ಬೆಂಗಳೂರು: ರಾಜ್ಯ ವಿಧಾನಸಭೆ ಚುಣಾವಣೆ (Karnataka Assembly Elections 2023) ಪೂರ್ವಭಾವಿಯಾಗಿ ‘ಟಿವಿ9’ ಸುದ್ದಿವಾಹಿನಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ (Pre-poll Survey) ಬಿಜೆಪಿಯು ಸರಳ ಬಹುಮತದ ಸನಿಹ ತಲುಪಲಿದೆ ಎಂಬುದು ತಿಳಿದುಬಂದಿದೆ. ಅದೇ ರೀತಿ ಆಡಳಿತಾರೂಢ ಪಕ್ಷಕ್ಕೆ ಕಾಂಗ್ರೆಸ್ ಪ್ರಬಲ ಪೈಪೋಟಿ ಒಡ್ಡಲಿದೆ. ಜೆಡಿಎಸ್ ಬಗ್ಗೆ ಏಪ್ರಿಲ್ ಕೊನೆಯ ವಾರದಲ್ಲಿ ಇದ್ದ ಜನಾಭಿಪ್ರಾಯಕ್ಕೆ ಹೋಲಿಸಿದರೆ ಮೇ ಮೊದಲ ವಾರದಲ್ಲಿ ಒಲವು ಕಡಿಮೆಯಾಗಿರುವುದು ಕಂಡುಬಂದಿದೆ. ಏಪ್ರಿಲ್ ಕೊನೆಯ ವಾರದ ವೇಳೆಗೆ ಇದ್ದ ಜನಾಭಿಪ್ರಾಯದ ಪ್ರಕಾರ, ಬಿಜೆಪಿ 110 ಸ್ಥಾನಗಳನ್ನು ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ಮೇ ಮೊದಲ ವಾರದ ಲೆಕ್ಕಾಚಾರದಲ್ಲಿ ಒಟ್ಟಾರೆಯಾಗಿ 105ರಿಂದ 110 ಸ್ಥಾನ ಪಡೆಯಬಹುದು ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷವು 90 ರಿಂದ 97 ಸ್ಥಾನ ಗಳಿಸಬಹುದು. ಜೆಡಿಎಸ್ 19 ರಿಂದ 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬಹುದು. ಇತರರು 5 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ.
ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಲು ಬಯಸುತ್ತೀರಿ ಎಂದು ಕೇಳಲಾದ ಪ್ರಶ್ನೆಗೆ ಶೇ 48 ಮಂದಿ ಬಿಜೆಪಿ, ಶೇ 33 ಮಂದಿ ಕಾಂಗ್ರೆಸ್, ಶೇ 14 ಮಂದಿ ಜೆಡಿಎಸ್ ಹಾಗೂ ಶೇ 5ರಷ್ಟು ಮಂದಿ ಇತರರು ಎಂದು ಉತ್ತರಿಸಿದ್ದಾರೆ.
ಶೇ 45ರಷ್ಟು ಮಂದಿ ರಾಜ್ಯದ ಒಟ್ಟಾರೆ ಅಭಿವೃದ್ಧಿ ಚುನಾವಣಾ ವಿಷಯವಾಗಿರಬೇಕು ಎಂದು ಅಭಿಪ್ರಾಯಪಟ್ಟಿದ್ದರೆ, ಶೇ 21ರಷ್ಟು ಜನ ಉದ್ಯೋಗ ಸೃಷ್ಟಿಗೆ ಒಲವು ವ್ಯಕ್ತಪಡಿಸಿದ್ದಾರೆ. ಶೇ 13 ಮಂದಿ ಭ್ರಷ್ಟಾಚಾರ, ಶೇ 15ರಷ್ಟು ಮಂದಿ ಸಾಮಾಜಿಕ, ಕೋಮು ವಿಚಾರಗಳು, ಶೇ 3ರಷ್ಟು ಮಂದಿ ಇತರ ವಿಚಾರಗಳು ಚುನಾವಣಾ ವಿಷಯವಾಗಿರಬೇಕು ಎಂದು ಉತ್ತರಿಸಿದ್ದಾರೆ.
ಕಾಂಗ್ರೆಸ್ ಘೋಷಿಸಿರುವ ಉಚಿತ ಕೊಡುಗೆಗಳನ್ನು ನಂಬಿ ಆ ಪಕ್ಷಕ್ಕೆ ಮತ ಹಾಕಬಹುದೇ ಎಂದು ಕೇಳಲಾದ ಪ್ರಶ್ನೆಗೆ ಶೇ 32ರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದಾರೆ. ಶೇ 56ರಷ್ಟು ಮಂದಿ ಅಲ್ಲ ಎಂದೂ, ಶೇ 12ರಷ್ಟು ಜನ ಏನೂ ಹೇಳಲಾಗದು ಎಂದು ಉತ್ತರಿಸಿದ್ದಾರೆ.
ಹೊಸ ಸರ್ಕಾರ ರಚಿಸುವುದು ಯಾರು ಎಂದು ಕೇಳಲಾದ ಪ್ರಶ್ನೆಗೆ ಶೇ 45ರಷ್ಟು ಮಂದಿ ಬಿಜೆಪಿ ಎಂದೂ ಶೇ 32ರಷ್ಟು ಮಂದಿ ಕಾಂಗ್ರೆಸ್ ಎಂದೂ ಉತ್ತರಿಸಿದ್ದಾರೆ. ಶೇ 5ರಷ್ಟು ಮಂದಿ ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರ ಬರಬಹುದು ಎಂದರೆ, ಶೇ 6ರಷ್ಟು ಮಂದಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರ ಬರಬಹುದು ಎಂದು ಉತ್ತರಿಸಿದ್ದಾರೆ.
ಲಿಂಗಾಯತ ವಿವಾದವು ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ಪರಿಣಾಮ ಬೀರಬಹುದು ಎಂದು ಶೇ 48 ಮಂದಿ ಹೇಳಿದರೆ ಶೇ 28ರಷ್ಟು ಜನ ಪರಿಣಾಮ ಬೀರದು ಎಂದೂ ಶೇ 24ರಷ್ಟು ಮಂದಿ ಏನೂ ಹೇಳಲಾಗದು ಎಂದು ಉತ್ತರಿಸಿದ್ದಾರೆ.
ಬಜರಂಗದಳ ವಿವಾದದಿಂದ ಕಾಂಗ್ರೆಸ್ ಮೇಲೆ ಪರಿಣಾಮವಾಗಬಹುದೇ ಎಂಬ ಪ್ರಶ್ನೆಗೆ ಶೇ 54ರಷ್ಟು ಮಂದಿ ಹೌದು ಎಂದು ಉತ್ತರಿಸಿದ್ದರೆ, ಶೇ 26ರಷ್ಟು ಮಂದಿ ಪರಿಣಾಮ ಬೀರದು ಎಂದಿದ್ದಾರೆ. ಶೇ 20ರಷ್ಟು ಮಂದಿ ಏನೂ ಹೇಳಲಾಗದು ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮೇಲೆ ಕಾಂಗ್ರೆಸ್ ಮಾಡಿರುವ ವೈಯಕ್ತಿಕ ಟೀಕೆಗಳಿಂದ ಬಿಜೆಪಿಗೆ ಪ್ರಯೋಜನವಾಗಬಹುದು ಎಂದು ಶೇ 51 ಮಂದಿ ಉತ್ತರಿಸಿದ್ದಾರೆ. ಪ್ರಯೋಜನವಾಗದು ಎಂದು ಶೇ 27 ಮಂದಿ ಹೇಳಿದ್ದರೆ, ಏನೂ ಹೇಳಲಾಗದು ಎಂದು ಶೇ 22ರಷ್ಟು ಮಂದಿ ಉತ್ತರಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಇದರಿಂದ ಬಿಜೆಪಿಗೆ ಪ್ರಯೋಜನವಾಗಬಹುದು ಎಂದು ಶೇ 52 ಮಂದಿ ಉತ್ತರಿಸಿದ್ದಾರೆ. ಪ್ರಯೋಜನವಾಗದು ಎಂದು ಶೇ 21ರಷ್ಟು ಜನ ಉತ್ತರಿಸಿದರೆ, ಏನೂ ಹೇಳಲಾಗದು ಎಂದು ಶೇ 27ರಷ್ಟು ಮಂದಿ ಉತ್ತರಿಸಿದ್ದಾರೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ