ಕಾಂಗ್ರೆಸ್ ವಿರುದ್ಧ ಸ್ವಾಭಿಮಾನಿ ಕಹಳೆ ಮೊಳಗಿಸಿದ ದತ್ತಾ, ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ
ಟಿಕೆಟ್ ಕೈತಪ್ಪಿದ್ದರಿಂದ ಅಸಮಧಾನಗೊಂಡಿರುವ ವೈಎಸ್‌ವಿ ದತ್ತಾ ಅವರು ಅಸಮಧಾನಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಸ್ವಾಭಿಮಾನ ಕಹಳೆ ಮೊಳಗಿಸಿದ್ದಾರೆ.
ಚಿಕ್ಕಮಗಳೂರು: ಜೆಡಿಎಸ್ ತೊರೆದು ಕಾಂಗ್ರೆಸ್ (Congress) ಸೇರಿದ್ದ ಮಾಜಿ ಶಾಸಕ ವೈಎಸ್‌ವಿ ದತ್ತಾಗೆ (YSV Datta) ಕಡೂರು ಕ್ಷೇತ್ರದ ಟಿಕೆಟ್ ಕೈ ತಪ್ಪಿದ್ದು, ಪಕ್ಷೇತರವಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಟಿಕೆಟ್ ಕೈತಪ್ಪಿದ್ದರಿಂದ ಇಂದು(ಏಪ್ರಿಲ್ 09) ಕಡೂರಿನಲ್ಲಿ ಸ್ವಾಭಿಮಾನಿ ಸಮಾವೇಶದಲ್ಲಿ ತಮ್ಮ ಅಭಿಮಾನಿಗಳ ಜೊತೆ ಚರ್ಚಿಸಿದರು. ಅಭಿಮಾನಿಗಳ ಅಭಿಪ್ರಾಯದಂತೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದು, ಟವಲ್ ಗುರುತಿನಿಂದ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಈ ಮೂಲಕ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಸ್ವಾಭಿಮಾನಿ ಕಹಳೆ ಮೊಳಗಿಸಿದ್ದಾರೆ.
ಕಡೂರಿನ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಸ್ವಾಭಿಮಾನಿ ಸಮಾವೇಶದಲ್ಲಿ ಚುನಾವಣಾ ಸ್ಪರ್ಧೆ ಬಗ್ಗೆ ಅಭಿಮಾನಿಗಳ ಸಮ್ಮುಖದಲ್ಲಿ ಕಡೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ಅಲ್ಲದೇ ಚುನಾವಣಾ ಖರ್ಚಿಗೆ ಹಣ ಸಂಗ್ರಹಕ್ಕೆ ಮುಂದಾಗಿದ್ದು, ಸಮಾವೇಶದಲ್ಲೇ ಟವಲ್ ಹಾಸಿ ಹಣ ಸಂಗ್ರಹಿಸಿದರು.
ಈ ವೇಳೆ ಮಾತನಾಡಿದ ದತ್ತಾ, ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದು ಮುಗಿದ ಕಥೆ. ಹಣ ಮತ್ತು ಜಾತಿ ಮೇಲೆ ಅಭ್ಯರ್ಥಿ ಅಯ್ಕೆ ಮಾಡುತ್ತಾರೆ. ಜಾತಿ ಬಲವಿಲ್ಲ, ಮೈ ತುಂಬಾ ಸಾಲ ಮಾಡಿದವನು ನಾನು. ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ್ರೆ ಕಡೂರು ಬಿಜೆಪಿ ಕಚೇರಿ ಮುಂದೆ ಪಟಾಕಿ ಹೊಡೆದರು. ಇದರ ಇಂದಿನ ಅರ್ಥ ಕ್ಷೇತ್ರದ ಜನತೆಗೆ ಅರ್ಥವಾಗಿದೆ ಎಂದು ಭಾವನಾತ್ಮಕವಾಗಿ ಮಾತನಾಡಿದರು.
ಕಡೂರಿಗೊಬ್ಬ ಅಭ್ಯರ್ಥಿ ಹುಡುಕು ಎಂದು ದೇವೇಗೌಡರು ಹೇಳಿದ್ದರು. ಅದರಂತೆ ಟಿಕೆಟ್ ಕೊಡುತ್ತೇವೆ ಎಲೆಕ್ಷನ್ಗೆ ನಿಲ್ಲಿ ಎಂದು ಮುಖಂಡರ ಮನೆ ಬಾಗಿಲಿಗೆ ಹೋದೆ. ನಮ್ಮ ಮನೆ ಹಾಳು ಮಾಡಲು ಟಿಕೆಟ್ ಬಂದಿದ್ದೀರಾ ಎಂದು ಕೇಳಿದ್ದರು. ಬಸ್ ಕಂಡಕ್ಟರ್ ತರ ಮನೆಮನೆ ಬಾಗಿಲಿಗೆ ಹೋಗಿ ಟಿಕೆಟ್ ಕೊಡುತ್ತೀನಿ ಅಂತ ಕೇಳಿದ್ದೆ. ಕೊನೆಗೆ ನನ್ನ ಜಾತಿ ಬೆಂಬಲ ಇಲ್ಲದ ಕ್ಷೇತ್ರದಲ್ಲಿ ನಾನೇ ಜೆ.ಡಿ.ಎಸ್ ಅಭ್ಯರ್ಥಿಯಾದೆ. ಜಾತಿ ರಾಜಕಾರಣ ಸಾಕು, ಪ್ರೀತಿ ರಾಜಕಾರಣ ಮಾಡೋಣ ಎಂದು ಕರೆ ನೀಡಿದೆ. ಪ್ರೀತಿ ರಾಜಕಾರಣಕ್ಕೆ ಮನಸೋತು ಕ್ಷೇತ್ರದ ಜನ ನನ್ನನ್ನ ಗೆಲ್ಲಿಸಿದ್ದರು ಎಂದು ಆ ದಿನಗಳನ್ನು ಮೆಲುಕು ಹಾಕಿದರು.
ಟಿಕೆಟ್ ಭರವಸೆ ನೀಡಿಯೇ ದತ್ತಾ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಆದರೆ, ಕೊನೆಯ ಗಳಿಗೆಯಲ್ಲಿ ಟಿಕೆಟ್ ತಪ್ಪಿದ್ದು, ಕಾಂಗ್ರೆಸ್ ಹೈಕಮಾಂಡ್ ಆನಂದ್ ಕೆಎಸ್ (Anand KS) ಅವರಿಗೆ ಟಿಕೆಟ್ ನೀಡಿದೆ. ಇದರಿಂದ ದತ್ತಾ ಭಾರೀ ನಿರಾಸೆಯಾಗಿದೆ. ಟಿಕೆಟ್ ನೀಡದೆ ಇರಲು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗಿನ ಮುನಿಸು ಕಾರಣ ಎಂಬ ಮಾತೂ ಕೇಳಿಬರುತ್ತಿದೆ. ಆದರೆ ಕನಿಷ್ಠ ದತ್ತಾ ಅವರ ಜೊತೆಗೆ ಮಾತುಕತೆ ನಡೆಸುವ ಸೌಜನ್ಯವನ್ನೂ ಕಾಂಗ್ರೆಸ್ ನಾಯಕರು ತೋರಿಸಿಲ್ಲ ಎಂಬ ಆಕ್ರೋಶಗಳು ವ್ಯಕ್ತವಾಗಿವೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕುರಿತು ವೈಎಸ್‌ವಿ ದತ್ತಾ ಮಾತನಾಡಿದ್ದಾರೆ ಎನ್ನಲಾಗಿದ್ದ ಆಡಿಯೋ ವೈರಲ್ ಆಗಿತ್ತು. ಆ ಆಡಿಯೋದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಡಿಕೆ ಶಿವಕುಮಾರ್ ಹೊರೆ, ಅವರನ್ನು ಸಮರ್ಥನೆ ಮಾಡಲು ಆಗಲ್ಲ ಎಂದು ವೈಎಸ್‌ವಿ ದತ್ತಾ ಹೇಳಿದ್ದರು ಎನ್ನಲಾಗಿತ್ತು. ಈ ಹಿನ್ನೆಲೆ ಕಾಂಗ್ರೆಸ್ ಟಿಕೆಟ್ ತಪ್ಪಿದೆ ಎನ್ನಲಾಗಿದೆ.