ಜಗಳೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೋಲಿಗೆ ಕಾರಣವಾಯ್ತು ನೋಟಾ, ಹೇಗಂತೀರಾ? ಇಲ್ಲಿದೆ ನೋಡಿ

|

Updated on: May 16, 2023 | 11:01 AM

ನನ್ನ ಸೋಲಿಗೆ ಮತದಾರರು ಅಲ್ಲ ಬದಲಿಗೆ ನೋಟಾ ಕಾರಣ ಎಂದು ಪಕ್ಷೇತರ ಅಭ್ಯರ್ಥಿ ಅಳಲು ತೋಡುಕೊಂಡಿದ್ದಾರೆ. ಹಾಗಾದ್ರೆ, ಆಗಿದ್ದೇನು?

ಜಗಳೂರು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೋಲಿಗೆ ಕಾರಣವಾಯ್ತು ನೋಟಾ, ಹೇಗಂತೀರಾ? ಇಲ್ಲಿದೆ ನೋಡಿ
Nota
Follow us on

ದಾವಣಗೆರೆ: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಮೇ 13ರಂದು ಹೊರಬಿದ್ದಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. 224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 135 ಸ್ಥಾನಗಳಲ್ಲಿ, ಬಿಜೆಪಿ 66 ಜೆಡಿಎಸ್ 19 ಹಾಗೂ ಇತರರು ಅಂದರೆ ಪಕ್ಷೇತರರು 4 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಬಹುತೇಕ ಕ್ಷೇತ್ರಗಳಲ್ಲಿ ನಾನಾ-ನೀನಾ ಎನ್ನುವ ಕುಸ್ತಿಗೆ ಈ ಚುನಾವಣೆ ಸಾಕ್ಷಿಯಾಗಿದ್ದು, ಕೆಲ ಅಭ್ಯರ್ಥಿಗಳು ಅಲ್ಪ ಮತಗಳಿಂದ ಗೆದ್ದಿದ್ದಾರೆ. ಇನ್ನು ಕೆಲವರು ಕೂದಲೆಳೆ ಅಂತರಲ್ಲಿ ಸೋಲುಕಂಡಿದ್ದಾರೆ. ಇದರಲ್ಲಿ ಜಗಳೂರು ಕ್ಷೇತ್ರದಿಂದ ಪಕ್ಷೇತರ ಹಾಗೂ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಪಿ.ರಾಜೇಶ್ ಒಬ್ಬರು. ಇವರ ಸೋಲಿಗೆ ನೋಟಾ ಕಾರಣವಾಯ್ತೆ ಎನ್ನುವ ಚರ್ಚೆಗಳು ಶುರುವಾಗಿವೆ.

ಇದನ್ನೂ ಓದಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಮತಗಳ ಅಂತರದಿಂದ ಗೆಲುವು-ಸೋಲು ಕಂಡವರು

ಹೌದು…ಕಾಂಗ್ರೆಸ್ ಟಿಕೆಟ್​ ಕೈತಪ್ಪಿದ್ದರಿಂದ ಪಕ್ಷೇತರವಾಗಿ ಸ್ಪರ್ಧಿಸಿದ್ದ ಎಚ್.ಪಿ.ರಾಜೇಶ್ 49442 ಮತಗಳನ್ನು ಪಡೆದುಕೊಂಡಿದ್ದರೆ, ಕಾಂಗ್ರೆಸ್​ನ ದೇವೇಂದ್ರಪ್ಪ 50765 ಮತಗಳನ್ನು ಪಡೆದುಕೊಳ್ಳುವ ಮೂಲಕ ಕೇವಲ 1323 ವೋಟ್​ನಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಮುಖ್ಯವಾಗಿ ಜಗಳೂರು ಕ್ಷೇತ್ರದಲ್ಲಿಈ ಬಾರಿ 2,241 ನೋಟಾ ಮತಗಳು ಚಲಾವಣೆಯಾಗಿದ್ದು, ಯಾರಿಗೂ ಸಲ್ಲದ ಈ ಮತಗಳು ನಾಲ್ಕನೇ ಸ್ಥಾನದಲ್ಲಿವೆ. ವಿಶೇಷವೆಂದರೆ ಕ್ಷೇತ್ರದಲ್ಲಿಜೆಡಿಎಸ್‌ ಅಭ್ಯರ್ಥಿ ಪಡೆದ ಮತಗಳಿಗಿಂತ ನೋಟಾ ವೋಟುಗಳೇ ಹೆಚ್ಚು. ಹೀಗಾಗಿ ಮತದಾರರ ಬದಲು ನೋಟಾ ನನ್ನ ಸೋಲಿಗೆ ಕಾರಣ ಎಂದು ಎಚ್.ಪಿ.ರಾಜೇಶ್ ಹೇಳಿಕೊಂಡಿದ್ದಾರೆ.

ಸೋಲಿನ ಆತ್ಮವಲೋಕನ ಮಾಡಿಕೊಂಡಿರುವ ಮಾಜಿ ಶಾಸಕ ಎಚ್ ಪಿ.ರಾಜೇಶ್, ಇನ್ನು ನನಗೆ 49442 ಮತಗಳು ಬಂದಿವೆ. ಗೆದ್ದ ಕಾಂಗ್ರೆಸ್ ನ ದೇವೇಂದ್ರಪ್ಪ ಅವರಿಗೆ 50765 ಮತ ಬಂದಿವೆ. ನನ್ನ ಕ್ರಮ‌ಸಂಖ್ಯೆ ಹನ್ನೊಂದು ಆಗಿತ್ತು. ನನ್ನ ಕ್ರಮ ಸಂಖ್ಯೆ ಮುಗಿದ ಬಳಿಕ ನೋಟಾ ಬಟನ್ ಇತ್ತು. ನಾವು ಮತದಾರರಿಗೆ ಕೆಳಗಿನಿಂದ ಮೊದಲ ಬಟನ್ ಎಂದು ಹೇಳಿದೇವು.‌ ಇದೇ ಕಾರಣಕ್ಕೆ ಅಮಾಯಕ ಜನ 2,241 ಜನ ನೋಟಾ ಬಟನ್ ಒತ್ತಿದ್ದಾರೆ. ಇಲ್ಲವಾದ್ರೆ 918 ಮತಗಳಿಂದ ನಾನು ‌ಗೆಲ್ಲಬೇಕಿತ್ತು. ನೋಟಾ ಕಾಟಕ್ಕೆ ಸೋಲು ಕಂಡಂತಾಯಿತು ಎಂದು ಬೇಸರ‌ ಹೊರಹಾಕಿದ್ದಾರೆ.

ಇನ್ನು ದಾವಣಗೆರೆ ಜಿಲ್ಲೆ ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಆರರಲ್ಲಿ ಗೆದ್ದು ಬೀಗಿದ್ದರೆ, ಬಿಜೆಪಿ ಒಂದು ಕ್ಷೇತ್ರ ಗೆದ್ದು ಮಾನ ಉಳಿಸಿಕೊಂಡಿದೆ. ಪ್ರಮುಖ ಪಕ್ಷಗಳ ಭರಾಟೆ ನಡುವೆ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಪಕ್ಷೇತರರೂ ಪರಾಕ್ರಮ ಮೆರೆದಿದ್ದಾರೆ. ದುರಾದೃಷ್ಟಕ್ಕೆ ವಿಜಯಲಕ್ಷ್ಮಿ ಅವರ ಕೈ ಹಿಡಿದಿಲ್ಲ. ಆದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಸೋಲಿಗೂ ಇವರು ಪಡೆದ ಮತಗಳು ಪೆಟ್ಟುಕೊಟ್ಟಿವೆ ಎಂದು ವಿಶ್ಲೇಷಿಸಲಾಗಿದೆ.