ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳ ಮೀಸಲಾತಿ ಕಿತ್ತುಕೊಂಡ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿತು; ಮೋದಿ ಹೊಸ ಆರೋಪ

ಮನಮೋಹನ್ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2011ರಲ್ಲಿ ಕಾಂಗ್ರೆಸ್ ಸರ್ಕಾರ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವನ್ನು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆ ಎಂದು ಘೋಷಿಸಿತು. ಇದಾದ ನಂತರ ಶೇ. 50ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಎಸ್​ಸಿ, ಎಸ್​ಟಿ ವಿದ್ಯಾರ್ಥಿಗಳ ಮೀಸಲಾತಿ ಕಿತ್ತುಕೊಂಡ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿತು; ಮೋದಿ ಹೊಸ ಆರೋಪ
ನರೇಂದ್ರ ಮೋದಿ
Follow us
|

Updated on: May 22, 2024 | 8:25 PM

ನವದೆಹಲಿ: ಇಂಡಿಯಾ (INDIA) ಒಕ್ಕೂಟ ಅಧಿಕಾರಕ್ಕೆ ಬಂದರೆ ಎಸ್​ಸಿ, ಎಸ್​ಟಿ, ಹಿಂದುಳಿದ ವರ್ಗಗಳಿಗೆ ಇರುವ ಮೀಸಲಾತಿಯನ್ನು ಕಸಿದುಕೊಂಡು ಮುಸ್ಲಿಮರಿಗೆ (Muslim Reservation) ನೀಡುತ್ತದೆ ಎಂದು ಬಿಜೆಪಿ ನಾಯಕರು ಆಗಾಗ ಆರೋಪ ಮಾಡುತ್ತಲೇ ಇದ್ದಾರೆ. ಇದೀಗ ದೆಹಲಿಯಲ್ಲಿ ಮತ್ತೊಂದು ಗಂಭೀರ ಆರೋಪ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿನ (Jamia Milia Islamia University) ಹಿಂದುಳಿದವರು, ದಲಿತರಿಗೆ ಸಿಗಬೇಕಾಗಿದ್ದ ಮೀಸಲಾತಿಯನ್ನು ಕಸಿದುಕೊಂಡ ಕಾಂಗ್ರೆಸ್ ಮುಸ್ಲಿಮರಿಗೆ ನೀಡಿದೆ ಎಂದು ಹೇಳಿದ್ದಾರೆ.

ಜಾಮಿಯಾ ಮಿಲಿಯಾ ಇಸ್ಲಾಮಿಯಾ ಯುನಿವರ್ಸಿಟಿಯ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ದೆಹಲಿಯ ಪ್ರತಿಷ್ಠಿತ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಸೆಂಟ್ರಲ್ ಯುನಿವರ್ಸಿಟಿ ಬಗ್ಗೆ ಇಡೀ ದೇಶಕ್ಕೇ ಗೊತ್ತಿದೆ. ಈ ವಿಶ್ವವಿದ್ಯಾಲಯ ಕೂಡ ಈ ಮೊದಲು ಬೇರೆ ಯುನಿವರ್ಸಿಟಿಗಳಂತೆ ಸಾಮಾನ್ಯ ವಿಶ್ವವಿದ್ಯಾಲಯವಾಗಿತ್ತು. ಇಲ್ಲಿ ಕೂಡ ದಲಿತರು, ಹಿಂದುಳಿದ ವರ್ಗದವರು, ಆದಿವಾಸಿ ಸಮುದಾಯದವರಿಗೆ ವಿದ್ಯಾಭ್ಯಾಸ ಸಿಗುತ್ತಿತ್ತು ಎಂದಿದ್ದಾರೆ.

ಇದನ್ನೂ ಓದಿ: ಇಂಡಿಯಾ ಒಕ್ಕೂಟ ಮಹಿಳಾ ಮೀಸಲಾತಿಯನ್ನು ವಿರೋಧಿಸಿದ್ದವು; ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಆದರೆ, ಮನಮೋಹನ್ ಸಿಂಗ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2011ರಲ್ಲಿ ಕಾಂಗ್ರೆಸ್ ಸರ್ಕಾರ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯವನ್ನು ಅಲ್ಪಸಂಖ್ಯಾತ ಶೈಕ್ಷಣಿಕ ಸಂಸ್ಥೆ ಎಂದು ಘೋಷಿಸಿತು. ಇದಾದ ನಂತರ ಶೇ. 50ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲಾಗುತ್ತಿದೆ. 2011ಕ್ಕೂ ಮೊದಲು ಎಲ್ಲ ಎಸ್​ಸಿ, ಎಸ್​ಟಿ, ಓಬಿಸಿಯವರಿಗೆ ಕೂಡ ಮೀಸಲಾತಿ ಸಿಗುತ್ತಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಕೂಡ ಧರ್ಮದ ಆಧಾರದಲ್ಲಿ ಮೀಸಲಾತಿ ನೀಡುವ ಸಂಪ್ರದಾಯವನ್ನು ಕಾಂಗ್ರೆಸ್ ಹುಟ್ಟುಹಾಕಿತು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಇದಕ್ಕೂ ಮೊದಲು ಕೂಡ ಅನೇಕ ಚುನಾವಣಾ ರ್ಯಾಲಿಗಳಲ್ಲಿ ಕಾಂಗ್ರೆಸ್ ಎಸ್​ಸಿ, ಎಸ್​ಟಿ, ಓಬಿಸಿಯ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಪ್ಲಾನ್ ಮಾಡಿದೆ ಎಂದು ನರೇಂದ್ರ ಮೋದಿ ಆರೋಪಿಸಿದ್ದರು. ಇಂದು ಉತ್ತರ ಪ್ರದೇಶದಲ್ಲಿ ಮಾತನಾಡಿದ್ದ ಮೋದಿ, ನಾನು ಜೀವಂತವಾಗಿರುವವರೆಗೂ ಬಡ ಹಿಂದುಳಿದ ಮತ್ತು ಬುಡಕಟ್ಟು ಜನರ ಮೀಸಲಾತಿಯನ್ನು ಕಾಂಗ್ರೆಸ್ ಅಥವಾ ಇಂಡಿಯಾ ಬಣದವರಿಗೆ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಾರಾಂತ್ಯದಲ್ಲಿ ಬಿಹಾರಕ್ಕೆ ಮತ್ತೆ ಪ್ರಧಾನಿ ಮೋದಿ ಭೇಟಿ; 3 ಚುನಾವಣಾ ರ್ಯಾಲಿಗಳಲ್ಲಿ ಭಾಷಣ

ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, “ಇಡೀ ದೇಶ ಇನ್ನೊಮ್ಮೆ ಮೋದಿ ಸರ್ಕಾರ್ ಎಂಬ ಮಾತನ್ನು ಹೇಳುತ್ತಿದೆ. ಇಂಡಿಯಾ ಮೈತ್ರಿಯು ಭಯಾನಕ ಕಾಯಿಲೆಗಳನ್ನು ಹೊಂದಿದೆ. ಮೈತ್ರಿಯು ಅತ್ಯಂತ ಕೋಮುವಾದ, ಅತ್ಯಂತ ಜಾತಿವಾದಿ ಮತ್ತು ಅತ್ಯಂತ ಸ್ವಜನಪಕ್ಷಪಾತವಾಗಿದೆ. ಇದು ಕ್ಯಾನ್ಸರ್​ಗಿಂತ ಹೆಚ್ಚು ವಿನಾಶಕಾರಿಯಾಗಿದೆ. ಮತ ಜಿಹಾದ್​ಗಾಗಿ ಸಮಾಜವನ್ನು ವಿಭಜಿಸುವುದು ಅವರ ಗುರಿಯಾಗಿದೆ. ಅವರು ವೋಟ್ ಜಿಹಾದ್ ಮಾಡುತ್ತಿದ್ದಾರೆ. ನಿಮ್ಮ ಆಸ್ತಿಯಲ್ಲಿ ಮುಸ್ಲಿಮರಿಗೆ ಮೊದಲ ಹಕ್ಕು ಎಂದು ಕಾಂಗ್ರೆಸ್ ಹೇಳುತ್ತದೆ. ಅವರು ನಿಮ್ಮ ಸಂಪಾದನೆಯನ್ನು ಕಸಿದುಕೊಂಡು ಮುಸ್ಲಿಮರಿಗೆ ಹಂಚಲು ಬಯಸುತ್ತಾರೆ. ಇಡೀ ದೇಶದಲ್ಲಿರುವ ಎಸ್‌ಸಿ/ಎಸ್‌ಟಿ, ದಲಿತ ಮತ್ತು ಬಡ ಹಿಂದುಳಿದವರ ಮೀಸಲಾತಿಯನ್ನು ಕಿತ್ತುಕೊಂಡು ಮತ ಜಿಹಾದ್ ಮಾಡುವವರಿಗೆ ನೀಡಲು ಕಾಂಗ್ರೆಸ್​ ಮುಂದಾಗಿದೆ. ಅವರು ಎಷ್ಟೇ ಪ್ರಯತ್ನಿಸಿದರೂ ಮೋದಿ ಬದುಕಿರುವವರೆಗೆ ಬಡವರು, ಹಿಂದುಳಿದವರು ಮತ್ತು ಬುಡಕಟ್ಟು ಜನರ ಮೀಸಲಾತಿಯನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ” ಎಂದಿದ್ದಾರೆ.

ಕಾಂಗ್ರೆಸ್ ಮೊದಲು ತಾನು ಆಳಿದ ರಾಜ್ಯಗಳಲ್ಲಿ ದಲಿತರ ಮೀಸಲಾತಿಯನ್ನು ಲೂಟಿ ಮಾಡಿತು. ಮೋದಿ ವಂಚಿತರ ಹಕ್ಕುಗಳ ಚೌಕಿದಾರ ಎಂದು ನಾನು ಖಾತರಿಪಡಿಸುತ್ತೇನೆ. ಕರ್ನಾಟಕ ಮಾದರಿಯನ್ನು ದೇಶದಲ್ಲಿ ಮೀಸಲಾತಿಯನ್ನು ಜಾರಿಗೆ ತರಲು ನಾನು ಎಂದಿಗೂ ಬಿಡುವುದಿಲ್ಲ ಎಂದು ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ