Belagavi Lok Sabha Election Result 2024: ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವು
Belagavi Lok Sabha Election Results 2024 Live Counting Updates: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಕಣದಲ್ಲಿದ್ದಾರೆ. ಇತ್ತ ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಪ್ರತಿಸ್ಪರ್ಧಿಯಾಗಿದ್ದಾರೆ. ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಗೆಲುವಿನ ವಿಶ್ವಾಸ ಹೊಂದಿದೆ.
ಬೆಳಗಾವಿ, ಜೂನ್ 04: ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ (Belgaum Lok Sabha Constituency) ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಗೆಲುವಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಳ್ ಹೆಬ್ಬಾಳ್ಕರ್ ಅವರಿಗೆ ಸೋಲಾಗಿದೆ. ಮೇ 07ರಂದು ಮತದಾನ ನಡೆದಿದ್ದು ಇಲ್ಲಿ 71.49 ರಷ್ಟು ಮತದಾನ ಆಗಿದೆ. ಬೆಳಗಾವಿ ಕ್ಷೇತ್ರದಲ್ಲಿ ಜಾರಕಿಹೊಳಿ ಹಾಗೂ ಹೆಬ್ಬಾಳ್ಕರ್ ಕುಟುಂಬ ಹಿಡಿತಹೊಂದಿದ್ದು, ಸುರೇಶ್ ಅಂಗಡಿಯವರ ನಿಧನ ಬಳಿಕ ಬಿಜೆಪಿಗೆ ಇಲ್ಲಿ ಪ್ರಭಾವಿ ನಾಯಕರು ಇಲ್ಲದಂತಾಗಿತ್ತು.
ಹಾಲಿ ಸಚಿವೆಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಇಲ್ಲಿ ಪ್ರಭಾವಿ ಆಗಿರುವುದರಿಂದ ಮೃಣಾಲ್ ಹೆಬ್ಬಾಳ್ಕರ್ ಮೂಲಕ ಕಾಂಗ್ರೆಸ್ ಇಲ್ಲಿ ಚುನಾವಣೆ ಗೆಲ್ಲಲು ರಣತಂತ್ರ ಹೂಡಿತ್ತು. ಅಷ್ಟೇ ಅಲ್ಲ ಮಗನ ಪರವಾಗಿ ಅಬ್ಬರದ ಪ್ರಚಾರ ಮಾಡಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಬಿಜೆಪಿ ಏನು ಕೊಡುಗೆ ನೀಡಿದೆ? ಎಂದು ಪ್ರಶ್ನೆಗಳನ್ನು ಮುಂದಿಟ್ಟು, ಬಿಜೆಪಿ ವೈಫಲ್ಯಗಳ ಪಟ್ಟಿಯನ್ನು ಜನರ ಮುಂದಿಟ್ಟಿದ್ದರು. ಇತ್ತ ಜಗದೀಶ್ ಶೆಟ್ಟರ್ ಬಿಜೆಪಿ ನಾಯಕರೊಂದಿಗೆ ಭೇಟಿ, ದೆಹಲಿ ಓಡಾಟ ಎಲ್ಲ ಮಾಡಿ ಕೊನೆಯ ಹಂತದಲ್ಲಿ ಬೆಳಗಾವಿ ಟಿಕೆಟ್ ಪಡೆದಿದ್ದರು. ಬೆಳಗಾವಿಯಲ್ಲೇ ಶೆಟ್ಟರ್ಗೆ ಟಿಕೆಟ್ ನೀಡಬಾರದು ಎಂಬ ವಿರೋಧದ ದನಿ ಕೇಳಿ ಬಂದಿತ್ತು. ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯದ ನಡುವೆಯೇ ಬಿಜೆಪಿ ಶೆಟ್ಟರ್ಗೆ ಮಣೆ ಹಾಕಿತ್ತು
ಬಿಜೆಪಿಯಲ್ಲಿಯೇ ಶೆಟ್ಟರ್ಗೆ ವಿರೋಧವಿರುವ ಕಾರಣ ಮೃಣಾಲ್ ಪರ ಹೆಚ್ಚು ಮತ ಬೀಳುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹೊಂದಿದೆ. ಕಾಂಗ್ರೆಸ್ ಪಾಲಿಗೆ ಇದು ಪ್ರತಿಷ್ಠೆಯ ಕಣವೂ ಆಗಿದೆ. ಈ ಹಿಂದಿನ ಫಲಿತಾಂಶಗಳನ್ನು ನೋಡಿದರೆ ಬೆಳಗಾವಿ ಕ್ಷೇತ್ರ ಬಿಜೆಪಿ ಭದ್ರಕೋಟೆ ಆಗಿದೆ. 2014 ಹಾಗೂ 2019ರಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿಯವರು ಗೆಲುವು ಸಾಧಿಸಿದ್ದರು. ಅವರ ನಿಧನ ನಂತರ ಅವರ ಪತ್ನಿ ಮಂಗಳಾ ಸುರೇಶ್ ಅಂಗಡಿಯವರು 2021ರಲ್ಲಿ ಉಪ ಚುನಾವಣೆ ನಿಂತು ಅತೀ ಕಡಿಮೆ ಮತಗಳ ಅಂತರಗಳಿಂದ ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರನ್ನು ಸೋಲಿಸಿದ್ದರು.
ಬೆಳಗಾವಿಯಲ್ಲಿನ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಮೂರರಲ್ಲಿ ಮಾತ್ರ ಬಿಜೆಪಿ ಗೆದ್ದಿದೆ. ಹಾಗಾಗಿ ಪ್ರಸ್ತುತ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಚಸ್ಸು ಹೆಚ್ಚಾಗಿದೆ. ಮೃಣಾಲ್ ಹೆಬ್ಬಾಳ್ಕರ್ ಅವರನ್ನು ಆಸಿಫ್ ಸೇಠ್, ಮಹಾಂತೇಶ್ ಕೌಜಲಗಿ, ವಿಶ್ವಾಸ ವೈಧ್ಯ, ಅಶೋಕ್ ಮಹಾದೇವಪ್ಪ ಸೇರಿ ಎಲ್ಲ ಕಾಂಗ್ರೆಸ್ ಶಾಸಕರು ಬೆಂಬಲಿಸಿದ್ದಾರೆ. ಚುನಾವಣಾ ಪ್ರಚಾರದಲ್ಲಿಯೂ ಕಾಂಗ್ರೆಸ್ ನ ಘಟಾನುಘಟಿ ನಾಯಕರು ಮೃಣಾಲ್ ಜತೆ ನಿಂತಿದ್ದರು.
ಚುನಾವಣಾ ಕಣದಲ್ಲಿರುವವರು
ಜಗದೀಶ್ ಶೆಟ್ಟರ್ (ಬಿಜೆಪಿ), ಮೃಣಾಲ್ ರವೀಂದ್ರ ಹೆಬ್ಬಾಳ್ಕರ್ (ಕಾಂಗ್ರೆಸ್), ಅಶೋಕ್ ಅಪ್ಪಯ್ಯ ಅಪ್ಪುಗೋಳ್ (ಬಿಎಸ್ಪಿ), ಲಕ್ಷ್ಮಣ ಜಡಗನ್ನವರ್ (ಎಸ್‌ಯುಸಿಐ(ಸಿ)),ಪ್ರಜಾಕೀಯ ಮಲ್ಲಪ್ಪ ಚೌಗಲ (ಪ್ರೇಮ್) (ಯುಪಿಪಿ), ಬಸಪ್ಪ ಗುರುಸಿದ್ದಪ್ಪ ಕುಂಬಾರ್ (ಕೆ.ಆರ್.ಎಸ್)
ಹಿಂದಿನ ಚುನಾವಣೆಗಳಲ್ಲಿ ಏನಾಯ್ತು?
2019 ರ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿಯ ಅಂಗಡಿ ಸುರೇಶ ಚನ್ನಬಸಪ್ಪ ಅವರು 761991 ಮತಗಳನ್ನು ಗಳಿಸಿದರೆ ಕಾಂಗ್ರೆಸ್ ಪಕ್ಷದ ಡಾ ವಿರೂಪಾಕ್ಷ ಸಾಧುನವರ್ ಪರವಾಗಿ 370687 ಮತಗಳು ಚಲಾವಣೆಗೊಂಡವು. 2014ರ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಂಗಡಿ ಸುರೇಶ ಚನ್ನಬಸಪ್ಪ ಅವರು ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಆರ್.ಹೆಬ್ಬಾಳ್ಕರ್ ಅವರನ್ನು 75860 ಮತಗಳಿಂದ ಸೋಲಿಸಿದ್ದರು. ಅಂಗಡಿ ಸುರೇಶ ಚನ್ನಬಸಪ್ಪ 554417 ಮತಗಳನ್ನು ಪಡೆದರೆ ಲಕ್ಷ್ಮೀ ಆರ್.ಹೆಬ್ಬಾಳ್ಕರ್ 478557 ಮತಗಳನ್ನು ಪಡೆದಿದ್ದರು.
ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:48 am, Tue, 4 June 24