ಪಂಜಾಬ್: ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ ಮೊಗಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಬಾಲಿವುಡ್ ನಟ ಸೋನು ಸೂದ್ (Sonu Sood) ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಚುನಾವಣಾ ನಿಯಮಗಳನ್ನು ಉಲ್ಲಂಘಿಸಿ ಮತದಾನದ ದಿನದಂದು, ಕಾಂಗ್ರೆಸ್ ಅಭ್ಯರ್ಥಿಯಾಗಿರುವ ತಮ್ಮ ಸೋದರಿ ಪರ ಸೋನು ಸೂದ್ ಲಂಧೇಕೆ ಗ್ರಾಮದಲ್ಲಿ ಮತ ಪ್ರಚಾರ ಮಾಡುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಲಾಗಿದೆ. ಸೋನು ಅವರ ಸಹೋದರಿ ಮಾಳವಿಕಾ ಸೂದ್ ಸಾಚಾರ್ (Malavika Sood) ಮೊಗಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ ಎಸ್ಎಡಿ ಭಾನುವಾರದಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಸೋನು ಸೂದ್ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಎಫ್ಐಆರ್ನಲ್ಲಿ ಹೇಳಲಾಗಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿನ ವರದಿಯ ಪ್ರಕಾರ, ನಟ ತನ್ನ ತಾರಾ ವರ್ಚಸ್ಸನ್ನು ಬಳಸಿಕೊಂಡು ಮತದಾರರ ಮೇಲೆ ಪ್ರಭಾವ ಬೀರಲು ಬೂತ್‌ಗಳಿಗೆ ಭೇಟಿ ನೀಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿತ್ತು. ನಂತರ ಪೊಲೀಸರು ಅವರ ವಾಹನವನ್ನು ವಶಪಡಿಸಿಕೊಂಡು ಮನೆಯೊಳಗೆ ಇರುವಂತೆ ಸೂಚಿಸಿದ್ದರು.
ವರದಿಗಳ ಪ್ರಕಾರ, ಸೋನು ಸೂದ್ ವಿರುದ್ಧ ಪ್ರಚಾರದ ದೂರು ಬಂದಾಗ, ನಟನಿಗೆ ಮನೆಯೊಳಗೆ ಇರಲು ತಿಳಿಸಲಾಗಿತ್ತು. ಅಲ್ಲದೇ ಫ್ಲೈಯಿಂಗ್ ಸ್ಕ್ವಾಡ್ ತಂಡವೊಂದನ್ನು ಅವರ ಮನೆಯ ಹೊರಗೆ ನಿಯೋಜಿಸಲಾಗಿತ್ತು ಎಂದು ಚುನಾವಣಾಧಿಕಾರಿ ಸತ್ವಂತ್ ಸಿಂಗ್ ತಿಳಿಸಿದ್ದಾರೆ. ಈ ನಡುವೆ ಸೋನು ಸೂದ್ ಟ್ವೀಟ್ ಮಾಡಿ, ಅಭ್ಯರ್ಥಿಗಳು ಮತಗಳನ್ನು ಖರೀದಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ದೂರಿನ ಕುರಿತು ಈ ಹಿಂದೆ ಪ್ರತಿಕ್ರಿಯಿಸಿದ್ದ ಸೋನು ಸೂದ್, ಶಿರೋಮಣಿ ಅಕಾಲಿದಳದ ಅಭ್ಯರ್ಥಿ ಬರ್ಜಿಂದರ್ ಸಿಂಗ್, ಅಲಿಯಾಸ್ ಮಖನ್ ಬ್ರಾರ್, ನನ್ನ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಇದು ಕೇವಲ ಪಾರ್ಕಿಂಗ್ ಸಮಸ್ಯೆಯಾಗಿತ್ತು. ವಾಹನವನ್ನು ಸರಿಯಾಗಿ ನಿಲ್ಲಿಸಿರಲಿಲ್ಲ. ಬೇರೆ ಏನೂ ಇರಲಿಲ್ಲ ಎಂದು ಹೇಳಿದ್ದರು. ಮೊಗಾ ಕ್ಷೇತ್ರದಲ್ಲಿ ಇತರ ಪಕ್ಷಗಳ ಅಭ್ಯರ್ಥಿಗಳು ಮತಗಳನ್ನು ಖರೀದಿಸುತ್ತಿದ್ದಾರೆ. ಚುನಾವಣಾ ಆಯೋಗವು ಈ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆರೋಪಿಸಿ ಸೋನು ಸೂದ್ ಟ್ವೀಟ್ ಮಾಡಿ, ಮೊಗಾ ಪೊಲೀಸರ ಜೊತೆಗೆ ರಾಜ್ಯ ಪೊಲೀಸ್ ಮುಖ್ಯಸ್ಥರನ್ನು ಟ್ಯಾಗ್ ಮಾಡಿದ್ದರು.
ಭಾನುವಾರದಂದು 117 ಕ್ಷೇತ್ರಗಳಿಗೆ ಪಂಜಾಬ್ನಲ್ಲಿ ಚುನಾವಣೆ ನಡೆದಿತ್ತು. ಸೋನು ಸೂದ್ ಸಹೋದರಿ ಮಾಳವಿಕಾ ಆಪ್ತ ಮೂಲಗಳ ಪ್ರಕಾರ, ಸೋನು ಸೂದ್ ಸೋಮವಾರ ಚಿತ್ರೀಕರಣದ ಸಲುವಾಗಿ ದಕ್ಷಿಣ ಆಫ್ರಿಕಾಗೆ ತೆರಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
Samantha: ಕೀಳು ಭಾಷೆಯಲ್ಲಿ ಸಮಂತಾಗೆ ಪ್ರಶ್ನಿಸಿದ ಅಭಿಮಾನಿ; ನಟಿಯ ಉತ್ತರ ಏನಿತ್ತು?