ಒಂದೇ ಒಂದು ಬಾರಿಯೂ ಮತದಾನ ತಪ್ಪಿಸಿಲ್ಲ ಈ ಇಬ್ಬರು ಶತಾಯುಷಿಗಳು!
ಕೊಪ್ಪಳದ ಅಳಗಕೇರಿ ಗ್ರಾಮದ 100 ವರ್ಷ ವಯಸ್ಸಿನ ಬಸಮ್ಮ ಮಡಿವಾಳಯ್ಯ ಹಾಗೂ 105 ವರ್ಷ ವಯಸ್ಸಿನ ಕಲ್ಲಮ್ಮ ಕರಡಗಿಮಠ ಅವರೇ ಈವರೆಗೆ ಮತದಾನ ತಪ್ಪಿಸದವರು. ಇವರಿಬ್ಬರೂ 1952ರಿಂದ ಉಪ ಚುನಾವಣೆಯೂ ಸೇರಿದಂತೆ 16 ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ ಎಂದು ವರದಿಯಾಗಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಪ್ರಚಾರದ ಭರಾಟೆ ಜೋರಾಗಿದೆ. ಪಕ್ಷಾಂತರ, ಟಿಕೆಟ್ಗಾಗಿ ಲಾಬಿ ಇತ್ಯಾದಿ ಚಟುವಟಿಕೆಗಳು ಗರಿಗೆದರಿರುವ ಮಧ್ಯೆಯೇ ಕೇಂದ್ರ ಚುನಾವಣಾ ಆಯೋಗವೂ ರಾಜ್ಯಕ್ಕೆ ಭೇಟಿ ನೀಡಿದ್ದು, ರಾಜಕೀಯ ಪಕ್ಷಗಳ ಜತೆ ಸಮಾಲೋಚನೆ ನಡೆಸಿದೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿಲ್ಲಿಯೂ ಆಯೋಗ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಷ್ಟಾದರೂ ಅನೇಕ ಕಾರಣಗಳಿಗಾಗಿ ಮತದಾನ ಮಾಡದೆ ಇರುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಕೊಪ್ಪಳ (Koppala) ಜಿಲ್ಲೆಯ ಇಬ್ಬರು ಶತಾಯುಷಿಗಳು ಈವರೆಗೆ ತಪ್ಪದೆ ಮತದಾನ ಮಾಡುವ ಮೂಲಕ ಯುವಕ-ಯುವತಿಯರಿಗೆ ಮಾದರಿಯಾಗಿರುವ ಬಗ್ಗೆ ವರದಿಯಾಗಿದೆ. ವಿಧಾನಸಭೆ ಹಾಗೂ ಲೋಕಸಭೆಯ ಒಂದೇ ಒಂದು ಚುನಾವಣೆಯಲ್ಲಿಯೂ ಮತದಾನ ಮಾಡುವುದನ್ನು ಅವರು ಈವರೆಗೆ ತಪ್ಪಿಸಿಲ್ಲ.
ಕೊಪ್ಪಳದ ಅಳಗಕೇರಿ ಗ್ರಾಮದ 100 ವರ್ಷ ವಯಸ್ಸಿನ ಬಸಮ್ಮ ಮಡಿವಾಳಯ್ಯ ಹಾಗೂ 105 ವರ್ಷ ವಯಸ್ಸಿನ ಕಲ್ಲಮ್ಮ ಕರಡಗಿಮಠ ಅವರೇ ಈವರೆಗೆ ಮತದಾನ ತಪ್ಪಿಸದವರು ಎಂದು ‘ನ್ಯೂಸ್ 18’ ವರದಿ ಮಾಡಿದೆ. ಇವರಿಬ್ಬರೂ 1952ರಿಂದ ಉಪ ಚುನಾವಣೆಯೂ ಸೇರಿದಂತೆ 16 ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಕಲ್ಲಮ್ಮ ಕರಡಗಿಮಠ ಅವರನ್ನು ಗುರುತಿಸಿರುವ ಭಾರತೀಯ ಚುನಾವಣಾ ಆಯೋಗವು ಪ್ರಮಾಣಪತ್ರ ನೀಡಿ ಗೌರವಿಸಿದೆ. ಈಗಲೂ ಮತ ಚಲಾವಣೆ ಮಾಡಲು ಮಡಿವಾಳಯ್ಯ ಸಿದ್ಧರಿದ್ದಾರೆ ಎಂದು ಅವರ ಕುಟುಂಬದವರಿ ತಿಳಿಸಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Karnataka Assembly Elections 2023: ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಸಲ್ಲಿಸಿದ ಮನವಿಗಳೇನು?
5 ವರ್ಷಗಳ ಹಿಂದೆ ಅವರೇ ಮತಗಟ್ಟೆಗೆ ತೆರಳಿ ಮತಾದನ ಮಾಡಿ ಬಂದಿದ್ದರು. ಆದರೆ ಈಗ ಅವರಿಗೆ ಇನ್ನೊಬ್ಬರ ಸಾಥ್ ಬೇಕಾಗಿದೆ. ಆದರೂ ಅವರು ಮತದಾನ ತಪ್ಪಿಸಿಕೊಳ್ಳಲು ಬಯಸುವುದಿಲ್ಲ ಎಂದು ಮಡಿವಾಳಯ್ಯ ಅವರ ಪುತ್ರ ಶಂಕರಯ್ಯ ಭೂಸನೂರಮಠ ತಿಳಿಸಿದ್ದಾರೆ.
ವರದಿಗಳ ಪ್ರಕಾರ ಕೊಪ್ಪಳ ಜಿಲ್ಲೆಯಲ್ಲಿ 100 ವರ್ಷ ವಯಸ್ಸು ದಾಟಿದ 212 ಮತದಾರರಿದ್ದಾರೆ ಎನ್ನಲಾಗಿದೆ. ಈ ಪೈಕಿ 67 ಮಂದಿ ಕೊಪ್ಪಳ ವಿಧಾನಸಭೆ ಕ್ಷೇತ್ರ, 48 ಮಂದಿ ಯಲಬುರ್ಗಾ ವಿಧಾನಸಭೆ ಕ್ಷೇತ್ರ, 29 ಮಂದಿ ಗಂಗಾವತಿ ವಿಧಾನಸಭೆ ಕ್ಷೇತ್ರ, 33 ಮಂದಿ ಕನಕಗಿರಿ ವಿಧಾನಸಭೆ ಕ್ಷೇತ್ರ ಹಾಗೂ 33 ಮಂದಿ ಕೊಪ್ಪಳ ತಾಲೂಕಿನವರು ಎಂದು ವರದಿ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:59 pm, Fri, 10 March 23