ಇಂಡಿಯಾ ಬಣ ತನ್ನ ಮತ ಬ್ಯಾಂಕ್‌ಗಾಗಿ ಮುಜ್ರಾ ಬೇಕಾದರೂ ಮಾಡುತ್ತದೆ: ಬಿಹಾರದಲ್ಲಿ ನರೇಂದ್ರ ಮೋದಿ

|

Updated on: May 25, 2024 | 2:56 PM

ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು ಧರ್ಮದ ಆಧಾರದ ಮೇಲೆ ಮತಬ್ಯಾಂಕ್ ಮೀಸಲಾತಿಯನ್ನು ನೀಡಲು ಬಯಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಭಾರತದ ಸಂವಿಧಾನವು ಧರ್ಮದ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದ್ದಾರೆ.

ಇಂಡಿಯಾ ಬಣ ತನ್ನ ಮತ ಬ್ಯಾಂಕ್‌ಗಾಗಿ ಮುಜ್ರಾ ಬೇಕಾದರೂ ಮಾಡುತ್ತದೆ: ಬಿಹಾರದಲ್ಲಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ದೆಹಲಿ ಮೇ 25: ಇಂಡಿಯಾ ಬಣವು (INDIA bloc) ತಮ್ಮ ಮತ ಬ್ಯಾಂಕ್‌ ಗಾಗಿ “ಮುಜ್ರಾ” (ನೃತ್ಯ) ಬೇಕಾದರೂ ಮಾಡುತ್ತದೆ ಎಂದ ಪ್ರಧಾನಿ ನರೇಂದ್ರ ಮೋದಿ (Narendra Modi) ಅದ್ಯಾವುದೇ ಸಂದರ್ಭದಲ್ಲಿ ಭಾರತದ ಸಂವಿಧಾನದ ಮೂಲಕ ಎಸ್‌ಸಿ/ಎಸ್ ಟಿ, ಒಬಿಸಿಗಳಿಗೆ ನೀಡಲಾದ ಮೀಸಲಾತಿ ಪ್ರಯೋಜನಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಬಿಹಾರದ (Bihar) ಪಾಟಲೀಪುತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂಡಿಯಾ ಬಣವು ತಮ್ಮ ಮತ ಬ್ಯಾಂಕ್‌ನ ಗುಲಾಮಗಿರಿಯನ್ನು ಸ್ವೀಕರಿಸಲು ಬಯಸುತ್ತದೆ. ಆದರೆ ನಮಗೆ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಹೇಳಿದರು.

“ನಾನು ಬಿಹಾರ, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಿಗೆ ಭರವಸೆ ನೀಡುತ್ತಿದ್ದೇನೆ. ಮೋದಿ ಬದುಕಿರುವವರೆಗೆ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ, ಮೋದಿಗೆ ಸಂವಿಧಾನ ಸರ್ವಶ್ರೇಷ್ಠ, ಮೋದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳು ಸರ್ವೋಚ್ಚ. ಇಂಡಿಯಾ ಬಣವು ತಮ್ಮ ಮತ ಬ್ಯಾಂಕ್‌ನ ಜೀತಪದ್ಧತಿಯನ್ನು ಸ್ವೀಕರಿಸಲು ಬಯಸುತ್ತದೆ, ಅವರು ಹಾಗೆ ಮಾಡಲು ಸ್ವತಂತ್ರರು. ಅವರು ಮುಜ್ರಾ (ನೃತ್ಯ) ಮಾಡಲು ಬಯಸಿದರೆ ಅವರು ಸ್ವತಂತ್ರರು. ನಾನು ಇನ್ನೂ ಎಸ್‌ಸಿ/ಎಸ್‌ಟಿ/ಒಬಿಸಿ ಮೀಸಲಾತಿ ಪರವಾಗಿ ನಿಂತಿದ್ದೇನೆ ಎಂದು ಹೇಳಿದ್ದಾರೆ.

ಮೋದಿ ಭಾಷಣ


ತಮ್ಮ ವೋಟ್ ಬ್ಯಾಂಕ್ ಅನ್ನು ಸಂತೋಷಪಡಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಇದರ ನಂತರ, ಸಾವಿರಾರು ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಘೋಷಿಸಲಾಯಿತು. ಈ ಮೊದಲು ಎಸ್‌ಸಿ/ಎಸ್‌ಟಿ/ಒಬಿಸಿಗಳು ಈ ಸಂಸ್ಥೆಗಳಿಗೆ ಪ್ರವೇಶದ ಸಮಯದಲ್ಲಿ ಸಂಪೂರ್ಣ ಮೀಸಲಾತಿಯನ್ನು ಪಡೆಯುತ್ತಿದ್ದರು ಎಂದು ಮೋದಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಆರ್‌ಜೆಡಿ-ಕಾಂಗ್ರೆಸ್ ಮೈತ್ರಿಯು ಧರ್ಮದ ಆಧಾರದ ಮೇಲೆ ಮತಬ್ಯಾಂಕ್ ಮೀಸಲಾತಿಯನ್ನು ನೀಡಲು ಬಯಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.  ಭಾರತದ ಸಂವಿಧಾನವು ಧರ್ಮದ ಆಧಾರದ ಮೇಲೆ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ನೀಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದ್ದಾರೆ.

“ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಆರ್​​ಜೆಡಿ-ಕಾಂಗ್ರೆಸ್ SC/ST/OBC ಕೋಟಾವನ್ನು ಕೊನೆಗೊಳಿಸುವ ಮೂಲಕ ತಮ್ಮ ಮತಬ್ಯಾಂಕ್‌ಗೆ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲು ಬಯಸುತ್ತವೆ ಎಂದಿದ್ದಾರೆ ಮೋದಿ.

ಲಾಲೂ ಯಾದವ್ ಅವರ ಆರ್‌ಜೆಡಿಯ ಚುನಾವಣಾ ಚಿಹ್ನೆಯಾದ ಲ್ಯಾಂಟರ್ನ್ ನ್ನೂ ಮೋದಿ ಗೇಲಿ ಮಾಡಿದ್ದಾರೆ.

“ಇದು ಎಲ್‌ಇಡಿ ಬಲ್ಬ್‌ಗಳ ಯುಗ ಮತ್ತು ಬಿಹಾರದಲ್ಲಿ ಜನರು ಲ್ಯಾಂಟರ್ನ್‌ನೊಂದಿಗೆ ತಿರುಗಾಡುತ್ತಿದ್ದಾರೆ. ಇದು ಕೇವಲ ಒಂದು ಮನೆಯನ್ನು ಬೆಳಗಿಸುವ ಲ್ಯಾಂಟರ್ನ್. ಈ ಲ್ಯಾಂಟರ್ನ್ ಬಿಹಾರದಾದ್ಯಂತ ಕತ್ತಲೆಯನ್ನು ಹರಡಿದೆ” ಎಂದಿದ್ದಾರೆ ಮೋದಿ.

ಕಳೆದ ತಿಂಗಳು, ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದೇಶದ ಜನರ ಸಂಪತ್ತನ್ನು ಕಸಿದುಕೊಂಡು ಅನೇಕ ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಕಾರಣವಾಗಿತ್ತು. ನಂತರ ನೀಡಿದ ಸಂದರ್ಶನವೊಂದರಲ್ಲಿ, ಈ ಬಗ್ಗೆ ಸ್ಪಷ್ಟನೆ ನೀಡಿದ ಮೋದಿ, ನನ್ನ ಹೇಳಿಕೆಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿಲ್ಲ. ನಾನು ಎಂದಿಗೂ “ಹಿಂದೂ-ಮುಸ್ಲಿಂ” (ಕೋಮು ರಾಜಕೀಯ) ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಭವಿಷ್ಯ ನುಡಿದ ಯೋಗೇಂದ್ರ ಯಾದವ್; ಲೆಕ್ಕಾಚಾರ ಹೀಗಿದೆ

ಪ್ರಶಾಂತ್ ಕಿಶೋರ್ ಮತ್ತು ಯೋಗೇಂದ್ರ ಯಾದವ್ ಸೇರಿದಂತೆ ಹಲವಾರು ಚುನಾವಣಾ ಪಂಡಿತರು ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿಯವರ ಬಿಜೆಪಿ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಏನಿದು ಮುಜ್ರಾ?

ಮುಜ್ರಾ- ಭಾರತದಲ್ಲಿ ಮೊಘಲ್ ಯುಗದಲ್ಲಿ ಮುನ್ನೆಲೆಗೆ ಬಂದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ.  ಪ್ರಾಥಮಿಕವಾಗಿ ರಾಜರು ಮತ್ತು ಗಣ್ಯರ ಆಸ್ಥಾನಗಳಲ್ಲಿ ವೇಶ್ಯೆಯರು ಪ್ರದರ್ಶಿಸಿದರು. ಇದು ಕಥಕ್ ಮತ್ತು ಪರ್ಷಿಯನ್ ನೃತ್ಯದ ಸಂಯೋಜನೆಯಾಗಿದ್ದು, ಇದನ್ನು ಸಾಮಾನ್ಯವಾಗಿ ಗಜಲ್ ಅಥವ   ಶಾಸ್ತ್ರೀಯ ಸಂಗೀತಕ್ಕೆ ಪ್ರದರ್ಶಿಸಲಾಗುತ್ತದೆ. ಸಾಂಪ್ರದಾಯಿಕವಾಗಿ, ಮುಜ್ರಾ ನರ್ತಕರು ಅಥವಾ ತವೈಫ್‌ಗಳು ನೃತ್ಯ, ಸಂಗೀತ ಮತ್ತು ಉರ್ದು  ಕಾವ್ಯಗಳಲ್ಲಿ ಹೆಚ್ಚು ಪರಿಣತಿ ಹೊಂದಿದ್ದರು. ಇವರು ಆಸ್ಥಾನದಲ್ಲಿ  ಮುಜ್ರಾ ಮೂಲಕ ಗಣ್ಯರನ್ನು ರಂಜಿಸಿದರು. ಹಿಂದಿ ಸಿನಿಮಾ ಅಥವಾ ಬಾಲಿವುಡ್ ನಲ್ಲಿ ಮುಜ್ರಾ ನೃತ್ಯವನ್ನು ಕಾಣಬಹುದು. ಹಳೇ ಹಿಂದಿ ಸಿನಿಮಾಗಳಲ್ಲಿ ವೈಜಯಂತಿಮಾಲಾ, ಮಧುಬಾಲಾ, ಹೇಮಮಾಲಿನಿ, ರೇಖಾ, ಮಾಧುರಿ ದೀಕ್ಷಿತ್  ಮುಜ್ರಾ ನೃತ್ಯ ಮಾಡಿರುವುದನ್ನು ಕಾಣಬಹುದು. ದೇವದಾಸ್, ಮೊಘಲ್ ಎ- ಆಜಂ,ಸಾಧನಾ ಮೊದಲಾದ  ಸಿನಿಮಾಗಳಲ್ಲಿ ಮುಜ್ರಾ ನೃತ್ಯವಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ