
2024ರ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha election result) ಪ್ರಕಟವಾಗುತ್ತಿದ್ದು, ಎನ್‌ಡಿಎ (NDA) ಬಹುಮತದತ್ತ ಸಾಗುತ್ತಿದೆ. ಆದರೆ ಪ್ರತಿಪಕ್ಷಗಳಿಂದ ಕಠಿಣ ಸ್ಪರ್ಧೆಯನ್ನು ಎದುರಿಸುತ್ತಿದ್ದು, ಸರಳ ಬಹುಮತ ಪಡೆಯುವುದು ಬಿಜೆಪಿಗೆ (BJP) ಕಷ್ಟಕರವಾಗಿ ಪರಿಣಮಿಸಿದೆ. ಬಿಜೆಪಿಯ ಅನೇಕ ಹಿರಿಯ ನಾಯಕರು ಹಿನ್ನಡೆ ಅನುಭವಿಸಿದ್ದಾರೆ. 2019 ರ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರದಿಂದ ರಾಹುಲ್ ಗಾಂಧಿಯನ್ನು ಸೋಲಿಸಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಇದುವರೆಗಿನ ಟ್ರೆಂಡ್‌ಗಳಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಮೇನಕಾ ಗಾಂಧಿ ಕೂಡ ಸುಲ್ತಾನ್‌ಪುರದಲ್ಲಿ ಹಿನ್ನಡೆಯಲ್ಲಿದ್ದಾರೆ. ಸಂಜೆ ಅಥವಾ ರಾತ್ರಿ ವೇಳೆಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.
ಉತ್ತರ ಪ್ರದೇಶದ ಸುಲ್ತಾನ್‌ಪುರದಲ್ಲಿ ಆರಂಭಿಕ ಟ್ರೆಂಡ್‌ಗಳಲ್ಲಿ ಮೇನಕಾ ಗಾಂಧಿ ಹಿನ್ನಡೆ ಅನುಭವಿಸಿದ್ದಾರೆ. ಸಮಾಜವಾದಿ ಪಕ್ಷದ ರಾಂಭುವಲ್ ನಿಶಾದ್ ಅವರಿಗಿಂತ ಮುಂದಿದ್ದಾರೆ. ಈ ಟ್ರೆಂಡ್‌ಗಳು ಫಲಿತಾಂಶವಾಗಿ ಪರಿವರ್ತನೆಯಾದರೆ, ಬಿಜೆಪಿಯ ಈ ಕೋಟೆ ಅವರ ಕೈಯಿಂದ ಜಾರಿಕೊಳ್ಳಬಹುದು. 2019 ರ ಲೋಕಸಭೆ ಚುನಾವಣೆಯಲ್ಲಿ ಮೇನಕಾ ಗಾಂಧಿ ಈ ಸ್ಥಾನವನ್ನು ಭಾರಿ ಅಂತರದಿಂದ ಗೆದ್ದಿದ್ದರು, ಆದರೆ ಈ ಬಾರಿ ಅವರಿಗೆ ಆಘಾತವಾಗುವ ಸಾಧ್ಯತೆಗಳಿವೆ.
ಅಮೇಥಿಯ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಸ್ಮೃತಿ ಇರಾನಿ ಅವರಿಗಿಂತ ಬಹಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯಲ್ಲಿ ಸದ್ದು ಮಾಡಿದ್ದ ಸ್ಮೃತಿ ಈ ಬಾರಿ ಸಂಪೂರ್ಣ ಭಿನ್ನವಾಗಿ ಕಾಣುತ್ತಿದ್ದಾರೆ. ಈ ಸ್ಥಾನ ತಮ್ಮ ಕೈ ತಪ್ಪುತ್ತದೆ ಎಂದು ಬಿಜೆಪಿಯವರು ಊಹಿಸಿರಲಿಲ್ಲ. ಈ ಬಾರಿ ಅಮೇಥಿಯಿಂದ ಚುನಾವಣೆಗೆ ಸ್ಪರ್ಧಿಸದಿರುವುದಕ್ಕೆ ಪಕ್ಷವೇ ರಾಹುಲ್ ಗಾಂಧಿಯನ್ನು ಪ್ರಶ್ನಿಸಿತ್ತು, ಆದರೆ ಆರಂಭಿಕ ಟ್ರೆಂಡ್‌ಗಳಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.
ಈ ವರ್ಷ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕುರಿತು ಸಾಕಷ್ಟು ಚರ್ಚೆ ನಡೆದಿತ್ತಿ. ಜನವರಿ ತಿಂಗಳಲ್ಲಿ, ಇಡೀ ದೇಶವು ರಾಮ ಲಲ್ಲಾ ಪ್ರತಿಷ್ಠಾಪನೆಯನ್ನು ಆಚರಿಸಿತು. ಈ ವಿಚಾರವಾಗಿ ವಿಪಕ್ಷಗಳು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದವು. ಬಿಜೆಪಿ ರಾಜಕೀಯ ಲಾಭಕ್ಕಾಗಿ ದೇವಾಲಯವನ್ನು ನಿರ್ಮಿಸುತ್ತಿದೆ ಎಂದು ಅವರು ಆರೋಪಿಸಿದ್ದರು. ಆದರೆ ಈಗಿನ ಟ್ರೆಂಡ್‌ಗಳನ್ನು ನೋಡಿದರೆ ಬಿಜೆಪಿಗೆ ರಾಮ ಮಂದಿರದಿಂದ ಯಾವುದೇ ಲಾಭವಾದಂತೆ ಕಾಣಿಸುತ್ತಿಲ್ಲ. ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಹಿನ್ನಡೆ ಅನುಭವಿಸಿದ್ದು, ಸಮಾಜವಾದಿ ಪಕ್ಷದ ಅವಧೇಶ್ ಪ್ರಸಾದ್ ಮುನ್ನಡೆಯಲ್ಲಿದ್ದಾರೆ.
ಮುಜಾಫರ್‌ನಗರದಲ್ಲೂ ಬಿಜೆಪಿಗೆ ಆಘಾತಕಾರಿ ಸುದ್ದಿಯಿದೆ. ಸಂಜೀವ್ ಬಾಲಯನ್ ಸಮಾಜವಾದಿ ಪಕ್ಷದ ಹರೇಂದ್ರ ಸಿಂಗ್ ಮಲಿಕ್ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ಸಂಜೀವ್ ಬಾಲಯನ್ ಮಧ್ಯಾಹ್ನದ ವರೆಗಿನ ಟ್ರೆಂಡ್‌ಗಳಲ್ಲಿ ಹಿಂದುಳಿದಿದ್ದಾರೆ. 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸಂಜೀವ್ ಬಾಲಯನ್ ಗೆದ್ದಿದ್ದರು. ಆದರೆ ಈ ಬಾರಿ ಸಮಾಜವಾದಿ ಪಕ್ಷ ಅವರನ್ನು ಸೋಲಿಸುವುದು ಬಹುತೇಖ ಖಚಿತವಾಗಿದೆ.
ಇದನ್ನೂ ಓದಿ: ಲೋಕಸಭೆ ಫಲಿತಾಂಶ: ಕರ್ನಾಟಕ, ತೆಲಂಗಾಣದಲ್ಲಿ ಕಾಂಗ್ರೆಸ್ಗೆ ಕೈಕೊಟ್ಟ ‘ಗ್ಯಾರಂಟಿ’!
ಭೋಜ್‌ಪುರಿ ಚಲನಚಿತ್ರದ ಸೂಪರ್‌ಸ್ಟಾರ್ ನಿರಾಹುವಾ ಅಜಂಗಢ ಹಿನ್ನಡೆ ಅನುಭವಿಸಿದ್ದಾರೆ. ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಬಹಳ ಮುಂದಿದ್ದಾರೆ. ಅಖಿಲೇಶ್ ಯಾದವ್ 2019 ರ ಲೋಕಸಭಾ ಚುನಾವಣೆಯಲ್ಲಿ ಅಜಂಗಢದಿಂದ ಗೆದ್ದಿದ್ದರು. ಅವರು 2022 ರಲ್ಲಿ ಅಜಂಗಢ ಕ್ಷೇತ್ರವನ್ನು ತೊರೆದಿದ್ದರು. ಉಪಚುನಾವಣೆಯಲ್ಲಿ ಧರ್ಮೇಂದ್ರ ಯಾದವ್ ಅವರನ್ನು ಸೋಲಿಸುವ ಮೂಲಕ ದಿನೇಶ್ ಲಾಲ್ ಯಾದವ್ ನಿರಾಹುವಾ ಗೆದ್ದಿದ್ದರು.
ಗುರುಗ್ರಾಮ್‌ನಲ್ಲಿ ಬಿಜೆಪಿ ಅಭ್ಯರ್ಥಿ ರಾವ್ ಇಂದರ್‌ಜಿತ್ ಸಿಂಗ್ ಅವರು ಕಾಂಗ್ರೆಸ್‌ನ ರಾಜ್ ಬಬ್ಬರ್ ವಿರುದ್ಧ ಹಿನ್ನಡೆ ಅನುಭವಿಸಿದ್ದಾರೆ. ರಾವ್ ಇಂದರ್‌ಜಿತ್ 2014 ಮತ್ತು 2019 ರಲ್ಲಿ ಈ ಕ್ಷೇತ್ರದಿಂದ ಗೆದ್ದು ಲೋಕಸಭೆಗೆ ಪ್ರವೇಶಿಸಿದ್ದರು.
ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ