ದೆಹಲಿ: ಮಣಿಪುರದಲ್ಲಿ ಇಂದು ವಿಧಾನಸಭೆ ಚುನಾವಣೆ (Manipur Assembly Election) ಎರಡನೇ ಹಂತದ ಮತದಾನ ನಡೆಯುತ್ತಿದೆ. ಇಂದು ಮುಂಜಾನೆ 7ಗಂಟೆಯಿಂದ ಮತದಾನ ಶುರುವಾಗಿದೆ. ಎರಡನೇ ಹಂತದಲ್ಲಿ 10 ಜಿಲ್ಲೆಗಳ, 22 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟು 92 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಬಾರಿ ನಾಗಾ ಜನಾಂಗದವರ ಪ್ರಾಬಲ್ಯವಿರುವ ತೌಬಲ್ ಜಿಲ್ಲೆ ಸೇರಿ, ಇನ್ನಿತರ ಗುಡ್ಡಪ್ರದೇಶಗಳಲ್ಲಿ ಮತದಾನ ನಡೆಯುತ್ತಿದ್ದು, ಬಿಜೆಪಿ ಪಾಲಿಗೆ ಸ್ವಲ್ಪ ಕಷ್ಟಕರ ಸ್ಥಳಗಳಾಗಿವೆ.
ಇಂದು ತೌಬಲ್, ಚಾಂದೇಲ್, ಉಕ್ರುಲ್, ಸೇನಾಪಟಿ, ತಮೆಂಗ್ಲಾಂಗ್ ಮತ್ತು ಜಿರಿಬಾಮ್ ಸೇರಿ ಒಟ್ಟು 10 ಜಿಲ್ಲೆಗಳಿಂದ ಸುಮಾರು 8.38 ಲಕ್ಷ ಜನರು ಮತದಾನ ಮಾಡಲಿದ್ದಾರೆ. ಈ ಹಂತದಲ್ಲಿ ಬಿಜೆಪಿಯ 22 ಅಭ್ಯರ್ಥಿಗಳು ಕಣದಲ್ಲಿದ್ದರೆ, ಕಾಂಗ್ರೆಸ್ನ 18, ನ್ಯಾಶನಲ್ ಪೀಪಲ್ ಪಾರ್ಟಿಯ 11, ಜನತಾ ದಳ್-(ಯುನೈಟೆಡ್) ಮತ್ತು ನಾಗಾ ಪೀಪಲ್ಸ್ ಫ್ರಂಟ್ನ ತಲಾ 10 ಅಭ್ಯರ್ಥಿಗಳು ಇದ್ದಾರೆ. ಹಾಗೇ, ಒಟ್ಟು 1,247 ಮತಗಟ್ಟೆಗಳು ಇದ್ದು, ಮಧ್ಯಾಹ್ನ 4ಗಂಟೆಯವರೆಗೆ ಮತದಾನ ನಡೆಯಲಿದೆ.
ಮಣಿಪುರದ ಮತಗಟ್ಟೆಗಳಲ್ಲಿ ಕೊವಿಡ್ 19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಮತದಾರರು ಕ್ಯೂನಲ್ಲಿ ಅಂತರ ಕಾಯ್ದುಕೊಂಡು ನಿಂತು ಮತ ಚಲಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ, ಮತದಾನ ನಡೆಯುತ್ತಿರುವ 100 ಮೀಟರ್ ಅಂತರದಲ್ಲಿ ಫೋನ್ ಬಳಕೆಗೆ ಅನುಮತಿ ಇಲ್ಲ. ಮಣಿಪುರದಲ್ಲಿ ಮೊದಲ ಹಂತದ ಮತದಾನ ಫೆ.28ರಂದು ನಡೆದಿತ್ತು. ಅಂದು ಕೆಲವು ಬೂತ್ಗಳಲ್ಲಿ ಸಂಘರ್ಷ ನಡೆದಿದ್ದು, ಚುರ್ಚಾಂದ್ ಪುರ ಜಿಲ್ಲೆಯ ಒಟ್ಟು 9 ಮತಗಟ್ಟೆಗಳಲ್ಲಿ ಮರುಮತದಾನಕ್ಕೆ ಚುನಾವಣಾ ಆಯೋಗ ಈಗಾಗಲೇ ಆದೇಶ ನೀಡಿದೆ.
ಈ ಹಂತದಲ್ಲಿ ಜನರು ಸ್ವತಂತ್ರವಾಗಿ ಮತ್ತು ನ್ಯಾಯಯುತವಾಗಿ ಮತದಾನ ಮಾಡುತ್ತಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳಿ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ಹೇಳಿದೆ. ಅಲ್ಲದೆ, ಇಲ್ಲಿನ ಕೆಲವು ಉಗ್ರಸಂಘಟನೆಗಳು ಮತದಾರರನ್ನು ಬೆದರಿಸುತ್ತಿವೆ. ಈ ಮೂಲಕ ವಿಧಾನಸಭೆ ಚುನಾವಣೆ ಮೇಲೆ ಪ್ರಭಾವ ಬೀರುತ್ತಿವೆ ಎಂದು ಕಾಂಗ್ರೆಸ್ ಆರೋಪಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳನ್ನು ಶುಕ್ರವಾರ ಭೇಟಿ ಮಾಡಿದ್ದ ಕಾಂಗ್ರೆಸ್ ನಿಯೋಗ, ಇಲ್ಲಿನ ಬಿಜೆಪಿ ಸರ್ಕಾರ ಉಗ್ರರ ಗುಂಪಿಗೆ ಹಣ ಬಿಡುಗಡೆ ಮಾಡಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಗುಪ್ತವಾಗಿ ಹಣ ನೀಡಿದೆ ಎಂದೂ ಆರೋಪಿಸಿದೆ.
ಇದನ್ನೂ ಓದಿ: Russia Ukraine War Live: ಅಮೆರಿಕ ಕಂಪನಿಗಳನ್ನು ನಿರ್ಬಂಧಿಸಿದ ರಷ್ಯಾ, ಉಕ್ರೇನ್ನಿಂದ ಭಾರತೀಯರನ್ನು ಕರೆತರಲು ಸತತ ಪ್ರಯತ್ನ