
ಕೇಂದ್ರ ಗೃಹ ಸಚಿವ ಅಮಿತ್ ಶಾ ನಿನ್ನೆ (ಜ.28) ರಾಜ್ಯ ಪ್ರವಾಸ ಕೈಗೊಂಡಿದ್ದು ಉತ್ತರ ಕರ್ನಾಟಕದ ಪ್ರಮುಖ ನಗರಗಳಾದ ಹುಬ್ಬಳಿ-ಧಾರವಾಡ ಮತ್ತು ಬೆಳಗಾವಿಯಲ್ಲಿ ಸಂಚಲನ ಮೂಡಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದಲ್ಲಿ ಸರಣಿ ಕಾರ್ಯಕ್ರಮ ಮತ್ತು ಕುಂದಗೋಳದಲ್ಲಿ ರೋಡ್ ಶೋ ಮಾಡುವ ಮೂಲಕ ಪಕ್ಷವನ್ನು ಗಟ್ಟಿಗೊಳಿಸುವ ತಂತ್ರ ಹೆಣದಿದ್ದಾರೆ. ಇನ್ನು ಬೆಳಗಾವಿಯ ಎಂ.ಕೆ ಹುಬ್ಬಳ್ಳಿಯಲ್ಲಿ ವಿಜಯ ಸಂಕಲ್ಪ ಅಭಿಯಾನ ಸಮಾವೇಶ ಮಾಡಿ ಏನೇ ಬಿನ್ನಾಭಿಪ್ರಾಯಗಳಿದ್ದರೂ ಶಮನ ಮಾಡಿಕೊಂಡು 18ಕ್ಕೆ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರುವ ಟಾರ್ಗೆಟ್ ನೀಡಿದರು. ಇನ್ನೊಂದಡೆ ಜೆಡಿಎಸ್ ಕುಟುಂಬದಲ್ಲಿ ಟಿಕೆಟ್ ಫೈಟ್ ಶುರುವಾಗಿದ್ದು, ಮಾಜಿ ಸಚಿವ ಹೆಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಹಾಸನದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮಾತ್ರ ಟಿಕೆಟ್ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಈ ವಿಚಾರವಾಗಿ ರೇವಣ್ಣ ಪುತ್ರರು ಕುಮಾರಸ್ವಾಮಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ಯಥಾ ಪ್ರಕಾರ ವಾಗ್ಯುದ್ದ ನಡೆಸುವುದರ ಜೊತೆಗೆ ಇಂದಿನ ಅಪ್ಡೇಟ್ಸ್
ರಾಯಚೂರು: ಜಿಲ್ಲೆಯ ಸಿಂಧನೂರು ಪಟ್ಟಣದಲ್ಲಿ ಪಂಚರತ್ನ ಯಾತ್ರೆಗೆ ಅದ್ದೂರಿ ಸ್ವಾಗತ ನೀಡಲಾಯಿತು. ಜೋಳದ ತೆನೆ ಹಾಕಿ, ಪಟಾಕಿ ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.
ರಾಯಚೂರು: ಜೆಡಿಎಸ್‌ಗೆ 20-22 ಸೀಟ್ ಬರುತ್ತೆಂದು ನಿತ್ಯ ಜಾಗಟೆ ಹೊಡೆಯ್ತಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಜಿಲ್ಲೆಯ ಸಿಂಧನೂರಿನಲ್ಲಿ ಮಾತನಾಡಿ, ನೀವು ಹುಟ್ಟು ಕಾಂಗ್ರೆಸ್‌ನವರಾ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ನಿಮಗೆ ಅಧಿಕಾರ ಎಲ್ಲಿ ಸಿಗುತ್ತೋ ಅದೇ ನಮ್ಮ ಸಿದ್ಧಾಂತ ಅನ್ನೋರು. ಸೋತ ಎತ್ತಿನ ಬಾಲ ಹಿಡಿದುಕೊಂಡು ಬರೋದು ನಿಮ್ಮ ಸಿದ್ಧಾಂತ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಗೆ ಎಚ್ಚರಿಕೆ ಕೊಡುತ್ತಿದ್ದೇನೆ. ನಮ್ಮ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡಿ ಎಂದು ಹೇಳಿದರು.
ರಾಯಚೂರು: ಭವಾನಿ ರೇವಣ್ಣಗೆ ಸೂಕ್ತ ಸಮಯದಲ್ಲಿ ಸೂಕ್ತ ಜವಾಬ್ದಾರಿ ನೀಡ್ತೇವೆ ಎಂದು ಜಿಲ್ಲೆಯ ಸಿಂಧನೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. ಮಕ್ಕಳು ಅವರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅಂತಿಮವಾಗಿ ನಾವು ತೀರ್ಮಾನ ಕೈಗೊಳ್ಳುತ್ತೇವೆ. H.D.ರೇವಣ್ಣ ಹೇಳಿದ ಮೇಲೆ ಅದೇ ಅಂತಿಮ.
ರಾಯಚೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ 2 ಬಾರಿ ಬಂದು ಹೋಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಭ್ರಷ್ಟಾಚಾರ ಮಾಡುವ ಪಕ್ಷಗಳು ಅಂದಿದ್ದಾರೆ. ಜೆಡಿಎಸ್‌ಗೆ ವೋಟ್ ಹಾಕಿದ್ರೆ ಕಾಂಗ್ರೆಸ್ಗೆ ಕೊಟ್ಟ ಹಾಗೆ ಅಂತಾರೆ. ಇತ್ತ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಹಾಗೇ ಹೇಳ್ತಾರೆ. ಜೆಡಿಎಸ್‌ಗೆ ವೋಟ್ ಹಾಕಿದ್ರೆ ಬಿಜೆಪಿಗೆ ಕೊಟ್ಟ ಹಾಗೇ ಅಂತಾರೆ. ಅವರಿಬ್ಬರು ಮಾತನಾಡಿಕೊಂಡು ಹೇಳ್ತಿರಬೇಕು, ಅವರೇ ಉತ್ತರಿಸಲಿ. ಎರಡೂ ರಾಷ್ಟ್ರೀಯ ಪಕ್ಷಗಳು ತಮ್ಮ ಒಗಟನ್ನು ಬಿಡಿಸಿ ಹೇಳಲಿ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.
ರಾಯಚೂರು: ನಮ್ಮ ರಥ ಯಾತ್ರೆಗೂ ಕಾಂಗ್ರೆಸ್, ಬಿಜೆಪಿ ಯಾತ್ರೆಗಳಿಗೂ ವ್ಯತ್ಯಾಸ ಇದೆ. ಕಾಂಗ್ರೆಸ್ನ ಪ್ರಜಾಧ್ವನಿ ಕಾರ್ಯಕ್ರಮ ಮುಗಿದಿದೆ. ಎರಡನೇ ಹಂತದ ಪ್ರವಾಸವನ್ನ ಎರಡು ಗುಂಪುಗಳಾಗಿ ಹೋಗ್ತಿದ್ದಾರೆ. ಅವರು ನಾಡಿನ ಜನತೆಯ ರೈತರ ಸಮಸ್ಯೆ ಬಗ್ಗೆ ಜನಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವಿಲ್ಲ.
ಚಾಮರಾಜನಗರ: ವಿಕಲಚೇತನರಿಗೆ ಸಲಕರಣೆಗಳು ಕೊಡುವುದು ಪುಣ್ಯದ ಕೆಲಸ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಈ ಕೆಲಸಗಳನ್ನು ಎಲ್ಲಾ ಶಾಸಕರು ಇಂತಹ ಕಾರ್ಯಕ್ರಮ ಮಾಡಬೇಕು. ಮುಂಬರುವ ಬಜೆಟ್ನಲ್ಲಿ ವಿಕಲಚೇತನರಿಗೆ ಮತ್ತಷ್ಟು ಕೆಲಸ ಮಾಡು ಕಾರ್ಯವನ್ನ ಜಾರಿಮಾಡುತ್ತೇವೆ. ಈಗಾಗಲೇ ಹಲವು ಕಾರ್ಯಕ್ರಮ ಯೋಜನೆಗಳನ್ನ ರೂಪಿಸಿದ್ದೇವೆ. ಎಲ್ಲಾ ವರ್ಗದವರಿಗೂ ಸಮುದಾಯವನ್ನು ಮಾಡಬೇಕು ಎಂಬುದು ಶ್ರೀನಿವಾಸ್ ಪ್ರಸಾದ್ ಆಶಯ. ಅದನ್ನು ಆದಷ್ಟು ಬೇಗ ಮಾಡುತ್ತೇವೆ ಎಂದು ಹೇಳಿದರು.
ಚಾಮರಾಜನಗರ: ಅಕ್ಕಿ ಕೊಡೋದು ಕೇಂದ್ರ ಸರ್ಕಾರ. ನಮ್ಮ ಹೆಸರುಗಳನ್ನು ಹಾಕಿಕೊಂಡಿದ್ದೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾರ್ಯಕ್ರಮ ಅಂತ ಬೇದ ಭಾವ ಮಾಡಬಾರದು. ಎಲ್ಲಾ ಕಾರ್ಯಕ್ರಮಗಳ ಜನರಿಗೆ ಮುಟ್ಟಬೇಕು ಎಂದು ಹೇಳಿದರು.
ರಾಮನಗರ: ಕುಮಾರಸ್ವಾಮಿ ಹೇಳಿದ ಅಂತಾ ಹೊಸ ಪಕ್ಷ ಕಟ್ಟಲು ಹೋಗಲಾ? ಬಿಜೆಪಿ ಸೋಲಿಸಲು ಕಾಂಗ್ರೆಸ್ನಿಂದ ಮಾತ್ರ ಸಾಧ್ಯ. ಬಿಜೆಪಿ ಜತೆ ಹೋದವರ್ಯಾರು?, JDSಗೆ ಯಾವುದೇ ತತ್ವ ಸಿದ್ಧಾಂತ ಇಲ್ಲ. ಜೆಡಿಎಸ್ ಪಕ್ಷ ಕಾಂಗ್ರೆಸ್ನ ವೋಟ್ ವಿಭಜಿಸಲು ಪ್ರಯತ್ನಿಸುತ್ತಿದೆ. ನಮ್ಮ ವೋಟ್ ಒಡೆದು ಬಿಜೆಪಿಗೆ ಅನುಕೂಲ ಮಾಡಲು ಹೊರಟಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ರಾಮನಗರ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತರಿಗೆ ಬೆಂಬಲ ಬೆಲೆ 5-6 ರೂಪಾಯಿ ಹೆಚ್ಚಳ ಮಾಡಲಾಗುವುದು. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನ ಕೊಡುತ್ತೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಮಾಗಡಿ ಪಟ್ಟಣದಲ್ಲಿ ಶಾದಿಮಹಲ್ ಉದ್ಘಾಟಿಸಿ ಅವರು ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಜನರು ಜೀವನ ಮಾಡುವುದೇ ಕಷ್ಟವಾಗಿದೆ ಎಂದರು.
ರಾಮನಗರ: ನಾಳೆ ಭಾರತ್ ಜೋಡೋ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ನಾನು ಹೋಗುತ್ತಿದ್ದೇನೆ ಎಂದು
ಶಾದಿಮಹಲ್ ಉದ್ಘಾಟಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಡಿ.ಕೆ.ಸುರೇಶ್, ಡಿಕೆಶಿ ಇಬ್ಬರು ಇಲ್ಲಿ ಕಾರ್ಯಕ್ರಮಕ್ಕೆ ಬರಬೇಕಿತ್ತು. ಶ್ರೀನಗರಕ್ಕೆ ಹೋಗಿದ್ದಾರೆ ಹೀಗಾಗಿ ಕಾರ್ಯಕ್ರಮಕ್ಕೆ ಬರಲು ಆಗಿಲ್ಲ. ಕಳೆದ ಬಾರಿ ಚುನಾವಣೆಯಲ್ಲಿ ಬಾಲಕೃಷ್ಣ ವಿನಾಕಾರಣ ಸೋತರು. ಅಭಿವೃದ್ಧಿ ಮಾಡಿಯೂ ಜನ ಕೈಹಿಡಿಯದಿದ್ದರೇ ನೋವಾಗುತ್ತದೆ ಎಂದು ಹೇಳಿದರು.
ರಾಮನಗರ: ವೋಟಿಗಾಗಿ ಶಾದಿಮಹಲ್ ನಿರ್ಮಾಣ ಮಾಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಜಿಲ್ಲೆಯ ಮಾಗಡಿಯಲ್ಲಿ ಶಾದಿಮಹಲ್ ಉದ್ಘಾಟಿಸಿ ಅವರು ಮಾತನಾಡಿ, ಬಡವರಿಗೆ ಅನುಕೂಲವಾಗಲಿ ಅಂತಾ ಶಾದಿಮಹಲ್ ನಿರ್ಮಾಣ ಮಾಡಮಾಗಿದೆ. ನಾನು ಸಿಎಂ ಆಗಿದ್ದಾಗ ಶಾದಿಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಆದರೆ ಇದೀಗ ಬಿಜೆಪಿ ಸರ್ಕಾರ ನಿಲ್ಲಿಸಿದೆ ಎಂದು ಹೇಳಿದರು.
ಕಲಬುರಗಿ: ಮೂರು ಪಕ್ಷಗಳು ನಮ್ಮ ಯೋಜನೆಗಳನ್ನು ಕದಿಯುತ್ತಿವೆ. ನಮ್ಮ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಇಲ್ಲಿ ಕಾಪಿ ಮಾಡಲು ಮುಂದಾಗಿವೆ. ಜೆಡಿಎಸ್ ಜಗಳಗಂಟಿ ಪಕ್ಷವಾಗಿದೆ. ಕಾಂಗ್ರೆಸ್ ಕಲುಷಿತ ಪಕ್ಷವಾಗಿದೆ. ಬಿಜೆಪಿ ಯವರು ದುಡ್ಡು ಕೊಟ್ಟು ಕೊಂಡುಕೊಳ್ಳುವ ಪಕ್ಷವಾಗಿದೆ. ಹಾಗೇ ಪಕ್ಷ ಬೊಗಳೆ ಪಕ್ಷವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬುದ್ದಿವಂತಿಕೆ ಕಳೆದುಕೊಂಡಿರುವ ಸಿಎಂ ಆಗಿದ್ದಾರೆ. ಬೊಮ್ಮಾಯಿ ಅವರಿಗೆ ಮಂಡಿ ನೋವಿಗಿಂತ ಮಂಡೆ ಇಲ್ಲದ ಸರ್ಕಾರವಾಗಿದೆ. ಪೆಬ್ರವರಿ26 ಕ್ಕೆ ಅರವಿಂದ್ ಕೇಜ್ರಿವಾಲ್ ರಾಜ್ಯಕ್ಕೆ ಬರುತ್ತಾರೆ, ರಾಜ್ಯದ 224 ಕ್ಷೇತ್ರಗಳಲ್ಲಿ ಆಪ್ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಾರೆ ಎಂದು ಕಲಬುರಗಿ ನಗರದಲ್ಲಿ ಆಪ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಬಾಗಲಕೋಟ: ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಡಬೇಕು. ನೀವು ಏನು ಸಾಧನೆ ಮಾಡಿದ್ದೀರಿ? ಜನ ಯಾಕೆ ನಿಮ್ಮನ್ನು ತಿರಸ್ಕರಿಸಿದರು? ನಿಮ್ಮನ್ನು ಯಾಕೆ ತಿರಸ್ಕರಿಸಿದ್ರು ಅನ್ನೋದಕ್ಕೆ ಮೊದಲು ಉತ್ತರ ನೀಡಿ. ಕಾಂಗ್ರೆಸ್ ಮತ್ತು ಜೆಡಿಎಸ್ನ್ನು ಹೀನಾಯವಾಗಿ ಯಾಕೆ ತಿರಸ್ಕಾರ ಮಾಡಿದರು ಎಂದು ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ವಿಚಾರವಾಗಿ ಸಚಿವ ಗೋವಿಂದ ಕಾರಜೋಳ ತಿರುಗೇಟು ನೀಡಿದರು.
ಬಾಗಲಕೋಟೆ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿದ್ದರಾಮಯ್ಯನಂತಹ ರಾಜ್ಯ ನಾಯಕರು ಕ್ಷೇತ್ರ ಹುಡುಕಾಟ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯ ಅಲ್ಲ, ರಾಹುಲ್ ತಾತ, ಮುತ್ತಾತ ಗೆದ್ದಿದ್ದ ಕ್ಷೇತ್ರದಲ್ಲಿ ಸೋತು ಸುಣ್ಣವಾಗಿದ್ದಾರೆ. ಓಡಿಬಂದು ಇಲ್ಲಿ ಕೇರಳದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈ ಸಾರಿ ಕೇರಳದವರು ರಾಹುಲ್ ಗಾಂಧಿಗೆ ವೋಟ್ ಹಾಕಲ್ಲ. ಈ ಸಾರಿ ರಾಹುಲ್ ಗಾಂಧಿ ಮನೆಗೆ ಹೋಗುತ್ತಾರೆ. ರಾಹುಲ್ ಗಾಂಧಿ ಅಜ್ಜ ಕಟ್ಟಿಸಿದ ಮನೆಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.
ಹಾಸನ: ಹಾಸನದ ಮುಂದಿನ ಎಂಎಲ್ಎ, ‘ಕರ್ನಾಟಕ ರಾಜ್ಯದ ಮಹಿಳಾ ಶಕ್ತಿಗೆ ಮತ್ತೊಂದು ಭರವಸೆ ಅಮ್ಮ’ ಎಂದು ಭವಾನಿ ರೇವಣ್ಣ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಪ್ರಾರಂಭಿಸಿದ್ದಾರೆ. ಭವಾನಿ ರೇವಣ್ಣ ಪರ ಟ್ರೆಂಡ್ ಸೆಟ್ ಮಾಡುತ್ತಿದ್ದು ಪೋಸ್ಟರ್ ಸಾಕಷ್ಟು ವೈರಲ್ ಆಗುತ್ತಿದೆ. ಜಯಲಲಿತಾ ಫೋಟೋ ಜೊತೆ ಭವಾನಿ ಫೋಟೋ ಸೇರಿಸಿ ವೈರಲ್ ಮಾಡಲಾಗುತ್ತಿದೆ.
ಬೆಂಗಳೂರು: ಕಾಂಗ್ರೆಸ್ನಿಂದ ಜಿಲ್ಲಾವಾರು ಪ್ರಜಾಧ್ವನಿ ಸಮಾವೇಶ ಮುಕ್ತಾಯಗೊಂಡಿದ್ದು, ಈಗ ವಿಧಾನಸಭಾ ಕ್ಷೇತ್ರವಾರು ಪ್ರಜಾಧ್ವನಿ ಯಾತ್ರೆ ಪ್ರಾರಂಭವಾಗಲಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ನೇತೃತ್ವದಲ್ಲಿ ಫೆ.3ರಂದು ಮುಳಬಾಗಿಲು ಕ್ಷೇತ್ರದ ಕುರುಡುಮಲೆ ದೇವಸ್ಥಾನದಿಂದ ಯಾತ್ರೆ ಆರಂಭವಾಗಲಿದೆ.
ರಾಯಚೂರು: ರಾಯರ ದರ್ಶನ ಪಡೆಯಲು ಬಂದಿದ್ದೆ. ಮಂತ್ರಾಲಯಕ್ಕೆ ಹಲವಾರು ವರ್ಷಗಳಿಂದ, ಬರಲು ಸಾಧ್ಯವಾಗಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮಂತ್ರಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಕಳೆದ 5 ದಿನಗಳಿಂದ ರಾಯಚೂರಿನಲ್ಲಿ ಪಂಚರತ್ನ ಕಾರ್ಯಕ್ರಮ ನಡೆಯುತ್ತಿದೆ. ರಥ ಯಾತ್ರೆ ಯಶಸ್ಸಿಗೆ ಹಲವಾರು ವರ್ಷಗಳ ಬಳಿಕ, ರಾಯರೇ ನನ್ನನ್ನು ಕರೆಸಿಕೊಂಡಿದ್ದಾರೆ. ರಾಯರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಟಿದ್ದೇನೆ. ಅದಕ್ಕೆ ಅನುಗ್ರಹ ಕಲ್ಪಿಸಲು ಕೇಳಿಕೊಂಡಿದ್ದೇನೆ. ಸ್ವತಂತ್ರ ಸರ್ಕಾರವೇ ನನ್ನ ಗುರಿ. ಅದರ ಅನುಗ್ರಹಕ್ಕಾಗಿ ಕೇಳೊಕೊಂಡಿದ್ದೇನೆ. ಅನಿತಾ ಕುಮಾರಸ್ವಾಮಿ ಅವರು ರಾಯರ ಭಕ್ತರು ಎಂದು ಹೇಳಿದರು.
ಹಾಲಲ್ಲಾದರು ಹಾಕು, ನೀರಲ್ಲಾದರು ಹಾಕು ಅಂತ ಅಷ್ಟೇ ಕೇಳಿಕೊಂಡಿದ್ದೇನೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಜೀವನದಲ್ಲಿ ನನಗೆ ಒಳ್ಳೆಯದಾಗಿದ್ದರೇ ಅದು ರಾಯರಿಂದ. ನಿನಗೆ ಏನು ಮಾಡಬೇಕು ಅನ್ನಿಸುತ್ತೋ ಅದನ್ನ ಮಾಡು ಅಂತ ರಾಯರಲ್ಲಿ ಕೇಳಿಕೊಂಡೇ ಎಂದ ಹೇಳಿದರು.
ಹಾಸನ: ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್ಗಾಗಿ ಜೆಡಿಎಸ್ನಲ್ಲಿ ಕಲಹ ಪ್ರಾರಂಭವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಬೆಂಬಲಿಗರು ಪರೋಕ್ಷವಾಗಿ ಭವಾನಿ ರೇವಣ್ಣ ಅವರ ವಿರುದ್ಧ ಆಕ್ರೋಶ ವ್ಯಕ್ತಪಿಡಿಸುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ತಂದು ಗೌಡರ ಕನಸಿನ ಪಕ್ಷ ಉಳಿಸಲು ಕುಮಾರಸ್ವಾಮಿ ಹೋರಾಡುತ್ತಿದ್ದಾರೆ. ತಮ್ಮ ಅರೋಗ್ಯ ಲೆಕ್ಕಿಸದೆ ಕುಮಾರಸ್ವಾಮಿ ಹೋರಾಡುತ್ತಿದ್ದರೇ, ಇಲ್ಲಿ ಒಂದು ಸ್ಥಾನಕ್ಕಾಗಿ ಅವರ ಮನಸ್ಸಿಗೆ ನೋವು ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಜೆಡಿಎಸ್ ಕಾರ್ಯಕರ್ತರು ನಿಂತಿರೋದು ಕುಮಾರಸ್ವಾಮಿ ಹಾಗು ದೇವೇಗೌಡರು ಎನ್ನುವ ಶಕ್ತಿ ಹಿಂದೆ, ನಮ್ಮ ಗುರಿ ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡೋದು. ಜೆಡಿಎಸ್‌ಗೆ ಇವತ್ತು ಜನ ಬೆಂಬಲ ಇರೋದಕ್ಕೆ ಕುಮಾರಸ್ವಾಮಿ ಕಾರಣವೇ ಹೊರತು ರೇವಣ್ಣನ ಮಕ್ಕಳ್ಳಿಂದಲ್ಲ ಎಂದು ತಿರುಗೇಟು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆ ನೋಡಿದರೆ ಜೆಡಿಎಸ್ ಸರ್ವನಾಶಕ್ಕೆ ಹಾಸನದವರು ಮುನ್ನುಡಿ ಬರೆಯುತ್ತಿದ್ದಾರೆ. ಕುಮಾರಸ್ವಾಮಿ ಅವರ ಮಾತಿನಂತೆ ಎಲ್ಲವು ನಡೆಯಲಿ ಎಂದು ಕೆಲ ಬೆಂಬಲಿಗರ ಪೋಸ್ಟ್ ಹಾಕಿದ್ದಾರೆ.
ಹುಬ್ಬಳ್ಳಿ: ಕೇಂದ್ರ ಸಚಿವ ಅಮಿತ್ ಶಾ ನಿನ್ನೆ (ಜ.28) ಇಡೀ ದಿನ ಸಂಚಲನ ಸೃಷ್ಟಿಸಿದ್ದಾರೆ. ಕಿತ್ತೂರು ಕರ್ನಾಟಕ ಭಾಗದಲ್ಲಿ ಭಾರತೀಯ ಜನತಾ ಪಾರ್ಟಿ ಗಟ್ಟಿಯಾಗಿದೆ. ನಿನ್ನೆ ದಿನ ಅಮಿತ್ ಶಾ ಮತ್ತಷ್ಟು ಶಕ್ತಿ ತುಂಬಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮತಾನಡಿದ ಅವರು ಕಾಂಗ್ರೆಸ್ನವರು ಅಧಿಕಾರಕ್ಕೆ ಬಂದಿದ್ದೀವಿ ಅಂತಾ ಫೋಸ್ ಕೊಡುತ್ತಿದ್ದಾರೆ. ಯಾರು ಏನೇ ಹೇಳಲಿ ಬಿಜೆಪಿ ಗೆಲುವು ಖಂಡಿತ ಎಂದು ಭವಿಷ್ಯ ನುಡಿದರು.
ಅಮಿತ್ ಶಾ ರಾಜ್ಯ ನಾಯಕರಿಗೆ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚಿಸಿದ್ದಾರೆ. ಕರ್ನಾಟಕ ರಾಜಕೀಯ ವ್ಯಕ್ತಿ ಆಧಾರಿತ ಹಾಗೂ ದ್ವೇಷ ಆಧಾರಿತ ಇಲ್ಲ. ಕಾರ್ಯಕ್ರಮದ ಮೂಲಕ ನಾವು ಚುನಾವಣೆಗೆ ಹೋಗುತ್ತಿದ್ದೇವೆ. ಕಾಂಗ್ರೆಸ್ ಹತಾಶೆಯಾಗಿದೆ, ಅವರು ಬಳಸುವ ಭಾಷೆಯಲ್ಲಿ ವ್ಯಕ್ತವಾಗುತ್ತಿದೆ. ಯಾವತ್ತೂ ಬಳಸದ ಕೀಳುಮಟ್ಟದ ಪದಗಳನ್ನು ಅವರು ಬಳಸುತ್ತಿದ್ದಾರೆ. ನಾನು ಮಾತ್ರ ಸಂಯಮದಿಂದ ಇದ್ದೇನೆ. ಬಿ.ಎಲ್.ಸಂತೋಷ್ ಸಂಘಟನಾತ್ಮಕ ವಿಷಯವಾಗಿ ಭೇಟಿ ನೀಡುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಬಿಜೆಪಿಯಲ್ಲಿ ಯಾವುದೇ ಭಿನ್ನಮತ ಇಲ್ಲ ಎಂದು ಹೇಳಿದರು.
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಘೋಷಣೆ ವಿಚಾರವಾಗಿ ಮಾತನಾಡಿದ ಅವರು ಸರ್ವೆ ಕಾರ್ಯ ನಡೆಯುತ್ತಿದೆ, ಆದರೆ ಯಾವುದೂ ಅಂತಿಮ ಅಲ್ಲ. ಗೋ ಬ್ಯಾಕ್ ಅಶೋಕ್ ವಿಚಾರವಾಗಿ ಮಾತನಾಡಿ ಯಾರೋ ನಾಲ್ಕ ಜನ ಮಾಡುತ್ತಾರೆ. ನೀವು ಹೈಲೆಟ್ ಮಾಡುತ್ತೀದ್ದೀರಿ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ರಾಯಚೂರು: ಮುಂದಿನ ವಿಧಾನಸಭೆಯಲ್ಲಿ ಶತಾಯಗತಾಯ 120 ಸ್ಥಾನಗಳನ್ನು ಗೆಲ್ಲುವ ಇಚ್ಚೆಯಿಂದ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪಂಚರಾತ್ನ ಯಾತ್ರೆ ಮಾಡುತ್ತಿದ್ದಾರೆ. ಇತ್ತ ಹಾಸನದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪತ್ನಿ ಭವಾನಿ ರೇವಣ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದು ಸಾಕಷ್ಟು ಸಂಕಷ್ಟ ತಂದಿದೆ. ಇಂದು (ಜ.29) ಹೆಚ್ ಡಿ ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಮಂತ್ರಾಲಯದ ರಾಯರ ಮಠಕ್ಕೆ ಭೇಟಿ ನೀಡಲಿದ್ದಾರೆ. ಮೊದಲು ಮಂಚಾಲಮ್ಮಾ ದೇವಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಬಳಿಕ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಭೇಟಿ ಮಾಡಿ ಆಶಿರ್ವಾದ ಪಡೆಯಲಿದ್ದಾರೆ.
Published On - 9:54 am, Sun, 29 January 23