ಮಣಿಪುರದ ಬಾಗಿಲಿಗೆ ಕೇಂದ್ರ ಸರ್ಕಾರವನ್ನು ತಂದು ನಿಲ್ಲಿಸಿದ್ದೇವೆ, ಇಲ್ಲಿನ ಅಭಿವೃದ್ಧಿಗೆ ವಿಶೇಷ ಆದ್ಯತೆ: ಪ್ರಧಾನಿ ಮೋದಿ
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ 1850 ಕೋಟಿ ರೂಪಾಯಿ ಮೌಲ್ಯದ 13 ಯೋಜನೆಗಳನ್ನು ಉದ್ಘಾಟಿಸಿದರು. ಹಾಗೇ, 2950 ಕೋಟಿ ರೂ.ವೆಚ್ಚದ 9 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಣಿಪುರದ(PM Modi Visit to Manipur) ಇಂಫಾಲ್ನಲ್ಲಿ 4800 ಕೋಟಿ ರೂಪಾಯಿ ವೆಚ್ಚದ ಒಟ್ಟು 22 ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಮಣಿಪುರದ ಅಭಿವೃದ್ಧಿಗೆ ನೀವು ನಿಮ್ಮ ಮತದ ಮೂಲಕ ಬಹುದೊಡ್ಡ ಕೊಡುಗೆ ನೀಡಿದ್ದೀರಿ ಎಂದು ಆ ರಾಜ್ಯದ ನಾಗರಿಕರನ್ನು ಶ್ಲಾಘಿಸಿದ್ದೀರಿ. ನಿಮ್ಮ ಸ್ಪಷ್ಟ ಬಹುಮತದಿಂದಾಗಿ ರಾಜ್ಯದಲ್ಲಿ ಸ್ಥಿರ ಸರ್ಕಾರ ರಚನೆಯಾಯಿತು. ಇದರಿಂದಾಗಿ ಅಭಿವೃದ್ಧಿ ಕಾರ್ಯವೂ ಸುಸ್ಥಿರವಾಗಿ ಆಯಿತು ಎಂದು ಪ್ರಧಾನಿ ಹೇಳಿದರು.
ಇಲ್ಲಿನ ಜನರು ಸ್ಪಷ್ಟವಾಗಿ ಬಹುಮತ ನೀಡಿ ಬಿಜೆಪಿಯನ್ನು ಆಡಳಿತದ ಹುದ್ದೆಯಲ್ಲಿ ಕೂರಿಸಿದ್ದಾರೆ. ಅದಕ್ಕೆ ಪ್ರತಿಫಲವಾಗಿ ನಮ್ಮ ಸರ್ಕಾರ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದೆ. ಇದೀಗ ಮಣಿಪುರದಲ್ಲಿ ಸುಮಾರು 1,30,000 ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿವೆ. 30,000 ಮನೆಗಳಲ್ಲಿ ಶೌಚಗೃಹ ನಿರ್ಮಾಣವಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಕೆಲವೇ ವರ್ಷಗಳ ಹಿಂದೆ, ಈ ರಾಜ್ಯದಲ್ಲಿ ಶೇ.6ರಷ್ಟು ಜನರು ಮಾತ್ರ ತಮ್ಮ ಮನೆಗಳಿಗೆ ಪೈಪ್ಲೈನ್ ಮೂಲಕ ನೀರು ಪಡೆಯುತ್ತಿದ್ದರು. ಆದರೆ ಇಂದು ಜಲಜೀವನ್ ಮಿಷನ್ ಅಭಿಯಾನದಡಿ ಇಲ್ಲಿನ ಶೇ.60ರಷ್ಟು ಜನರ ಮನೆಗೆ ನಲ್ಲಿ ವ್ಯವಸ್ಥೆಯಾಗಿದ್ದು, ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ವಿವರಿಸಿದರು.
ಇದೇ ವೇಳೆ, ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಮಂತ್ರಿ, ಮಣಿಪುರದಲ್ಲಿ ಹಿಂದೆ ಆಳಿದ್ದ ಸರ್ಕಾರಗಳು ಪೂರ್ವಕ್ಕೆ ನೋಡಬೇಡಿ ಎಂಬ ನೀತಿಯನ್ನು ಅಳವಡಿಸಿಕೊಂಡಿದ್ದವು. ಅದೇ ಕಾರಣಕ್ಕೆ ಇಲ್ಲಿ ಅಭಿವೃದ್ಧಿಯಾಗಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿನ ಒಂದು ಶಿಖರವನ್ನು ಮೌಂಟ್ ಹ್ಯಾರಿಸ್ಟ್ ಎಂದೇ ಕರೆಯಲಾಗುತ್ತಿತ್ತು. ಆದರೆ ನಾವದನ್ನು ಮೌಂಟ್ ಮಣಿಪುರ ಎಂದು ಬದಲಿಸಲು ನಿರ್ಧಾರ ಮಾಡಿದೆವು. ನಾವು ಈ ರಾಜ್ಯದ ಅಭಿವೃದ್ಧಿಗಾಗಿ ಪೂರ್ವ ನೀತಿ ಕಾಯ್ದೆ ಅನುಸರಿಸುತ್ತಿದ್ದೇವೆ ಎಂದು ಹೇಳಿದರು. ನಾನು ಪ್ರಧಾನಮಂತ್ರಿ ಆಗುವುದಕ್ಕೂ ಮೊದಲು ಅಂದರೆ 2014ರ ಮೊದಲೂ ಹಲವು ಬಾರಿ ಮಣಿಪುರಕ್ಕೆ ಆಗಮಿಸಿದ್ದೆ. ನನಗೆ ಇಲ್ಲಿನ ಜನರ ಹೃದಯದಲ್ಲಿರುವ ನೋವು ಗೊತ್ತು.ಅದಕ್ಕಾಗಿಯೇ, 2014ರಲ್ಲಿ ನಮ್ಮ ಬಿಜೆಪಿ ಸರ್ಕಾರ ರಚನೆಯಾಗುತ್ತಿದ್ದಂತೆ ಇತ್ತ ಗಮನಹರಿಸಿದೆವು. ಇದೀಗ ನಮ್ಮ ಸರ್ಕಾರವನ್ನು ಮಣಿಪುರ ಬಾಗಿಲಿಗೆ ತಂದು ನಿಲ್ಲಿಸಿದ್ದೇವೆ ಎಂದು ಹೇಳಿದರು.
ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ 1850 ಕೋಟಿ ರೂಪಾಯಿ ಮೌಲ್ಯದ 13 ಯೋಜನೆಗಳನ್ನು ಉದ್ಘಾಟಿಸಿದರು. ಹಾಗೇ, 2950 ಕೋಟಿ ರೂ.ವೆಚ್ಚದ 9 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು. 75 ಕೋಟಿ ರೂ.ವೆಚ್ಚದಲ್ಲಿ ಬರಕ್ ನದಿಗೆ ನಿರ್ಮಿಸಲಾದ ಸ್ಟೀಲ್ ಸೇತುವೆ, 1110 ಕೋಟಿ ರೂ.ವೆಚ್ಚದಲ್ಲಿ ಕಟ್ಟಲಾದ 2387 ಮೊಬೈಲ್ ಟವರ್ಗಳು, 396 ಕೋಟಿ ರೂ.ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆಗಳು ಮತ್ತು ಕಿಯಮ್ಗೇಯ್ನಲ್ಲಿ 200 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆಯನ್ನು ಉದ್ಘಾಟಿಸಿದರು. ಹಾಗೇ, ಐದು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ಕೈಮಗ್ಗ ಸಂಬಂಧಪಟ್ಟ ಕಾಮಗಾರಿ ಮತ್ತು ಆವಿಷ್ಕಾರ, ನಾವೀನ್ಯತೆ ಮತ್ತು ತರಬೇತಿ ಕೇಂದ್ರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದರು. ಅವರು ಇಲ್ಲಿಂದ ತ್ರಿಪುರಕ್ಕೆ ಹೋಗಲಿದ್ದಾರೆ.
ಇದನ್ನೂ ಓದಿ: ಬಿಜೆಪಿ ಬೆಂಬಲಿಸಲು ಶಾಸಕರಿಗೆ ಆಮಿಷ ಆರೋಪ: ಸಚಿವ ಅಶ್ವತ್ಥ ನಾರಾಯಣ, ಇತರ ಶಾಸಕರ ಸಮನ್ಸ್ ಆದೇಶ ರದ್ದು
Published On - 3:40 pm, Tue, 4 January 22