ಲೋಕಸಭೆ ಚುನಾವಣೆ: 2ನೇ ಪಟ್ಟಿ ಅಂತಿಮಗೊಳಿಸಲು ಕಾಂಗ್ರೆಸ್ ಕಸರತ್ತು, ‘ಕೈ’ಗೆ ಸಂಕಷ್ಟ ತಂದಿತ್ತ ಕ್ಷೇತ್ರಗಳಿವು!
ಲೋಕಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಇದೀಗ ಬಾಕಿ ಉಳಿದಿರುವ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಸಂಕಷ್ಟ ತಂದಿಟ್ಟಿರುವ ಒಂಬತ್ತು ಕ್ಷೇತ್ರಗಳ ವಿವರ ಇಲ್ಲಿದೆ.
ಬೆಂಗಳೂರು, ಮಾರ್ಚ್ 11: ಲೋಕಸಭೆ ಚುನಾವಣೆಗೆ (Lok Sabha Elections) ಕಾಂಗ್ರೆಸ್‌ನ (Congress) ಟಿಕೆಟ್ ಗೊಂದಲಕ್ಕೆ ಇಂದು ಸಂಜೆಯೇ ಪರಿಹಾರ ಸಿಗುವ ಸಾಧ್ಯತೆ ಇದೆ. 7 ಕ್ಷೇತ್ರಕ್ಕೆ ಅಭ್ಯರ್ಥಿ ಕಣಕ್ಕಿಳಿಸಿದ್ದು 21 ಕ್ಷೇತ್ರಗಳಲ್ಲಿ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದೆ. ಅದರಲ್ಲೂ 9 ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದ್ದು, ಈ ಕ್ಷೇತ್ರಗಳ ಬಗ್ಗೆಯೇ ಇವತ್ತು ಹೆಚ್ಚು ಚರ್ಚೆಯಾಗುವ ಸಾಧ್ಯತೆ ಇದೆ.
9 ಕ್ಷೇತ್ರಗಳು ಕಗ್ಗಂಟು, ಎಲ್ಲೆಲ್ಲಿ ಕೈಪಡೆಗೆ ಟೆನ್ಷನ್?
ಲೋಕಸಭೆ ಟಿಕೆಟ್ ಹಂಚಿಕೆ ಕಸರತ್ತು ಜೋರಾಗಿದ್ದು, ಕಾಂಗ್ರೆಸ್ ನಾಯಕರು ಇವತ್ತು ಮಹತ್ವದ ಸಭೆ ನಡೆಸಲಿದ್ದಾರೆ. ಸಂಜೆ ಕೆಪಿಸಿಸಿ ಸಭೆಯಲ್ಲಿ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, 2ನೇ ಪಟ್ಟಿ ಅಂತಿಮವಾಗುವ ಸಾಧ್ಯತೆ ಇದೆ. ಸಂಜೆ ಅಂತಿಮಗೊಳಿಸುವ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಾಗುತ್ತದೆ. ಕಾಂಗ್ರೆಸ್ ಹೈಕಮಾಂಡ್ ಆ ಪಟ್ಟಿಗೆ ಅಂತಿಮ ಮುದ್ರೆ ಒತ್ತಲಿದೆ. ಆದ್ರೆ, 9 ಕ್ಷೇತ್ರಗಳು ಕಾಂಗ್ರೆಸ್‌ಗೆ ಕಗ್ಗಂಟಾಗಿದೆ. ಈ ಕ್ಷೇತ್ರಗಳಲ್ಲಿ ಅಭ್ಯರ್ಥಿ ಫೈನಲ್ ಮಾಡುವುದೇ ಸವಾಲಾಗಿ ಪರಿಣಮಿಸಿಗಿದೆ.
ಬೆಳಗಾವಿ, ಬಾಗಲಕೋಟೆ, ಕೋಲಾರ, ಚಾಮರಾಜನಗರ ಬೀದರ್, ಬೆಂಗಳೂರಿನ 3 ಕ್ಷೇತ್ರಗಳ ಬಗ್ಗೆ ಮಾತುಕತೆ ಚಿತ್ರದುರ್ಗ ಟಿಕೆಟ್ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆಯಾಗಲಿದೆ.
‘ಕೈ’ ಕಗ್ಗಂಟು ನಂ.1 ಚಿತ್ರದುರ್ಗ
ಚಿತ್ರದುರ್ಗದಲ್ಲಿ ಬಿ.ಎನ್ ಚಂದ್ರಪ್ಪ ಟಿಕೆಟ್ ಪಡೆಯಲು ಲಾಬಿ ಮಾಡ್ತಿದ್ದಾರೆ. ಆದ್ರೆ, ಚಂದ್ರಪ್ಪ ವಿರುದ್ಧ ಇರುವ ನಕಲಿ ಜಾತಿ ಪ್ರಮಾಣ ಪತ್ರದ ಆರೋಪದಿಂದಾಗಿ ಹೈಕಮಾಂಡ್ ಟಿಕೆಟ್ ತಡೆಹಿಡಿದೆ. ಕ್ಷೇತ್ರದಲ್ಲಿ ಆರ್.ಬಿ ತಿಮ್ಮಾಪುರಗೆ ಟಿಕೆಟ್ ನೀಡ್ಬೇಕೆಂಬ ಆಗ್ರಹ ಕೇಳಿಬಂದಿದೆ. ಹೀಗಾಗಿ ಚಿತ್ರದುರ್ಗದ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತದೆ.
ಉಡುಪಿ-ಚಿಕ್ಕಮಗಳೂರು
ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲೂ ಟಿಕೆಟ್‌ಗೆ ಪೈಪೋಟಿ ಹೆಚ್ಚಾಗಿದೆ. ಜಯಪ್ರಕಾಶ್ ಹೆಗ್ಡೆ ಪಕ್ಷ ಸೇರ್ಪಡೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಕಾಂಗ್ರೆಸ್ ಸೇರಲು ಹೆಗ್ಡೆ ಕೆಲ ಷರತ್ತು ಹಾಕಿದ್ದಾರೆ. ಕೈ ನಾಯಕರ ಜೊತೆ ಮುಂದಿನ ದಿನದಲ್ಲಿ ಸಿಗಬೇಕಾದ ಸ್ಥಾನಮಾನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಲ್ಲದೇ, ಹೆಗ್ಡೆ ಅವರ ಜೊತೆಗೆ ಅಂಶುಮಂತ್, ಸುಧೀರ್ ಕುಮಾರ್ ಸಹ ಟಿಕೆಟ್‌ಗೆ ಡಿಮ್ಯಾಂಡ್ ಇಟ್ಟಿದ್ದಾರೆ.
ಬೆಳಗಾವಿ
ಬೆಳಗಾವಿ ಕ್ಷೇತ್ರದಲ್ಲಿ ನಡೀತಿರೋ ಶೀತಲ ಸಮರವೂ ಕಾಂಗ್ರೆಸ್‌ಗೆ ಕಗ್ಗಂಟಾಗಿದೆ. ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ಟಿಕೆಟ್ ಫೈಟ್ ನಡೀತಿದೆ. ಪುತ್ರ ಮೃಣಾಲ್ ಪರ ಲಕ್ಷ್ಮೀ ಹೆಬ್ಬಾಳ್ಕರ್ ಟಿಕೆಟ್‌ಗಾಗಿ ಲಾಬಿ ಮಾಡ್ತಿದ್ರೆ, ಗಿರೀಶ್ ಸೋನ್ವಾಲ್ಕರ್ ಟಿಕೆಟ್ ಕೊಡಿಸಲು ಸತೀಶ್ ಜಾರಕಿಹೊಳಿ ಟವೆಲ್ ಹಾಕಿದ್ದಾರೆ. ಹೀಗಾಗಿ ಇಬ್ಬರನ್ನೂ ಸಮಾಧಾನ ಪಡಿಸೋದೇ ಕಾಂಗ್ರೆಸ್‌ಗೆ ಸವಾಲಾಗಿದೆ.
ಬೆಂಗಳೂರು
ಬೆಂಗಳೂರು ಉತ್ತರ ಮತ್ತು ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಬಗ್ಗೆಯೂ ಇವತ್ತು ಚರ್ಚೆಯಾಗಲಿದೆ. ಈ ಕ್ಷೇತ್ರದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ನಾಯಕರು ಒಲವು ಹೊಂದಿದ್ದಾರೆ. ಆದ್ರೆ, ಚುನಾವಣೆಗೆ ಸ್ಪರ್ಧಿಸಲು ಕುಸುಮಾ ಮತ್ತು ಸೌಮ್ಯಾರೆಡ್ಡಿ ಒಲವು ತೋರುತ್ತಿಲ್ಲ. ಹೀಗಾಗಿ ಅಚ್ಚರಿ ಅಭ್ಯರ್ಥಿ ಬಗ್ಗೆ ಇಂದಿನ ಸಭೆಯಲ್ಲಿ ಚರ್ಚಿಸಲಾಗುತ್ತೆ.
ಬೀದರ್
ಬೀದರ್‌ನಲ್ಲಿ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಲಾಬಿ ಮಾಡ್ತಿದ್ದಾರೆ. ಜೊತೆಗೆ ಸಚಿವ ಈಶ್ವರ್ ಖಂಡ್ರೆ ಪುತ್ರ ಸಾಗರ್‌ಗೆ ಟಿಕೆಟ್ ನೀಡಲು ವಿರೋಧ ವ್ಯಕ್ತವಾಗಿದೆ. ಈಕ್ಷೇತ್ರದಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಿದ್ರೆ ಸೂಕ್ತವೆಂಬ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಾಗಿ ಯಾರಿಗೆ ಟಿಕೆಟ್ ನೀಡಬೇಕೆಂಬ ಚರ್ಚೆ ಇವತ್ತು ನಡೆಯಲಿದೆ.
ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರದಲ್ಲೂ ಕಾಂಗ್ರೆಸ್‌ಗೆ ದೊಡ್ಡ ಸಮಸ್ಯೆ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ರಕ್ಷಾ ರಾಮಯ್ಯ ನಡುವೆ ಟಿಕೆಟ್ ಹಣಾಹಣಿ ನಡೀತಿದೆ. ಈ ಮಧ್ಯೆ ಮಾಜಿ ಸಚಿವ ಶಿವಶಂಕರ್ ರೆಡ್ಡಿ ಕೂಡಾ ಟಿಕೆಟ್‌ಗೆ ಪಟ್ಟು ಹಿಡಿದಿದ್ದಾರೆ. ಈ ಮೂವರ ಪೈಪೋಟಿಯಲ್ಲಿ ಯಾರಿಗೆ ಟಿಕೆಟ್ ಅನ್ನೋದು ಸಸ್ಪೆನ್ಸ್ ಆಗಿದೆ.
ಇದನ್ನೂ ಓದಿ: ಲೋಕಸಭೆ ಚುನಾವಣೆಗೆ ನಾನು, ನನ್ನ ಪುತ್ರ ಸ್ಪರ್ಧಿಸಲ್ಲ: ಪ್ರಕಾಶ್ ಹುಕ್ಕೇರಿ
ಸಂಜೆ ನಡೆಯೋ ಸಭೆಯಲ್ಲಿ ಕಗ್ಗಂಟಾಗಿರೋ ಕ್ಷೇತ್ರಗಳು, ಆಕಾಂಕ್ಷಿಗಳು ಹೆಚ್ಚಾಗಿರೋ ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಯಲಿದೆ. ಅಭ್ಯರ್ಥಿ ಆಯ್ಕೆ ತೀರ್ಮಾನಕ್ಕೆ ಅಂತಿಮ ಮುದ್ರೆ ಬೀಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ