ಹಾಸನ ಲೋಕಸಭಾ ಚುನಾವಣೆ 2024 ಫಲಿತಾಂಶ: ಪ್ರಜ್ವಲ್​ ರೇವಣ್ಣಗೆ ಸೋಲು, ಕಾಂಗ್ರೆಸ್​ಗೆ ಗೆಲುವು

| Updated By: ವಿವೇಕ ಬಿರಾದಾರ

Updated on: Jun 04, 2024 | 12:44 PM

Hassan Lok Sabha Election Results 2024: ಈ ಬಾರಿಯ ಹಾಸನ ಲೋಕಸಭೆ ಚುನಾವಣೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಏಪ್ರಿಲ್ 26ರಂದು ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಶೇ 77.68ರಷ್ಟು ಮತದಾನವಾಗಿದ್ದು, ಫಲಿತಾಂಶ ಪ್ರಕಟವಾಗಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ಜೆಡಿಎಸ್​ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರಿಗೆ ಸೋಲಾಗಿದೆ. 

ಹಾಸನ ಲೋಕಸಭಾ ಚುನಾವಣೆ 2024 ಫಲಿತಾಂಶ: ಪ್ರಜ್ವಲ್​ ರೇವಣ್ಣಗೆ ಸೋಲು, ಕಾಂಗ್ರೆಸ್​ಗೆ ಗೆಲುವು
ಪ್ರಜ್ವಲ್ ರೇವಣ್ಣ
Follow us on

ಹಾಸನ, ಜೂನ್​ 04: ಹಾಸನ ಲೋಕಸಭಾ ಕ್ಷೇತ್ರದ (Hassan Lok Sabha Constituency) ಫಲಿತಾಂಶ ಹೊರಬಿದ್ದಿದ್ದು, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಮೊಮ್ಮಗ, ಜೆಡಿಎಸ್​ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ (Prajwal Revanna) ಅವರಿಗೆ ಸೋಲಾಗಿದೆ.  ಮಾಜಿ ಮಂತ್ರಿ, ದಿವಂಗತ ಜಿ. ಪುಟ್ಟಸ್ವಾಮಿಗೌಡರ ಮೊಮ್ಮಗ, ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಾಟೇಲ್​ (Shreyas Patel)​ ​ಗೆದ್ದಿದ್ದಾರೆ.

ಎಕ್ಸಿಟ್ ಪೋಲ್ ಹೇಳುವುದೇನು?

ಜೂನ್ 1ರಂದು ಹಲವು ಖಾಸಗಿ ವಾಹಿನಿಗಳು ಮತ್ತು ಸುದ್ದಿ ಸಂಸ್ಥೆಗಳು ಪ್ರಕಟಿಸಲಾದ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ ಹಾಸನದಲ್ಲಿ ಎನ್‌ ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣನೇ ಗೆಲ್ಲಬಹುದು ಎನ್ನುವ ಭವುಷ್ಯ ನುಡಿದಿವೆ. ಸಾಕಷ್ಟು ವಿವಾದ, ಗೊಂದಲದೊಂದಿಗೆ ರಾಜಕೀಯ ಸವಾಲುಗಳು, ಪೆನ್​ಡ್ರೈವ್​ ವೈರಲ್​ ನಡುವೆಯೇ ಪ್ರಜ್ವಲ್‌ ರೇವಣ್ಣ ಅವರು ಗೆಲುವು ಸಾಧಿಸಬಹುದು ಎಂದು ಎಕ್ಸಿಟ್ ಪೋಲ್ ತಿಳಿಸಿವೆ. ಇನ್ನು ಇತ್ತ ಕಾಂಗ್ರೆಸ್​ ಸಹ ತಮ್ಮ ಗೆಲುವಿನ ಕ್ಷೇತ್ರಗಳಲ್ಲಿ ಹಾಸನವೊಂದನ್ನೂ ಸಹ ಇಟ್ಟುಕೊಂಡಿದೆ. ಜೆಡಿಎಸ್​ ಬಿಜೆಪಿ ಮೈತ್ರಿ ಅಭ್ಯರ್ಥಿ ವಿರುದ್ಧ ಆಡಳಿತ ವಿರೋಧಿ ಅಲೆ, ಪೆನ್​ಡ್ರೈವ್​, ಕುಟುಂಬ ರಾಜಕಾರಣದಿಂದ ಕ್ಷೇತ್ರದ ಜನ ಬೇಸತ್ತು ಈ ಬಾರಿ ಕಾಂಗ್ರೆಸ್​ನ ಶ್ರೇಯಸ್ ಪಾಟೀಲ್​ ಕೈ ಹಿಡಿಯುತ್ತಾರೆ ಎನ್ನುವ ನಂಬಿಕೆ ಕಾಂಗ್ರೆಸ್ ನಾಯಕರಲ್ಲಿದೆ.

ಮತದಾನಕ್ಕೆ ಎರಡು ದಿನ ಇರುವಾಗಲೇ ಪೆನ್​ಡ್ರೈವ್ ಓಪನ್​

ಹಾಸನದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ. ಈ ಬಾರಿಯ ಚುನಾವಣೆಯಲ್ಲಿಯೂ ಅವರೇ ಬಿಜೆಪಿ-ಜೆಡಿಸ್ ಮೈತ್ರಿ ಅಭ್ಯರ್ಥಿ. ಮತದಾನಕ್ಕೂ ಮೊದಲು ಹಂಚಿಕೆಯಾದ ಪ್ರಜ್ವಲ್‌ ರೇವಣ್ಣರದ್ದು ಎಂದು ಆರೋಪಿಸಲಾದ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಸಂಚಲನಕ್ಕೆ ಕಾರಣವಾಗಿತ್ತು. ಲೋಕಸಭೆ ಚುನಾವಣೆಯ ನಡುವೆ ಭಾರತ ಮಾತ್ರವಲ್ಲದೇ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿದ ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಹಾಗೂ ಪೆನ್‌ಡ್ರೈವ್‌ ಪ್ರಕರಣದ ನಡುವೆಯೇ ಅಲ್ಲಿನ ಫಲಿತಾಂಶ ಏನಾಗಬಹುದು ಎನ್ನುವ ಕುತೂಹಲ ಇದ್ದೇ ಇದೆ.

ಹಾಸನ ಲೋಕಸಭಾ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳು

ಹಾಸನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 7 ವಿಧಾನಸಭಾ ಕ್ಷೇತ್ರಗಳು ಮತ್ತು ಚಿಕ್ಕಮಗಳೂರಿನ ಕಡೂರು ವಿಧಾನಸಭಾ ಕ್ಷೇತ್ರ ಸೇರಿ 8 ಕ್ಷೇತ್ರಗಳು ಬರುತ್ತವೆ. ಕಡೂರು, ಅರಸೀಕೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಇದ್ದಾರೆ. ಹಾಸನ, ಹೊಳೆನರಸೀಪುರ, ಶ್ರವಣಬೆಳಗೊಳ ಮತ್ತು ಅರಕಲಗೂಡಿನಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಇನ್ನು ಬೇಲೂರು ಮತ್ತು ಸಕಲೇಶಪುರದಲ್ಲಿ ಬಿಜೆಪಿ ಶಾಸಕರಿದ್ದಾರೆ.

ಮೊದಲ ಚುನಾವಣೆಯಲ್ಲೇ 1 ಲಕ್ಷಕ್ಕೂ ಅಧಿಕ ಅಂತರದಿಂದ ಗೆದ್ದಿದ್ದ ಪ್ರಜ್ವಲ್

2019ರ ಚುನಾವಣೆಯಲ್ಲಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದವು. ಮೊದಲ ಚುನಾವಣೆ ಎದುರಿಸಿದ್ದ ಪ್ರಜ್ವಲ್ ರೇವಣ್ಣ 6,76,606 ಮತಗಳನ್ನು ಪಡೆದಿದ್ದು, 1,41,224 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಎದುರಾಳಿಯಾಗಿದ್ದ ಬಿಜೆಪಿಯ ಎ. ಮಂಜು 5,35,282 ಮತಗಳನ್ನು ಪಡೆದು ಸೋಲು ಕಂಡಿದ್ದರು. ಮೊದಲ ಚುನಾವಣೆಯಲ್ಲಿಯೇ ಪ್ರಜ್ವಲ್ ರೇವಣ್ಣ ಕಾಂಗ್ರೆಸ್ ಬೆಂಬಲವನ್ನು ಪಡೆದು, ಸಂಸತ್ ಪ್ರವೇಶ ಮಾಡಿದ್ದರು.

ಹಾಸನ ರಾಜಕಾರಣದ ಒಂದು ನೋಟ

ಹಾಸನ ಹಲವು ಕಾರಣಗಳಿಂದ ವಿಶಿಷ್ಟ ಜಿಲ್ಲೆ. ಹೊಯ್ಸಳ ರಾಜರ ಆಳ್ವಿಕೆಯ ಕಾಲದಲ್ಲಿ ಹಾಸನ ಕೇಂದ್ರಸ್ಥಾನವಾಗಿದ್ದು, ಬೇಲೂರು ರಾಜಧಾನಿಯಾಗಿತ್ತು. ಹೊಯ್ಸಳ ರಾಜರು ಕಲೆಗೆ ಪ್ರಾಮುಖ್ಯತೆ ಕೊಟ್ಟಿದ್ದರಿಂದ ಬೇಲೂರು-ಹಳೇಬೀಡು ಅತ್ಯದ್ಭುತ ವಾಸ್ತುಶಿಲ್ಪಗಳ ತವರೂರಾಯಿತು. ಹಾಗೆಯೇ ಶ್ರವಣಬೆಳಗೊಳದಲ್ಲಿ ಗಂಗರ ದಂಡ ನಾಯಕ ಚಾವುಂಡರಾಯ ನಿರ್ಮಿಸಿದ ಗೋಮಟೇಶ್ವರನ ಐವತ್ತೇಳು ಅಡಿ ಎತ್ತರದ ಏಕಶಿಲೆಯ ವಿಗ್ರಹವು ಪ್ರಪಂಚದಾದ್ಯಂತ ಖ್ಯಾತಿ ಪಡೆಯಿತು. ಇನ್ನು ರಾಜಕೀಯ ವಿಚಾರವನ್ನು ನೋಡಿದರೆ ಹಾಸನ ದಳಪತಿಗಳ ಭದ್ರಕೋಟೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳಲ್ಲಿ ಮಂತ್ರಿ, ಮುಖ್ಯಮಂತ್ರಿ, ಪ್ರಧಾನಮಂತ್ರಿಗಳಂತಹ ಅತ್ಯುನ್ನತ ಸ್ಥಾನ ಅಲಂಕರಿಸಿ ಜಿಲ್ಲೆಗೆ ಹೆಸರು ತಂದಿದ್ದಾರೆ.

ಇಂತಹ ಹಾಸನ ಜಿಲ್ಲೆಯಿಂದ ಎಲ್.ಟಿ. ಕಾರ್ಲೆ, ಕೆ.ಟಿ. ದಾಸಪ್ಪ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಚ್.ಎನ್. ನಂಜೇಗೌಡ, ಕೆ.ಎಚ್. ಹನುಮೇಗೌಡ, ಎಚ್.ಸಿ. ಕಂಠಯ್ಯ, ಜಿ. ಪುಟ್ಟಸ್ವಾಮಿಗೌಡ, ಬಿ.ಬಿ. ಶಿವಪ್ಪ, ಲಕ್ಷ್ಮಣಯ್ಯ, ಹಾರನಹಳ್ಳಿ ರಾಮಸ್ವಾಮಿಗಳಂತಹ ಘಟಾನುಘಟಿ ರಾಜಕೀಯ ನಾಯಕರು ಹೊರಹೊಮ್ಮಿದ್ದಾರೆ.

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಅಲ್ಲಿಯವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಆರು ಸಲ ಗೆದ್ದು ಮೇಲುಗೈ ಸಾಧಿಸಿರುವುದು ಎದ್ದುಕಾಣುತ್ತದೆ. ಆನಂತರ, 1991ರಲ್ಲಿ ನಡೆದ ಚುನಾವಣೆಯಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡ ಗೆದ್ದು ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುತ್ತಾರೆ. 1996ರಲ್ಲಿ ಜನತಾ ದಳದ ರುದ್ರೇಶಗೌಡ, 1996 ಮತ್ತು 98ರಲ್ಲಿ ಮತ್ತೆ ದೇವೇಗೌಡ ಗೆಲ್ಲುತ್ತಾರೆ. ಹಾಸನ ಎಂದಾಕ್ಷಣ ಕಾಂಗ್ರೆಸ್ಸಿನ ಶ್ರೀಕಂಠಯ್ಯ, ಜನತಾ ದಳದ ದೇವೇಗೌಡರ ನಡುವಿನ ಜಿದ್ದಾಜಿದ್ದಿನ ಗೌಡರ ಗುದ್ದಾಟವೆಂದು ಗುರುತಿಸಲ್ಪಟ್ಟರೂ, 1999ರಲ್ಲಿ ಚಿತ್ರಣ ಬದಲಾಗುತ್ತದೆ. ದೇವೇಗೌಡರ ವಿರುದ್ಧ ಕಾಂಗ್ರೆಸ್ಸಿನ ಪುಟ್ಟಸ್ವಾಮಿಗೌಡರು ಕಣಕ್ಕಿಳಿದು ಜಯ ಸಾಧಿಸುತ್ತಾರೆ. ಆದರೆ ಜಿ. ಪುಟ್ಟಸ್ವಾಮಿಗೌಡ ಮತ್ತು ಎಚ್.ಸಿ. ಶ್ರೀಕಂಠಯ್ಯನವರ ನಿರ್ಗಮನದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಲೆಯೇ ಇಲ್ಲದಂತಾಗುತ್ತದೆ. ಅದು ಜನತಾ ದಳಕ್ಕೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ.

ಆನಂತರ, 2004, 2009, 2014ರಲ್ಲಿ ಜನತಾ ದಳದ ಎಚ್.ಡಿ. ದೇವೇಗೌಡರು ಗೆದ್ದು ಜಿಲ್ಲೆಯನ್ನು ದಳದ ಭದ್ರಕೋಟೆಯನ್ನಾಗಿ ಮಾಡಿದ್ದಾರೆ. ಅಷ್ಟೇ ಅಲ್ಲ, 2019ರ ಚುನಾವಣೆಯಲ್ಲಿ ಮೊಮ್ಮಗ ಪ್ರಜ್ವಲ್‌ಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟು ತುಮಕೂರಿಗೆ ಹೋಗಿ ಸೋಲುಕಂಡಿದ್ದರೆ, ಪ್ರಜ್ವಲ್ ಗೆದ್ದು ಲೋಕಸಭಾ ಪ್ರವೇಶ ಮಾಡಿದ್ದರು.

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 6:44 am, Tue, 4 June 24