ಪರ-ವಿರೋಧದ ಪ್ರತಿಭಟನೆ ಮಧ್ಯೆಯೇ ಟಿಕೆಟ್ ಹಂಚಿಕೆಗೆ ಅಭಿಪ್ರಾಯ ಸಂಗ್ರಹ: ಸಿದ್ದರಾಮಯ್ಯ ಹೆಸರು ಪ್ರಸ್ತಾಪ

| Updated By: ರಮೇಶ್ ಬಿ. ಜವಳಗೇರಾ

Updated on: Dec 30, 2022 | 10:09 PM

ಕೋಲಾರ ಜಿಲ್ಲೆಯ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಸಭೆ ನಡೆದಿದ್ದು, ಈ ವೇಳೆ ಸಿದ್ದರಾಮಯ್ಯನವರ ಹೆಸರು ಸಹ ಪ್ರಸ್ತಾಪವಾಗಿದೆ, ಆದ್ರೆ, ಇದಕ್ಕೆ ವಿರೋಧಗಳು ಸಹ ವ್ಯಕ್ತವಾಗಿವೆ.

ಪರ-ವಿರೋಧದ ಪ್ರತಿಭಟನೆ ಮಧ್ಯೆಯೇ ಟಿಕೆಟ್ ಹಂಚಿಕೆಗೆ ಅಭಿಪ್ರಾಯ ಸಂಗ್ರಹ: ಸಿದ್ದರಾಮಯ್ಯ ಹೆಸರು ಪ್ರಸ್ತಾಪ
ವಿಪಕ್ಷ ನಾಯಕ ಸಿದ್ದರಾಮಯ್ಯ
Follow us on

ಕೋಲಾರ: ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Elections 2023) ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress)​ ತನ್ನ​ ಅಭ್ಯರ್ಥಿಗಳ ಆಯ್ಕೆಗೆ ರಾಜ್ಯಾದ್ಯಂತ ಅಭಿಪ್ರಾಯ ಸಂಗ್ರಹ ಮಾಡುತ್ತಿದೆ. ಅದರಂತೆ ಕುತೂಹಲ ಕೆರಳಿಸಿರುವ ಕೋಲಾರ ಜಿಲ್ಲೆಯ (Kolar Distrcit) ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ​ಆಯ್ಕೆಗೆ ಅಭಿಪ್ರಾಯ ಸಂಗ್ರಹ ನಡೆಯಿತು. ಈ ವೇಳೆ ಕೋಲಾರ ಕ್ಷೇತ್ರಕ್ಕೆ ಸಿದ್ದರಾಮಯ್ಯ(siddaramaiah) ಅವರೊಂದಿಗೆ ಬೇರೆಯವರ ಹೆಸರುಗಳು ಪ್ರಸ್ತಾಪವಾಗಿದೆ.

ಇದನ್ನೂ ಓದಿ: Survey Report: ಅಸೆಂಬ್ಲಿ ಚುನಾವಣೆಗಾಗಿ ಕ್ಷೇತ್ರ ಹುಡುಕಾಟ: ಸಿದ್ದರಾಮಯ್ಯ ಕೈ ಸೇರಿದೆ ಎರಡು ಕ್ಷೇತ್ರಗಳ ಸರ್ವೇ ವರದಿ, ಏನಿದೆ ಭವಿಷ್ಯ?

ಹೌದು….ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಚಿಂತನೆ ನಡೆಸಿದ್ದಾರೆ. ಆದ್ರೆ, ಟಿಕೆಟ್​ಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಕ್ಷೇತ್ರದ ಹೆಸರ ಉಲ್ಲೇಖಿಸಿಲ್ಲ. ಆದರೂ ಸಹ ಇಂದು (ಡಿಸೆಂಬರ್ 30) ಕೋಲಾರದಲ್ಲಿ ನಡೆದ ಕಾಂಗ್ರೆಸ್​ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಸಿದ್ದರಾಮಯ್ಯನವರ ಹೆಸರು ಸಹ ಪ್ರಸ್ತಾಪವಾಗಿದೆ. ಈ ಬಗ್ಗೆ ಸ್ವತಃ ವೀರಪ್ಪ ಮೋಯ್ಲಿ ಅವರು ಸ್ಕ್ರೀನಿಂಗ್ ಕಮಿಟಿ ಅಭಿಪ್ರಾಯ ಸಂಗ್ರಹಿಸಿದ ನಂತರ ತಿಳಿಸಿದ್ದಾರೆ.

ವೀರಪ್ಪ ಮೋಯ್ಲಿ ಪ್ರತಿಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಅಭಿಪ್ರಾಯ ಸಂಗ್ರಹ ಸಭೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವೀರಪ್ಪ ಮೋಯ್ಲಿ, ಸಿದ್ದರಾಮಯ್ಯ ಅವರೊಂದಿಗೆ ಬೇರೆಯವರ ಹೆಸರುಗಳು ಪ್ರಸ್ತಾಪವಾಗಿದೆ. ನಾವು ಸಮಾಲೋಚನೆ ಮಾಡಿದ್ದೇವೆ, ನಿರ್ಣಯ ಕೊಡುವ ಅಧಿಕಾರ ನಮಗಿಲ್ಲ. ಸಮಾಲೋಚನೆ ನಡೆಸಿ, ಅದನ್ನ ಕೇಂದ್ರದ ಮುಂದೆ ಇಡಲಾಗುತ್ತದೆ. ಇಲ್ಲಿ ಪರ ವಿರೋಧ ಪ್ರಶ್ನೆ ಇಲ್ಲ ಸಮಾಲೋಚನೆ ನಡೆಸಿದ್ದೇವೆ‌. ಪಟ್ಟಿ ನೀಡಿರುವ ಕಾರ್ಯಕರ್ತರನ್ನ ಹೊರತಾಗಿಯೂ ಸಮಾಲೋಚನೆ ಮಾಡಿದ್ದೇವೆ ಎಂದರು.

ಇದನ್ನೂ ಓದಿ: Siddaramaiah: ಕೋಲಾರದಲ್ಲಿ ರಾಜಕೀಯ ಜೀವನದ ಕೊನೆಯ ಪರೀಕ್ಷೆ ಬರೆಯಲಿರುವ ಸಿದ್ದರಾಮಯ್ಯ?

ಎಲ್ಲಾ ವರ್ಗದವರನ್ನೂ ಸಮಾಲೋಚನೆ ಮಾಡಿದ್ದೇವೆ. ಒಂದರಿಂದ ಮೂರು ಅಭ್ಯರ್ಥಿಗಳನ್ನ ಆಯ್ಕೆ ಮಾಡಿಕೊಡಿ ಎಂದು ನಿರ್ದೇಶನವಿದೆ. ಇದಾದ ನಂತರ ಪ್ರದೇಶ ಚುನಾವಣಾ ಸಮಿತಿ ಚರ್ಚೆ ಮಾಡಲಿದೆ. ನಂತರ ಸ್ಕ್ರೀನಿಂಗ್ ಕಮಿಟಿ, ನಂತರ ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಚರ್ಚೆಯಾಗುತ್ತೆ. ಹತ್ತು ಹಂತದಲ್ಲಿ ಚರ್ಚೆ ಮಾಡಲಾಗುವುದು. ನಂತರ ಅಭ್ಯರ್ಥಿ ಆಯ್ಕೆ ಮಾಡಲಾಗುವುದು‌ ಎಂದು ಸ್ಪಷ್ಟಪಡಿಸಿದರು.

ಎರಡು ಗುಂಪುಗಳ ಬಲ ಪ್ರದರ್ಶನ

ಮೊಯ್ಲಿ, ರಾಮಲಿಂಗಾರೆಡ್ಡಿ, ಮುನಿಯಪ್ಪ ಅವರನ್ನೊಳಗೊಂಡ ಸ್ಕ್ರೀನಿಂಗ್ ಕಮಿಟಿ ಸದಸ್ಯರು ಇಂದು(ಶುಕ್ರವಾರ) ಅಭಿಪ್ರಾಯ ಸಂಗ್ರಹ ಸಭೆಗೆ ಕೋಲಾರ ಜಿಲ್ಲಾ ಕಾಂಗ್ರೆಸ್​ ಕಚೇರಿಗೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಜಮಾಯಿಸಿದರು. ಅಲ್ಲದೇ ಕೋಲಾರದ ಕಾಂಗ್ರೆಸ್ ‌ಕಚೇರಿಗೆ ಬಂದ ಸ್ಕ್ರೀನಿಂಗ್ ಕಮಿಟಿ‌ ಮುಂದೆ ಕೆ.ಎಚ್. ಮತ್ತು ರಮೇಶ್ ಕುಮಾರ್ ಬಣಗಳ ಬಲ ಪ್ರದರ್ಶನ ನಡೆಯಿತು. ಕೋಲಾರಕ್ಕೆ ಸ್ಥಳೀಯರಿಗೆ ಆದ್ಯತೆ ನೀಡಬೇಕೆಂದು ಒಂದು ಗುಂಪು ಘೋಷಣೆ ಕೂಗಿದ್ರೆ, ಮತ್ತೊಂದು ಮತ್ತೊಂದು‌ ಗುಂಪು‌ ಸಿದ್ದರಾಮಯ್ಯ ಅವರ ಪರ ಘೋಷಣೆ ಕೂಗಿರುವುದು ಕಂಡುಬಂತು. ಈ ಎರಡು ಬಣಗಳ‌ ತಿಕ್ಕಾಟದಿಂದ ಸ್ಕ್ರೀನಿಂಗ್ ಕಮಿಟಿ ಸದಸ್ಯರು ಸುಸ್ತಾದರು.

ಇದನ್ನೂ ಓದಿ: ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧಿಸುವ ಬಗ್ಗೆ ರಮೇಶ್ ಕುಮಾರ ಮತ್ತು ಮುನಿಯಪ್ಪ ಬಣಗಳ ನಡುವೆ ವಾಗ್ವಾದ

ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಸಿದ್ದರಾಮಯ್ಯ ಕೋಲಾರ ಕ್ಷೇತ್ರದ ಟಿಕೆಟ್​​ಗೆ​​ ಅರ್ಜಿ ಹಾಕಿಲ್ಲ. ಹಾಗಾಗಿ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಮುಖಂಡ ಮುರಳಿ ಗೌಡ ಬೆಂಬಲಿಗರು ಆಗ್ರಹಿಸಿದರು. ಈ ವೇಳೆ ಮಾಜಿ ಸಂಸದ ಕೆ.ಹೆಚ್.ಮುನಿಯಪ್ಪ ಪರವೂ ಘೋಷಣೆ ಮೊಳಗಿತು. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಕಾಂಗ್ರೆಸ್ ಕಚೇರಿ ಬಳಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.

ಒಟ್ಟಿನಲ್ಲಿ ಅಭ್ಯರ್ಥಿಗಳ ಅಭಿಪ್ರಾಯ ಸಂಗ್ರಹ ಸಭೆ ವೇಳೆ ಕಾಂಗ್ರೆಸ್ ಕಾರ್ಯಕರ್ತರಿಂದ ದೊಡ್ಡ ಹೈಡ್ರಾಮವೇ ನಡೆದಿದ್ದು, ಒಂದು ಗುಂಪು ಸಿದ್ದರಾಂಯ್ಯಗೆ ಟಿಕೆಟ್ ನೀಡಬಾರದು ಎಂದು ಆಗ್ರಹಿಸಿತು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ