ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ಒಬ್ಬ ಸಚಿವ ರಾಜೀನಾಮೆ; ಬಿಜೆಪಿ ಬಿಡುತ್ತಿದ್ದಂತೆ ಅಖಿಲೇಶ್ ಯಾದವ್ ಪಕ್ಷಕ್ಕೆ ಸೇರ್ಪಡೆ
ಸ್ವಾಮಿ ಪ್ರಸಾದ್ ಮೌರ್ಯ ಅವರೊಂದಿಗೆ ಆಯುಷ್ ಇಲಾಖೆ ಸಚಿವ ಧರ್ಮ ಸಿಂಗ್ ಸೈನಿ ಸೇರಿ ಒಟ್ಟು ನಾಲ್ವರು ಶಾಸಕರು ಬಿಜೆಪಿ ತೊರೆದು, ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election 2022) ಇನ್ನೊಂದೇ ತಿಂಗಳು ಬಾಕಿ ಇರುವಾಗ ಬಿಜೆಪಿ ಸರ್ಕಾರಕ್ಕೆ ಸಣ್ಣಮಟ್ಟದ ಹಿನ್ನಡೆಯಾಗಿದೆ. ಯೋಗಿ ಸರ್ಕಾರದ (Yogi Adityanath Government) ಸಂಪುಟದ ಕಾರ್ಮಿಕ ಇಲಾಖೆ ಸಚಿವ ಸ್ವಾಮಿ ಪ್ರಸಾದ್ ಮೌರ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಸ್ವಾಮಿ ಪ್ರಸಾದ್ ಸಮಾಜವಾದಿ ಪಕ್ಷ ಸೇರ್ಪಡೆಯಾಗಿದ್ದಾರೆ. 2017ರಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದರು. ಪದ್ರೌನಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಈ ಕ್ಷೇತ್ರದಿಂದ ಸತತ ಮೂರನೇ ಅವಧಿಗೆ ಶಾಸಕರಾದ ಅವರಿಗೆ ಸಂಪುಟದಲ್ಲಿ ಸಚಿವ ಸ್ಥಾನವೂ ದಕ್ಕಿತ್ತು. ಇವರೊಟ್ಟಿಗೆ ಆಯುಷ್ ಇಲಾಖೆ ಸಚಿವ ಧರ್ಮ ಸಿಂಗ್ ಸೈನಿ ಸೇರಿ ಒಟ್ಟು ನಾಲ್ವರು ಶಾಸಕರು ಬಿಜೆಪಿ ತೊರೆದು, ಸಮಾಜವಾದಿ ಪಕ್ಷ ಸೇರಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಸ್ವಾಮಿ ಪ್ರಸಾದ್ ಮೌರ್ಯ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಅಖಿಲೇಶ್ ಯಾದವ್ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಾಗಿ ಹೋರಾಡಿದ ಜನಪ್ರಿಯ ನಾಯಕ ಸ್ವಾಮಿ ಪ್ರಸಾದ್ ಇಂದು ನಮ್ಮ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದರು. ಅವರಿಗೆ ಹೃತ್ಪೂರ್ವಕ ಸ್ವಾಗತ. ಹಾಗೇ, ನಮ್ಮ ಪಕ್ಷಕ್ಕೆ ಬರುವ ಇನ್ಯಾವುದೇ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರಿಗೆ ಸ್ವಾಗತ ಎಂದಿದ್ದಾರೆ.
सामाजिक न्याय और समता-समानता की लड़ाई लड़ने वाले लोकप्रिय नेता श्री स्वामी प्रसाद मौर्या जी एवं उनके साथ आने वाले अन्य सभी नेताओं, कार्यकर्ताओं और समर्थकों का सपा में ससम्मान हार्दिक स्वागत एवं अभिनंदन!
सामाजिक न्याय का इंक़लाब होगा ~ बाइस में बदलाव होगा#बाइसमेंबाइसिकल pic.twitter.com/BPvSK3GEDQ
— Akhilesh Yadav (@yadavakhilesh) January 11, 2022
ರಾಜೀನಾಮೆ ಪತ್ರದಲ್ಲಿ ಏನಿದೆ? : ಸ್ವಾಮಿ ಪ್ರಸಾದ್ ಮೌರ್ಯ ಅವರು ತಾವೇಕೆ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ ಎಂಬುದನ್ನು ರಾಜ್ಯಪಾಲೆ ಆನಂದಿಬೆನ್ರಿಗೆ ಕಳುಹಿಸಿದ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾನು ಕಾರ್ಮಿಕ ಮತ್ತು ಉದ್ಯೋಗ ಮತ್ತು ಸಮನ್ವಯ ಸಚಿವನಾಗಿ, ಸಿದ್ಧಾಂತ ಹಾಗೂ ಪ್ರತಿಕೂಲತೆಗಳಡಿ ಕೆಲಸ ಮಾಡಿದ್ದೇನೆ. ಆದರೆ ಎಲ್ಲಿಯೂ ನನ್ನ ಜವಾಬ್ದಾರಿ ಬಿಟ್ಟಿಲ್ಲ. ಆದರೂ ಸರ್ಕಾರ ದಲಿತರು, ಹಿಂದುಳಿದ ರೈತರು, ನಿರುದ್ಯೋಗಿ ಯುವಕರು ಮತ್ತು ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಿಗಳ ಬಗೆಗೆ ನಿರ್ಲಕ್ಷ್ಯ ತೋರುವುದನ್ನು ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪಕ್ಷ ತೊರೆಯುತ್ತಿದ್ದೇನೆ ಎಂದು ಹೇಳಿದ್ದಾರೆ.
ಚರ್ಚೆ ನಡೆಯುತ್ತಿತ್ತು !: ಸ್ವಾಮಿ ಪ್ರಸಾದ್ ಮೌರ್ಯ ಅಖಿಲೇಶ್ ಯಾದವ್ ಜತೆ ನೇರವಾಗಿ ಸಂಪರ್ಕದಲ್ಲಿದ್ದಾರೆ. ಅವರು ಶೀಘ್ರದಲ್ಲೇ ಬಿಜೆಪಿ ಸರ್ಕಾರ ತೊರೆಯಲಿದ್ದಾರೆ ಎಂಬ ಮಾತುಗಳು ಹಲವು ದಿನಗಳಿಂದಲೂ ಕೇಳಿಬರುತ್ತಿತ್ತು. ಈ ಬಗ್ಗೆ ಚರ್ಚೆಯೂ ನಡೆಯುತ್ತಿತ್ತು. ಆದರೆ ವಿಧಾನಸಭೆ ಚುನಾವಣೆಗೂ ಮುನ್ನ ಪ್ರಭಾವಿ ಸಚಿವರೊಬ್ಬರು ಸಮಾಜವಾದಿ ಪಕ್ಷಕ್ಕೆ ಸೇರಿದ್ದು, ಬಿಜೆಪಿಗೆ ಬಹುದೊಡ್ಡ ಹಿನ್ನಡೆ ಎಂಬ ಅಭಿಪ್ರಾಯ ರಾಜಕೀಯ ವಲಯದಿಂದ ಕೇಳಿಬರುತ್ತಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫೆ.10ರಿಂದ ಏಳು ಹಂತಗಳಲ್ಲಿ ನಡೆಯಲಿದೆ. 403 ಕ್ಷೇತ್ರಗಳ ದೊಡ್ಡ ರಾಜ್ಯ ಇದಾಗಿದ್ದು, ಇಲ್ಲಿ ಬಿಜೆಪಿಗೆ ಎರಡನೇ ಅವಧಿಗೆ ಅಧಿಕಾರ ಹಿಡಿಯುವ ಕಾತರವಾದರೆ, ಅಖಿಲೇಶ್ ಯಾದವ್ಗೆ ಇನ್ನೊಮ್ಮೆ ಗೆದ್ದು ತಾವು ಮುಖ್ಯಮಂತ್ರಿಯಾಗುವ ತವಕ.
ಇದನ್ನೂ ಓದಿ: ಶೀಘ್ರವೇ ಸಿಂಬು-ನಿಧಿ ಅಗರ್ವಾಲ್ ಮದುವೆ? ಹೊರ ಬಿತ್ತು ಹೊಸ ಸುದ್ದಿ
Published On - 3:00 pm, Tue, 11 January 22