ಕರ್ನಾಟಕದಲ್ಲಿ ಲೋಕಸಭಾ ಚುನಾವನೆ ಕಾವು ರಂಗೇರಿದೆ. ಈಗಾಗಲೇ ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಮುಕ್ತಾಯವಾಗಿದ್ದು, ಮೇ 7ರಂದು ರಾಜ್ಯದ ಉತ್ತರ ಕರ್ನಾಟಕದ ಭಾಗದ 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ನಡೆಯಲಿದೆ. ಜಿದ್ದಿ ಜಿದ್ದು ಎಂಬಂತೆ ಪಟ್ಟು ಬಿದ್ದಿರುವ ಕೇಸರಿ ಪಡೆಗೆ ಕರ್ನಾಟಕವೇ ಮೇನ್ ಟಾರ್ಗೆಟ್ ಆಗಿದೆ. ಮೊದಲ ಹಂತದ ಮತದಾನಕ್ಕೂ ಮುನ್ನ ಮೂರ್ನಾಲ್ಕು ಬಾರಿ ಆಗಮಿಸಿದ್ದ ಪ್ರಧಾನಿ ಮೋದಿ, ಇದೀಗ ಎರಡನೇ ಹಂತದ ಮತಶಿಕಾರಿಗೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದು, ಉತ್ತರ ಕರ್ನಾಟಕದಾದ್ಯಂತ ಭರ್ಜರಿ ಮತಬೇಟೆಗಿಳಿದಿದ್ದಾರೆ. ಇಂದು ಮತ್ತು ನಾಳೆ (ಏಪ್ರಿಲ್ 28, 29) ರಾಜ್ಯದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಒಟ್ಟು ಐದು ಕ್ಷೇತ್ರಗಳಲ್ಲಿನ ಸಮಾವೇಶಗಳಲ್ಲಿ ಭಾಗಿಯಾಗಲಿದ್ದಾರೆ. ಒಂದು ಒಂದೇ ದಿನ ನಾಲ್ಕು ಕ್ಷೇತ್ರಗಳಲ್ಲಿ ಮೋದಿ ಅಬ್ಬರದ ಪ್ರಚಾರ ಮಾಡಲಿದ್ದಾರೆ. ಬೆಳಗಾವಿ, ದಾವಣಗೆರೆ, ಉತ್ತರ ಕನ್ನಡ ಜಿಲ್ಲೆಯ ಶಿರಸಿ, ವಿಜಯನಗರ ಹೊಸಪೇಟೆಯಲ್ಲಿ ಜಿಲ್ಲೆಯ ಅಭ್ಯರ್ಥಿಗಳ ಪರ ಅವರು ಮತಯಾಚಿಸಲಿದ್ದಾರೆ. ಮೊದಲಿಗೆ ಮೋದಿ ಬೆಳಗಾವಿಯಿಂದಲೇ ಪ್ರಚಾರ ಆರಂಭಿಸಿದ್ದಾರೆ.
ಮೋದಿ ಇರುವುದು ಸ್ವಂತಕ್ಕಾಗಿ ಅಲ್ಲ, ನಿಮಗಾಗಿ. ಬಳ್ಳಾರಿ ಜನ ಬಿಜೆಪಿಯ ವಿಶ್ವಾಸವನ್ನೂ ನೋಡಿದ್ದಾರೆ ವಿಕಾಸವನ್ನೂ ನೋಡಿದ್ದಾರೆ. ಅದೇ ರೀತಿಯಾಗಿ ಕಾಂಗ್ರೆಸ್ನ ವಿಶ್ವಾಸ ಘಾತವನ್ನೂ ನೋಡಿದ್ದಾರೆ. ಸುಷ್ಮಾ ಸ್ವರಾಜ್ ಗೆದ್ದಾಗ ಇಲ್ಲಿ ಸಾಕಷ್ಟು ಕೆಲಸ ಮಾಡಿದ್ದರು. ಕಾಂಗ್ರೆಸ್ನ ಮೇಡಂ ಇಲ್ಲಿಂದಲೇ ಗೆದ್ದು ವಿಶ್ವಾಸ ಘಾತ ಮಾಡಿದರು. ಸುಳ್ಳು ಹೇಳುವುದು ಮೋಸ ಮಾಡುವುದು ಕಾಂಗ್ರೆಸ್ನ ಟ್ರ್ಯಾಕ್ ರೆಕಾರ್ಡ್. ಬಡತನ ನಿವಾರಣೆ ಮಾಡುತ್ತೇವೆ ಎಂದ ಕಾಂಗ್ರೆಸ್ ಇದುವರೆಗೆ ಏನು ಮಾಡಿತ್ತು? ನಿಮ್ಮ ಒಂದೊಂದು ಓಟು ಕಾಂಗ್ರೆಸ್ನ ತಪ್ಪುಗಳಿಗೆ ಪಾಠ ಕಲಿಸಬೇಕು. ನೀವು ಒತ್ತುವ ಕಮಲದ ಬಟನ್ ನೇರವಾಗಿ ಮೋದಿಗೆ ಹೋಗುತ್ತದೆ. ಬಲಿಷ್ಟ ಮೋದಿ ಬಲಿಷ್ಟ ವಿಕಸಿತ ಸರ್ಕಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ನಿಮ್ಮ ಸಂಪತ್ತಿನ ಮೇಲೂ ಕೂಡ ಕಾಂಗ್ರೆಸ್ ಕಣ್ಣು ಹಾಕಿದೆ. ಇದು ಬಹುದೊಡ್ಡ ಎಚ್ಚರಿಕೆಯ ಗಂಟೆ. ದೇಶದ ಜನರ ಆಸ್ತಿ ಮೇಲೆ ಕಾಂಗ್ರೆಸ್ ಕಣ್ಣು ಹಾಕಿ ಎಕ್ಸರೇ ಮಾಡಲು ಹೊರಟಿದೆ. ಕಾಂಗ್ರೆಸ್‌ನವರು ಇದಕ್ಕೆ ಕಾನೂನೇ ತರಲು ಹೊರಟಿದ್ದಾರೆ. ನಮ್ಮ ಮನೆಯವರು ಕಷ್ಟಪಟ್ಟು ದುಡಿದು ಅಲ್ಪಸ್ವಲ್ಪ ಉಳಿಸಿದ ಹಣಕ್ಕೂ ಕೂಡ ಕಾಂಗ್ರೆಸ್ ಕಣ್ಣು ಹಾಕಿದೆ. ನಿಮ್ಮ ನಿಮ್ಮ ಮಕ್ಕಳಿಗೆ ಕೂಡಿಟ್ಟ ಹಣ ಸರ್ಕಾರ ಕೊಳ್ಳೆ ಹೊಡೆಯಲು ಬಿಡಬೇಕ? ನಿಮ್ಮ ರಕ್ಷಣೆ ಹಾಗಿದ್ದರೆ ಯಾರು ಮಾಡಲು ಸಾಧ್ಯ? ನಾನು ನಿಮಗೆ ಗ್ಯಾರಂಟಿ ನೀಡ್ತೇನೆ ನಿಮ್ಮನ್ನು ಮೋದಿ ಕಾಪಾಡುತ್ತಾನೆ ಎಂದಿದ್ದಾರೆ.
ಕಾಂಗ್ರೆಸ್ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯೇ ಇಲ್ಲವಾಗಿದೆ. ಹುಬ್ಬಳ್ಳಿಯಲ್ಲಿ ಯುವತಿಯನ್ನು ಚಾಕುವಿನಿಂದು ಚುಚ್ಚಿ ಕೊಲ್ಲಲಾಯಿತು. ಆದರೆ ಕಾಂಗ್ರೆಸ್ ಪಕ್ಷ ಈ ಘಟನೆಗೆ ಖಂಡನೆಯೇ ವ್ಯಕ್ತಪಡಿಸಿಲ್ಲ. ನೋವಿನಲ್ಲಿ ಇದ್ದ ಕುಟುಂಬಕ್ಕೆ ಸಾಂತ್ವನ ಕೂಡ ಹೇಳಲಿಲ್ಲ. ಕಾಂಗ್ರೆಸ್ ಪಕ್ಷದ ನೀತಿಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದಲ್ಲಿ ವಿಕಾಸದ ಬೆಳೆ ಬೆಳೆಯಲು ಬಿಜೆಪಿ ಪ್ರಯತ್ನ ಮಾಡ್ತಿದೆ. ವಿಕಾಸದ ಬೆಳೆಯನ್ನ ನಾಶ ಮಾಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಅಪರಾಧ, ಭಯೋತ್ಪಾದನೆಯನ್ನ ವೋಟ್ ಬ್ಯಾಂಕ್ ರೀತಿ ನೋಡುತ್ತಿದೆ. ಪಿಎಫ್ಐ ಎಷ್ಟು ಖತರ್ನಾಕ್ ಎಂಬುದನ್ನು ಸಣ್ಣ ಮಕ್ಕಳಿಗೂ ಗೊತ್ತಿದೆ. ಪಿಎಫ್ಐ ಸಂಘಟನೆಯನ್ನ ಬುಡಸಮೇತ ಕಿತ್ತಹಾಕುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಮ ಪ್ರತಿಷ್ಟಾನೆಯ ಆಮಂತ್ರಣ ತಿರಸ್ಕಾರ ಮಾಡಿದವರಿಗೆ ನೀವೂ ತಿರಸ್ಕಾರ ಮಾಡಬೇಕೋ ಬೇಡವೋ ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡಿದ್ದಾರೆ. ಇದು ರಾಮನಿಗೆ ಮಾಡಿದ ಅಪಮಾನ. ಇದನ್ನು ಹನುಮಾನ್ ಜನಿಸಿದ ಭೂಮಿ ಕ್ಷಮಿಸಲು ಸಾಧ್ಯ ಇದೆಯಾ? ಇಷ್ಡು ದೊಡ್ಡ ದೇಶ ಒಬ್ಬ ಪುಕ್ಕಲು ರಾಜಕಾರಣಿ ನಡೆಸಲು ಸಾಧ್ಯ ಇದೆಯಾ ಎಂದು ಕೇಳಿದ್ದಾರೆ.
ಕಾಂಗ್ರೆಸ್ ಅದನ್ನು ನಾಶ ಮಾಡುವ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ತಾನೂ ಕೆಲಸ ಮಾಡುವುದಿಲ್ಲ, ಬಿಜೆಪಿ ಮಾಡುವ ಕೆಲಸಕ್ಕೂ ಅಡ್ಡಿ ಪಡಿಸುತ್ತದೆ. ಬಿಜೆಪಿ ಸರ್ಕಾರ ಇದ್ದಾಗ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 4000 ಹೆಚ್ಚಿನ ಹಣ ಸಿಗುತ್ತಿತ್ತು ಆದರೆ ಕಾಂಗ್ರೆಸ್ ಅದನ್ನೂ ಕೂಡ ತಡೆ ಹಿಡಿದಿದೆ ಎಂದು ಕಿಡಿಕಾರಿದ್ದಾರೆ.
ಕೆಲವು ದೇಶ ಹಾಗೂ ಸಂಸ್ಥೆಗಳಿಗೆ ಇದು ಇಷ್ಟ ಇಲ್ಲ. ಕೆಲವರು ಭಾರತ, ಸರ್ಕಾರ ದುರ್ಬಲ ಆಗಬೇಕೆಂದು ಬಯಸುತ್ತಿದ್ದಾರೆ. ಸ್ವಂತ ಲಾಭ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಭ್ರಷ್ಟಾಚಾರದ ಭಾಗಿ ಕಾಂಗ್ರೆಸ್ ಪಕ್ಷಕ್ಕೂ ಕೂಡ ಇದೇ ಬೇಕಿದೆ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.
ವಿಜಯನಗರ ಸಾಮ್ರಾಜ್ಯದ ಸಮೃದ್ಧಿ ನೆನಪಿದೆ. ವಿಕಸಿತ ಭಾರತ ವಿಕಸಿತ ಕರ್ನಾಟಕದ ಜೊತೆ ನೀವು ನಿಂತಿದ್ದೀರಿ. ನಾನು ಹೋಗುವ ಕಡೆ ಜನ ಆಶೀರ್ವಾದ ಮಾಡುತ್ತಿದ್ದಾರೆ. ಅದಕ್ಕೆ ಜನರು ಮತ್ತೆ ಮೋದಿ ಸರ್ಕಾರ ಬರಲಿ ಅಂತಾ ಹೇಳುತ್ತಿದ್ದಾರೆ. ದೇಶ ಬಹಳ ವೇಗವಾಗಿ ಮುಂದೆ ಸಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಹೊಸಪೇಟೆಯಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಬಳ್ಳಾರಿ, ಕೊಪ್ಪಳದ ಸಹೋದರ, ಸಹೋದರಿಯರಿಗೆ ನಮಸ್ಕಾರ. ಬಳ್ಳಾರಿಯ ವಿರೂಪಾಕ್ಷೇಶ್ವರ, ವಿಜಯ ವಿಠ್ಠಲನಿಗೆ ನನ್ನ ಪ್ರಣಾಮವನ್ನು ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆ ಹೊಸಪೇಟೆಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಹೆಸರಿನಲ್ಲಿ ಮೋದಿ ಪ್ರಚಾರ ನಡೆಸಿದ್ದು, ಮಹಿಳಾ ಫಲಾನುಭವಿಗಳಿಂದ ಪ್ರಧಾನಿ ಮೋದಿ ಸನ್ಮಾನಿಸಿ ಗೌರವಿಸಲಾಯಿತು. ಸಮಾವೇಶದ ವೇದಿಕೆಯಿಂದ ಕಾರ್ಯಕರ್ತರತ್ತ ಕೈಬೀಸಿದ ಮೋದಿ.
ರಾಹುಲ್ ಗಾಂಧಿಯನ್ನು ಮುಂದೆ ಚೊಂಬು ಗಾಂಧಿ ಅಂತ ಕರಿಬೇಕು. ಕಾಂಗ್ರೆಸ್ ಸ್ಥಿತಿ ಯಾವ ಮಟ್ಟಕ್ಕೆ ಬಂದು ತಲುಪಿದೆ ಯೋಚನೆ ಮಾಡಿ. ರಾಹುಲ್ ಬಳ್ಳಾರಿಗೆ ಬರುವುದಕ್ಕೆ ಕಾರ್ಯಕ್ರಮ ಫಿಕ್ಸ್ ಮಾಡಿದ್ದರು. ಆದರೆ ಶ್ರೀರಾಮುಲು ಮೋದಿ ಜೊತೆಗೆ ಪ್ರಮಾಣವಚನ ಸ್ವೀಕರಿಸಬೇಕು ಅಂತ ಜನ ಪ್ರಮಾಣ ಮಾಡಿದ್ದಾರೆ ಎಂದು ಶ್ರೀರಾಮಲು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಹಾಡ ಹಗಲೇ ಕಾಲೇಜು ಕ್ಯಾಂಪಸ್ನಲ್ಲಿ ಹೆಣ್ಣು ಮಗಳ ಹತ್ಯೆ ಆಯಿತು. ಇದರಲ್ಲೂ ಕಾಂಗ್ರೆಸ್ ತನ್ನ ವೋಟ್ ಬ್ಯಾಂಕ್ ನೋಡಿತು. ನೇಹಾ ಹತ್ಯೆ ಸಾಮಾನ್ಯ ಘಟನೆ ಅಲ್ಲ. ಬೆಳಗ್ಗೆ ಮನೆಯಿಂದ ಹೋದವರು ವಾಪಸ್ ಬರುವ ಗ್ಯಾರಂಟಿ ಇಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ದಾವಣಗೆರೆಯನ್ನು ನಮ್ಮ ಸರ್ಕಾರ ಸ್ಮಾರ್ಟ್ ಸಿಟಿಯನ್ನಾಗಿ ಘೋಷಿಸಿದೆ. ದಾವಣಗೆರೆ-ಹರಿಹರ ರೈಲ್ವೇ ಮಾರ್ಗ ಮೇಲ್ದರ್ಜೆಗೆ ಏರಿಸಲ್ಪಡುತ್ತಿದೆ. ದೇಶದ ಜನರ ಸುರಕ್ಷತೆ ನನ್ನ ಮೊದಲ ಆದ್ಯತೆ. ನಿಮ್ಮ ಒಂದೊಂದು ಮತ ಮೋದಿ ಸಂಕಲ್ಪವನ್ನು ಬಲಗೊಳಿಸುತ್ತದೆ. ಭಾರತವನ್ನು ಬಲಶಾಲಿಯನ್ನಾಗಿಸುತ್ತದೆ. ದೇಶದ ಅಭಿವೃದ್ಧಿ ಜೊತೆಗೆ ರಾಜ್ಯವನ್ನೂ ಉನ್ನತಿಗೆ ಕೊಂಡೊಯ್ಯಬೇಕು ಎಂದಿದ್ದಾರೆ.
ಕರ್ನಾಟಕ ಅಭಿವೃದ್ಧಿಗೆ ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ಶ್ರಮಿಸಿದ್ದಾರೆ. ಆದರೆ ಅಭಿವೃದ್ಧಿ ಕಾಮಗಾರಿಗಳಿಗೆ ಕಾಂಗ್ರೆಸ್ ಅಡ್ಡ ಹಾಕುತ್ತಿದೆ. ರಾಜ್ಯದಲ್ಲಿ ವೋಟ್ ಬ್ಯಾಂಕ್ ಗೋಸ್ಕರ್ ಎನ್ಇಪಿ ರದ್ದು ಮಾಡಲಾಗಿದೆ. ಮಕ್ಕಳ ಭವಿಷ್ಯವನ್ನು ಕಾಂಗ್ರೆಸ್ ಛಿದ್ರಗೊಳಿಸಿದೆ. ರಾಜಕೀಯ ಮಾಡಿ, ಆದರೆ ಜನರ ಭವಿಷ್ಯದೊಂದಿಗೆ ಆಟವಾಡಬೇಡಿ. ದೇಶದಲ್ಲಿ ಕಾಂಗ್ರೆಸ್ ಕೋಟ್ಯಾಂತರ ರೂ. ಅವ್ಯವಹಾರ ನಡೆಸಿದೆ. ಬಡವರ ಯೋಜನೆಗಳೆಂದರೆ ಕಾಂಗ್ರೆಸ್ಗೆ ಹಣ ಗಳಿಸುವ ಯೋಜನೆಗಳು ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಕಾನೂನು ಸುವ್ಯಸ್ಥೆ ಸಂಪೂರ್ಣ ಹದಗೆಟ್ಟಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನತೆಯ ಸುರಕ್ಷತೆ ಕ್ಷೀಣಿಸುತ್ತಿದೆ. ಮನೆಯಿಂದ ಹೊರಗೆ ಹೋದವರು ರಾತ್ರಿ ಸುರಕ್ಷಿತವಾಗಿ ಮನೆಗೆ ಮರಳುತ್ತಿಲ್ಲ ಎಂದು ಮೋದಿ ಕಾಂಗ್ರೆಸ್ ಸರ್ಕಾರ ವಿರುದ್ಧ ವಾಗ್ಧಾಳಿ ಮಾಡಿದ್ದಾರೆ.
ಚುನಾವಣೆ ಬಂದರೆ ಸಾಕು ಕಾಂಗ್ರೆಸ್ ಇವಿಎಂ ಮೇಲೆ ಹೇಳುತ್ತದೆ. ಇವಿಎಂ ವಿಚಾರಕ್ಕೆ ಕಾಂಗ್ರೆಸ್ ವಿರೋಧ ಮಾಡಿತ್ತು. ಮೋದಿ ಗೆದ್ದರೂ ಕಾಂಗ್ರೆಸ್ ಇವಿಎಂ ಮೇಲೆ ಹೇಳುತ್ತಿದ್ದರು. ಏನು ಆರೋಪ ಮಾಡಬೇಕೆಂಬುದೇ ಕಾಂಗ್ರೆಸ್ನ ಚಿಂತೆ ಆಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಯಡಿಯೂರಪ್ಪ, ಬೊಮ್ಮಾಯಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಕರ್ನಾಟಕದಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾಂಗ್ರೆಸ್ ಹಾಳು ಮಾಡುತ್ತಿದೆ. ದೇಶದ ಜನರಿಗಾಗಿ ದಿನದ 24 ಗಂಟೆ ಕಾಲ ಕೆಲಸ ಮಾಡುತ್ತಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನನ್ನ ಪೂರ್ವಜನ್ಮದ ಪುಣ್ಯನೋ ಏನೋ ಜನರ ಆಶೀರ್ವಾದ ಸಿಕ್ಕಿದೆ. ಆಶೀರ್ವಾದ ಮಾಡಿದ ದೇಶದ ಜನರಿಗೆ ನನ್ನ ನಮಸ್ಕಾರ ಸಲ್ಲಿಸುತ್ತೇನೆ ಎಂದಿದ್ದಾರೆ.
ದಾವಣಗೆರೆಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದು, ಏ.26ರಂದು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ. ಮತದಾನದ ಬಳಿಕ ಕಾಂಗ್ರೆಸ್‌ನವರು ವಿಚಲಿತರಾಗಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಪ್ರಧಾನಿ ಮೋದಿ 1 ದಿನ ರಜೆ ತೆಗೆದುಕೊಳ್ಳದೆ ದೇಶಕ್ಕಾಗಿ ಶ್ರಮಿಸುತ್ತಿದ್ದಾರೆ ಎಂದು ಬಿಜೆಪಿ ಬೃಹತ್ ಸಮಾವೇಶದಲ್ಲಿ ಮಾಜಿ ಸಿಎಂ ಬೊಮ್ಮಾಯಿ ಭಾಷಣ ಮಾಡಿದರು. ಯುಪಿಎ ಸರ್ಕಾರದಲ್ಲಿ ಭಾರತ ಭಯೋತ್ಪಾದಕರ ದೇಶವಾಗಿತ್ತು. ಮೋದಿ ಪ್ರಧಾನಿಯಾದ ಬಳಿಕ ಭಯೋತ್ಪಾದನೆ ಮಟ್ಟಹಾಕಿದ್ದಾರೆ. ಬರ ಪರಿಹಾರ ಹಣಕ್ಕಾಗಿ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ನಾಚಿಕೆ ಆಗಬೇಕೆಂದು ಬೊಮ್ಮಾಯಿ ಕಿಡಿ ಕಾರಿದ್ದಾರೆ.
ದಾವಣಗೆರೆಯಲ್ಲಿ ವಿಕಸಿತ ಭಾರತಕ್ಕೆ ವಿಜಯ ಸಂಕಲ್ಪ ಸಮಾವೇಶದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಮಾಜಿ ಸಿಎಂಗಳಾದ B.S.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್, 3 ಜಿಲ್ಲೆಗಳ ಬಿಜೆಪಿ ಹಾಲಿ, ಮಾಜಿ ಶಾಸಕರಿಗೆ ವೇದಿಕೆ ಮೇಲೆ ಅವಕಾಶ ನೀಡಲಾಗಿದೆ.
ಸಮಾವೇಶದಲ್ಲಿ ಮಂಡ್ಯ ಸಂಸದೆ ಸುಮಲತಾ ಮಾತನಾಡಿ, ಅಂಬರೀಶ್ ಅವರಿಗೆ ಇಷ್ಟದ ಊಟ ಅಂದರೆ ದಾವಣಗೆರೆ ಬೆಣ್ಣೆ ದೋಸೆ. ನಾನು ಮಂಡ್ಯದಲ್ಲಿ ಆಯ್ಕೆಯಾಗಿ ದೆಹಲಿಗೆ ಹೋದಾಗ ಮೊದಲು ಆಶೀರ್ವಾದ ಮಾಡಿದವರೇ ಜಿ.ಎಂ. ಸಿದ್ದೇಶ್ವರ್ ಅವರು. ಪ್ರಜ್ಞಾವಂತ ಮತದಾರರಾಗಿ ತುಂಬಾ ಆಳವಾಗಿ ಯೋಚಿಸಿ ಮತ ನೀಡಬೇಕಾಗಿದೆ. ಯಾರು ಏನು ಹೇಳುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂದು ಯೋಚಿಸಬೇಕು. ಕಾಂಗ್ರೆಸ್ನ ಗ್ಯಾರಂಟಿಗಳು ಮೇಲ್ನೋಟಕ್ಕೆ ಸಿಹಿಯಾಗಿ ಕಾಣಬಹುದು ಆದರೆ ಅದರಿಂದ ಈಗ ಮರುಳಾದರೆ ನಾವು ಶಾಶ್ವತ ವಾಗಿ ಮುಂದೆ ಕಷ್ಟಪಡಬೇಕಾಗುತ್ತದೆ ಎಂದಿದ್ದಾರೆ.
ದಾವಣಗೆರೆ ನಗರದ ಜಿಎಂಐಟಿ ಹೆಲಿಪ್ಯಾಡ್ಗೆ ಪ್ರಧಾನಿ ಮೋದಿ ಆಗಮಿಸಿದ್ದಾರೆ. ಸಮಾವೇಶ ನಡೆಯುವ ಹೈಸ್ಕೂಲ್ ಮೈದಾನಕ್ಕೆ ಜಿಎಂಐಟಿ ಹೆಲಿಪ್ಯಾಡ್‌ನಿಂದ ರಸ್ತೆ ಮೂಲಕ ವೇದಿಕೆಯತ್ತ ಪ್ರಯಾಣ.
ದಾವಣಗೆರೆಯಲ್ಲಿ ಕೆಲ ಹೊತ್ತಿನಲ್ಲೇ ಪ್ರಧಾನಿ ಮೋದಿ ಸಮಾವೇಶ ಆರಂಭಗೊಳ್ಳಲಿದೆ. ಆದರೆ ರಾಜ್ಯಕ್ಕೆ ಬರ ಪರಿಹಾರ, ತೆರಿಗೆ ಹಂಚಿಕೆ ತಾರತಮ್ಯ ವಿರೋಧಿಸಿ ಸಮಾವೇಶ ಸ್ಥಳ ಹೈಸ್ಕೂಲ್ ಮೈದಾನದ ಹೊರಭಾಗದಲ್ಲಿ ಪ್ರತಿಭಟನೆ ಮಾಡಲಾಗಿದ್ದು, ಧರಣಿನಿರತ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದೆ.
ವಿಕಸಿತ ಕರ್ನಾಟಕ, ವಿಕಸಿತ ಭಾರತಕ್ಕಾಗಿ ಮೇ 7 ರಂದು ಉತ್ತರ ಕನ್ನಡ ಮತ್ತು ಧಾರವಾಡದಲ್ಲಿ ಕಮಲ ಅರಳಿಸಿ. ನಿಮ್ಮ ಮತ ನೇರವಾಗಿ ಮೋದಿಯವರಿಗೆ ಹೋಗುತ್ತದೆ ಎಂದು ಪ್ರಧಾನಿ ಮೋದಿ ಮತಯಾಚಿಸಿದರು.
ಮೊದಲು ನಮ್ಮ ಸೈನಿಕರನ್ನು ಹತ್ಯೆ ಮಾಡಿ ಹೋಗುತ್ತಿದ್ದರು. ಆದರೆ ಈಗ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೇವೆ. ಮನೆಯೊಳಗೆ ನುಗ್ಗಿ ಹೊಡೆಯುತ್ತೇವೆ. ನಮ್ಮ ದೇಶದ ರಾಜ-ಮಹರಾಜರನ್ನು ಅಪಮಾನ ಮಾಡುತ್ತಿದ್ದಾರೆ. ಆದರೆ ನಮ್ಮ ರಾಜ-ಮಹಾರಾಜರು ದೇಶಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅವರ ಬಾಯಿಂದ ನವಾಬ್, ಸುಲ್ತಾನರ ವಿರುದ್ಧ ಮಾತನಾಡಿರುವುದನ್ನು ಕೇಳಿದ್ದೀರಾ? ಅವರು ಆಡುವುದಿಲ್ಲ, ಏಕೆಂದರೆ ವೋಟ್ ಬ್ಯಾಂಕ್. ಕನ್ನಡ ಭಾಷೆಗೆ ಕದಂಬರ ಕೊಡುಗೆ ಸಾಕಷ್ಟು ಕೊಡುಗೆ ಇದೆ ಎಂದು ಮೋದಿ ಹೇಳಿದರು.
ಕೆಲವು ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನೇಹಾ ಕೋಲೆಯಾಯ್ತು. ಇದರಿಂದ ದೇಶದ ಜನರು ಚಿಂತಾಕ್ರಾಂತರಾಗಿದ್ದಾರೆ. ಇದಕ್ಕೆ ಕಾರಣ ಕಾಂಗ್ರೆಸ್ ಸರ್ಕಾರ. ಕಾಲೇಜು ಆವರಣದಲ್ಲಿ ಹಾಡುಹಗಲೇ ಕೊಲೆ ನಡೆಯುವುದ ಅಂದರೆ ಏನರ್ಥ. ಅವರಿಗೆ ಗೊತ್ತು ಕಾಂಗ್ರೆಸ್ ಪಕ್ಷ ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದು. 2014ರ ಮೊದಲು ನೀವು ಪ್ರತಿದಿನ ದೇಶದಲ್ಲಿ ಬಾಂಬ್ ಸ್ಫೋಟದ ಸುದ್ದಿ ಕೇಳುತಿದ್ರಿ. ಆದರೆ 2014ರ ನಂತರ ಬಾಂಬ್ ಸ್ಫೋಟದ ಸುದ್ದಿ ಕೇಳಿದ್ದೀರಾ? ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಹೈಟೆಕ್ ಸಿಟಿಯಾದ ಬೆಂಗಳೂರಿನಲ್ಲಿ ಬಾಂಬ್ ಸ್ಫೋಟವಾಯಿತು. ಇದನ್ನು ಸಿಲೆಂಡರ್ ಸ್ಫೋಟವೆಂದು ಕಾಂಗ್ರೆಸ್ ಹೇಳಿತು ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.
ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ರಾಮ ಮಂದಿರ ನಿರ್ಮಾಣವನ್ನು ತಡೆಯಲು ಯತ್ನಿಸಿದವು. ರಾಮ ಮಂದಿರ ಟ್ರಸ್ಟ್ ಶ್ರೀರಾಮ ಪ್ರಾಣ ಪ್ರತಿಷ್ಟಾಪನೆ ಕಾರ್ಯಕ್ರಮಕ್ಕೆ ವಿಪಕ್ಷಗಳಿಗೆ ಆಹ್ವಾನಿಸಿತ್ತು. ಆದರೆ ವಿಪಕ್ಷಗಳು ಆಮಂತ್ರಣವನ್ನು ತಿರಸ್ಕರಿಸಿದವು. ಪ್ರಾಣ ಪ್ರತಿಷ್ಟಾಪನೆಗೆ ಆಗಮಿಸದೆ ಶ್ರೀರಾಮನಿಗೆ ಅಪಮಾನ ಮಾಡಿವೆ ಎಂದು ಪ್ರಧಾನಿ ಮೋದಿ ಹೇಳಿದರು.
ನಮ್ಮ ಪೂರ್ವಜರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ 500 ವರ್ಷ ಹೋರಾಡಿದರು. ಲಕ್ಷಾಂತರ ಜನರು ಪ್ರಾಣ ಕಳೆದುಕೊಂಡರು. ದೇಶ ಸ್ವಾತಂತ್ರ್ಯಗೊಂಡ ಮರು ದಿನವೇ ಮಂದಿರ ನಿರ್ಮಾಣದ ತೀರ್ಮಾನ ಕೈಗೊಳ್ಳಬೇಕಾಗಿತ್ತು. ಆದರೆ ಅವರು ತೆಗೆದುಕೊಳ್ಳಲಿಲ್ಲ. ಆದರೆ 75 ವರ್ಷಗಳ ಬಳಿಕ ನಿರ್ಮಾಣವಾಗಿದೆ. ಇದೀಗ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮಂದಿರ ನಿರ್ಮಾಣವಾಗಿದೆ. ಈ ಪುಣ್ಯದ ಹಕ್ಕುದಾರರು ನೀವಾಗಿದ್ದೀರಿ. ನಿಮ್ಮ ಒಂದು ಮತದಿಂದ ಇದು ಕಾರ್ಯ ಸಿದ್ದಿಯಾಗಿದೆ. ದೇಶದ ರಾಮ ಭಕ್ತರ ಹಣದಿಂದ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ನೀವು ನನಗೆ ಆಶಿರ್ವಾದ ಮಾಡುತ್ತೀರಿ ಎಂದು ನನಗೆ ಭರವಸೆ ಇದೆ. ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಹ್ಲಾದ್ ಜೋಶಿ ಅವರಿಗೆ ನೀವು ದಾಖಲೆ ಮತದಿದಂದ ಗೆಲ್ಲಿಸಿ. ರಾಜ್ಯದಲ್ಲೆಡೆ ಮೋದಿ ಮೋದಿ ಎಂಬ ಒಂದೇ ಶಬ್ಧ ಕೇಳುತ್ತಿದೆ. ಮನೆ, ವಿದ್ಯುತ್ದಂತಹ ಯೋಜನೆಗಳ ಫಲವನ್ನು ಉತ್ತರ ಕನ್ನಡ ಜಿಲ್ಲೆ ಪಡೆದಿದೆ. ಧಾರವಾಡದಲ್ಲಿ ಐಐಟಿ ನಿರ್ಮಾಣ, ರೈಲು ನಿಲ್ದಾಣವನ್ನು ಉನ್ನತ ದರ್ಜೆಗೆ ಏರಿಸಿದ್ದೇವೆ. ಇಡೀ ಜಗತ್ತಿನಲ್ಲಿ ಭಾರತದ ಜಯ ಜಯಕಾರ ಮೊಳಗುತ್ತಿದೆ. ಇದೆಲ್ಲ ಕಾರಣವಾಗಿದ್ದು ನಿಮ್ಮ ಒಂದು ಮತದಿಂದ ಎಂದು ಹೇಳಿದರು.
ನಾನು ಗುಜುರಾತ ಮುಖ್ಯಮಂತ್ರಿಯಾಗಿದ್ದಾಗ, ನಾನು ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದೆ. ಆವಾಗಿನಿಂದ ಈವರಗೆ ನಾನು ಏನು ಬೇಡಿದ್ದೇನೆ ಅದನ್ನು ನೀವು ಸಾಕಷ್ಟು ಪ್ರಮಾಣದಲ್ಲಿ ನೀಡಿದ್ದೀರಿ. ಇಂತಹ ಬಿರು ಬಿಸಿಲಿನಲ್ಲಿ ನಿಂತು, ಕೂತು ಭಾಷಣ ಕೇಳುತ್ತಿದ್ದೀರಿ. ಇದಕ್ಕೆ ಪಕ್ಷದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಕನ್ನಡದಲ್ಲಿ ಮಾತು ಆರಂಭಿಸಿದರು. ಮೊದಲಿಗೆ ಶಿರಸಿ ಮಾರಿಕಾಂಬಾ, ಹುಬ್ಬಳ್ಳಿ ಸಿದ್ಧಾರೂಢ ಸ್ವಾಮೀಜಿಗೆ ವಂದಿಸಿದರು.
ಭ್ರಷ್ಟಾಚಾರದ ಕಪ್ಪು ಚುಕ್ಕೆ ಇಲ್ಲದೆ ಮೋದಿ ಆಡಳಿತ ನಡೆಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದಾಗೊಮ್ಮೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತೆ, ಸಂವಿಧಾನ ಬದಲಾವಣೆ ಮಾಡ್ತಾರೆಂದು. ದಲಿತ ಸಮುದಾಯದ ಕೋವಿಂದ್ರನ್ನು ರಾಷ್ಟ್ರಪತಿ ಮಾಡಿದ್ದೆವು. ಈಗ ಆದಿವಾಸಿ ಮಹಿಳೆಯನ್ನು ಬಿಜೆಪಿ ರಾಷ್ಟ್ರಪತಿ ಮಾಡಿದ್ದೇವೆ. ಪಾಕ್ ಪರ ಘೋಷಣೆ ಕೂಗಿದವರನ್ನು ಏಳು ದಿನಗಳ ಬಳಿಕ ಕಾಂಗ್ರೆಸ್ ಸರ್ಕಾರ ಬಂಧಿಸಿದೆ. ರಾಜ್ಯದಲ್ಲಿ ನಾಚಿಕೆಗೇಡಿನ ಕಾಂಗ್ರೆಸ್ ಸರ್ಕಾರವಿದೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬಾ ಆವರಣದಲ್ಲಿ ನಡೆದಿರುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿಯವರು ಭಾಗಿಯಾಗಿದ್ದಾರೆ. ಪ್ರಧಾನಿ ಮೋದಿಯವರಿಗೆ ಕಾಳು ಮೆಣಸು ಏಲಕ್ಕಿ ಹಾರ ಹಾಕಿ, ಬೇಡರ ವೇಷದ ಪೇಟ ತೊಡಿಸಿ, ಮಾರಿಕಾಂಬಾ ಪ್ರತಿಮೆ ನೀಡಿ ಗೌರವಿಸಲಾಯಿತು.
ಕಾಂಗ್ರೆಸ್ ಸರ್ಕಾರದಲ್ಲಿ ಜೀವಕ್ಕೂ ಗ್ಯಾರಂಟಿ ಇಲ್ಲ. ಜೀವ ಕಾಪಾಡುವ ಗ್ಯಾರಂಟಿ ಅಂದರೆ ಅದು ಮೋದಿ ಗ್ಯಾರಂಟಿ. ಜೆಡಿಎಸ್ ಮೈತ್ರಿಯಿಂದ ನಮ್ಮ ಶಕ್ತಿ ಹೆಚ್ಚಾಗಿದೆ. ನಾವು ಗೆಲ್ಲಬೇಕಾಗಿರುವುದು 400 ಕ್ಷೇತ್ರ. ನಾವು ಬೂತ್ನಲ್ಲಿ ಗೆಲ್ಲಬೇಕು. ನಾಳೆಯಿಂದ ನಿಮ್ಮ ನಿಮ್ಮ ಶಕ್ತಿ ಕೇಂದ್ರದಲ್ಲಿ ಛಲದಿಂದ ಕೆಲಸ ಮಾಡಬೇಕು ಎಂದು ಕಾರ್ಯಕರ್ತರಿಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯ ಬರೆಯಲಿದೆ. ಇದು ಪಂಚಾಯತ್ ಚುನಾವಣೆ ಅಲ್ಲ. ಕಾಂಗ್ರೆಸ್ ಲೋಕಸಭಾ ಚುನಾವಣೆಯನ್ನ ಅತ್ಯಂತ ಕೆಳ ಮಟ್ಟಕ್ಕೆ ತೆಗೆದುಕೊಂಡು ಹೋಗಿದೆ. ಶೌಚಾಲಯ ನಾವು ಕಟ್ಟಿಸಿದರು ಕಾಂಗ್ರೆಸ್ ಇನ್ನೂ ಚಂಬು ತಗೊಂಡು ಹೋಗೋದು ಬಿಡಲಿಲ್ಲ. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷವೂ ಆಗಲ್ಲ. ಘಟಬಂಧನ ದಿನಕೊಂದು ತಿರುವು ಪಡೆದುಕೊಳ್ಳುತ್ತಿದೆ. 2040ರಲ್ಲಿ ಅಭಿವೃದ್ಧಿ ಹೊಂದಿದ ಭಾರತ ಕನಸು ಇಟ್ಟುಕೊಂಡಿರುವ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ನಿಷ್ಠಾವಂತ ಕಾರ್ಯಕರ್ತ. ಅಧಿಕಾರ ಸಿಕ್ಕಾಗ ಹೇಗೆ ಇದ್ದರೂ, ಇಲ್ಲದೇ ಇದ್ದಾಗಲೂ ಅದೇ ರೀತಿ ಇದ್ದಾರೆ. ಅಧಿಕಾರಕ್ಕಾಗಿ ಪಕ್ಷಾಂತರ ಮಾಡಲಿಲ್ಲ. ಕುಮಾಟದಲ್ಲಿ ಮಲ್ಟಿ ಸ್ಪೇಷಲಿಟಿ ಆಸ್ಪತ್ರೆ ಬೇಕು ಎಂದು ಕೇಳಿದ್ದೇನೆ. ಆದರೆ ಒಂದು ಜಿಲ್ಲೆಗೆ ಒಂದೇ ಮೆಡಿಕಲ್ ಕಾಲೇಜ್ ಅಂತ ಸಬೂಬು ಹೇಳುತ್ತಿದ್ದಾರೆ. ಆರ್.ವಿ ದೇಶಪಾಂಡೆ ಅವರ ಕೊಡುಗೆ ಜಿಲ್ಲೆಗೆ ಶೂನ್ಯ. ಕಾಂಗ್ರೆಸ್ 70 ವರ್ಷ ಆಡಳಿತ ಮಾಡಿದರೂ ಒಂದು ಸೂಪರ್ ಸ್ಪೇಷಲಿಟಿ ಆಸ್ಪತ್ರೆ ಕಟ್ಟಿಸಿಲ್ಲ ಎಂದು ಕುಮಟ ಶಾಸಕ ದಿನಕರ್ ಶೆಟ್ಟಿ ಹೇಳಿದರು.
ಪ್ರಾಧನಿ ಮೋದಿಯವರು ಬೆಳಗಾವಿ ಕಾರ್ಯಕ್ರಮ ಮುಗಿಸಿಕೊಂಡು ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೊರಟಿದ್ದಾರೆ. ಉತ್ತರ ಕನ್ನಡ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಅವರ ಪರ ಮತಯಾಚನೆ ಮಾಡಲಿದ್ದಾರೆ. ಮದ್ಯಾಹ್ನ 12:45 ಕ್ಕೆ ಶಿರಸಿಗೆ ಆಗಮಿಸಲಿರುವ ಮೋದಿ ನಗರದ ಮಾರಿಕಾಂಬಾ ಜಿಲ್ಲಾ ಕ್ರಿಡಾಂಗಣದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ.
ಬೆಳಗಾವಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಮೋದಿ ಅಬ್ಬರ ಭಾಷಣ ಮಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು. ಈ ಸಮಾವೇಶದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರವಾಗಿ ಮತಯಾಚಿಸಿದರು. ಇದೀಗ ಪ್ರಧಾನಿ ಮೋದಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯತ್ತ ಪ್ರಯಾಣ ಬೆಳಸಿದ್ದಾರೆ.
ಮೋದಿ ಬರುವ ದಿನಗಳಲ್ಲೂ ಗ್ಯಾರಂಟಿ ನೀಡುತ್ತಾರೆ. ನಿಮ್ಮ ಸೇವಕ ಮಹಿಳೆಯರು, ಯುವಕರನ್ನು ಸಶಕ್ತ ಮಾಡುವ ಮೂಲಕ ದೇಶ ಅಭಿವೃದ್ಧಿ ಮಾಡುತ್ತಿದ್ದಾನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ನಿಮ್ಮ ಆಸ್ತಿ, ಖಜಾನೆ, ಮಹಿಳೆಯರ ಬಳಿ ಎಷ್ಟು ಹಣ ಇದೆ, ಬಂಗಾರ ಎಷ್ಟಿದೆ, ಮಂಗಳ ಸೂತ್ರ ಎಲ್ಲಿದೆ ಅಂತ ತಪಾಸಣೆ ಮಾಡುತ್ತದೆ. ಕಾಂಗ್ರೆಸ್ ನಿಮ್ಮ ಆಸ್ತಿಯನ್ನು ಹಂಚಲು ಹೊರಟಿದೆ. ನಿಮ್ಮ ಮಂಗಳ ಸೂತ್ರದ ಮೇಲೆ ಕೈ ಹಾಕಲು ಬಿಡುತ್ತೀರಾ? ನಿಮ್ಮ ಹಣ, ಬಂಗಾರ ಮತ್ತು ಆಸ್ತಿಯನ್ನು ಲೂಟಿ ಮಾಡಲು ಬಿಡುತ್ತೀರಾ? ಎಂದು ಪ್ರಶ್ನಿಸಿದರು.
ದೇಶದ ರಾಜ-ಮಹಾರಜರ ಕೊಡುಗೆ ಕಾಂಗ್ರೆಸ್ಗೆ ನೆನಪಾಗುವುದಿಲ್ಲವೇ? ನವಾಬರ್, ಸುಲ್ತಾನರ ವಿರುದ್ಧ ಒಂದೇ ಒಂದು ಶಬ್ದ ಆಡುವ ತಾಕತ್ತು ಕಾಂಗ್ರೆಸ್ಗೆ ಇಲ್ಲ. ಮತಕ್ಕಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಭಿವೃದ್ಧಿ ಕುಂಟಿತವಾಗುತ್ತದೆ. ಕರ್ನಾಟಕದಲ್ಲಿ ಇದೇ ಆಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಸ್ತೆ ನಿರ್ಮಾಣ, ವಿದ್ಯುತ್ ಸಮಸ್ಯೆ, ಉದ್ಯೋಗ ಸಮ್ಯಸ್ಯೆ ಉದ್ಭವಿಸಿದೆ. ಹೀಗಾಗಿ ಎಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ ಆ ದೇಶ ಅಥವಾ ರಾಜ್ಯ ಬರಬಾದ್ ಆಗುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ಕಿತ್ತೂರು ರಾಣಿ ಚೆನ್ನಮ್ಮ ಅವರ ಹೆಸರನ್ನು ಹಾಳು ಮಾಡಿದೆ. ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ತುಷ್ಟೀಕರಣ ಮಾಡುತ್ತಿದೆ. ಕಾಂಗ್ರೆಸ್ ದೇಶದ ರಾಜ-ಮಹರಾಜರಿಗೆ ಅಪಮಾನ ಮಾಡುತ್ತಿದೆ. ಔರಂಗಜೇಬನನ್ನು ಗುಣಗಾನ ಮಾಡುವ ಪಕ್ಷದೊಂದಿಗೆ ಕಾಂಗ್ರೆಸ್ ಘಟಬಂದನ್ ಮಾಡಿಕೊಂಡಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ ಅಪಮಾನ ಮಾಡಲಾಯಿತು. ಚಿಕ್ಕೋಡಿಯಲ್ಲಿ ಜೈನ ಮುನಿಯ ಹತ್ಯೆಯಾಯಿತು. ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಕೊಲೆಯಾಯಿತು. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟಗೊಂಡಿತು. ಈ ಸ್ಫೋಟವನ್ನು ಕಾಂಗ್ರೆಸ್ ಸಿಲೆಂಡರ್ ಬ್ಲಾಸ್ಟ್ ಎಂದಿತು. ಕಾಂಗ್ರೆಸ್ ಮತಕ್ಕಾಗಿ ತುಷ್ಟೀಕರಣ ರಾಜಕೀಯ ಮಾಡುತ್ತಿದೆ. ಇದರಿಂದ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಬರಬಾದ್ ಆಗಲಿದೆ. ದೇಶವಿರೋಧಿ ಪಿಎಫ್ಐ ಸಂಘಟನೆ ಕಾಂಗ್ರೆಸ್ಗೆ ಬೆಂಬಲ ನೀಡಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸುಳ್ಳು ಹೇಳುತ್ತಾ, ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಮಹತ್ವದ ವಿಚಾರಗಳ ಬಗ್ಗೆ ಸುಳ್ಳು ಹೇಳುತ್ತಾ, ದೇಶದ ಲೋಕತಂತ್ರವನ್ನು ಹಾಳು ಮಾಡುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಕಾಂಗ್ರೆಸಿಗರು ಮಾನಸಿಕವಾಗಿ ಆಂಗ್ಲರ ಗುಲಾಮಿತನ ಭಾವದಿಂದ ಜೀವಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ವಾಗ್ದಾಳಿ ಮಾಡಿದರು.
ಭಾರತ ಅಭಿವೃದ್ಧಿ ಹೊಂದುತ್ತಿದರೇ, ಪ್ರತಿ ಭಾರತೀಯನು ಸಂತೋಷ ಪಡುತ್ತಾನೆ. ಆದರೆ ಕಾಂಗ್ರೆಸ್ ಎಂದೂ ಸಂತಸ ಪಡುವುದಿಲ್ಲ. ಕಾಂಗ್ರೆಸ್ ಕೊರೊನಾ ವ್ಯಾಕ್ಸಿನ್ ಅನ್ನು ವಿರೋಧ ಮಾಡುತ್ತಿದೆ. ಬಿಜೆಪಿ ವ್ಯಾಕ್ಸಿನ್ ಅಂತ ಹೇಳಿತು. ಭಾರತದ ಸಫಲತೆಯನ್ನು ಕಾಂಗ್ರೆಸ್ ಸಹಿಸುವುದಿಲ್ಲ.
ಕನ್ನಡಲದಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ. ಸವದತ್ತಿ ಯಲ್ಲಮ್ಮ ದೇವಿ ಸ್ಮರಿಸಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಬೆಳಗಾವಿ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ನಾನು ರಾಜ್ಯದ ಯಾವುದೇ ಮೂಲೆಗೆ ಹೋದರು, ಪಿರ್ ಏಕ್ ಬಾರ್ ಮೋದಿ ಘೋಷಣೆ ಕೇಳುತ್ತೇನೆ. ನಾವು ಛತ್ರಪತಿ ಶಿವಾಜಿ ಮಹರಾಜ ಮತ್ತು ಜಗಜ್ಯೋತಿ ಬಸವೇಶ್ವರರ ಅನುಯಾಯಿಗಳು ಎಂದರು.
10 ವರ್ಷದಿಂದ ಒಂದು ದಿನವೂ ಪ್ರಧಾನಿ ವಿಶ್ರಾಂತಿ ಪಡೆದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ಈ ತುಘಲಕ್ ದರ್ಬಾರ್ ಸರ್ಕಾರವನ್ನ ಕಿತ್ತೊಗೆಯಬೇಕು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುತ್ತಿರು ಬಿಜೆಪಿ ಸಮಾವೇಶಕ್ಕೆ ಪ್ರಧಾನಿ ಮೋದಿಯವರು ಆಗಮಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ಅಣ್ಣಾಸಾಹೇಬ್ ಜೊಲ್ಲೆ, ರಾಜ್ಯಸಭಾ ಸದಸ್ಯ ಕಡಾಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಬಾಲಚಂದ್ರ ಮತ್ತು ಹುಬ್ಬಳ್ಳಿ-ಧಾರವಾಡ ಕೇಂದ್ರ ಶಾಸಕ ಮಹೇಶ್ ಟೆಂಗಿನಕಾಯಿ ವೇದಿಕೆ ಹಂಚಿಕೊಂಡಿದ್ದಾರೆ.
ಇದು ಪ್ರಚಾರ ಸಭೆ ಅಲ್ಲ, ವಿಜಯೋತ್ಸವದ ಸಭೆ. ಮೋದಿ ಮೂರನೇ ಬಾರಿಗೆ ಪ್ರಧಾನಿ ಆಗಬೇಕು. ಇದು ಇಡೀ ಜಗತ್ತಿನ ಕನಸು. ನೀವು ನಾಲ್ಕು ಬಾರಿ ಸುರೇಶ್ ಅಂಗಡಿಯವರನ್ನು ಅವರನ್ನು ಗೆಲ್ಲಿಸಿದ್ದೀರಿ. ರಾಷ್ಟ್ರದ ಅಭಿವೃದ್ಧಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿ ಆಗಬೇಕು. ಹತ್ತು ವರ್ಷದಲ್ಲಿ ಆರ್ಥಿಕತೆಯಲ್ಲಿ ಐದನೇ ಸ್ಥಾನದಲ್ಲಿದೆ. ಕೆಲವೇ ವರ್ಷದಲ್ಲಿ ನಾವು ನಂಬರ್ 1 ಆಗುತ್ತೇವೆ. ಇದಕ್ಕೆಲ್ಲ ಕಾರಣ ಮೋದಿ. ಇದು ಲೋಕಸಭೆ ಚುನಾವಣೆ, ನಾವು ರಾಷ್ಟ್ರೀಯ ಭದ್ರತೆ ಬಗ್ಗೆ ಯೋಚನೆ ಮಾಡಬೇಕು. ನೀವೆಲ್ಲ ಮೋದಿ ಅವರಿಗೆ ಆಶೀರ್ವಾದ ಮಾಡಬೇಕು. ಆರ್ಟಿಕಲ್ 370 ತಗೆದಿರುವುದಕ್ಕೆ ಜಮ್ಮು ಕಾಶ್ಮೀರದಲ್ಲಿ ಶಾಂತಿ ನೆಲಸಿದೆ. ಪ್ರಧಾನಿ ಮೋದಿಯವರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಪ್ರಧಾನಿ ಮೋದಿ ಸನಾತನ, ಧರ್ಮ, ಸಂಸ್ಕ್ರತಿ ಉಳಿಸಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಈ ಬಾರಿಯ ಲೋಕಸಭೆ ಚುನಾವಣೆ ದೇಶದ ಭವಿಷ್ಯದ ಚುನಾವಣೆಯಾಗಿದೆ. ದೇಶದ ಭದ್ರತೆ, ಮಹಿಳೆಯರ ಸುರಕ್ಷತೆಗಾಗಿ ನಾವು ಧರ್ಮದ ರಕ್ಷಣೆ ಮಾಡಬೇಕಿದೆ. ಪ್ರಧಾನಿ ಮೋದಿ ಕಲಿಯುಗದ ಯುಗಪುರುಷ. ಕರ್ನಾಟಕದಲ್ಲಿ ಇರೋದು ತಾತ್ಕಾಲಿಕ ಗ್ಯಾರಂಟಿ. ಮೋದಿ ಶಾಸ್ವತ ಗ್ಯಾರಂಟಿ. ಎರಡು ದೇಶಗಳ ಯದ್ಧ ನಿಲ್ಲಸಿದ ಗಂಡೆದೆ ಇರುವುದು ನಮ್ಮ ಹೆಮ್ಮೆಯ ನಾಯಕ ಮೋದಿ ಅವರಿಗೆ. ನಮ್ಮ ಸರ್ಕಾರದ ಯೋಜನೆಯನ್ನು ರಾಜ್ಯ ಸರ್ಕಾರ ಬಂದ್ ಮಾಡಿದೆ. ಮೋದಿಜಿ ಗ್ಯಾರಂಟಿ ಬೇಕೆಂದು ನಾವು ತೋರಿಸಕೊಡೋಣ ಎಂದು ಶಶಿಕಲಾ ಜೊಲ್ಲೆ ಹೇಳಿದರು.
ಪ್ರಧಾನಿ ಮೋದಿ ಸಮಾವೇಶ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಪ್ರಧಾನಿ ಮೋದಿ ಐಟಿಸಿ ಹೋಟೆಲ್‌ನಿಂದ ಮಾಲಿನಿ ಸಿಟಿವರೆಗೆ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. ಹೀಗಾಗಿ ಎರಡು ಗಂಟೆಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಪುಣೆಯಿಂದ ಬೆಳಗಾವಿಗೆ ಬರುವ ವಾಹನಗಳಿಗೆ ಸಂಕೇಶ್ವರ ಹುಕ್ಕೇರಿ ಮಾರ್ಗ ಬಳಸಿಕೊಳ್ಳಲು ಸೂಚಿಸಲಾಗಿದೆ. ಬಾಗಲಕೋಟೆಯಿಂದ ಬೆಳಗಾವಿಗೆ ಬರುವ ವಾಹನಗಳು ನೇಸರಗಿ-ಗೋಕಾಕ್ ಮೂಲಕ ಸಂಚರಿಸಬೇಕು. ಧಾರವಾಡದಿಂದ ಬೆಳಗಾವಿಗೆ ಬರುವ ವಾಹನಗಳು ನೇಗಿನಗಾಳ-ನೇಸರಗಿ ಮೂಲಕ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮನವಿ ಮಾಡಿದ್ದಾರೆ.
ಪ್ರಧಾನಿ ಮೋದಿ ಬೆಳಗಾವಿ ಸಮಾವೇಶದಲ್ಲಿ ಓರ್ವ ಯುವಕ ಸೇವ್ ಕರ್ನಾಟಕ ಫ್ರಾಮ್ ಕಾಂಗ್ರೆಸ್ ಎಂಬ ಪೋಸ್ಟರ್ ಅಭಿಯಾನ ನಡೆಸಿದ್ದಾನೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯಿಂದ ಎಲ್ಲ ಬೆಲೆ ಹೆಚ್ಚಾಗಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಬೇಕು. ಸೇವ್ ಕರ್ನಾಟಕ ಫ್ರಾಮ್ ಕಾಂಗ್ರೆಸ್ we want president rule in Karnataka ಎಂಬ ಪೋಸ್ಟರ್ ಅಭಿಯಾನ ಆರಂಭಿಸಿದ್ದಾನೆ.
ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಏ.27) ರಾತ್ರಿಯೇ ಬೆಳಗಾವಿಗೆ ಆಗಮಿಸಿದ್ದು, ಖಾಸಗಿ ಹೊಟೇಲ್ನಲ್ಲಿ ತಂಗಿದ್ದಾರೆ. ಇಂದು (ಏ.28) ಬೆಳಗ್ಗೆ ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಜೊತೆ ಮೋದಿ ಉಪಹಾರ ಸೇವಿಸಿದರು. 10.55ಕ್ಕೆ ಹೋಟೆಲ್‌ನಿಂದ ಹೊರಟು, 11 ಗಂಟೆಗೆ ನಗರದ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.
Published On - 10:04 am, Sun, 28 April 24