ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ನಾಗೇಶ್: ಸಿದ್ದರಾಮಯ್ಯ
ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಿಕ್ಷಣ ಸಚಿವ ಬಿಸಿ ನಾಗೇಶ್ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ಎಂದು ಜರಿದರು.
ತುಮಕೂರು: ತಿಪಟೂರು ಕ್ಷೇತ್ರದ ಶಾಸಕರೂ ಆಗಿರುವ ಶಿಕ್ಷಣ ಸಚಿವ ಬಿಸಿ ನಾಗೇಶ್ (BC Nagesh) ಅವರು ಪಕ್ಕಾ ಆರ್ಎಸ್ಎಸ್. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ಇವರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದರು. ತಿಪಟೂರು ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಇತಿಹಾಸ ತಿರುಚುವುದು, ಸಮಾಜ ಹೊಡೆಯುವುದು, ಒಂದು ಧರ್ಮದ ಮೇಲೆ ಇನ್ನೊಂದು ಧರ್ಮ ಎತ್ತಿಕಟ್ಟುವುದು ಬಿಟ್ಟರೆ ಬೇರೆ ಏನ್ ಕೆಲಸ ಇಲ್ಲ. ಇಡೀ ಶಿಕ್ಷಣ ವ್ಯವಸ್ಥೆಯನ್ನೇ ಹಾಳು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಕ್ಕಳಿಗೆ ನೈಜ ಚರಿತ್ರೆಯನ್ನ ತಿಳಿಸಬೇಕು. ಇತಿಹಾಸ ಮರೆಯುವವರು ಮುಂದೆ ಬರಲ್ಲ ಅಂತಾ ಅಂಬೇಡ್ಕರ್ ಹೇಳಿದ್ದರು. ಈ ಮನುಷ್ಯ ನಾಗೇಶ್ ಇದ್ದಾನಲ್ಲಾ ಇತಿಹಾಸವನ್ನೇ ತಿರುಚಿಬಿಡ್ತಾರೆ. ಇತಿಹಾಸ ತಿರುಚಿ ಪಠ್ಯ ಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಿದ ನೀಚ ವಿದ್ಯಾಮಂತ್ರಿ ನಾಗೇಶ್. ಇವರು ಕರ್ನಾಟಕದ ಅಭಿವೃದ್ಧಿ ಮಾಡಲು ಸಾಧ್ಯನಾ? ಇಂತವರು ಸೋಲೇಬೇಕು. ಯಾವ ಕಾರಣಕ್ಕೂ ಗೆಲ್ಲಬಾರದು ಎಂದರು.
ಕೊಬ್ಬರಿ ಬೆಲೆ ಬಿದ್ದೋಯ್ತು, ನಾನು ಮುಖ್ಯಮಂತ್ರಿ ಆಗಿದ್ದಾಗ ಕೊಬ್ಬರಿ ಬೆಲೆ ಕಮ್ಮಿ ಆದಾಗ ಬೆಂಬಲ ಬೆಲೆ ನೀಡಿದ್ದೆ. ಇದಕ್ಕೆ ಮಾಧುಸ್ವಾಮಿನೇ ಸಾಕ್ಷಿ ಎಂದ ಸಿದ್ದರಾಮಯ್ಯ ಅವರು ನೇರವಾಗಿ ಎನ್ಎಸ್ಯುಐ ಬಗ್ಗೆ ಪ್ರಸ್ತಾಪಿಸಿದರು. ವಿನಾಕಾರಣ ಎನ್ಎಸ್ಯುಐ ವಿದ್ಯಾರ್ಥಿಗಳ ಮೇಲೆ ಸುಳ್ಳು ಕೇಸ್ ಹಾಕಿ ಜೈಲಿಗೆ ಹಾಕಿದರು. ಆರ್ಎಸ್ಎಸ್ ಚಡ್ಡಿ ಸುಟ್ಟಾಕಿದರು ಅಷ್ಟೇ. ಅದು ಇವರ ಚಡ್ಡಿನೋ ಆರ್ಎಸ್ಎಸ್ ಚಡ್ಡಿನೋ ಗೊತ್ತಿಲ್ಲ. ಪ್ರತಿಭಟನೆ ಮಾಡಿದ್ದಕ್ಕೆ ಕೇಸ್ ಹಾಕಿ ಜೈಲಿಗೆ ಹಾಕಿದರು. ಬಿಜೆಪಿ ಅವರು ಶಾಶ್ವತವಾಗಿ ಅಧಿಕಾರದಲ್ಲಿ ಇರಲ್ಲಾ ಅಂತಾ ಅವತ್ತು ಎಸ್ಪಿ ಹೇಳಿದ್ದೆ ಎಂದರು.
ಇದನ್ನೂ ಓದಿ: ಟಗರು ವಿರುದ್ಧ ರಾಜಹುಲಿ ಘರ್ಜನೆ: ವರುಣಾದಲ್ಲಿ ಸಿದ್ದರಾಮಯ್ಯ ಸೋಲಿಸುವ ಜವಾಬ್ದಾರಿ ನನ್ನದು ಎಂದ ಬಿಎಸ್ ಯಡಿಯೂರಪ್ಪ
ಪೊಲೀಸ್ನವರು ವರ್ಗಾವಣೆಗೆ ಬಿಜೆಪಿಗೆ 40ರಿಂದ 50 ಲಕ್ಷ ಕೊಡಬೇಕು. ನಂದೀಶ್ ಅಂತಾ ಕೆ.ಆರ್.ಪುರಂ ಇನ್ಸ್ ಪೆಕ್ಟರ್ ಆತ್ಮಹತ್ಯೆ ಮಾಡಿಕೊಂಡ. ಎಂಟಿ ಬಿ ನಾಗರಾಜ ನೋಡಲು ಹೋಗಿದ್ದ. ಅಲ್ಲಿ ಪಾಪ ಸಾಲ ಮಾಡಿ ಬಂದಿದ್ದ, ಸಾಲ ತಿರಿಸಲು ಆಗದೇ ಆತ್ಮಹತ್ಯೆ ಮಾಡಿಕೊಂಡ ಅಂದರು. ಇದು ಯಾರು ಹೇಳಿದ್ದು ಮಿಸ್ಟರ್ ಎಂಟಿಬಿ ನಾಗರಾಜ್? ಇವತ್ತು ಪೊಲೀಸರಿಗೆ ಹೇಳುತ್ತೇನೆ, ಬಿಜೆಪಿಯವರ ಮಾತು ಕೇಳಬೇಡಿ. ಕೋಡ್ ಆಫ್ ಕಂಡೆಕ್ಟ್ ಇದೆ ಅವರ ಮಾತು ಕೇಳಬೇಡಿ. ಮುಂದೆ ಬರುವುದು ನಮ್ಮ ಸರ್ಕಾರ ಎಂದು ಎಚ್ಚರಿಕೆ ನೀಡಿದರು. ನಾನು ಒಂದೇ ಒಂದು ರೂಪಾಯಿ ಪೊಲೀಸರಿಂದ ಮುಟ್ಟಿಲ್ಲ. ನಾನಾಗಲೀ, ಜಾರ್ಜ್ ಆಗಲಿ, ರಾಮಲಿಂಗಾರೆಡ್ಡಿ ಆಗಲಿ ಮುಟ್ಟಿಲ್ಲ. ಯಾರಾದರೂ ಏಜೆಂಟ್ಗಳು ನನಗೆ ಗೊತ್ತಿಲ್ಲದೆ ಮುಟ್ಟಿದರೆ ನಂಗೆ ಗೊತ್ತಿಲ್ಲ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:41 pm, Sun, 30 April 23