ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ಜಗಳ, ಬಿಜೆಪಿಯಿಂದ ರಾಜಕೀಯ ಬಣ್ಣ: ಯತೀಂದ್ರ ಸ್ಪಷ್ಟನೆ

|

Updated on: Apr 28, 2023 | 10:24 AM

ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್​ ಕಾರ್ಯಕರ್ತರ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಪ್ರಕರಣದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.

ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ಜಗಳ, ಬಿಜೆಪಿಯಿಂದ ರಾಜಕೀಯ ಬಣ್ಣ: ಯತೀಂದ್ರ ಸ್ಪಷ್ಟನೆ
ಯತೀಂದ್ರ ಸಿದ್ದರಾಮಯ್ಯ
Follow us on

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ(siddaramaiah) ಹುಟ್ಟೂರು ಸಿದ್ದರಾಮನಹುಂಡಿಯಲ್ಲಿ ಬಿಜೆಪಿ(BJP) ಹಾಗೂ ಕಾಂಗ್ರೆಸ್​ (Congress)ಕಾರ್ಯಕರ್ತರ ನಡುವಿನ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ವರುಣಾ(Varuna) ಬಿಜೆಪಿ ಅಭ್ಯರ್ಥಿ ಸೋಮಣ್ಣ ಹಾಗೂ ಸಂಸದ ಪ್ರತಾಪ್ ಸಿಂಹ ಅವರು ಪ್ರಚಾರಕ್ಕೆ ಹೋಗಿದ್ದಾಗ ಕಾಂಗ್ರೆಸ್​ ಕಾರ್ಯಕರ್ತರು ಕಲ್ಲು ತೂರಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರಕಟಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಇನ್ನು ಬಗ್ಗೆ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ(yathindra siddaramaiah) ಪ್ರತಿಕ್ರಿಯಿಸಿದ್ದು, ಬಿಜೆಪಿ ನಾಯಕರ ಆರೋಪಗಳನ್ನು ಅಲ್ಲಗೆಳೆದಿದ್ದಾರೆ.

ಇದನ್ನೂ ಓದಿ: ಸಿದ್ದರಾಮನ ಹುಂಡಿಯಲ್ಲಿ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಗಲಾಟೆ: ಸಿದ್ದರಾಮಯ್ಯಗೆ ಸಂಸದ ಪ್ರತಾಪ್​ ಸಿಂಹ​ ಎಚ್ಚರಿಕೆ

ನಿನ್ನೆ (ಏಪ್ರಿಲ್ 27) ಸಿದ್ದರಾಮನಹುಂಡಿಯಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಸ್ವತಃ ಯತೀಂದ್ರ ಸಿದ್ದರಾಮಯ್ಯ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಸಿದ್ದರಾಮನಹುಂಡಿಯಲ್ಲಿ ಕಾರು-ಬೈಕ್ ಡಿಕ್ಕಿಯಿಂದ ಜಗಳ ನಡೆದಿದೆ. ಬಿಜೆಪಿ ಅವರು ಇದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಬಿಜೆಪಿ ಅವರು ಗಲಭೆ ಮಾಡಿಸಲು ನಿಸ್ಸಿಮರು ಎಂದು ಕಿಡಿಕಾರಿದರು.

ಬಿಜೆಪಿ ಹಸಿ ಸುಳ್ಳು ಹೇಳುತ್ತಾ ದ್ಚೇಷ ತಂದು ಹಾಕಿ ತಮ್ಮ ಬೇಳೆ ಬೇಯಿಸಿ ಕೊಳ್ಳುವ ತಂತ್ರ ಮಾಡುತ್ತಿದೆ. ಅವರು ಎಷ್ಟೇ ಪ್ರಚೋದನೆ ಮಾಡಿದರು‌ ಕಾಂಗ್ರೆಸ್ ಕಾರ್ಯಕರ್ತರು ಪ್ರಚೋದನೆಗೆ ಒಳಗಾಗಬಾರದು. ಬಿಜೆಪಿ ರಾಜಕೀಯ ಲಾಭಕ್ಕಾಗಿ ಈ ರೀತಿ ಕಾರ್ಯತಂತ್ರ ಮಾಡುತ್ತಿದೆ ಎಂದು ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದರು.

ಇದನ್ನೂ ಓದಿ: ಸೋಮಣ್ಣ ಬೆಂಬಲಿಗರ ಮೇಲೆ ಕಾಂಗ್ರೆಸ್ ಮುಖಂಡರ ಹಲ್ಲೆ ಪ್ರಕರಣ: ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ಕೇಸ್ ದಾಖಲು

ಸಿದ್ದರಾಮಯ್ಯ ಸಹೋದರರ ಮಕ್ಕಳ ವಿರುದ್ದ ಪ್ರಕರಣ ದಾಖಲಾಗಿರುವ ಬಗ್ಗೆ ಮಾತನಾಡಿ, ಗಲಾಟೆ ವೇಳೆ ಸಿದ್ದರಾಮಯ್ಯ ಕುಟುಂಬದವರು ಯಾರು ಅಲ್ಲಿ ಇರಲಿಲ್ಲ. ನಮ್ಮ ಸಂಬಂಧಿಕರ ಮನೆ ಮುಂದೆ ಘಟನೆ ಆಗಿದೆ ಅಷ್ಟೇ. ಆದರೂ ದುರುದ್ದೇಶದಿಂದ ನಮ್ಮ‌ ಕುಟುಂಬದ ಸದಸ್ಯರ ಮೇಲೆ ದೂರು ನೀಡಿದ್ದಾರೆ. ಅವರು ಎಷ್ಟೇ ಪ್ರಚೋದನೆ ಮಾಡಿದರು ಪ್ರಚೋದನೆಗೆ ಒಳಗಾಗಬೇಡಿ ಎಂದು ನಾನು ನಮ್ಮ‌ ಕಾರ್ಯಕರ್ತರಿಗೆ ಮನವಿ ಮಾಡುತ್ತೇನೆ ಎಂದರು.

ಘಟನೆ ಹಿನ್ನೆಲೆ

ಕಾಂಗ್ರೆಸ್​ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿ, ಬಿಜೆಪಿ ಪ್ರಚಾರ ರಥದ ಮೇಲೆ ಕಾಂಗ್ರೆಸ್​ ಕಾರ್ಯಕರ್ತರು ಕಲ್ಲೆಸೆದ ಆರೋಪ ಮಾಡಲಾಗಿದೆ. ಸಿದ್ದರಾಮನಹುಂಡಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅಣ್ಣನ ಮನೆ ಮುಂದೆ ಪ್ರಚಾರ ಮಾಡುವಾಗ ಘಟನೆ ನಡೆದಿದ್ದು, ಈ ವೇಳೆ ಬಿಜೆಪಿ ಕಾರ್ಯಕರ್ತ ನಾಗೇಶ್ ಮೇಲೆ ಹಲ್ಲೆ ಆರೋಪ ಕೇಳಿಬಂದಿದೆ. ನಾಗೇಶ್ ಕಾಲಿಗೆ ಪೆಟ್ಟಾಗಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅಣ್ಣನ ಮಕ್ಕಳ ವಿರುದ್ಧ ವರುಣಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ