ಮಂಡ್ಯ, ಜೂನ್.04: ಬಹು ನಿರೀಕ್ಷಿತ ಲೋಕಸಭಾ ಚುನಾವಣೆಯ ಫಲಿತಾಂಶ (Lok Sabha Election Result) ಹೊರ ಬಿದ್ದಿದೆ. ಏಪ್ರಿಲ್ 26 ರಂದು ಕರ್ನಾಟಕದಲ್ಲಿ ನಡೆದ 2ನೇ ಹಂತದ ಮತದಾನ ಪ್ರಕ್ರಿಯೆ ವೇಳೆ ಮಂಡ್ಯ ಲೋಕಸಭಾ ಕ್ಷೇತ್ರದ ಮತದಾನ ನಡೆದಿತ್ತು. ಇಂದು ಫಲಿತಾಂಶ ಹೊರಬಿದ್ದಿದ್ದು ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧಾರ ಮಾಡಿದ್ದಾರೆ. ಕಾಂಗ್ರೆಸ್ನಿಂದ ವೆಂಕಟರಾಮೇಗೌಡ (ಸ್ಟಾರ್ ಚಂದ್ರು) ಮತ್ತು ಜೆಡಿಎಸ್ನಿಂದ ಮೈತ್ರಿ ಅಭ್ಯರ್ಥಿಯಾಗಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಕಣದಲ್ಲಿದ್ದರು. ಸದ್ಯ ಮಗನ ಸೋಲಿನ ಸೇಡು ತೀರಿಸಿಕೊಂಡ ಕುಮಾರಸ್ವಾಮಿ ಅವರು 2 ಲಕ್ಷಕ್ಕೂ ಅಧಿಕ ಮತಗಳಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕುಮಾರಸ್ವಾಮಿ ಅವರಿಗೆ 7,04,893 ಮತಗಳು ಸಿಕ್ಕಿವೆ. ಸ್ಟಾರ್ ಚಂದ್ರು ಅವರಿಗೆ 4,46,686 ಮತಗಳು ಸಿಕ್ಕಿದ್ದು 2,58,207 ಮತಗಳ ಅಂತರದಲ್ಲಿ ಹೆಚ್ಡಿಕೆ ಗೆಲುವು ಸಾಧಿಸಿದ್ದಾರೆ.
ಮಂಡ್ಯ ಕ್ಷೇತ್ರವು ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ ಮತ್ತು ಕೃಷ್ಣರಾಜನಗರ ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಏಪ್ರಿಲ್ 26 ರಂದು ಶೇ 81.67 ರಷ್ಟು ಮತದಾನವಾಗಿತ್ತು. ಇಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಿದ್ದು ಮಂಡ್ಯ ಲೋಕಸಭಾ ಕ್ಷೇತ್ರ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ಮಹತ್ವದ ಸ್ಥಾನವನ್ನು ಹೊಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ, ಈ ಕ್ಷೇತ್ರ ತೀವ್ರ ಪೈಪೋಟಿಯ ಕದನಕ್ಕೆ ಸಾಕ್ಷಿಯಾಗಿತ್ತು. ಏಕೆಂದರೆ ಸ್ಟಾರ್ ನಟಿ ಸುಮಲತಾ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಕಣದಲ್ಲಿದ್ದರು. ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೆನಿಸಿಕೊಂಡಿದ್ದ ಮಂಡ್ಯ ಪಕ್ಷೇತರ ಅಭ್ಯರ್ಥಿಯಾದ ಸುಮಲತಾ ಅವರ ತೆಕ್ಕೆಗೆ ಜಾರಿತ್ತು. ಆದರೆ ಈ ಬಾರಿ ಸುಮಲತಾ ಅವರು ಸ್ಪರ್ಧೆಯಿಂದ ಕೆಳಗಿಳಿದಿದ್ದು ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಸದ್ಯ ಹೆಚ್ಡಿ ಕುಮಾರಸ್ವಾಮಿ ಅವರು 2024ರ ಲೋಕಸಭಾ ಚುನಾವಣೆ ಗೆಲ್ಲುವ ಮೂಲಕ ಮಗನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದಾರೆ. ಮತ್ತೊಮ್ಮೆ ಮಂಡ್ಯ ಬಿಜೆಪಿ ತೆಕ್ಕೆಗೆ ಜಾರಿದೆ.
ಈ ಬಾರಿಯೂ ಆ ಕ್ಷೇತ್ರ ಪ್ರತಿಷ್ಠಿತ ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಸದ್ಯ ಈ ಬಾರಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಜೆಡಿಎಸ್- ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಗಳಿಸಿದ್ದಾರೆ. ಕಾಂಗ್ರೆಸ್ನಿಂದ ಕಣಕ್ಕೆ ಇಳಿದಿದ್ದ ಸ್ಟಾರ್ ಚಂದ್ರು ಅವರು ಕೂಡ ಭರ್ಜರಿ ಪ್ರಚಾರ ಮಾಡಿದ್ದು ಗೆಲುವನ್ನು ತಮ್ಮದಾಗಿಸುವ ನಿರೀಕ್ಷೆಯಲ್ಲಿದ್ದರು. ಸ್ಟಾರ್ ಚಂದ್ರು ಅವರಿಗೆ ಇದು ಮೊದಲ ಚುನಾವಣೆಯಾಗಿತ್ತು. ಮಂಡ್ಯದಲ್ಲಿ ನಟ ದರ್ಶನ್ ಸ್ಟಾರ್ ಚಂದ್ರು ಪರವಾಗಿ ಪ್ರಚಾರ ಮಾಡಿದ್ದರು. ಆದರೆ ಮತದಾರ ಪ್ರಭುಗಳು ಕಾಂಗ್ರೆಸ್ ಕೈ ಬಿಟ್ಟಿದ್ದಾರೆ.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:37 am, Tue, 4 June 24