ನವದೆಹಲಿ: ಮಣಿಪುರದಲ್ಲಿ ಶೌಚಾಲಯ ನಿರ್ಮಿಸಲು ಸಾಧ್ಯವಾಗದ ಕಾಂಗ್ರೆಸ್ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ ಎಂದು ನೀವು ನಂಬುತ್ತೀರಾ? ರಾಹುಲ್ ಗಾಂಧಿ (Rahul Gandhi) ಕುಟುಂಬ ಈಶಾನ್ಯ ರಾಜ್ಯವನ್ನು ಎಟಿಎಂ ಆಗಿ ಬಳಸಿಕೊಂಡಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಮಣಿಪುರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಹುಲ್ ಗಾಂಧಿಯವರ ಕುಟುಂಬವು ಮಣಿಪುರವನ್ನು ಎಟಿಎಂ ಆಗಿ ಬಳಸಿತು. ಆದರೆ, ಪ್ರಧಾನಿ ನರೇಂದ್ರ ಮೋದಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಪ್ರಾರಂಭಿಸಿದರು. ಅದರಿಂದ ಸುಮಾರು 11 ಕೋಟಿ ರೈತರಿಗೆ ಪ್ರತಿ ವರ್ಷ 6,000 ರೂ.ಗಳನ್ನು ನೀಡಲಾಗುತ್ತಿದೆ. ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ನಾವು ಮಣಿಪುರದ ರೈತರಿಗೆ ಹೆಚ್ಚುವರಿಯಾಗಿ 2,000 ರೂ. ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಮಣಿಪುರದ ಮಾಜಿ ಮುಖ್ಯಮಂತ್ರಿ ಒಕ್ರಾಮ್ ಇಬೋಬಿ ಸಿಂಗ್ ಅವರ ಸೋದರಳಿಯ, ವಾಂಗ್‌ಖೇ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಒಕ್ರಾಮ್ ಹೆನ್ರಿ ಸಿಂಗ್ ಪರ ಸ್ಮೃತಿ ಇರಾನಿ ಪ್ರಚಾರ ನಡೆಸಿದ್ದಾರೆ. ಈ ವೇಳೆ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕಾಂಗ್ರೆಸ್ ಸರ್ಕಾರ ಮಣಿಪುರಕ್ಕೆ ಅನ್ಯಾಯ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಪ್ರತಿ ಮನೆಗೆ ಶೌಚಾಲಯ ನಿರ್ಮಿಸಿದರು. ರಾಜಕೀಯದಲ್ಲಿ ಶೌಚಾಲಯವು ಎಂದಿಗೂ ಅಜೆಂಡಾದ ಭಾಗವಾಗಿರಲಿಲ್ಲ. ಆದರೆ ಮೋದಿ ಜನರಿಗೆ ಶೌಚಾಲಯಗಳನ್ನು ನಿರ್ಮಿಸಿಕೊಟ್ಟರು ಎಂದು ಹೇಳಿದ್ದಾರೆ.
ಮಣಿಪುರದಲ್ಲಿ ಬಿಜೆಪಿ ಪುನರಾಯ್ಕೆಯಾದರೆ ಮಣಿಪುರದಲ್ಲಿ ಸ್ಟಾರ್ಟ್‌ಅಪ್‌ಗಳಿಗಾಗಿ 100 ಕೋಟಿ ರೂ. ಕಾರ್ಪಸ್ ಫಂಡ್ ರಚಿಸುವುದಾಗಿ ಘೋಷಿಸಿದ್ದಾರೆ. ಕಳೆದ 7 ವರ್ಷಗಳಲ್ಲಿ ಬಿಜೆಪಿ ಸರ್ಕಾರವು ದೇಶದಲ್ಲಿ 60,000 ಸ್ಟಾರ್ಟ್‌ಅಪ್‌ಗಳ ಸೃಷ್ಟಿಗೆ ಉತ್ತೇಜನ ನೀಡಿದೆ. ರಾಜ್ಯದಲ್ಲಿ ಬಿಜೆಪಿ ತನ್ನ ಸರ್ಕಾರವನ್ನು ರಚಿಸಿದರೆ, ಅದು ಮಣಿಪುರದ ಸ್ಟಾರ್ಟ್‌ಅಪ್‌ಗಳಿಗಾಗಿ ಪ್ರತ್ಯೇಕವಾಗಿ 100 ಕೋಟಿ ರೂಪಾಯಿಗಳ ಕಾರ್ಪಸ್ ನಿಧಿಯನ್ನು ರಚಿಸುತ್ತದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.
ಮಣಿಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದಿದ್ದ ಸ್ಮೃತಿ ಇರಾನಿ ಶುಕ್ರವಾರ ಇಂಫಾಲ್ ಪೂರ್ವದ ವಾಂಗ್‌ಖೈ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರ ಜೊತೆ ಸಾಂಪ್ರದಾಯಿಕ ಕಬುಯಿ ನೃತ್ಯಕ್ಕೆ ಹೆಜ್ಜೆ ಹಾಕಿದರು.
ಮಣಿಪುರದಲ್ಲಿ ಎರಡು ಹಂತಗಳಲ್ಲಿ 60 ಶಾಸಕರನ್ನು ಆಯ್ಕೆ ಮಾಡಲು ಚುನಾವಣೆ ನಡೆಯಲಿದೆ. ಮೊದಲ ಹಂತದ ಮತದಾನ ಫೆಬ್ರವರಿ 28ರಂದು ಮತ್ತು ಎರಡನೇ ಹಂತದ ಮತದಾನ ಮಾರ್ಚ್ 5ರಂದು ನಡೆಯಲಿದೆ. ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ ಮಾರ್ಚ್ 10ರಂದು ಫಲಿತಾಂಶಗಳನ್ನು ಪ್ರಕಟಿಸಲಾಗುವುದು.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಟ್ಟು 28 ಸ್ಥಾನಗಳನ್ನು ಗೆದ್ದು 60 ಸದಸ್ಯ ಬಲದ ಮಣಿಪುರ ಮನೆಯಲ್ಲಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಬಿಜೆಪಿಯು ಮೂರು ಪ್ರಾದೇಶಿಕ ಪಕ್ಷಗಳಾದ ನಾಗಾ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ), ಮತ್ತು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಬೆಂಬಲದೊಂದಿಗೆ ಮಣಿಪುರದಲ್ಲಿ ಸರ್ಕಾರವನ್ನು ರಚಿಸಿತು.
Published On - 3:44 pm, Sat, 19 February 22