ಲಖನೌ: ಉತ್ತರ ಪ್ರದೇಶದಲ್ಲಿ ಆರಂಭದಿಂದಲೂ ಬಿಜೆಪಿ ಸತತ ಮುನ್ನಡೆ ಕಾಯ್ದುಕೊಂಡಿದೆ. ಆಶಾದಾಯಕ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಸರ್ಕಾರದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ‘ರಾಜ್ಯದಲ್ಲಿ ಜನರ ಗೆಲ್ಲುತ್ತಿದ್ದಾರೆ, ಗೂಂಡಾಗಳು ಸೋಲುತ್ತಿದ್ದಾರೆ’ ಎಂದು ಹೇಳಿದ್ದಾರೆ. ಬಿಜೆಪಿಯ ಮತ್ತೋರ್ವ ನಾಯಕ ಬ್ರಿಟೇಶ್ ಪಾಠಕ್ ಪ್ರತಿಕ್ರಿಯಿಸಿ, ಬಿಜೆಪಿಯ ನಿಚ್ಚಳ ಬಹುಮತ ನಿಶ್ಚಿತ. ಪಕ್ಷವು ಭಾರೀ ಬಹುಮತದೊಂದಿಗೆ ಸರ್ಕಾರ ರಚಿಸಲಿದೆ. ಉತ್ತರ ಪ್ರದೇಶದ ಜನರು ಸಮಾಜವಾದಿ ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದಿದ್ದಾರೆ.
ಚುನಾವಣಾ ಪ್ರಚಾರ ಸಭೆಗಳಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರೋಧ ಪಕ್ಷಗಳ ವಿರುದ್ಧ ಸತತ ಟೀಕಾಪ್ರಹಾರ ನಡೆಸಿದ್ದರು. ಸಮಾಜವಾದಿ ಪಕ್ಷವು ಎಲ್ಲ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿತ್ತು. 2012ರಿಂದ 2017ರವರೆಗೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಿದ್ದ ಸಮಾಜವಾದಿ ಪಕ್ಷವು ನಂತರ ರಾಷ್ಟ್ರೀಯ ಲೋಕದಳದೊಂದಿಗೆ (ಆರ್ಎಲ್ಡಿ) ಕೈಜೋಡಿಸಿತ್ತು. ಇದೀಗ ಮತ್ತೆ ಗೂಂಡಾಗಿರಿ, ಮಾಫಿಯಾ ಮತ್ತು ಅರಾಜಕತೆಯೊಂದಿಗೆ ಕೆಲಸ ಆರಂಭಿಸಿದೆ ಎಂದು ಆರೋಪಿಸಿದ್ದರು.
ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಪಕ್ಷಗಳ ಮೈತ್ರಿಕೂಟವು ಹಲವು ಅಪರಾಧಿಗಳು ಸ್ಪರ್ಧಿಸಲು ಅವಕಾಶ ನೀಡಿವೆ. ಈ ಮೂಲಕ ಎಸ್ಪಿ ತನ್ನ ಹಳೆಯ ಚಾಳಿ ಮುಂದುವರಿಸಿದೆ ಎಂದು ಅವರು ದೂರಿದ್ದರು. ಅಪರಾಧ ಹಿನ್ನೆಲೆಯವರಿಗೆ ಟಿಕೆಟ್ ನೀಡುವ ಮೂಲಕ ಅಖಿಲೇಶ್ ಯಾದವ್ ಈ ಬಾರಿಯೂ ಪಶ್ಚಿಮ ಉತ್ತರ ಪ್ರದೇಶವನ್ನು ಕೋಮುದಳ್ಳುರಿಗೆ ತಳ್ಳಲು ಉದ್ದೇಶಿಸಿದ್ದರು ಎಂದು ಆರೋಪ ಮಾಡಲಾಗಿತ್ತು.
ಇಂದು ಮುಂಜಾನೆ 8 ಗಂಟೆಗೆ ಐದೂ ರಾಜ್ಯಗಳಲ್ಲಿ ಮತ ಎಣಿಕೆ ಆರಂಭವಾಯಿತು. ಕೇಂದ್ರದಲ್ಲಿ ಅಧಿಕಾರ ಹಿಡಿಯುವ ದೃಷ್ಟಿಯಿಂದ ಮತ್ತು ಸಂಸತ್ ಸದಸ್ಯರ ಸಂಖ್ಯಾಬಲದ ದೃಷ್ಟಿಯಿಂದ ಮಹತ್ವ ಪಡೆದಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿ, ಎಸ್ಪಿ ಮತ್ತು ಬಿಎಸ್ಪಿ ನಡುವೆ ಜಿದ್ದಾಜಿದ್ದಿ ಪೈಪೋಟಿ ಇರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಎಸ್ಪಿಗೆ ಹೆಚ್ಚಿನ ಜನಬೆಂಬಲ ಸಿಕ್ಕಿಲ್ಲ. ಬೆಳಿಗ್ಗೆ 11 ಗಂಟೆ ವೇಳೆಗೆ ಬಿಜೆಪಿ 253, ಎಸ್ಪಿ 123 ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿತ್ತು.
403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಧಿಕಾರ ಹಿಡಿಯಲು 202 ಸದಸ್ಯರು ಬೇಕು. ಎಲ್ಲ ಎಕ್ಸಿಟ್ ಪೋಲ್ಗಳೂ ಬಿಜೆಪಿಯ ಗೆಲುವಿನ ಮುನ್ಸೂಚನೆ ನೀಡಿದ್ದವು. ಇದೀಗ ಈ ಭವಿಷ್ಯಗಳು ನಿಜವಾಗುವ ಸಾಧ್ಯತೆ ನಿಚ್ಚಳವಾಗಿದೆ.
ಇದನ್ನೂ ಓದಿ: Uttar Pradesh: ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಸದ್ದು ಮಾಡಿದ ಇವಿಎಂ ವಿವಾದ: ಯೋಗಿ, ಅಖಿಲೇಶ್ ನಡುವೆ ವಾಗ್ವಾದ