ಬೆಂಗಳೂರು, ಏಪ್ರಿಲ್ 25: ಕರ್ನಾಟಕ ರಾಜಧಾನಿ ಬೆಂಗಳೂರಿನ (Bengaluru) ಲೋಕಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ (Lok Sabha Constituencies) ಶುಕ್ರವಾರ ಮತದಾನ ನಡೆಯಲಿದೆ. ಬೆಂಗಳೂರಿನ ಎಲ್ಲ ಲೋಕಸಭಾ ಕ್ಷೇತ್ರಗಳು ಒಳಗೊಂಡಂತೆ ದಕ್ಷಿಣದ 14 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಶುಕ್ರವಾರ ಮತಯಂತ್ರ ಸೇರಲಿದೆ. ಕರ್ನಾಟಕ (Karnataka) ಮಾತ್ರವಲ್ಲದೆ ಸೇರಿದಂತೆ 13 ರಾಜ್ಯಗಳ ವಿವಿಧ ಲೋಕಸಭಾ ಕ್ಷೇತ್ರಗಳಿಗೆ ಎರಡನೆಯ ಹಂತದಲ್ಲಿ ಮತದಾನ ನಡೆಯಲಿದೆ.
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಏಪ್ರಿಲ್ 26 ರಂದು ಒಟ್ಟು 13 ರಾಜ್ಯಗಳ 89 ಸ್ಥಾನಗಳಿಗೆ ಮತದಾನ ನಡೆಯಲಿದೆ. ಕರ್ನಾಟಕದ ಜತೆಗೆ ಅಸ್ಸಾಂ, ಬಿಹಾರ, ಛತ್ತೀಸ್‌ಗಢ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ರಾಜಸ್ಥಾನ, ತ್ರಿಪುರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಜಮ್ಮು ಮತ್ತು ಕಾಶ್ಮೀರದ ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯಲಿದೆ.
ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಸರಿಯಾಗಿ ಮತದಾನ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸಂಜೆ 6 ಗಂಟೆಗೆ ಮತದಾನ ಕೊನೆಗೊಳ್ಳಲಿದೆ. ಅಂದರೆ, ಸಂಜೆ 6ರ ನಂತರ ಮತಗಟ್ಟೆಗೆ ಬರುವವರಿಗೆ ಮತದಾನಕ್ಕೆ ಅವಕಾಶ ದೊರೆಯುವುದಿಲ್ಲ. ಅದಕ್ಕೂ ಮೊದಲೇ ಬಂದು ಸರತಿಯಲ್ಲಿ ನಿಂತಿದ್ದರೆ ಅವಕಾಶ ನೀಡಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ವೋಟರ್ ಐಡಿ ಇಲ್ಲದಿದ್ದರೂ ಈ ದಾಖಲೆಗಳೊಂದಿಗೆ ನೀವು ಮತದಾನ ಮಾಡ್ಬಹುದು
ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19 ರಂದು ನಡೆದಿದ್ದು, 21 ರಾಜ್ಯಗಳ 102 ಲೋಕಸಭಾ ಕ್ಷೇತ್ರಗಳಿಗೆ ವೋಟಿಂಗ್ ನಡೆದಿತ್ತು. ಕರ್ನಾಟಕದಲ್ಲಿ ಮೇ 7ರಂದು ಇನ್ನುಳಿದ 14 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜೂನ್ 1ರಂದು ದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಪ್ರಕಟಗೊಳ್ಳಲಿದೆ.
ಕರ್ನಾಟಕದಲ್ಲಿ ಮೊದಲ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಭರದಿಂದ ಸಿದ್ಧತೆ ಮಾಡುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಮೊದಲನೇ ಹಂತದ ಚುನಾವಣೆ ವಿಚಾರವಾಗಿ ಈ ವರೆಗೆ ರಾಜಕೀಯ ಪಕ್ಷಗಳ ವಿರುದ್ಧ ಒಟ್ಟು 23 ದ್ವೇಷ ಭಾಷಣದ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 12 ಪ್ರಕರಣ ಬಿಜೆಪಿ ವಿರುದ್ಧ, 9 ಕಾಂಗ್ರೆಸ್ ಪಕ್ಷದ ವಿರುದ್ಧ ಹಾಗೂ 2 ಜೆಡಿಎಸ್ ವಿರುದ್ಧ ದಾಖಲಾಗಿವೆ. ಪ್ರಚಾರದಲ್ಲಿ ಮಕ್ಕಳ ಬಳಕೆ ಪ್ರಕರಣದಲ್ಲಿ ತಲಾ 7 ಕೇಸ್ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ದಾಖಲಾಗಿದ್ರೆ, ಒಂದು ಪಕ್ಷೇತರ ಅಭ್ಯರ್ಥಿ ವಿರುದ್ಧ ದಾಖಲಾಗಿದೆ. ಧಾರ್ಮಿಕ ಸ್ಥಳಗಳ ಬಳಕೆ ಸಂಬಂಧ 8 ಬಿಜೆಪಿ, 6 ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ 1 ಪ್ರಕರಣ ದಾಖಲಾಗಿದೆ. ಒಟ್ಟು 189 ಗಂಭೀರ ಸ್ವರೂಪದ ನೀತಿ ಸಂಹಿತೆ ಉಲ್ಲಂಘನೆ ಕೇಸ್ ಗಳು ಕೂಡಾ ದಾಖಲಿಸಲಾಗಿದೆ.
ಚುನಾವಣೆ ಸಂಬಂಧಿತ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ