ಕಡೂರು: ಚಿಕ್ಕಮಗಳೂರಿನ ಕಡೂರು (Kadur) ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ವಿಚಾರವಾಗಿ ವೈಎಸ್‌ವಿ ದತ್ತಾ (YSV Datta) ಜತೆ ‘ಕೈ’ ಅಭ್ಯರ್ಥಿ ಆನಂದ್ ಶುಕ್ರವಾರ ನಡೆಸಿರುವ ಸಭೆ ವಿಫಲವಾಗಿದೆ. ಪಕ್ಷೇತರ ಅಭ್ಯರ್ಥಿಯಾಗುವ ಬಗ್ಗೆ ಆನಂದ್ ಸಮ್ಮುಖದಲ್ಲೇ ದತ್ತಾ ಸುಳಿವು ನೀಡಿದ್ದಾರೆ. ಇದು ಕಡೂರು ರಾಜಕೀಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಏರ್ಪಡುವ ಸುಳಿವು ನೀಡಿದೆ. ಕಡೂರು ತಾಲೂಕಿನ ಯಗಟಿ ಗ್ರಾಮದಲ್ಲಿರುವ ದತ್ತಾ ಮನೆಗೆ ತೆರಳಿ ಅವರ ಮನವೊಲಿಸಲು ಆನಂದ್ ಮುಂದಾಗಿದ್ದರು. ಆದರೆ, ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ದತ್ತಾ ಸ್ಪಷ್ಟಪಡಿಸಿದ್ದಾರೆ.
ಬೆಂಬಲಿಗರ ತೀರ್ಮಾನವೇ ಅಂತಿಮ. ಭಾನುವಾರ ಬೆಂಬಲಿಗರ ಜೊತೆ ಸಭೆ ನಡೆಸಿ ತೀರ್ಮಾನಿಸುತ್ತೇನೆ ಎಂದು ದತ್ತಾ ಹೇಳಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವಂತೆ ದತ್ತಾಗೆ ಬೆಂಬಲಿಗರು ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆನಂದ್ ಎದುರೇ ಬೆಂಬಲಿಗರು ಮನವಿ ಮಾಡಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ದತ್ತಾಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಇತ್ತು. ಆದರೆ, ಕೊನೇ ಕ್ಷಣದಲ್ಲಿ ಆನಂದ್ ಅವರಿಗೆ ಟಿಕೆಟ್ ಘೋಷಣೆಯಾಯಿತು. ಇದು ದತ್ತಾ ಬೇಸರಕ್ಕೆ ಕಾರಣವಾಗಿದೆ. ದತ್ತಾ ಅವರು ಇತ್ತೀಚೆಗಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಟಿಕೆಟ್ಗೆ ಪ್ರಬಲ ಆಕಾಂಕ್ಷಿಯೂ ಆಗಿದ್ದರು. ಜೆಡಿಎಸ್ನಲ್ಲಿದ್ದಾಗ ಕಡೂರು ಕ್ಷೇತ್ರದ ಟಿಕೆಟ್ ದತ್ತಾಗೆ ಖಚಿತವಾಗಿತ್ತು. ಆದರೆ ಇದೀಗ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು ಅತ್ತ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಕಡೂರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದಕ್ಕೆ ಭಾವುಕರಾದ ದತ್ತಾ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಬೇರೆಯವರಿಗೆ ಕಡೂರು ಟಿಕೆಟ್ ಕೊಟ್ಟಿರುವುದಕ್ಕೆ ಆಕ್ಷೇಪಣೆ ಇಲ್ಲ. ಟಿಕೆಟ್ ಪಡೆದ ವ್ಯಕ್ತಿಯ ಬಗ್ಗೆ ಯಾವುದೇ ಅಸೂಯೆಯೂ ಇಲ್ಲ. ಅವರ ಮೇಲೆ ಅಕ್ರೋಶವಿಲ್ಲ, ಟಿಕೆಟ್ ಸಿಕ್ಕಿರುವವರಿಗೆ ಒಳ್ಳೆಯದಾಗಲಿ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಅಸಮಾಧಾನ ಹೊರ ಹಾಕಿದ ವೈಎಸ್‌ವಿ ದತ್ತಾ: ಹೇಳಿದ್ದಿಷ್ಟು
ಟಿಕೆಟ್ ನೀಡುವುದಕ್ಕೂ ಮೊದಲು ಕ್ಷೇತ್ರದಲ್ಲಿ ಪ್ರಕ್ರಿಯೆ ನಡೆಸಬೇಕಿತ್ತು. ಬೇರೆ ಕ್ಷೇತ್ರದಲ್ಲಿ ಮಾಡಿದ ಪ್ರಕ್ರಿಯೆಯನ್ನು ಕಡೂರಿನಲ್ಲೂ ಮಾಡಬೇಕಿತ್ತು. ಕ್ಷೇತ್ರದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುತ್ತಾರೆ ಅಂದುಕೊಂಡಿದ್ದೆ. ಟಿಕೆಟ್ ಪ್ರಕ್ರಿಯೆ ವೇಳೆ ನನ್ನನ್ನು ಸಂಪರ್ಕಿಸಲಿಲ್ಲ, ಮಾಹಿತಿ ನೀಡಿರಲಿಲ್ಲ. ಸಮೀಕ್ಷೆ ನಡೆಸಿ ಜನ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುತ್ತಿದ್ದರು. ಕ್ಷೇತ್ರದಲ್ಲಿ ಜನಾಭಿಪ್ರಾಯ ನನ್ನ ಪರವಾಗಿತ್ತು, ಇದನ್ನು ಪರಿಗಣಿಸಬೇಕಿತ್ತು ಎಂದು ದತ್ತಾ ಹೇಳಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ