Lok Sabha Election: ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ: ಎಷ್ಟು ಲಕ್ಷ ರೂ. ಬಾಡಿಗೆ ಕೊಡಬೇಕು ಗೊತ್ತೇ?

ಲೋಕಸಭೆ ಚುನಾವಣೆಯ ಪ್ರಚಾರದ ಕಾವು ಏರತೊಡಗಿದೆ. ಸ್ಟಾರ್ ಪ್ರಚಾರಕರ ಓಡಾಟಕ್ಕಾಗಿ ಹೆಲಿಕಾಪ್ಟರ್, ಚಾರ್ಟರ್ಡ್ ವಿಮಾನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹೆಲಿಕಾಪ್ಟರ್​ಗಳ, ಚಾರ್ಟರ್ಡ್ ವಿಮಾನಗಳ ಬಾಡಿಗೆಯ ಬಗ್ಗೆ ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ! ಹೌದು, ಅಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ನೀಡಿ ರಾಜಕೀಯ ನಾಯಕರು ಅವುಗಳಲ್ಲಿ ಸಂಚರಿಸುತ್ತಾರೆ. ಆ ಕುರಿತ ವಿವರ ಇಲ್ಲಿದೆ ನೋಡಿ.

Lok Sabha Election: ಚುನಾವಣಾ ಪ್ರಚಾರಕ್ಕಾಗಿ ಹೆಲಿಕಾಪ್ಟರ್‌ಗಳಿಗೆ ಬೇಡಿಕೆ: ಎಷ್ಟು ಲಕ್ಷ ರೂ. ಬಾಡಿಗೆ ಕೊಡಬೇಕು ಗೊತ್ತೇ?
ಸಾಂದರ್ಭಿಕ ಚಿತ್ರ

Updated on: Mar 12, 2024 | 2:54 PM

ಬೆಂಗಳೂರು, ಮಾರ್ಚ್​ 12: ಲೋಕಸಭೆ ಚುನಾವಣೆಗೆ (Lok Sabha Election) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳ ಚಟುವಟಿಕೆಗಳು ಗರಿಗೆದರಿವೆ. ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರಿಗೆ ಪ್ರಚಾರದ ಓಡಾಟಕ್ಕೆ ಹೆಚ್ಚಿನ ಹೆಲಿಕಾಪ್ಟರ್‌ಗಳನ್ನು ಒದಗಿಸಲು ಸಿದ್ಧವಾಗುತ್ತಿವೆ. ಒಂದೆಡೆ, ನೆರೆ ರಾಜ್ಯ ತೆಲಂಗಾಣದಲ್ಲಿ ಪ್ರಚಾರದ ಕಾವು ಏರತೊಡಗಿದ್ದರೆ ಮುಂದಿನ ಕೆಲವೇ ದಿನಗಳಲ್ಲಿ ಕರ್ನಾಟಕದಲ್ಲಿ ಸಹ ಪ್ರಧಾನಿ ಮೋದಿ ಅವರ ರ‍್ಯಾಲಿಯೊಂದಿಗೆ ಪ್ರಚಾರದ ಕಾವು ಹೆಚ್ಚಾಗಲಿದೆ. ಸದ್ಯ ತೆಲಂಗಾಣದಲ್ಲಿ ಮುಂಬೈ ಮೂಲದ ವಿಮಾನಯಾನ ಸಂಸ್ಥೆ ಫ್ಲೈಯಿಂಗ್ ಬರ್ಡ್ಸ್​​ಗೆ ಬೇಡಿಕೆ ಹೆಚ್ಚಿದೆ. ಈ ಸಂಸ್ಥೆಯು 2019 ರಲ್ಲಿ ಅವಳಿ ಎಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 55,000 ರೂ.ನಿಂದ 1.3 ಲಕ್ಷ ರೂ. ವರೆಗೆ ಬಾಡಿಗೆ ನಿಗದಿಪಡಿಸಿತ್ತು. ಸಿಂಗಲ್ ಇಂಜಿನ್ ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 1.50-ರೂ.ನಿಂದ 1.75 ಲಕ್ಷ ರೂ. ಬೆಲೆ ನಿಗದಿಪಡಿಸಿತ್ತು.

ಯಾವ ಹೆಲಿಕಾಪ್ಟರ್​ಗೆ ಎಷ್ಟು ಬಾಡಿಗೆ?

ಈ ಬಾರಿ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಾಡಿಗೆ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ಬೇಡಿಕೆ ಶೇ 40ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೆಲಿಕಾಪ್ಟರ್‌ಗಳು ಗ್ರಾಮೀಣ ಪ್ರದೇಶಗಳಿಗೆ ತ್ವರಿತವಾಗಿ ತಲುಪುವ ಸಾಮರ್ಥ್ಯದಿಂದಾಗಿ ಹೆಚ್ಚು ಜನಪ್ರಿಯವಾಗುವ ನಿರೀಕ್ಷೆಯಿದೆ. ಚಾರ್ಟರ್ಡ್ ವಿಮಾನ ಮತ್ತು ಹೆಲಿಕಾಪ್ಟರ್ ಸೇವೆಗಳಿಗೆ ಗಂಟೆಯ ಬಾಡಿಯಲ್ಲಿ ವ್ಯತ್ಯಾಸವಿದೆ. ಚಾರ್ಟರ್ಡ್ ಏರ್‌ಕ್ರಾಫ್ಟ್‌ಗಳಿಗೆ ಗಂಟೆಗೆ 4.5 ಲಕ್ಷದಿಂದ 5.25 ಲಕ್ಷ ರೂಪಾಯಿ ವೆಚ್ಚವಾಗಲಿದ್ದು, ಹೆಲಿಕಾಪ್ಟರ್‌ಗಳಿಗೆ ಗಂಟೆಗೆ 1.5 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.

1.20 ಲಕ್ಷ ಕೋಟಿ ರೂ. ವಹಿವಾಟು ನಿರೀಕ್ಷೆ

ಈ ಬೇಡಿಕೆಯಿಂದಾಗಿ, ಅನೇಕರು ಈಗಾಗಲೇ ಚಾರ್ಟರ್ಡ್ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಸದ್ಯ ನಾನ್ ಶೆಡ್ಯೂಲ್ಡ್ ಆಪರೇಟರ್ಸ್​ ಪರ್ಮಿಟ್ ಹೊಂದಿರುವ ಸಂಸ್ಥೆಗಳು 3 ರಿಂದ 37 ಆಸನ ಸಾಮರ್ಥ್ಯದೊಂದಿಗೆ 450 ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ನಿರ್ವಹಿಸುತ್ತವೆ. ಮುಂಬರುವ ಚುನಾವಣೆಯಲ್ಲಿ ಹೆಲಿಕಾಪ್ಟರ್​ / ಚಾರ್ಟರ್ಡ್ ವಿಮಾನ ವಹಿವಾಟು 1.20 ಲಕ್ಷ ಕೋಟಿ ರೂ.ಗೆ ತಲುಪುವ ನಿರೀಕ್ಷೆಯಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ: 2ನೇ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ಕಸರತ್ತು, ‘ಕೈ’ಗೆ ಸಂಕಷ್ಟ ತಂದಿತ್ತ ಕ್ಷೇತ್ರಗಳಿವು!

2019-20ರ ಹಣಕಾಸು ವರ್ಷಕ್ಕೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವಾರ್ಷಿಕ ಲೆಕ್ಕ ಪರಿಶೋಧನೆಯಲ್ಲಿ ಆಡಳಿತಾರೂಢ ಬಿಜೆಪಿ ಹೆಲಿಕಾಪ್ಟರ್ ಅಥವಾ ವಿಮಾನ ಸೇವೆಗಳಿಗೆ 250 ಕೋಟಿ ರೂ.ವರೆಗೆ ಖರ್ಚು ಮಾಡಿದೆ ಎಂದು ಹೇಳಿಕೊಂಡಿತ್ತು. ಕಾಂಗ್ರೆಸ್ ಪಕ್ಷವು ಆ ವರ್ಷ ಚುನಾವಣಾ ಪ್ರಚಾರಕ್ಕಾಗಿ 126 ಕೋಟಿ ರೂ.ಗಳನ್ನು ಖರ್ಚು ಮಾಡಿರುವುದಾಗಿ ಹೇಳಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ