ಕೊಡಗಿನಲ್ಲಿ ಕಾಂಗ್ರೆಸ್ ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಿರುಸು: ಮೂವರ ಹೆಸರು ಎಐಸಿಸಿ ಚುನಾವಣಾ ಘಟಕಕ್ಕೆ
ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಬಿರುಸುಗೊಂಡಿದ್ದು, ಇಂದು ಮಡಿಕೇರಿಯಲ್ಲಿ ಸಮರ್ಥ ಅಭ್ಯರ್ಥಿಗಳ ಆಯ್ಕೆಗೆ ಅಭಿಪ್ರಾಯ ಸಂಗ್ರಹ ನಡೆಯಿತು.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ(Kodagu District) ಈ ಬಾರಿ ಬಿಜೆಪಿ ಭದ್ರಕೋಟೆ ಭೇದಿಸಲು ಪಣತೊಟ್ಟಿರುವ ಕೈಪಾಳಯ ಈಗಾಗಲೇ ಸಮರ್ಥ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧೃವನಾರಾಯಣ್ ಮತ್ತು ಮಾಜಿ ಸಚಿವ ಎಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಇಂದು(ಡಿಸೆಂಬರ್ 16) ಲ್ಲೆಯ ಎರಡು ಕ್ಷೇತ್ರಗಳಾದ ವಿರಾಜಪೇಟೆ ಮತ್ತು ಮಡಿಕೇರಿಯಲ್ಲಿ ಯಾರಿಗೆ ಟಿಕೆಟ್ ನಿಡಬೇಕೆಂಬ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.
ಕೊಡಗು ಕಾಂಗ್ರೆಸ್ ಉಸ್ತುವಾರಿ ಆಗಿರುವ ಮಹದೇವಪ್ಪ ಮತ್ತು ಆರ್ ಧೃವನಾರಾಯಣ್ ಸ್ಥಳೀಯ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಜಿಲ್ಲಾ ಪದಾಧಿಕಾರಿಗಳು, ಎಲ್ಲಾ ಬ್ಲಾಕ್ ಸಮಿತಿ ಮುಖಂಡರಿಂದ ಮಾಹಿತಿ ಸಂಗ್ರಹ ಮಾಡಿರುವ ನಾಯಕರು ಸೂಕ್ತ ಅಭ್ಯರ್ಥಿಗಳಿಗಾಗಿ ಕಸರತ್ತು ನಡೆಸಿದ್ದಾರೆ.
ಮಡಿಕೇರಿ ಕ್ಷೇತ್ರದಿಂದ 7 ಆಕಾಂಕ್ಷಿಗಳು ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದರೆ, ವಿರಾಜಪೇಟೆ ಕ್ಷೇತ್ರದಿಂದ 3 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಅಕಾಂಕ್ಷಿಗಳಾದ ಎಎಸ್. ಪೊನ್ನಣ್ಣ, ವೀಣಾ ಅಚ್ಚಯ್ಯ, ಜೀವಿಜಯ, ಮಂಥರ್ ಗೌಡ ಸೇರಿದಂತೆ ಪ್ರಮುಖರು ಸಭೆಯಲ್ಲಿಪಾಲ್ಗೊಂಡು ಅಭಿಪ್ರಾಯ ಮಂಡಿಸಿದ್ದಾರೆ.
ಪಕ್ಷಕ್ಕಾಗಿ ದುಡಿದಿರುವ, ಗೆಲ್ಲುವ ಅವಕಾಶ ಇರುವ ಮೂವರ ಹೆಸರು ಫೈನಲ್ ಮಾಡಲು ಅಭಿಪ್ರಾಯ ಸಂಗ್ರಹ ಮಾಡಲಾಗಿದೆ ಎನ್ನಲಾಗಿದೆ. ಪ್ರತೀ ಕ್ಷೇತ್ರದಿಂದ ಮೂವರ ಹೆಸರು ಫೈನಲ್ ಮಾಡಲಾಗುವುದು ಮತ್ತು ಆ ಮೂವರ ಹೆಸರನ್ನು ಎಐಸಿಸಿ ಚುನಾವಣಾ ಘಟಕಕ್ಕೆ ಕಳುಹಿಸಿಕೊಡಲಾಗುವುದು ಎಂದು ಕೆಪಿಸಿಸಿ ಕಾರ್ಯದರ್ಶಿ ಲಕ್ಷ್ಮಣ್ ತಿಳಿಸಿದ್ದಾರೆ.
ಇನ್ನು ಇಂದು ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗಾಗಿ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಕಾರ್ಯ ನಡೆಯಿತು. ಸಭೆಯಲ್ಲಿ ಗಾಂಗಾವತಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಪರಸ್ಪರ ಘೋಷಣೆಗಳನ್ನು ಕೂಗುತ್ತ ಹೈಡ್ರಾಮಾವೇ ಸೃಷ್ಟಿಸಿದರು.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ