ಬೆಳಗಾವಿ: ‘ಈಗಾಗಲೇ ಲಿಂಗಾಯತರೇ ಸಿಎಂ ಇದ್ದಾರಲ್ಲ, ಅವರೇ ರಾಜ್ಯವನ್ನು ಹಾಳು ಮಾಡಿರುವುದು, ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಈ ಒಂದು ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಕಿಚ್ಚು ಹೊತ್ತಿಸಿದೆ. ವಿಧಾನಸಭೆ ಚುನಾವಣಾ(Karnataka Assembly Election) ಹೊಸ್ತಿಲಲ್ಲಿ ಸಿದ್ದರಾಮಯ್ಯ(Siddaramaiah) ನೀಡಿದ ಇದೇ ಹೇಳಿಕೆಯನ್ನ ಬಿಜೆಪಿ ನಾಯಕರು ರಾಜಕೀಯ ಅಸ್ತ್ರವಾಗಿಸಿಕೊಂಡು ಮುಗಿಬಿದ್ದಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ರಿಂದ ಹಿಡಿದು ರಾಜ್ಯ ನಾಯಕರವರೆಗೂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಇಂದು(ಏ.25) ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಚುನಾವಣಾ ಪ್ರಚಾರ ವೇಳೆ ಮಾತನಾಡಿದ ಅಮಿತ್ ಶಾ ‘ಸಿದ್ದರಾಮಯ್ಯ ಲಿಂಗಾಯತ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಲಿಂಗಾಯತ ಸಮಾಜದ ನಿಜಲಿಂಗಪ್ಪಾ, ವಿರೇಂದ್ರ ಪಾಟೀಲ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿದೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಲಿಂಗಾಯತ ಸಿಎಂ ಕುರಿತು ಸಿದ್ದರಾಮಯ್ಯ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಸಿದ್ದರಾಮಯ್ಯ ಎಚ್ಚೆತ್ತುಕೊಂಡಿದ್ದು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಎರಡು ದಿನ ಬೆಳಗಾವಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಿರುವ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಇದೇ ವಿಚಾರ ಪ್ರಸ್ತಾಪಿಸಿ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಜಿಲ್ಲೆಯ ಕಾಗವಾಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಗಾರ್ಖುರ್ದ್ನ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಬೊಮ್ಮಾಯಿ ಲಿಂಗಾಯತರಿಗೆ ಕಳಂಕ ತಂದ ಬಹಳ ಭ್ರಷ್ಟ ಸಿಎಂ ಎಂದು ಹೇಳಿದ್ದೆ. ನಾನು ಬೊಮ್ಮಾಯಿಗೆ ಇಂತಹ ಭ್ರಷ್ಟ ಸಿಎಂ ಬಂದಿರಲಿಲ್ಲ ಎಂದಿದ್ದೆ. ವೀರೇಂದ್ರ ಪಾಟೀಲ್, ನಿಜಲಿಂಗಪ್ಪ, ಎಸ್.ಆರ್.ಕಂಟಿ, ಜೆ.ಹೆಚ್.ಪಟೇಲ್ ಇಂತವರೆಲ್ಲ ಬಂದಿದ್ದರಪ್ಪ. ಇವನು ಲಿಂಗಾಯತರಿಗೆ ಕಳಂಕ ತಂದಿದ್ದು, ಬಹಳ ಭ್ರಷ್ಟ ಸಿಎಂ ಎಂದು ಹೇಳಿದ್ದೆ. ಅದನ್ನ ತಿರುಚಿ ಲಿಂಗಾಯತ ವಿರೋಧಿ ಎಂದವರಂತೆ ನನ್ನನ್ನ ಬಿಂಬಿಸಲು ಹೊರಟರು. ಎಂತಹ ನೀಚರು ಇವರು ಎಂದರು.
ಇದನ್ನೂ ಓದಿ:ಲಕ್ಷ್ಮಣ ಸವದಿ ರಾಜಕೀಯ ಜೀವನ ಅಂತ್ಯಗೊಳಿಸಲು ರಮೇಶ್ ಜಾರಕಿಹೊಳಿ ಪಣ, ಪ್ರಮುಖ ಹುದ್ದೆ ಕಿತ್ತುಕೊಳ್ಳಲು ಮೆಗಾ ಪ್ಲಾನ್
ನನಗೆ ಬಸವಣ್ಣನವರ ಬಗ್ಗೆ ಅಪಾರವಾದ ಗೌರವ ಇದೆ. ನಾನು 2013ರಲ್ಲಿ ಬಸವ ಜಯಂತಿ ದಿನದಂದೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದೆ. ಬಸವಣ್ಣನವರ ಫೋಟೋ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇರಬೇಕು ಎಂದು ಆದೇಶ ಮಾಡಿದವ ನಾನು. ಬಸವಣ್ಣನವರು ನುಡಿದಂತೆ ನಡೆದವರು, ಅವರು ನಮಗೆ ಪ್ರೇರಣೆ. ಬಸವಾದಿ ಶರಣರು ಪ್ರಾಮಾಣಿಕರಾಗಿದ್ದಂತವರು, ಸಮಾಜದ ಬದಲಾವಣೆಗೆ ಪ್ರಯತ್ನ ಮಾಡಿದಂತವರು. ಸಮಸಮಾಜ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು. ಇವರು ಏನೂ ಮಾಡಿಲ್ಲ ಲಿಂಗಾಯತರ ವಾರಸುದಾರರ ರೀತಿ ಮಾತನಾಡುತ್ತಾರೆ. ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮಾಡಿದವರು ಯಾರು?, ಅವರು ಮಾಡಿದ್ರಾ? ವಿಜಯಪುರದ ಮಹಿಳಾ ವಿವಿಗೆ ಅಕ್ಕಮಹಾದೇವಿ ಹೆಸರಿಟ್ಟವರು ಯಾರು. ನೀವು ನನಗೆ ಪಾಠ ಹೇಳ್ತೀರಾ? ಏನು ಮಾಡಿಲ್ಲ ಈ ಗಿರಾಕಿಗಳು. ಏನು ಮಾಡದೇ ಸಿದ್ದರಾಮಯ್ಯ ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೊರಟಿದ್ದೀರಲ್ಲ. ಈ ರಾಜ್ಯದ ಜನ ಬುದ್ದಿವಂತರಿದ್ದಾರೆ ನಿಮಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ.
ಒಟ್ಟಾರೆಯಾಗಿ ರಾಜ್ಯ ರಾಜಕಾರಣದಲ್ಲಿ ಚುನಾವಣಾ ಹೊಸ್ತಿಲಲ್ಲಿ ಲಿಂಗಾಯತರ ಮತಯುದ್ಧ ಶುರುವಾಗಿದೆ. ಇದು ಇಷ್ಟಕ್ಕೆ ತಣ್ಣಗಾಗುವ ಲಕ್ಷಣಗಳು ಸದ್ಯಕ್ಕೆ ಕಾಣುತ್ತಿಲ್ಲ. ಮುಂದೆ ಇದು ಯಾವ ಹಂತಕ್ಕೆ ಹೋಗುತ್ತೆ? ಲಿಂಗಾಯತ ಲಡಾಯಿ ಯಾವ ಪಕ್ಷಕ್ಕೆ ಪ್ಲಸ್ ಆಗುತ್ತೆ ಯಾವ ಪಕ್ಷಕ್ಕೆ ಮೈನಸ್ ಆಗುತ್ತೆ ಎಂಬುದು ಚುನಾವಣಾ ಫಲಿತಾಂಶದಂದು ಉತ್ತರ ಸಿಗಲಿದೆ.
ವರದಿ: ಮಹಾಂತೇಶ ಕುರಬೇಟ್ ಟಿವಿ9 ಬೆಳಗಾವಿ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:13 am, Wed, 26 April 23