ಕರ್ನಾಟಕ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ಭರ್ಜರಿ ತಯಾರಿ ನಡೆಯುತ್ತಿದೆ. ಪ್ರತಿ 5ವರ್ಷಕ್ಕೊಮ್ಮೆ ನಡೆಯುವ ಎಲೆಕ್ಷನ್ ಹಬ್ಬದಲ್ಲಿ ಶಕ್ತಿ ಪ್ರದರ್ಶನಕ್ಕೆ ರಾಜಕೀಯ ನಾಯಕರು ಸಜ್ಜಾಗಿ ನಿಂತಿದ್ದಾರೆ. ಮತದಾರರ ವೋಟ್ ಪಡೆಯಲು ನಾನಾ ತಂತ್ರಗಳ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್(Congress), ಜೆಡಿಎಸ್(JDS) ತಲಾ ಒಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆಮ್ ಆದ್ಮಿ ಪಕ್ಷ(AAm Aadmi Party) ಎರಡು ಪಟ್ಟಿ ಬಿಡುಗಡೆ ಮಾಡಿದೆ. ಆದ್ರೆ ಬಿಜೆಪಿ ಈವರೆಗೂ ಯಾವುದೇ ಪಟ್ಟಿ ಬಿಡುಗಡೆ ಮಾಡಿಲ್ಲ. ಸಧ್ಯ ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಿ ಅಭ್ಯರ್ಥಿಗಳ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಬನ್ನಿ ಚುನಾವಣಾ ಕದನದಲ್ಲಿ ರಾಜಕೀಯ ಕಲಿಗಳ ತಯಾರಿ ಹೇಗಿದೆ. ರಾಜಕೀಯ ವಲಯದಲ್ಲಿ ಏನೇನು ನಡೆಯುತ್ತಿದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಟಿವಿ9 ಡಿಜಿಟಲ್ನಲ್ಲಿ ಪಡೆಯಿರಿ.
ಬೆಂಗಳೂರು: ನಾನು ಒಂದಲ್ಲ ಮೂರು ಮೆಟ್ಟಿಲು ಇಳಿಯಲು ಸಿದ್ಧನಾಗಿರುವೆ ಎಂದು ನಗರದಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಸಭೆಯಲ್ಲಿ ನಮ್ಮಿಬ್ಬರ ಕಡೆಯಿಂದ ಒಂದೇ ರೀತಿ ಪ್ರತಿಕ್ರಿಯೆ ಬಂತು. ಟಿಕೆಟ್ ವಿಚಾರದಲ್ಲಿ ಅಂತಿಮವಾಗಿ ಪಕ್ಷದ ನಿರ್ಧಾರಕ್ಕೆ ಬಿಟ್ಟಿದ್ದೇವೆ. ನಾವಿಬ್ಬರು ಒಟ್ಟಾಗಿ ಕೆಲಸ ಮಾಡುವುದಾಗಿ ಸಭೆಯಲ್ಲಿ ಹೇಳಿದ್ದೇವೆ. ನಮ್ಮ ಮೇಲೆ ಯಾರ ವಕ್ರದೃಷ್ಟಿ ಬಿದ್ದಿದೆಯೋ ಗೊತ್ತಿಲ್ಲ. ಎಲ್ಲವನ್ನು ಹೇಳೋಕೆ ನಾನು ಜ್ಯೋತಿಷ್ಯ ಕಲಿಯಬೇಕು ಅಷ್ಟೇ ಎಂದು ಹೇಳಿದರು.
ಬೆಂಗಳೂರು: ನನಗೆ ಗೊತ್ತಿರುವಂತೆ ಯಾರೂ ಹೋಗಲ್ಲ. ಕಾಂಗ್ರೆಸ್‌ಗೆ ಹೋಗುವವರು ಯಾರೆಂದು ಡಿ.ಕೆ.ಶಿವಕುಮಾರ ಅವರನ್ನೆ ಕೇಳಿಕೊಂಡು ಹೇಳಿ. ಬಿಜೆಪಿಗೆ ಪೂರ್ಣ ಬಹುಮತ ಬರುತ್ತೆ, ಕಾಂಗ್ರೆಸ್‌ಗೆ ಏಕೆ ಹೋಗುತ್ತಾರೆ. ಕಾಂಗ್ರೆಸ್‌ನಲ್ಲಿ ಏನಾದ್ರೂ ಆ್ಯಕ್ಟಿವಿಟಿ ಇದೆಯಾ. ಅವರ ಬಳಿ ದೊಡ್ಡ ಪಟ್ಟಿ ಇರೋದರಿಂದಲೇ ಚೇರ್‌ಗಳಲ್ಲಿ ಹೊಡೆದಾಡ್ತಿದ್ದಾರೆ. ಚಿಕ್ಕಬಳ್ಳಾಪುರದಿಂದ ಸಿಎಂ ಬಸವರಾಜ ಬೊಮ್ಮಾಯಿ ಸ್ಪರ್ಧಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಕ್ಷೇತ್ರ ಸಂಕಟ ಅಂತಾ ಬೊಮ್ಮಾಯಿರವರು ಯಾರಿಗಾದ್ರೂ ಹೇಳಿದ್ದಾರಾ?
ಬೊಮ್ಮಾಯಿರವರು ಎಲ್ಲೂ ಸೋತಿಲ್ಲ, ಎಲ್ಲಿ ಸ್ಪರ್ಧಿಸಿದ್ರೂ ಗೆಲ್ಲುತ್ತಾರೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಆರೋಗ್ಯ ಇಲಾಖೆ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ದೆಹಲಿ: ಯಾವುದೇ ಷರತ್ತುಗಳನ್ನು ಹಾಕದೇ ಬಿಜೆಪಿ ಸೇರ್ಪಡೆಯಾಗಿದ್ದೇನೆ ಎಂದು ದೆಹಲಿಯಲ್ಲಿ ಬಿಜೆಪಿ ಸೇರ್ಪಡೆ ಬಳಿಕ ಎ.ಟಿ.ರಾಮಸ್ವಾಮಿ ಪ್ರತಿಕ್ರಿಯೆ ನೀಡಿದರು. ಪ್ರಧಾನಿ ಮೋದಿ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಬಿಜೆಪಿ ಸೇರಿದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ ಭೇಟಿಯಾಗಿ ಆಶೀರ್ವಾದ ಪಡೆಯುತ್ತೇನೆ. ನಾನು ಭೂಗಳ್ಳರ ವಿರುದ್ಧ ಹೋರಾಟ ಮಾಡಿದ್ದೇನೆ. ನಮ್ಮ ಭಾರತ ಇಡೀ ವಿಶ್ವದಲ್ಲಿ ದಾಪುಗಾಲು ಇಡುತ್ತಿದೆ. ಇದಕ್ಕೆ ಕಾರಣ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ. ನಾನೆಂದೂ ನನ್ನ ವೈಯಕ್ತಿಕ ಜೀವನಕ್ಕೆ ಏನೂ ಕೂಡ ಮಾಡಿಕೊಂಡಿಲ್ಲ. ಬಿಜೆಪಿಗೆ ಕಪ್ಪು ಚುಕ್ಕೆ ಬಾರದಂತೆ ನನ್ನ ಕೆಲಸ ನಿರ್ವಹಿಸಲಿದ್ದೇನೆ ಎಂದು ಹೇಳಿದರು.
ಕೊಡಗು: ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಹಿನ್ನೆಲೆ ಕೊಡಗಿನ ಇಬ್ಬರು ಶಾಸಕರಾದ ಅಪ್ಪಚ್ಚುರಂಜನ್ ಮತ್ತು ವಿರಾಜಪೇಟೆ ಶಾಸಕ ಕೆಜಿ ಬೋಪಯ್ಯಾಗೂ ಚುನಾವಣಾಧಿಕಾರಿಯಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಶಿವಕುಮಾರ ಸ್ವಾಮೀಜಿ ಜನ್ಮದಿನಕ್ಕೆ ಅಪ್ಪಚ್ಚು ಶುಭಾಶಯ ಕೋರಿದ್ದರು. ಅದೇ ರೀತಿಯಾಗಿ SSLC ಪರೀಕ್ಷೆಗೆ ಬೋಪಯ್ಯ ಶುಭ ಕೋರಿದ್ದರು. ಇಬ್ಬರು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದರು.
ಕೋಲಾರ: ಜಿಲ್ಲಾ ಮುಖಂಡರ ಭಾವನೆಗಳು ನಮಗೆ ಅರ್ಥವಾಗುತ್ತೆ. ಕೋಲಾರದಿಂದ ಸ್ಪರ್ಧೆಯ ಬಗ್ಗೆ ಪಕ್ಷ ನಿರ್ಧಾರ ತೆಗೆದುಕೊಳ್ಳಲಿದೆ. ರಾಹುಲ್ ಅನರ್ಹಗೊಳಿಸುವ ಮೂಲಕ ಪ್ರಜಾಪ್ರಭುತ್ವದ ಕೊಲೆ. ಉದ್ಯಮಿ ನೀರವ್ ಮೋದಿ, ಲಲಿತ್ ಮೋದಿ ವಂಚನೆ ಮಾಡಿದ್ದಾರೆ. ಉದ್ಯಮಿಗಳು ಬ್ಯಾಂಕ್ಗಳಿಗೆ ವಂಚಿಸಿ ವಿದೇಶಕ್ಕೆ ಓಡಿ ಹೋಗಿದ್ದಾರೆ. ಆದರೆ ಪ್ರಧಾನಮಂತ್ರಿ ಮೋದಿ ದೆಹಲಿಯಲ್ಲಿ ಕುಳಿತು ನೋಡ್ತಿದ್ದಾರೆ. ಕಳ್ಳನನ್ನು ಕಳ್ಳ ಎಂದು ಕರೆದರೆ ತಪ್ಪಾ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಪ್ರಶ್ನಿಸಿದರು.
ಹಾಸನ: ಬಿಜೆಪಿ ನಾಯಕರ ಜತೆ ಅರಕಲಗೂಡು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ದೆಹಲಿಗೆ ದೌಡಾಯಿಸಿದ್ದು, ಬಿಜೆಪಿ ಹೈಕಮಾಂಡ್ ಭೇಟಿಯಾಗಲಿದ್ದಾರೆ. ಪಕ್ಷ ಸೇರ್ಪಡೆ ಬಗ್ಗೆ ಬಿಜೆಪಿ ಹೈಕಮಾಂಡ್ ಜತೆ ಚರ್ಚೆ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಮಸ್ವಾಮಿ ರಾಜೀನಾಮೆ ನೀಡಿದ್ದಾರೆ.
ಬೆಂಗಳೂರು: ಇವರನ್ನು ಬೆಳೆಸುವುದಕ್ಕೆ ನಾನು ಪಕ್ಷ ಹಾಳುಮಾಡಿಕೊಳ್ಳಬೇಕಾ? ಇವರೇನು ಮಹಾನ್ ಕೆಲಸ ಮಾಡಿದ್ದಾರಾ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದರು. ಅಂದು ಕೃಷ್ಣ ವಿರುದ್ಧ ಅಭ್ಯರ್ಥಿ ಆಗಬೇಕು ಎಂದಾಗ ಪರಿಜ್ಞಾನ ಇರಲಿಲ್ವಾ. ನಿನ್ನ ನಡವಳಿಕೆ ನೋಡಿ ಟಿಕೆಟ್ ನೀಡಲಿಲ್ಲ. ಟಿಕೆಟ್ ಕೊಡಿಸಿದ್ದು ನಾನು, ಕುತ್ತಿಗೆ ಕುಯ್ದು ಹೋದವನು ನೀನು. ನಿನ್ನಿಂದ ಪಾಠ ಕಲಿಯುವ ಅಗತ್ಯ ನನಗಿಲ್ಲ. ಈ ಚುನಾವಣೆಯಲ್ಲಿ ಕೆ.ಆರ್.ಪೇಟೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದರು.
ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುತ್ತಿದ್ದ ಬಂಡಾಯ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ಉಂಟಾಗಿದೆ. ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ವಿರುದ್ಧ ಕಿಡಿ ಕಾರಲಾಗುತ್ತಿದೆ. ತಮ್ಮಯ್ಯಗೆ ಟಿಕೆಟ್ ನೀಡದಂತೆ ಕಾರ್ಯಕರ್ತರು ಸಭೆ ಸೇರಿದ್ದರು. ಸಭೆಯಲ್ಲಿ ‘ಕೈ’ ಮುಖಂಡರು, ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಪರಸ್ಪರ ನೂಕಾಟ ತಳ್ಳಾಟ ನಡೆದಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.
ಬೆಂಗಳೂರು: ನಮ್ಮ ಹಿರಿಯರ ನಾಯಕರ ಜೊತೆ ಮಾತನಾಡಿದ್ದೇನೆ. ನನಗೆ ಟಿಕೆಟ್ ಸಿಗುತ್ತೆ ಎನ್ನುವ ಭರವಸೆ ಇದೆ. ಸಿಗದೇ ಹೋದರು ನಾನು ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ. ಟಿಕೆಟ್ ಸಿಗದಿದ್ದರೇ ಸಹಜವಾಗೇ ಬೇಸರ ಆಗುತ್ತೆ. ಅದು ಮನುಷ್ಯನ ಗುಣವಾಗಿರುತ್ತೆ. ಬೇರೆಯವರಿಗೆ ಟಿಕೆಟ್ ಸಿಕ್ಕಿದ್ರು ನಾನು ಬೆಂಬಲಿಸುತ್ತೇನೆ. ಯಾವುದೇ ಬಂಡಾಯದ ಮೊರೆಹೋಗದೇ ಕೆಲಸ ಮಾಡುತ್ತೇನೆ ಎಂದು ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿ ಕುಂದಗೋಳ ಟಿಕೆಟ್ ಆಕಾಂಕ್ಷಿ ಎಂಆರ್ ಪಾಟೀಲ್ ಹೇಳಿದರು.
ಸೋಮವಾರ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾದನಾಯಕನಹಳ್ಳಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. 2ನೇ ಪಟ್ಟಿಯಲ್ಲೇ ಹಾಸನ ಟಿಕೆಟ್ ಕೂಡ ಘೋಷಣೆಯಾಗಲಿದೆ. ಹಾಸನ ಕ್ಷೇತ್ರದಲ್ಲಿ ಬಂಡಾಯ ಇದ್ದರೂ ಸೊಪ್ಪು ಹಾಕುವುದಿಲ್ಲ. ಹಾಸನ ಕ್ಷೇತ್ರದಲ್ಲಿ ಕಾರ್ಯಕರ್ತರ ಮನಸ್ಸಿಗೆ ನೋವು ಮಾಡಲ್ಲ. ಜೆಡಿಎಸ್ ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸುತ್ತೇವೆ. ಎಷ್ಟೇ ಒತ್ತಡವಿದ್ದರೂ ಕಾರ್ಯಕರ್ತರ ತೀರ್ಮಾನವೇ ಅಂತಿಮ ಎಂದರು.
ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿರುವ ಕಾಂಗ್ರೆಸ್ ಮುಖಂಡ ವಿ.ಎಸ್.ಸಾಧುನವರ್ ಒಡೆತನದ ಸೊಸೈಟಿ ಬ್ಯಾಂಕ್ಗೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಸೊಸೈಟಿಗೆ ದಾಳಿ ಮಾಡಿರುವ ಅಧಿಕಾರಿಗಳು ಲಾಕರ್ನಲ್ಲಿ ಯಾರು ಚಿನ್ನ, ಹಣ ಇಟ್ಟಿದ್ದಾರೆಂಬ ಮಾಹಿತಿ ಸಂಗ್ರಹಿಸಿದ್ದಾರೆ. ಸಾಧುನವರ್ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.
ಜೆಡಿಎಸ್ನಲ್ಲಿ ಕುಟುಂಬ ರಾಜಕಾರಣ ಇದೆ. ಬೇರೆ ಯಾರನ್ನೂ ಬೆಳೆಯುವುದಕ್ಕೆ ಬಿಡುವುದಿಲ್ಲ. ಹೀಗಾಗಿಯೇ ನಾನು ಸೇರಿ ಹಲವರು ಜೆಡಿಎಸ್ ಪಕ್ಷ ಬಿಟ್ಟಿದ್ದು ಎಂದು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಸಚಿವ ನಾರಾಯಣಗೌಡ ಹೇಳಿದರು. ಜೆಡಿಎಸ್ನಲ್ಲಿ ಕುಮಾರಸ್ವಾಮಿ ಮತ್ತವರ ಕುಟುಂಬದವರು ಬಿಟ್ಟರೆ ಬೇರೆ ಯಾವ ನಾಯಕರನ್ನು ಬೆಳೆಯಲು ಬಿಡುವುದಿಲ್ಲ. ಬೆಳೆಯಲು ಬಿಟ್ಟಿದ್ರೆ ಹೆಚ್.ವಿಶ್ವನಾಥ್, ಶಿವಲಿಂಗೇಗೌಡ, ಎ.ಟಿ.ರಾಮಸ್ವಾಮಿ, ವೈಎಸ್ವಿ ದತ್ತಾ, ನಾನು ಯಾಕೆ ಜೆಡಿಎಸ್ ಬಿಡುತ್ತಿದ್ವಿ ಎಂದರು.
ಮನೋಹರ್ ತಹಶೀಲ್ದಾರ್ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಭೇಟಿಯಾಗಿ ಜೆಡಿಎಸ್ ಭೇಟಿಯಾಗಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದಾರೆ. ಹಾನಗಲ್ ಕಾಂಗ್ರೆಸ್ ಟಿಕೆಟ್ ಮಿಸ್ ಆದ ಹಿನ್ನಲೆ ಜೆಡಿಎಸ್ ಸೇರ್ಪಡೆಯಾಗಿದ್ದಾರೆ.
ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿ.ವೈ.ವಿಜಯೇಂದ್ರ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಜಯೇಂದ್ರ ಸೇರಿ ಯಾರೇ ಸ್ಪರ್ಧಿಸಿದರೂ ನಾವು ಫೈಟ್ ಮಾಡಲು ಸಿದ್ಧ. ವರುಣ ಕ್ಷೇತ್ರದಲ್ಲಿ ನಾವು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ. ವರುಣಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ, ಹಾಗಾಗಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮ ಪಂಚಾಯಿತಿಯಲ್ಲಿ ಇ-ಸ್ವತ್ತು ಸೌಲಭ್ಯ ಕಲ್ಪಿಸದ ಹಿನ್ನೆಲೆ ಚುನಾವಣೆ ಬಹಿಷ್ಕಾರಕ್ಕೆ ಹುನ್ನೂರು ಗ್ರಾಮಸ್ಥರು ಮುಂದಾಗಿದ್ದಾರೆ. ವಿಧಾನಸಭೆ ಚುನಾವಣಾ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ. ಹಲವು ವರ್ಷಗಳಿಂದ ಇ-ಸ್ವತ್ತು ದಾಖಲೆ ಸಿಗದೆ ಗ್ರಾಮಸ್ಥರು ಪರದಾಡುತ್ತಿದ್ದಾರೆ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಜನರ ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ ಚುನಾವಣಾ ಬಹಿಷ್ಕಾರಕ್ಕೆ ಹುನ್ನೂರು ಗ್ರಾಮಸ್ಥರು ಮುಂದಾಗಿದ್ದಾರೆ.
ತಂದೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಆಸೆ ವ್ಯಕ್ತಪಡಿಸಿದ್ದಾರೆ. ಒಬ್ಬ ಮಗನಾಗಿ ತಂದೆ ಸಿಎಂ ಆಗಲಿ ಎಂದು ಯಾರಿಗೆ ಆಸೆ ಇರಲ್ಲ ಹೇಳಿ. ಖಂಡಿತ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಅನ್ನೋದು ನನ್ನ ಆಸೆ. ಈ ಹಿಂದೆ ಸಿಎಂ ಆಗಿದ್ದಾಗ ತಂದೆಯವರು ಉತ್ತಮ ಆಡಳಿತ ನೀಡಿದ್ದರು. ಮತ್ತೆ ಸಿಎಂ ಆದ್ರೆ ರಾಜ್ಯವನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯುತ್ತಾರೆ ಎಂದರು.
ಸಿದ್ದರಾಮಯ್ಯ ಜೊತೆ ರಣದೀಪ್ ಸುರ್ಜೇವಾಲ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಬೇರೆ ನಾಯಕರನ್ನು ಬಿಟ್ಟು ಒಂದೇ ಕಾರಿನಲ್ಲಿ ರಣದೀಪ್ ಸುರ್ಜೇವಾಲ, ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ. ಕೋಲಾರಕ್ಕೆ ತೆರಳುವ ವೇಳೆ ಒಂದೇ ಕಾರಿನಲ್ಲಿ ಇಬ್ಬರು ನಾಯಕರ ಮಾತುಕತೆ ನಡೆಡಿದ್ದಾರೆ.
ಬೆಳಗಾವಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ವಿರುದ್ಧ ನಿಪಾಣಿ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ಎಫ್‌ಐಆರ್ ದಾಖಲಾಗಿದೆ.
ರಾಜಕೀಯಕ್ಕೆ ಹಿರಿಯ ನಟ ಅನಂತ್ ನಾಗ್ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿಗೆ ಬ್ರೇಕ್ ಬಿದ್ದಿದೆ. ಇಂದು ದೆಹಲಿಯಲ್ಲಿ ಅನಂತ್ ನಾಗ್ ಅವರು ಬಿಜೆಪಿ ಸೇರ್ಪಡೆಯಾಗ್ತಾರೆ ಅನ್ನೋ ಸುದ್ದಿ ಹಬ್ಬಿತ್ತು. ಆದ್ರೆ ಆ ರೀತಿಯ ಯಾವ ಆಲೋಚನೆ ಇಲ್ಲ. ಯಾವ ಪೊಲಿಟಿಕಲ್ ಪಾರ್ಟಿಗೂ ಸೇರಲ್ಲ. ಇದನ್ನ ಯಾರು ಹಬ್ಬಿಸ್ತಿದ್ದಾರೋ ನಮಗೆ ಗೊತ್ತಿಲ್ಲ. ಅನಂತ್ ನಾಗ್ ಬೆಂಗಳೂರಿನಲ್ಲಿಯೇ ಇದ್ದಾರೆ ಎಂದು ಕುಟುಂಬಸ್ಥರು ಟಿವಿನೈನ್ ಗೆ ಸ್ಪಷ್ಟನೆ ನೀಡಿದ್ದಾರೆ.
ಟಿಕೆಟ್ಗಾಗಿ ರಾಜಕೀಯ ನಾಯಕರು, ಬೆಂಬಲಿಗರು ದೇವರ ಮೊರೆ ಹೋಗುತ್ತಿದ್ದಾರೆ. ಕಲಬುರಗಿಯಲ್ಲಿ ತಮ್ಮ ನಾಯಕ ನಿತಿನ್ ಗುತ್ತೇದಾರ್ ಗೆ ಬಿಜೆಪಿ ಟಿಕೆಟ್ ಸಿಗಲೆಂದು ಬೆಂಬಲಿಗ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಚೌಡಾಪುರದಿಂದ ಗಾಣಗಾಪುರವರಗೆ ದೀರ್ಘದಂಡ ನಮಸ್ಕಾರ ಮಾಡಿದ್ದಾರೆ. ಅಫಜಲಪುರ ತಾಲೂಕಿನ ಗೌರ ಬಿ ಗ್ರಾಮದ ಐವರು ಯುವಕರು ಏಳು ಕಿಲೋ ಮೀಟರ್ ವರಗೆ ದೀರ್ಘದಂಡ ನಮಸ್ಕಾರ ಹಾಕಿದ್ದಾರೆ.
ಹಾಸನ ಕ್ಷೇತ್ರದ ಜೆಡಿಎಸ್ ಟಿಕೆಟ್ಗಾಗಿ ಫೈಟ್ ಮುಂದುವರಿದಿದೆ. ಹಾಸನ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಗೆ ದಳಪತಿಗಳ ತೀವ್ರ ಕಸರತ್ತು ಮಾಡುತ್ತಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರು ಇಂದು ಹಾಸನ ಜಿಲ್ಲೆಯ ಶಾಸಕರು, ಅಭ್ಯರ್ಥಿಗಳು, ಆಕಾಂಕ್ಷಿಗಳು ಸೇರಿದಂತೆ ಪ್ರಮುಖರ ಸಭೆ ಕರೆದಿದ್ದಾರೆ. ಎಲ್ಲರಿಂದ ಮಾಹಿತಿ ಪಡೆಯಲು ಮುಂದಾಗಿದ್ದಾರೆ. ಇಂದು ಮಧ್ಯಾಹ್ನ ದೇವೇಗೌಡರ ನಿವಾಸದಲ್ಲಿ ಸಭೆ ನಡೆಯಲಿದೆ. ಟಿಕೆಟ್ಗಾಗಿ ಭವಾನಿ ರೇವಣ್ಣ ಮತ್ತು ಸ್ವರೂಪ್ ನಡುವೆ ಪೈಪೋಟಿ ಇದೆ. ಪತ್ನಿಗೆ ಟಿಕೆಟ್ ಕೊಡಿಸಲು ಹೆಚ್.ಡಿ.ರೇವಣ್ಣ ರಣತಂತ್ರ ಹೆಣೆದಿದ್ದಾರೆ. ಆದ್ರೆ ಆರಂಭದಿಂದಲೂ ಹೆಚ್ಡಿಕೆ ಸ್ವರೂಪ್ ಪರ ಒಲವು ಹೊಂದಿದ್ದಾರೆ. ಸಹೋದರರ ಬಿಗಿಪಟ್ಟು ಹಿನ್ನೆಲೆ ದೇವೇಗೌಡರು ಮಧ್ಯಪ್ರವೇಶ ಮಾಡಿದ್ದು ಇಂದು ಸಭೆಯಲ್ಲಿ ಟಿಕೆಟ್ ಅಂತಿಮ ಮಾಡುವ ಸಾಧ್ಯತೆ ಇದೆ.
ರಾಯಚೂರು ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿ ಬರೀ 3 ನಿಮಿಷ 19 ಸೆಕೆಂಡ್ ಆಡಿಯೋಗೆ ಹಾಲಿ ಶಾಸಕರ ಟಿಕೆಟ್ ಡ್ರಾಪ್ ಆಗುವ ಸಾಧ್ಯತೆ ಇದೆ. ಆಡಿಯೋ ಬಾಂಬ್ ನಿಂದ ಹಾಲಿ ಶಾಸಕ ಶಿವರಾಜ್ ಪಾಟೀಲ್ ಗೆ ಟಿಕೆಟ್ ಕೈ ತಪ್ಪುವ ಆತಂಕ ಎದುರಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ K.H.ಮುನಿಯಪ್ಪ ವಿರುದ್ಧ ಮುಖಂಡರು ಅಸಮಾಧಾನ ಹೊರ ಹಾಕಿದ್ದು ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಮುಖಂಡರು ಒತ್ತಾಯಿಸಿದ್ದಾರೆ. ನೀವು ಬೇರೆ ಯಾವುದಾದರೂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಎಂದು ದೇವನಹಳ್ಳಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಎ.ಸಿ.ಶ್ರೀನಿವಾಸ್, ಶಾಂತಕುಮಾರ್, ಮುನಿಯಪ್ಪಗೆ ಒತ್ತಾಯ ಮಾಡಿದ್ದಾರೆ. ದೇವನಹಳ್ಳಿ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮುನಿಯಪ್ಪಗೆ ಬೆಂಬಲಿಸಬೇಕಾ ಬೇಡ್ವಾ ಎಂಬ ಬಗ್ಗೆ ಚರ್ಚೆ ನಡೆದಿದೆ. ಆದ್ರೆ ಯಾವುದೇ ಒಮ್ಮತ ಮೂಡದೇ ಗೊಂದಲದಲ್ಲೇ ಸಭೆ ಮುಕ್ತಾಯಗೊಂಡಿದೆ. ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಮುಖಂಡರು ಪಟ್ಟು ಹಿಡಿದಿದ್ದಾರೆ.
ಚುನಾವಣಾ ಕರ್ತವ್ಯಕ್ಕೆ ಗೈರಾದ ಪ್ರೌಢಶಾಲಾ ಶಿಕ್ಷಕರಿಬ್ಬರನ್ನು ಸಸ್ಪೆಂಡ್ ಮಾಡಿ ವಿಜಯಪುರ ಜಿಲ್ಲಾ ಚುನಾವಣಾಧಿಕಾರಿ ಡಾ.ವಿಜಯಮಹಾಂತೇಶ ಆದೇಶ ಹೊರಡಿಸಿದ್ದಾರೆ. ಬರಟಗಿ ಸರ್ಕಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಅಪ್ಪಣ್ಣ ಸವದಿ ಮತ್ತು ಕಳ್ಳಕವಟಗಿ ಪ್ರೌಢಶಾಲೆಯ ಸಹ ಶಿಕ್ಷಕ ಅಲ್ಲಾಭಕ್ಷ ಅಮಾನತುಗೊಳಿಸಲಾಗಿದೆ. ಚೆಕ್ ಪೋಸ್ಟ್ನಲ್ಲಿ ಕರ್ತವ್ಯಕ್ಕೆ ಅನಧಿಕೃತ ಗೈರಾದ ಹಿನ್ನೆಲೆ ಅಮಾನತುಗೊಳಿಸಲಾಗಿದೆ.
ಹಾಸನ: ಮಹಿಳೆಯರಿಗೆ ಬೆಳ್ಳಿ ಫೋಟೋ ಎಂದು ನೀಡಿದ್ದ ಉಡುಗೊರೆಯ ಅಸಲಿಯತ್ತು ಬಯಲಾಗಿದೆ. ಇದು ಬೆಳ್ಳಿಯಲ್ಲ ಕಳಪೆ ಗುಣಮಟ್ಟದ ಪೋಟೋ ಎಂದು ವಿಡಿಯೋ ಮಾಡಿ ವೈರಲ್ ಮಾಡಲಾಗುತ್ತಿದೆ. ಕಳೆದ ಹದಿನೈದು ದಿನದಿಂದ ಹಾಸನ ಕ್ಷೇತ್ರದ ವ್ಯಾಪ್ತಿಯಲ್ಲಿ ಅಷ್ಟಲಕ್ಷ್ಮಿ ಪೂಜೆ ಹೆಸರಿನಲ್ಲಿ ಮತದಾರರ ಸೆಳೆಯಲು ಯತ್ನ ನಡೆಯುತ್ತಿದೆ. ಶಾಸಕ ಪ್ರೀತಂಗೌಡ ಬೆಂಬಲಿಗರಿಂದ ವಾರ್ಡ್ ವಾರು ಹಾಗು ಗ್ರಾ.ಪಂ. ವಾರು ಕಾರ್ಯಕ್ರಮ ನಡೆದಿದೆ. ಮತದಾರರಿಗೆ ಆಮಿಷವೊಡ್ಡಲಾಗಿದೆ ಎಂದು ಜೆಡಿಎಸ್ ನಾಯಕರು ಆರೋಪಿಸಿದ್ದಾರೆ. ಇದೀಗ ಮಹಿಳೆಯರಿಗೆ ಕೊಟ್ಡ ಉಡುಗೊರೆ ಪೋಟೋ ಹಂಚಿಕೊಂಡು ಕಳಪೆ ಎಂದು ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಗಿಫ್ಟ್ ಕೊಡಬೇಕಿತ್ತೇ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66ರ ಸರ್ಪನಕಟ್ಟೆ ಚೆಕ್‌ಪೋಸ್ಟ್ ಬಳಿ ದಾಖಲೆ ಇಲ್ಲದ 14 ಲಕ್ಷಕ್ಕೂ ಅಧಿಕ ಹಣ ಜಪ್ತಿ ಮಾಡಲಾಗಿದೆ. ಉಡುಪಿಯಿಂದ ಭಟ್ಕಳಕ್ಕೆ ತೆರಳ್ತಿದ್ದ ಕಾರು ತಪಾಸಣೆ ವೇಳೆ ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದ 14,90,125 ರೂಪಾಯಿ ಜಪ್ತಿ ಮಾಡಿ ಮೂವರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು ಉತ್ತರ ತಾಲೂಕು ಆಲೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ಕೋರ್ ಕಮಿಟಿ ಮೀಟಿಂಗ್ ನಡೆಯಲಿದ್ದು ಬಿಜೆಪಿ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಹೋಟೆಲ್‌ನತ್ತ ಹೆಜ್ಜೆ ಹಾಕಿದ್ದಾರೆ. ಇಂದು ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನ ಕೈಗೊಳ್ಳಲಾಗುತ್ತೆ. ನಿನ್ನೆ ನಡೆದ ಪಕ್ಷದ ಆಂತರಿಕ ಚುನಾವಣೆಯ ಬಗ್ಗೆ ಚರ್ಚೆ ನಡೆಯಲಿದೆ. ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಗ್ಗೆ ಚರ್ಚೆ ನಡೆಯಲಿದೆ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಮತ್ತೊಂದು ಶಾಕ್. ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರಲಿದ್ದಾರೆ ಮಾಜಿ ಸಚಿವ ಎಬಿ ಮಾಲಕರೆಡ್ಡಿ. ಇಂದು ಮಧ್ಯಾಹ್ನದ ನಂತರ ಬಿಜೆಪಿಗೆ ಮಾಲಕರೆಡ್ಡಿ ರಾಜೀನಾಮೆ ನೀಡಲಿದ್ದಾರೆ. ತಮ್ಮ ಪುತ್ರಿಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿಸಲು ಮುಂದಾಗಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾಗಿದ್ದು ಕೊನೆಗೂ ಖರ್ಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಕ್ಕೆ ಬಿಜೆಪಿಗೆ ರಾಜೀನಾಮೆ ನೀಡಲು ಮಾಲಕರೆಡ್ಡಿ ಪ್ಲಾನ್ ಮಾಡಿಕೊಂಡಿದ್ದಾರೆ.
ಟಿ ನರಸೀಪುರ ಸಾರ್ವಜನಿಕ ಆಸ್ಪತ್ರೆ ವೈದ್ಯ ಡಾ.ರೇವಣ್ಣ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ಕೊಟ್ಟು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಟಿ ನರಸೀಪುರ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ರೇವಣ್ಣಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ನಿಂದ ಮಹದೇವಪ್ಪ, ಜೆಡಿಎಸ್ ನಿಂದ ಅಶ್ವಿನ್, ಬಿಜೆಪಿಯಿಂದ ರೇವಣ್ಣ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಚುನಾವಣೆ ಹೊಸ್ತಿಲಲ್ಲಿ ತಿಪಟೂರು ತಾಲೂಕಿನ ಬಂಡಿಹಳ್ಳಿ ಗೇಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 6.84 ಲಕ್ಷ ಮೌಲ್ಯದ LED ಬಲ್ಬ್ ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕ ರೇಣುಕಯ್ಯ ಹಾಗೂ ಮಾಲ್ ಸಮೇತ ಲಾರಿ ವಶಕ್ಕೆ ಪಡೆಯಲಾಗಿದೆ. ತಿಪಟೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಏ-9 ರಂದು ರಾಹುಲ್ ಗಾಂಧಿ ಸತ್ಯಮೇವ ಜಯತೆ ಸಮಾವೇಶದ ಹಿನ್ನೆಲೆ ಕೋಲಾರಕ್ಕಿಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಲಿದ್ದಾರೆ. ಇಂದು ಮಧ್ಯಾಹ್ನ 12 ಗಂಟೆಗೆ ಕೈ ನಾಯಕರು ಆಗಮಿಸಲಿದ್ದಾರೆ. ಸತ್ಯಮೇವ ಜಯತೆ ಸಮಾವೇಶದ ಜಾಗ ಟಮಕ ಬಳಿಯ ವೇದಿಕೆ ಹಾಗೂ ಸ್ಥಳ ವೀಕ್ಷಣೆ ಮಾಡಲಿದ್ದಾರೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಶಾಸಕರಾಗಿದ್ದ ಗೋಪಾಲಕೃಷ್ಣ ಇಂದು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ. ಎನ್.ವೈ.ಗೋಪಾಲಕೃಷ್ಣ ನಿನ್ನೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನಿವಾಸದಲ್ಲಿ ಭೇಟಿಯಾಗಿ ರಾಜೀನಾಮೆ ನೀಡಿದ್ದರು. ಇಂದು ಕಾಂಗ್ರೆಸ್ ಪಕ್ಷಕ್ಕೆ ಮರುಸೇರ್ಪಡೆಯಾಗುವ ಸಾಧ್ಯತೆ ಇದೆ. ಮೊಳಕಾಲ್ಮೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಿಚಾರಕ್ಕೆ ಸಂಬಂಧಿಸಿ ಟಿಕೆಟ್ ಆಕಾಂಕ್ಷಿಗಳ ಜೊತೆ ಇಂದು ಡಿಕೆ ಶಿವಕುಮಾರ್ ಮಾತುಕತೆ ನಡೆಸಲಿದ್ದಾರೆ. ಎಐಸಿಸಿ ಕಿಮ್ಮನೆ ರತ್ನಾಕರ್ಗೆ ಟಿಕೆಟ್ ನೀಡಲು ನಿರ್ಧರಿಸಿದ್ದು ಡಿಕೆ ಶಿವಕುಮಾರ್ ಅವರು ಕಿಮ್ಮನೆ ರತ್ನಾಕರ್, ಮಂಜುನಾಥಗೌಡ ಜೊತೆ ಚರ್ಚೆ ನಡೆಸಿದ್ದಾರೆ. ರತ್ನಾಕರ್ಗೆ ಟಿಕೆಟ್ ನೀಡಿದರೆ ಒಗ್ಗೂಡಿ ಕೆಲಸ ಮಾಡುವಂತೆ ಮಂಜುನಾಥಗೌಡ ಬಣಕ್ಕೆ ಡಿಕೆಶಿ ಸೂಚನೆ ನೀಡಲಿದ್ದಾರೆ.
Published On - 9:14 am, Sat, 1 April 23