತ್ರದಲ್ಲಿ ನಿನ್ನೆ(ಮೇ.10) ಕಾಂಗ್ರೆಸ್ ಅಭ್ಯರ್ಥಿ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ (Dr. Anjali Nimbalkar) ಹಾಗೂ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ಯುದ್ಧ ನಡೆದಿದ್ದು ಹೈಡ್ರಾಮಾವೇ ನಡೆದಿತ್ತು. ಹೌದು ಖಾನಾಪುರ ಕ್ಷೇತ್ರದ ಶಾಸಕಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ಖಾನಾಪುರ ಪಟ್ಟಣದ ಸರ್ಕಾರಿ ಉರ್ದು ಬಾಲಕರ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ 87ರಲ್ಲಿ ಹಕ್ಕು ಚಲಾವಣೆ ಮಾಡಿದ್ರು. ಬಳಿಕ ಕ್ಷೇತ್ರದಲ್ಲಿ ಮತದಾನ ಹೇಗೆ ಸಾಗಿದೆ ಎಂದು ರೌಂಡ್ಸ್​ಗೆ ಹೊರಟ ವೇಳೆ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ದೇವಲತ್ತಿಯ ಮತಗಟ್ಟೆಯಿಂದ ಕೂಗಳತೆ ದೂರದಲ್ಲಿ ಕೆಲವೊಂದಿಷ್ಟು ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡು ನಿಂತಿದ್ದಾರೆ.

ಈ ವೇಳೆ ಕೇಸರಿ ಶಾಲು ಹಾಕಿಕೊಂಡು ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ತಮ್ಮ ಜೊತೆಗಿದ್ದ ಕಾರ್ಯಕರ್ತರಿಗೆ ಫೋಟೋ ತಗೆಯಲು ಹೇಳಿದ್ದಾರೆ ಆಗಲೇ ನೋಡಿ ಶುರುವಾಗಿದ್ದು ಭಜರಂಗಿ ಹಾಗೂ ಗ್ಯಾಸ್ ಸಿಲಿಂಡರ್ ಯುದ್ಧ. ಹೌದು ಕೇಸರಿ ಶಾಲು ಹಾಕಿಕೊಂಡು ನಿಂತಿದ್ದ ಜನರ ಬಳಿ ಹೋದ ಅಂಜಲಿ ನಿಂಬಾಳ್ಕರ್ ಹಿಂದೂ ಧರ್ಮದ ಬಗ್ಗೆ ನಿಮಗೆ ಎಷ್ಟು ಕಾಳಜಿ ಇದೆ ಗೊತ್ತು. ಧರ್ಮ ಪಾಲನೆ ಮಾಡುವರ ಬಗ್ಗೆ ಗೊತ್ತು ಎಂದಿದ್ದಾರೆ. ಇದೇ ವೇಳೆ ಓರ್ವ ಧರ್ಮ ಒಡೆಯುವವರ ಬಗ್ಗೆಯೂ ನಮಗೆ ಗೊತ್ತು ಎಂದಿದ್ದಾನೆ. ಆಗ ನಾನು ಧರ್ಮಕ್ಕೋಸ್ಕರವೇ ಇದನ್ನ ಧರಿಸಿದ್ದೇನೆ ಎಂದು ಖಾನಾಪುರ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ತಮ್ಮ ಮಾಂಗಲ್ಯ ಸರ ತೋರಿಸಿದ್ದಾರೆ. ಗ್ಯಾಸ್ ಬೆಲೆ 1200 ರೂ. ಹೆಚ್ಚಾಗಿದ್ದು ನಿಮಗೆ ಕಾಣುತ್ತಿಲ್ಲ, ಧರ್ಮ ಕಾಣುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ:Karnataka Exit Poll Result 2023: ಕರ್ನಾಟಕ ಚುನಾವಣೆ ಮತಗಟ್ಟೆ ಸಮೀಕ್ಷೆಗಳು ಪ್ರಕಟ; ಯಾರಿಗೆ ಹೆಚ್ಚು ಸ್ಥಾನ?

ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ತಮ್ಮ ಮಾಂಗಲ್ಯ ಸರ ತೋರಿಸಿದ್ದೆ ತಡ, ಓರ್ವ ಮೇಡಮ್ ನಿಮ್ಮ ಬಗ್ಗೆ ನಮಗೆ ಗೌರವ ಇದೆ. ನಮ್ಮ ಫೋಟೋ ಏಕೆ ತಗೆಯಲು ಹೇಳಿದ್ರಿ, ಎಂದು ಪ್ರಶ್ನೆ ಮಾಡಿದ್ದಾನೆ. ಆಗ ಹಿಂದೂ ಬಗ್ಗೆ ನಿಮಗೆ ಎಷ್ಟು ಗೌರವ ಇದೆ, ನಮಗೂ ಅಷ್ಟೇ ಗೌರವ ಇದೆ ಎಂದು ಡಾ.ಅಂಜಲಿ ನಿಂಬಾಳ್ಕರ್ ತಿಳಿಸಿದ್ದಾರೆ. ಗ್ಯಾಸ್ ಬೆಲೆ 1200 ರೂ. ಹೆಚ್ಚಾಗಿದೆ ಅದರ ಬಗ್ಗೆಯೂ ಗೌರವ ಇದೆ. ಆ 1200 ರೂ. ಕಾಣುತ್ತಿಲ್ಲ, ನಿಮಗೆ ಧರ್ಮ ಕಾಣುತ್ತಿದೆ. ಧರ್ಮದ ಬಗ್ಗೆ ನಿಮಗಿಂತ ಜಾಸ್ತಿ ನಮಗೆ ಅಭಿಮಾ‌ನ ಇದೆ. ನಿಮ್ಮ ಜೇಬಿನಲ್ಲಿ ಏನು ಇಟ್ಟುಕೊಂಡಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಕೇಸರಿ ಶಾಲು ಹಾಕಿದ ಕಾರ್ಯಕರ್ತನ ಆತ ಧರಿಸಿದ ಕೇಸರಿ ಶಾಲಿನತ್ತ ಕೈ ತೋರಿಸಿ ಇದು ಧರ್ಮನಾ ಅಂತಾ ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲ ಇದೇ ವೇಳೆ ಕೆರಳಿ ಕೆಂಡವಾದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಧರ್ಮದ ಬಗ್ಗೆ ನಮಗೆ ಏನು ಪಾಠ ಹೇಳುತ್ತಿದ್ದೀರಾ? ಎನ್ನುತ್ತಾ ನಾನು ಹೆಣ್ಣು ಮಗಳು ಇದೀನಿ ಅಂತಾ ನೀವೆಲ್ಲ ಪುರುಷರು ನನ್ನ ಮೇಲೆ ದಬ್ಬಾಳಿಕೆ ಮಾಡಲು ಆಗಲ್ಲ ಎಂದಿದ್ದಾರೆ. ಅಲ್ಲ ಮೇಡಮ್ ನಾವೇನು ದಬ್ಬಾಳಿಕೆ ಮಾಡುತ್ತಿದ್ದೀವೆ ಎಂದು ಕೇಸರಿ ಶಾಲು ಹಾಕಿದ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಈ ವೇಳೆ ಮರುಪ್ರಶ್ನೆ ಮಾಡಿದ ಕಾರ್ಯಕರ್ತರಿಗೆ ಜಾಸ್ತಿ ಮಾತನಾಡಿದ್ರೆ ನನಗೂ ಮಾತನಾಡಲು ಬರುತ್ತೆ. ನನಗೆ ದಬಾಯಿಸಬೇಡ ಗ್ಯಾಸ್ ಬೆಲೆ ಎಷ್ಟಾಗಿದೆ ಎಂದು ನಿಮ್ಮ ಹೆಂಡತಿಯನ್ನು ಹೋಗಿ ಕೇಳಿ ಎಂದಿದ್ದಾರೆ. ಈ ವೇಳೆ ಬಿಜೆಪಿ ಕಾರ್ಯಕರ್ತರು ಹಾಗೂ ಶಾಸಕಿ ಅಂಜಲಿ ನಿಂಬಾಳ್ಕರ್ ಮಧ್ಯೆ ವಾಗ್ವಾದ ನಡೆದಿದೆ. ಡಾ.ಅಂಜಲಿ ನಿಂಬಾಳ್ಕರ್ ಸ್ಥಳದಿಂದ ತೆರಳುತ್ತಿದ್ದಂತೆ ಜೈ ಶ್ರೀರಾಮ, ಭಜರಂಗಿ ಭಜರಂಗಿ ಎಂದು ಕಾರ್ಯಕರ್ತರು ಘೋಷಣೆ ಹಾಕಿದ್ದಾರೆ

ಇದನ್ನೂ ಓದಿ:Karnataka Assembly Election Result 2023: ಕರ್ನಾಟಕ ಚುನಾವಣೆ ಫಲಿತಾಂಶ ದಿನಾಂಕ, ಮತ ಎಣಿಕೆ ಸಮಯದ ವಿವರ ಇಲ್ಲಿದೆ

ಒಟ್ಟಾರೆಯಾಗಿ ಮತದಾನದ ದಿನವು ಖಾನಾಪುರ ಅಖಾಡದಲ್ಲಿ ಕಾಂಗ್ರೆಸ್ ಬಿಜೆಪಿ ಮಧ್ಯೆ ಧರ್ಮ ದಂಗಲ್ ಜೋರಾಗಿತ್ತು. ಒಂದೆಡೆ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಹಾಕಿ ನಿಂತರೆ ಮತ್ತೊಂದೆಡೆ ಹಿಂದೂ ಧರ್ಮದ ಬಗ್ಗೆ ನಮಗೂ ಗೌರವ ಇದೆ ಎಂದು ತಮ್ಮ ಮಾಂಗಲ್ಯ ಸರ ತೋರಿಸುವ ಮೂಲಕ ಬಿಜೆಪಿ ಕಾರ್ಯಕರ್ತರಿಗೆ ಡಾ.ಅಂಜಲಿ ನಿಂಬಾಳ್ಕರ್ ಟಕ್ಕರ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ಬೆಲೆ ಏರಿಕೆ ಬಗ್ಗೆ ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದು, ಈ ಹೈಡ್ರಾಮಾಗೆ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮ ಸಾಕ್ಷಿಯಾಗಿದೆ.

ವರದಿ: ಮಹಾಂತೇಶ ಕುರಬೇಟ್ ಟಿವಿ9 ಬೆಳಗಾವಿ

ಇನ್ನಷ್ಟು ಚುನಾವನಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:01 am, Thu, 11 May 23