ಲೋಕಸಭೆ ಫಲಿತಾಂಶ: ಕರ್ನಾಟಕದ ಮೂರು ಹೈವೋಲ್ಟೇಜ್ ಕ್ಷೇತ್ರಗಳ ಲೆಕ್ಕಾಚಾರ ಇಲ್ಲಿದೆ

|

Updated on: Jun 04, 2024 | 6:54 AM

Lok Sabha Election Result 2024; ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರಗಳ ಅಭ್ಯರ್ಥಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಈ ಬಾರಿ ಭಾರಿ ಸದ್ದು ಮಾಡಿದ್ದವು. ಈ ಕ್ಷೇತ್ರಗಳ ಮತದಾನ ವಿವರ ಸೇರಿದಂತೆ ಪೂರ್ಣ ಮಾಹಿತಿ ಇಲ್ಲಿದೆ.

ಲೋಕಸಭೆ ಫಲಿತಾಂಶ: ಕರ್ನಾಟಕದ ಮೂರು ಹೈವೋಲ್ಟೇಜ್ ಕ್ಷೇತ್ರಗಳ ಲೆಕ್ಕಾಚಾರ ಇಲ್ಲಿದೆ
ಪ್ರಜ್ವಲ್ ರೇವಣ್ಣ, ಹೆಚ್​ಡಿ ಕುಮಾರಸ್ವಾಮಿ, ಡಿಕೆ ಸುರೇಶ್
Follow us on

ಬೆಂಗಳೂರು, ಜೂನ್ 4: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಕರ್ನಾಟಕದಲ್ಲಿ (Karnataka) ಭಾರಿ ಸದ್ದು ಮಾಡಿದ ಕ್ಷೇತ್ರಗಳೆಂದರೆ ಬೆಂಗಳೂರು ಗ್ರಾಮಾಂತರ, ಮಂಡ್ಯ, ಹಾಸನ. ಅಬ್ಬರದ ಪ್ರಚಾರ, ಸಿಡಿಗುಂಡಿನಂಥಾ ಮಾತಿನೇಟು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ ಸಂಸದ ಡಿಕೆ ಸುರೇಶ್ ಮಾತಿನ ಬಾಣ, ಮಂಡ್ಯ ಕ್ಷೇತ್ರದಲ್ಲಿ ಕಣಕ್ಕಿಳಿದಿರೋ ಹೆಚ್​​ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ವಾಗ್ಯುದ್ಧ ಅಂತೂ ಇಡೀ ರಾಜ್ಯದಲ್ಲೇ ಪ್ರತಿಧ್ವನಿಸುವಂತೆ ಮಾಡಿತ್ತು. ಮಂಡ್ಯ ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳು ಘಟಾನುಘಟಿಗಳ ಶಕ್ತಿಪ್ರದರ್ಶನಕ್ಕೆ ವೇದಿಕೆಯಾಗಿತ್ತು.

ಬೆಂಗಳೂರು ಗ್ರಾಮಾಂತರದಲ್ಲಿ ಹ್ಯಾಟ್ರಿಕ್ ಬಾರಿಸ್ತಾರಾ ಡಿಕೆ ಸುರೇಶ್?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿನ ಕಣವಾಗಿ ಇಡೀ ರಾಜ್ಯದ ಗಮನ ಸೆಳೆದಿದೆ. ಜಯದೇವ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ಲಕ್ಷಾಂತರ ಜನರ ಹೃದಯ ಗೆದ್ದಿರೋ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಅಳಿಯ ಡಾ.ಮಂಜುನಾಥ್ ಹಾಲಿ ಸಂಸದ ಡಿಕೆ ಸುರೇಶ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈಗಾಗಲೇ ಎರಡು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಮೂಲಕ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಾಜಕೀಯ ಶಕ್ತಿ ಕೇಂದ್ರವಾಗಿ ಬದಲಾಗಿಬಿಟ್ಟಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಮೊದಲ ಬಾರಿಗೆ ಅದೃಷ್ಟ ಪರೀಕ್ಷೆಗಿಳಿದಿದ್ದರು. ಡಿಕೆ ಸುರೇಶ್ ಕಾಂಗ್ರೆಸ್​​ನಿಂದ ಮೂರನೇ ಬಾರಿಗೆ ಸ್ಪರ್ಧೆ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಒಟ್ಟು 27 ಲಕ್ಷದ 63 ಸಾವಿರದ 910ಮತದಾರರಿದ್ದಾರೆ. ಈ ಪೈಕಿ 14 ಲಕ್ಷದ 6 ಸಾವಿರದ 42 ಪುರುಷ ಮತದಾರರಿದ್ದಾರೆ. ಅಲ್ಲದೆ 13 ಲಕ್ಷದ 57 ಸಾವಿರದ 547 ಮಹಿಳಾ ಮತದಾರರಿದ್ದಾರೆ. ಇನ್ನು 321 ಇತರ ಮತದಾರರಿದ್ದಾರೆ. ಈ ಬಾರಿ ಶೆಕಡಾ 67.29ರಷ್ಟು ಮತದಾನ ಆಗಿದೆ.

ಸಕ್ಕರೆ ನಾಡಿನಲ್ಲಿ ಕುಮಾರಸ್ವಾಮಿಗೆ ಸಿಗುತ್ತಾ ‘ಸಿಹಿ’?

2019ರ ಚುನಾವಣೆಯಲ್ಲಿ ಸಕ್ಕರೆನಾಡು ಮಂಡ್ಯ ಲೋಕಸಭಾ ಕ್ಷೇತ್ರ ಸುಮಲತಾ ಸ್ಪರ್ಧೆ ಕಾರಣಕ್ಕೆ ರಾಷ್ಟ್ರಮಟ್ಟದಲ್ಲೂ ಗಮನ ಸೆಳೆದಿತ್ತು. ಕಾಂಗ್ರೆಸ್ ಜೆಡಿಎಸ್​ಗೆ ಸೆಡ್ಡು ಹೊಡೆದು ಸ್ವಾಭಿಮಾನದ ಪಣದೊಂದಿಗೆ ಗೆದ್ದು ಸಂಸತ್ ಪ್ರವೇಶಿಸಿದ್ದರು. ಅಂದು ಕುಮಾರಸ್ವಾಮಿ ಪುತ್ರ ನಿಖಿಲ್ ಸುಮಲತಾ ವಿರುದ್ಧ ಸೋತಿದ್ದರು. ಆದ್ರೆ ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಕಣಕ್ಕಿಳಿಯೋ ಮೂಲಕ ಮಂಡ್ಯ ಲೋಕಕಣದಲ್ಲಿ ಮತ್ತೊಮ್ಮೆ ಸಂಚಲನ ಸೃಷ್ಟಿಸಿದ್ದಾರೆ.

ಮಂಡ್ಯ ಕ್ಷೇತ್ರದಿಂದ ಎನ್​​ಡಿಎ ಅಭ್ಯರ್ಥಿಯಾಗಿ ಹೆಚ್​ಡಿ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ಶೇಕಡಾ 81.67ರಷ್ಟು ಮತದಾನ ಆಗಿದೆ. ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಕಣಕ್ಕಿಳಿದಿದ್ದರೂ, ಸಚಿವ ಚಲುವರಾಯಸ್ವಾಮಿ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಮಂಡ್ಯದಲ್ಲಿ ಸ್ವಾಮಿ ವರ್ಸಸ್ ಸ್ವಾಮಿ ಅನ್ನೋ ಚರ್ಚೆ ಜೋರಾಗೇ ನಡೀತಿತ್ತು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ 8 ಲಕ್ಷದ 76 ಸಾವಿರದ 112ಪುರುಷ ಮತದಾರರಿದ್ದಾರೆ. 9 ಲಕ್ಷದ 2 ಸಾವಿರದ 693ಮಹಿಳಾ ಮತದಾರರು ಹೀಗೆ 17 ಲಕ್ಷದ 79 ಸಾವಿರದ 75 ಮತದಾರರಿದ್ದಾರೆ. ಇನ್ನು ಈ ಬಾರಿ ಚುನಾವಣೆಯಲ್ಲಿ ಚಲಾವಣೆಗೊಂಡ ಮತಗಳನ್ನು ನೋಡೋದಾದ್ರೆ, 7ಲಕ್ಷದ 20 ಸಾವಿರದ 512 ಪುರುಷರು, 7 ಲಕ್ಷದ 32 ಸಾವಿರದ 504 ಮಹಿಳೆಯರು ಸೇರಿ 14 ಲಕ್ಷದ 53 ಸಾವಿರದ 16 ಮಂದಿ ಮತದಾನ ಮಾಡಿದ್ದಾರೆ. ಶೇಕಡಾ 81.67ರಷ್ಟು ಮತದಾನ ಪ್ರಮಾಣ ದಾಖಲಾಗಿದೆ.

ಇನ್ನು ದೇಶಕ್ಕೆ ಕನ್ನಡಿಗ ಪ್ರಧಾನಿ ಕೊಟ್ಟಿರೋ ಜಿಲ್ಲೆ ಹಾಸನದಲ್ಲಿ ಈ ಬಾರಿ ಟಫ್ ಫೈಟ್ ಏರ್ಪಟ್ಟಿದೆ. ಅಶ್ಲೀಲ ಪೆನ್​ಡ್ರೈವ್ ವೈರಲ್ ಹಾಗೂ ಹಾಲಿ ಸಂಸದನ ವಿರುದ್ಧದ ಅತ್ಯಾಚಾರ ಪ್ರಕರಣದಿಂದ ದೇಶದಲ್ಲೇ ಸುದ್ದಿಯಾಗಿರೋ ಹಾಸನ ಲೋಕಸಭಾ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಫೈಟ್ ನಡೆದಿದೆ. ಜೆಡಿಎಸ್ ಬಿಜೆಪಿ ಮೈತ್ರಿಕೂಟದಿಂದ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಕಣದಲ್ಲಿದ್ದರೆ, ಕಾಂಗ್ರೆಸ್​ನಿಂದ ಶ್ರೇಯಸ್ ಪಟೇಲ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ವಿಶೇಷವೆಂದರೆ 1999ರಲ್ಲಿ ಮಾಜಿ ಪ್ರಧಾನಿ ದೇವೇಗೌಡರನ್ನೇ ಮಣಿಸಿದ್ದ ಕಾಂಗ್ರೆಸ್ ನಾಯಕ ದಿವಂಗತ ಪುಟ್ಟಸ್ವಾಮಿ ಗೌಡರ ಮೊಮ್ಮಗ ಕಳೆದ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ಮಾಜಿ ಸಚಿವ ರೇವಣ್ಣ ವಿರುದ್ಧ ಅತ್ಯಲ್ಪ ಮತಗಳಲ್ಲಿ ಪರಾಜಯಗೊಂಡಿದ್ದ ಶ್ರೇಯಸ್ ಪಟೇಲ್ ಈಬಾರಿ ಪ್ರಜ್ವಲ್ ಗೆ ಎದುರಾಳಿಯಾಗಿರೋದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ಇದನ್ನೂ ಓದಿ: ಚುನಾವಣಾ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

ಒಟ್ಟು 8 ವಿಧಾನಭಾ ಕ್ಷೇತ್ರವನ್ನು ಹೊಂದಿರೋ ಬಹುದೊಡ್ಡ ಕ್ಷೇತ್ರವಾಗಿದೆ ಹಾಸನ. ಜೆಡಿಎಸ್​ ನಾಲ್ಕು ಕ್ಷೇತ್ರಗಳನ್ನು ಹೊಂದಿದ್ದರೆ. ಜೆಡಿಎಸ್​​ನ ಮೈತ್ರಿ ಪಕ್ಷ ಬಿಜೆಪಿಯ 2 ಶಾಸಕರನ್ನು ಹೊಂದಿದ್ದಾರೆ. ಈ ಮೂಲಕ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್​ಗೆ ಆರು ಶಾಸಕರ ಬೆಂಬಲ ಇದೆ. ಜಿಲ್ಲೆಯ ಅರಸೀಕೆರೆ ಹಾಗು ಚಿಕ್ಕಮಗಳೂರಿನ ಕಡೂರು ಕ್ಷೇತ್ರದಲ್ಲಿ ಸೇರಿ 2 ಶಾಶಕರನ್ನು ಮಾತ್ರ ಕಾಂಗ್ರೇಸ್ ಹೊಂದಿದೆ.

ಏಪ್ರಿಲ್ 26ರಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 77.42 ರಷ್ಟು ಮತದಾನ ಆಗಿದೆ.

ಹೀಗೆ ಬೆಂಗಳೂರು ಗ್ರಾಮಾಂತರ, ಮಂಡ್ಯ ಹಾಗೂ ಹಾಸನ ಲೋಕಸಭಾ ಕ್ಷೇತ್ರಗಳಲ್ಲಿ ನಾನಾ ನೀನಾ ಅನ್ನುವಂಥಾ ಮತಕುಸ್ತಿ ನಡೆದಿದೆ. ಈ ಮೂರು ಕ್ಷೇತ್ರಗಳ ಘಟಾನುಘಟಿಗಳ ಪೈಕಿ ಡಿಕೆ ಸುರೇಶ್​ಗೆ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಾದ್ರೆ. ಇತ್ತ ಪ್ರಥಮ ಬಾರಿಗೆ ಲೋಕಸಭೆಯತ್ತ ಚಿತ್ತ ಹರಿಸಿರೋ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧೆ ಮಾಡಿದ್ದಾರೆ. ಹತ್ತು ಹಲವು ರಾಜಕೀಯ ಲೆಕ್ಕಾಚಾರದೊಂದಿಗೆ ಫಲಿತಾಂಶದ ಮೇಲೆ ಕಣ್ಣಿಟ್ಟಿದ್ದಾರೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ