ದೆಹಲಿ ಮತ್ತು ಪಂಜಾಬ್ ನಲ್ಲಿ ಕಮಾಲ್ ತೋರಿದ್ದ ಅರವಿಂದ್ ಕೇಜ್ರಿವಾಲ್ ಆಮ್ ಆದ್ಮಿ ಪಾರ್ಟಿ ಕರ್ನಾಟದಲ್ಲಿ ಯಾವುದೇ ರೀತಿಯ ಸಾಧನೆ ತೋರಲು ವಿಫಲವಾಗಿದೆ. ಆಮ್ ಆದ್ಮಿ ಪಕ್ಷ ಕರ್ನಾಟಕದ ಶ್ರೀಸಾಮಾನ್ಯನ ತಲುಪಲೇ ಇಲ್ಲ. ಹಾಗಿದ್ದರೆ ಆಮ್ ಆದ್ಮಿ ಪಾರ್ಟಿ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದರೂ ಒಂದು ನಿರ್ದಿಷ್ಟ ಹಂತದ ವೋಟ್ ಶೇರ್ ಪಡೆದುಕೊಳ್ಳಲು ವಿಫಲವಾಗಿದ್ದೇಕೆ?
ದೆಹಲಿ ಮತ್ತು ಪಂಜಾಬ್ ಗೆ ಹೋಲಿಕೆ ಮಾಡಿದರೆ ಕರ್ನಾಟಕದಲ್ಲಿನ ಜಾತಿ ಲೆಕ್ಕಾಚಾರ ಸಂಪೂರ್ಣ ಭಿನ್ನ. ಅಣ್ಣಾ ಹಜಾರೆಯವರ ಚಳವಳಿ ನಂತರ ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಅಧಿಕಾರದ ಚುಕ್ಕಾಣಿ ಹಿಡಿದುಕೊಂಡಿತು. ದೆಹಲಿ ಕೇಂದ್ರಾಡಳಿತ ಪ್ರದೇಶವಾಗಿದ್ದು ಅಲ್ಲಿ ಆಮ್ ಆದ್ಮಿ ಪಕ್ಷ ಮೊದಲ ಸಾರಿಗೆ ಅಧಿಕಾರ ಸ್ಥಾಪಿಸಿತ್ತು. ನಂತರ ಮತ್ತೊಮ್ಮೆ 70 ರಲ್ಲಿ ಬರೋಬ್ಬರಿ 62 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.
ರಾಷ್ಟ್ರ ರಾಜಧಾನಿ ದೆಹಲಿ ನಗರ ಕೇಂದ್ರೀತ ಪ್ರದೇಶ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆಮ್ ಆದ್ಮಿ ಪಾರ್ಟಿಯ ವಿಚಾರಗಳು ಇದೇ ಕಾರಣಕ್ಕೆ ಜನರಿಗೆ ಸುಲಭವಾಗಿ ತಲುಪಿದವು. ಗ್ರಾಮೀಣ ಪ್ರದೇಶ ಕಡಿಮೆ ಇರುವುದು ಆಮ್ ಆದ್ಮಿಗೆ ಅಲ್ಲಿ ಲಾಭತಂದಿತ್ತು.
ಇದನ್ನೂ ಓದಿ:Karnataka Election Results 2023: ಮತ ಎಣಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಇಲ್ಲಿದೆ ವಿವರ
ಇನ್ನೂ ಪಂಜಾಬ್ ನಲ್ಲಿ ಸಹ ಆಮ್ ಆದ್ಮಿ ಕಾಂಗ್ರೆಸ್ ಮಣಿಸಿ ಅಧಿಕಾರ ಹಿಡಿದಿತ್ತು. ಅಲ್ಲಿನ ಬಹುಸಂಖ್ಯಾತ ಸಮುದಾಯ ಸಿಖ್ ನಾಯಕರನ್ನೇ ಮುಂದಿನ ಸಿಎಂ ಎಂದು ಪರೋಕ್ಷವಾಗಿ ಹೇಳಿದ್ದು ಅದಕ್ಕೆ ಲಾಭ ತಂದಿತ್ತು.
ಆದರೆ ಕರ್ನಾಟಕದ ಪರಿಸ್ಥಿತಿ ಸಂಪೂರ್ಣ ಭಿನ್ನ. ಇಲ್ಲಿಯ ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯಗಳನ್ನು ತಲುಪುವಲ್ಲಿ ಆಮ್ ಆದ್ಮಿ ಪಕ್ಷ ಸಂಪೂರ್ಣ ವಿಫಲವಾಯಿತು. ಜನರಿಗೆ ಪಕ್ಷದ ವಿಚಾರಗಳೂ ಮುಟ್ಟಲೇ ಇಲ್ಲ. ವಿಚಾರಗಳೆ ತಲುಪದ ಕಾರಣ ಅವು ಮತಗಳಾಗಿ ಬದಲಾಗಲೇ ಇಲ್ಲ. ಜತೆಗೆ ಬಹುಸಂಖ್ಯಾತ ಅಥವಾ ಪ್ರಭಾವಿ ಸಮುದಾಯದವರು ಆಮ್ ಆದ್ಮಿ ಪಕ್ಷದ ನಾಯಕರು ಅಂತ ಬಿಂಬಿಸುವಲ್ಲಿಯೂ ವಿಫಲವಾಯಿತು. ಬೂತ್ ಮಟ್ಟಕ್ಕೆ ತೆರಳಿ ಕಾರ್ಯಕರ್ತರ ಪಡೆಯನ್ನು ಕಟ್ಟಲಿಲ್ಲ.
ಭಾಸ್ಕರ್ ರಾವ್ ಬಿಜೆಪಿಗೆ ಜಂಪ್:
ಐಪಿಎಸ್ ಅಧಿಕಾರಿಯಾಗಿ ಕರ್ತವ್ಯ ನಿಭಾಯಿಸಿದ್ದ, ಬೆಂಗಳೂರಿನ ಕಮಿಷನರ್ ಸಹ ಆಗಿದ್ದ ಭಾಸ್ಕರ್ ರಾವ್ ಅವರು ಕರ್ನಾಕದ ಆಮ್ ಅದ್ಮಿ ಪಾರ್ಟಿಯ ಜವಾಬ್ದಾರಿ ಹೊತ್ತುಕೊಂಡಿದ್ದರು. ಆದರೆ ಚುನಾವಣೆ ಸಮೀಪಿಸುತ್ತಿರುವಾಗ ಬಿಜೆಪಿ ಭಾಸ್ಕರ್ ರಾವ್ ಅವರನ್ನು ತನ್ನತ್ತ ಸೆಳೆದುಕೊಂಡಿತ್ತು. ಅಲ್ಲದೇ ಬೆಂಗಳೂರು ಚಾಮರಾಜಪೇಟೆಯಿಂದ ಅಭ್ಯರ್ಥಿಯನ್ನಾಗಿಯೂ ಕಣಕ್ಕೆ ಇಳಿಸಿತ್ತು.
ಭಾಸ್ಕರ್ ರಾವ್ ಅವರಿಗಿಂತಲೂ ಮುನ್ನ ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷವನ್ನು ಮೊದಲಿನಿಂದ ಪ್ರಚುರ ಪಡಿಸಿಕೊಂಡು ಬಂದಿದ್ದ ರವಿಕೃಷ್ಣಾರೆಡ್ಡಿ ಒಂದು ಹಂತದಲ್ಲಿ ದೊಡ್ಡ ಮಟ್ಟದ ಪ್ರಚಾರಗಳನ್ನು ನಡೆಸಿದರು.. ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಮಾತುಗಳನ್ನು ಆಡಿದರು. ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿಕೊಂಡು ಆಡಳಿದ ಲೋಪಗಳನ್ನು ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ಬದಲಾದ ರಾಜಕಾರಣದಲ್ಲಿ ಅವರು ಪಕ್ಷ ತೊರೆದಿದ್ದರು.
ಕೇಜ್ರಿವಾಲ್ ಬರಲೇ ಇಲ್ಲ: ವಿಧಾನಸಭೆ ಚುನಾವಣೆ ಬಿಸಿ ಇರುವಾಗ ದಾವಣೆಗೆರೆಗೆ ಒಮ್ಮೆ ಮಾತ್ರ ಕೇಜ್ರಿವಾಲ್ ಬಂದಿದ್ದು ಬಿಟ್ಟರೆ ದೆಹಲಿ ಸಿಎಂ ಕರ್ನಾಟಕದ ಕಡೆಗೆ ಮುಖ ಹಾಕಲೇ ಇಲ್ಲ. ತಮ್ಮ ಅಭ್ಯರ್ಥಿಗಳ ಪರವಾಗಿ ಬಿರುಸಿನ ಪ್ರಚಾರ ಮಾಡಲೇ ಇಲ್ಲ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ತೋರಿದ ಉತ್ಸಾಹ ನಂತರದ ದಿಗಳಲ್ಲಿ ಇರಲೇ ಇಲ್ಲ. ಈ ಎಲ್ಲ ಅಂಶಗಳ ಪರಿಣಾಮವಾಗಿ ಆಮ್ ಆದ್ಮಿ ಪಾರ್ಟಿ ಖಾತೆ ತೆರೆಯುವುದಕ್ಕೂ ವಿಫಲವಾಯಿತು. 500 ರಿಂದ 1000 ಮತಗಳನ್ನು ಪಡೆಯಲಷ್ಟೇ ಶಕ್ಯವಾಯಿತು.
– ಮದುಸೂಧನ ಹೆಗ್ಡೆ, ಶಿರಸಿ
Published On - 1:31 pm, Sat, 13 May 23