ನವದೆಹಲಿ, ಏಪ್ರಿಲ್ 4: ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೇಥಿ ಕ್ಷೇತ್ರವನ್ನು (Amethi constituency) ಕಳೆದುಕೊಂಡಿದ್ದ ಕಾಂಗ್ರೆಸ್ ಪಕ್ಷ ಈಗ ಮರಳಿ ಪಡೆಯಲು ಪಣತೊಟ್ಟಿದಂತಿದೆ. ವರದಿಗಳ ಪ್ರಕಾರ ರಾಬರ್ಟ್ ವಾದ್ರಾ ಅವರು ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇದಕ್ಕೆ ಇಂಬುಕೊಡುವಂತೆ ಸ್ವತಃ ರಾಬರ್ಟ್ ವಾದ್ರಾ (Robert Vadra) ಅವರೇ ತಾನು ಅಮೇಥಿಯಿಂದ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದಾರೆ. ‘ಅಮೇಥಿ ಜನರಿಗೆ ಗಾಂಧಿ ಪರಿವಾರದವರು ಬೇಕಾಗಿತದ್ದಾರೆ. ನಾನೇನಾದರೂ ಸ್ಪರ್ಧಿಸಿದರೆ ಅಮೇಥಿ ಕ್ಷೇತ್ರವನ್ನೇ ಆರಿಸಿಕೊಳ್ಳುವೆ. ಅಮೇಥಿ ಜನರಿಗೆ ನಾನು ಸ್ಪರ್ಧಿಸಬೇಕೆಂದಿದೆ,’ ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ರಾಬರ್ಟ್ ವಾದ್ರಾ ಹೇಳಿರುವುದು ವರದಿಯಾಗಿದೆ. ತಾನು ರಾಜಕೀಯಕ್ಕೆ ಬರುವುದಾದರೆ ಅಮೇಥಿ ಕ್ಷೇತ್ರವೇ ನನ್ನ ಆಯ್ಕೆ ಆಗಿರುತ್ತದೆ ಎನ್ನುವ ಮೂಲಕ ರಾಜಕೀಯಕ್ಕೆ ಬರುವ ಸುಳಿವನ್ನು ಮತ್ತು ಅಮೇಥಿ ಕ್ಷೇತ್ರಕ್ಕೆ ಸ್ಪರ್ಧಿಸುವ ಇರಾದೆ ಎರಡನ್ನೂ ನೀಡಿದ್ದಾರೆ.
ಹಾಲಿ ಅಮೇಥಿ ಸಂಸದೆ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರೆತ್ತದೆಯೇ ರಾಬರ್ಟ್ ವಾದ್ರಾ ವಾಗ್ದಾಳಿ ನಡೆಸಿದ್ದಾರೆ. ‘…ಈಗಿನ ಸಂಸದರಿಂದ ಅಮೇಥಿ ಜನರು ರೋಸಿ ಹೋಗಿದ್ದಾರೆ. ಆಕೆಯನ್ನು ಆಯ್ಕೆ ಮಾಡಿ ತಪ್ಪು ಮಾಡಿದ್ದೇವೆ ಎಂದು ಜನರಿಗೆ ಅನಿಸತೊಡಗಿದೆ,’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಎನ್ಐ ಮಾಡಿದ ಎಕ್ಸ್ ಪೋಸ್ಟ್
Delhi | On UP’s Amethi Lok Sabha constituency, Robert Vadra says, “…The people of Amethi expect me to represent their constituency if I decide to become a member of Parliament…For years, the Gandhi family worked hard in Rae Bareli, Amethi and Sultanpur…The people of Amethi… pic.twitter.com/2kdmgQtrvv
— ANI (@ANI) April 4, 2024
‘ನಾನು ಸಂಸದನಾಗುವುದಾದರೆ ಅಮೇಥಿ ಕ್ಷೇತ್ರವನ್ನು ಪ್ರತಿನಿಧಿಸಲಿ ಎಂದು ಕ್ಷೇತ್ರದ ಜನರು ನಿರೀಕ್ಷಿಸುತ್ತಿದ್ದಾರೆ. ವರ್ಷಗಳಿಂದ ಗಾಂಧಿ ಕುಟುಂಬದವರು ರಾಯ್ ಬರೇಲಿ, ಅಮೇಥಿ, ಸುಲ್ತಾನ್ಪುರ್ನಲ್ಲಿ ಪರಿಶ್ರಮ ಹಾಕಿದ್ದಾರೆ,’ ಎಂದೂ ವಾದ್ರಾ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೇಥಿ ಆಯ್ತು, ವಯನಾಡ್ನಲ್ಲೂ ವಂಚಿಸ್ತಾರೆ: ರಾಹುಲ್ ಗಾಂಧಿಯನ್ನು ಕುಟುಕಿದ ಸ್ಮೃತಿ ಇರಾನಿ
ಉತ್ತರಪ್ರದೇಶ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಬಹುತೇಕ ನಶಿಸಿದರೂ ಅಮೇಥಿ, ರಾಯ್ಬರೇಲಿ ಕ್ಷೇತ್ರಗಳು ಕಾಂಗ್ರೆಸ್ ಪಾಲಿಗೆ ಭದ್ರಕೋಟೆಯಾಗಿವೆ. ಆದರೆ, 2019ರಲ್ಲಿ ಸ್ಮೃತಿ ಇರಾನಿ ಅಮೇಥಿಯಲ್ಲಿ ಕಾಂಗ್ರೆಸ್ ಕೋಟೆ ಉರುಳಿಸಿ ಬಿಜೆಪಿಗೆ ಗೆಲುವು ತಂದಿದ್ದರು. ಅಪ್ಪಟ ಭದ್ರಕೋಟೆ ಎನಿಸಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿ ಸೋತಿದ್ದರು. 2014ರ ಚುನಾವಣೆಯಲ್ಲೇ ಸ್ಮೃತಿ ಇರಾನಿ ರಾಹುಲ್ ವಿರುದ್ಧ ನಿಕಟ ಪೈಪೋಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ 2019ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಥಿ ಜೊತೆಗೆ ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಿದ್ದರು. ಅಮೇಥಿಯಲ್ಲಿ ಅವರು ಸೋತರೂ ವಯನಾಡಿನ ಜನರು ಕೈ ಹಿಡಿದಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:50 pm, Thu, 4 April 24