ಕರ್ನಾಟಕದಲ್ಲಿ ಮತದಾನಕ್ಕೆ ಹಿಂದೆಂದೂ ಕೈಗೊಳ್ಳದಷ್ಟು ಭಾರೀ ಭದ್ರತೆ, ಈವರೆಗೆ ವಶಕ್ಕೆ ಪಡೆದ ನಗದು ಎಷ್ಟು ಗೊತ್ತಾ?
ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಳೆ ಒಂದು ದಿನವಷ್ಟೇ ಬಾಕಿ ಇದೆ. ಮೇ 10ರಂದು ಮತದಾನ ನಡೆಯಲಿದ್ದು, ಭಾರೀ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೆ, ಚುನಾವಣೆ ಘೋಷಣೆ ನಂತರ ಈವರೆಗೆ ಕೋಟಿ ಮೌಲ್ಯದ ವಸ್ತುಗಳನ್ನು, ನಗದನ್ನು ವಶಕ್ಕೆ ಪಡೆಯಲಾಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ನಾಳೆ ಒಂದು ದಿನವಷ್ಟೇ ಬಾಕಿ ಇದೆ. ಮೇ 10ರಂದು ಮತದಾನ ನಡೆಯಲಿದ್ದು, ಭಾರೀ ಪೊಲೀಸ್ ಭದ್ರತೆ (Police Security) ಕೈಗೊಳ್ಳಲಾಗಿದೆ. ಈ ಬಗ್ಗೆ ಟಿವಿ9ಗೆ ಮಾಹಿತಿ ನೀಡಿದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ (Alok Kumar), ಚುನಾವಣೆ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಚುನಾವಣೆ ಭದ್ರತೆಗೆ ಬೇಕಾದ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ. ರಾಜ್ಯಾದ್ಯಂತ ಒಟ್ಟು 1.60 ಲಕ್ಷ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ ಎಂದರು.
ಭದ್ರತಾ ಕಾರ್ಯದಲ್ಲಿ 304 ಡಿವೈಎಸ್ಪಿ, 991 ಪೊಲೀಸ್ ಇನ್ಸ್ಪೆಕ್ಟರ್, 2,610 ಪಿಎಸ್ಐ, 5,803 ಎಎಸ್ಐ ಸೇರಿದಂತೆ 84,000 ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಇವರೊಂದಿಗೆ 8.5 ಸಾವಿರ ಹೋಂಗಾರ್ಡ್ಗಳನ್ನು, 650 ಸಿಆರ್ಪಿಎಫ್ ತುಕಡಿ, ಕೆಎಸ್ಆರ್ಪಿ ತುಕಡಿಗಳ ನಿಯೋಜನೆ ಮಾಡಲಾಗಿದೆ. ಹೆಚ್ಚಿನ ಭದ್ರತೆಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ಗೋವಾ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಹಿಂದೆ ಯಾವತ್ತು ನಿಯೋಜಿಸಿರಲಿಲ್ಲ, ಚುನಾವಣಾಧಿಕಾರಿಗಳ ಕೆಲವು ಮಾನದಂಡಗಳ ಪ್ರಕಾರ ನಿಯೋಜನೆ ಮಾಡಲಾಗಿದೆ ಎಂದರು.
ಸೂಕ್ಷ್ಮ ಮತಗಟ್ಟೆಗಳ ಮಾಹಿತಿ
ಸೂಕ್ಷ್ಮ ಮತಗಟ್ಟೆ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ ಎಂದು ಹೇಳಿದ ಅಲೋಕ್ ಕುಮಾರ್, ವರುಣಾ, ಚಾಮುಂಡೇಶ್ವರಿ, ಹಾಸನ, ಚನ್ನಪಟ್ಟಣ ಕಡೆ ಹೆಚ್ಚಿನ ನಿಗಾ ಇರಿಸಲಾಗಿದೆ. ಯಾವುದೇ ಅಹಿತಕರ ಘಟನೆ ಆಗಬಾರದೆಂದು ಐಪಿಎಸ್ ಅಧಿಕಾರಿಗಳ ಮೂಲಕ 5 ದಿನಗಳಿಂದ ನಿಗಾ ಇಡಲಾಗಿದೆ. 11,617 ಮತಗಟ್ಟೆಗಳು ಸೂಕ್ಷ್ಮ ಮತಗಟ್ಟೆಗಳಾಗಿ ಪರಿಗಣಿಸಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಹೇಗಿದೆ ಪೊಲೀಸ್ ಭದ್ರತೆ?
ಬೆಂಗಳೂರು ನಗರದ್ಯಾಂತ ಪೊಲೀಸರು ಈಗಾಗಲೇ ಕಟ್ಟೆಚ್ಚರವಹಿಸಿದ್ದು, ಮತದಾನದ ದಿನ ಭದ್ರತೆಗಾಗಿ 16 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. 13 ಸಾವಿರ ಪೊಲೀಸರು, KSRP ಹಾಗೂ ಹೋಮ್ ಗಾರ್ಡ್ಗಳು ಸೇರಿದಂತೆ ಒಟ್ಟು 16 ಸಾವಿರ ಸಿಬ್ಬಂದಿ ನಿಯೋಜನೆ ಮಾಡಾಗಿದೆ ಎಂದು ಅಪರಾಧ ವಿಭಾಗ ಜಂಟಿ ಪೊಲೀಸ್ ಆಯುಕ್ತ ಶರಣಪ್ಪ ಹೇಳಿದ್ದಾರೆ.
ಇದನ್ನೂ ಓದಿ: Karnataka Assembly Polls 2023: ಬೆಂಗಳೂರಿನಲ್ಲಿ ಮತದಾನಕ್ಕೆ ಸಕಲ ಸಿದ್ಧತೆ, ವೋಟಿಂಗ್, ಕೌಂಟಿಂಗ್ ಪ್ರಕ್ರಿಯೆ ವಿವರ ಇಲ್ಲಿದೆ
ನಗರದಾದ್ಯಂತ ಒಟ್ಟು 7916 ಮತಗಟ್ಟೆಗಳಿದ್ದು, ಅದರಲ್ಲಿ 1907 ಅತಿಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ. ಅತಿಸೂಕ್ಷ್ಮ ಪ್ರದೇಶಗಳಲ್ಲಿ BSF, RPF, CRPF ಹಾಗೂ SAP ನಿಯೋಜನೆ ಮಾಡಲಾಗಿದೆ. ಸುಮಾರು 4900 ಜನ ಸಿಬ್ಬಂದಿ ಕೇಂದ್ರದಿಂದ ಭದ್ರತೆಗೆ ನಿಯೋಜನ ಮಾಡಲಾಗಿದೆ. 18-20 ಮತಗಟ್ಟೆಗಳಿಗೆ ಓರ್ವ ಸೆಕ್ಟರ್ ಮೊಬೈಲ್ಸ್ ನೇಮಕ ಮಾಡಲಾಗಿದೆ. ಇದರ ಉಸ್ತುವಾರಿಗಾಗಿ ಓರ್ವ ಇನ್ಸ್ಪೆಕ್ಟರ್ ನಿಯೋಜನೆ ಮಾಡಲಾಗಿದೆ. ಆಯಾ ವಿಭಾಗದ ಡಿಸಿಪಿಗಳು ಸೆಕ್ಟರ್ ಮೊಬೈಲ್ಸ್ ಮೇಲೆ ನಿಗಾ ಇಡಲಿದ್ದಾರೆ. ಒಟ್ಟಾರೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಶರಣಪ್ಪ ಹೇಳಿದ್ದಾರೆ.
ಚುನಾವಣೆ ಘೋಷಣೆ ನಂತರ ಈವರಗೆ ವಶಕ್ಕೆ ಪಡೆದ ವಸ್ತುಗಳು ಮತ್ತು ನಗದು ಎಷ್ಟು ಗೊತ್ತಾ?
ಚುನಾವಣೆ ಘೋಷಣೆ ನಂತರ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ತಪಾಸಣೆ ನಡೆಸಿ ಅಕ್ರಮವಾಗಿ ಅಥವಾ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ವಸ್ತುಗಳನ್ನು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈವರೆಗೆ ಒಟ್ಟು 230 ಕೋಟಿ ಮೌಲ್ಯದ ವಸ್ತುಗಳನ್ನು ಹಾಗೂ 105 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. ಇಂದು ಮತ್ತು ನಾಳೆ ಸಹ ಹಣ ಸಾಗಾಟದ ಬಗ್ಗೆ ನಿಗಾ ಇಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಈವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್ ಮಾಡಲಾಗಿದೆ. ಭದ್ರತಾ ಪ್ರಕರಣ ಉಲ್ಲಂಘಿಸಿದ 115 ಪ್ರಕರಣ ದಾಖಲಿಸಲಾಗಿದೆ. 1.57 ಕೋಟಿ ಹಣ ಮುಟ್ಟುಗೋಲುಗೆ ಕ್ರಮ ಕೈಗೊಳ್ಳಲಾಗಿದೆ. 714 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಹಣ ಎಷ್ಟು ಗೊತ್ತಾ?
ಬೆಂಗಳೂರು ನಗರದಲ್ಲಿ ಚುನಾವಣೆ ಘೋಷಣೆ ನಂತರ ಈವರೆಗೆ ಒಟ್ಟು 10,93,97,005 ರೂ ನಗದು ವಶಕ್ಕೆ ಪಡೆಯಲಾಗಿದೆ ಎಂದು ಶರಣಪ್ಪ ಹೇಳಿದ್ದಾರೆ. ಈವರೆಗೆ ಒಟ್ಟು 28.5 ಕೆಜಿ ಬಂಗಾರ, 140 KG ಬೆಳ್ಳಿ, 9,72,87,071 ಮೌಲ್ಯದ ಉಚಿತ ಉಡುಗೊರೆಗಳು, 29,51,54,780 ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ