LakhimpurKheri Result ರೈತರ ಪ್ರತಿಭಟನೆಗಳ ಮೂಲಕ ಸುದ್ದಿಯಾಗಿದ್ದ ಲಖೀಂಪುರ ಖೇರಿಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ

ಲಖೀಂಪುರ ಖೇರಿ ಎಂಬ ಹೆಸರು ಸುದ್ದಿಯಾಗಿದ್ದೇ ರೈತರ ಪ್ರತಿಭಟನೆಗಳಿಂದ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಖೀಂಪುರದಲ್ಲಿ ರೈತರನ್ನು ಹತ್ಯೆ ಮಾಡಲಾಗಿತ್ತು.

LakhimpurKheri Result ರೈತರ ಪ್ರತಿಭಟನೆಗಳ ಮೂಲಕ ಸುದ್ದಿಯಾಗಿದ್ದ ಲಖೀಂಪುರ ಖೇರಿಯ ಎಲ್ಲ ಕ್ಷೇತ್ರಗಳಲ್ಲಿಯೂ ಬಿಜೆಪಿ ಮುನ್ನಡೆ
ಬಿಜೆಪಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Mar 10, 2022 | 2:27 PM

ಲಖನೌ: ಉತ್ತರ ಪ್ರದೇಶದ (Uttar Pradesh) ಲಖೀಂಪುರ ಖೇರಿಯಲ್ಲಿ(LakhimpurKheri) ಮತ ಎಣಿಕೆ ಪ್ರಗತಿಯಲ್ಲಿದ್ದೆ. ಅಂದಹಾಗೆ ಲಖೀಂಪುರ ಖೇರಿಯಲ್ಲಿ ಈ ಬಾರಿ ಬಿಜೆಪಿಗೆ (BJP) ಹಿನ್ನಡೆಯಾಗಲಿದೆಯೇ ಎಂಬ ಕುತೂಹಲ ಇತ್ತು. ಯಾಕೆಂದರೆ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ನಾಲ್ವರು ರೈತರು ಮತ್ತು ಮೂವರು ಬಿಜೆಪಿ ಕಾರ್ಯಕರ್ತರು ಸೇರಿದಂತೆ ಎಂಟು ಜನರು ಇಲ್ಲಿ ಸಾವಿಗೀಡಾಗಿದ್ದರು. ಲಖೀಂಪುರ ಖೇರಿ ಎಂಬ ಹೆಸರು ಸುದ್ದಿಯಾಗಿದ್ದೇ ರೈತರ ಪ್ರತಿಭಟನೆಗಳಿಂದ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಖೀಂಪುರದಲ್ಲಿ ರೈತರನ್ನು ಹತ್ಯೆ ಮಾಡಲಾಗಿತ್ತು. ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ಲಖಿಂಪುರ ಖೇರಿಯಲ್ಲಿ ರೈತರ ಪ್ರತಿಭಟನೆ ವೇಳೆ ಈ ಘಟನೆ ನಡೆದಿತ್ತು . ಸಮಾರಂಭದಲ್ಲಿ ಪಾಲ್ಗೊಳ್ಳಲು ಲಖೀಂಪುರ ಮಹಾರಾಜ ಅಗ್ರಸನ್ ಸ್ಪೋರ್ಟ್ಸ್ ಗ್ರೌಂಡ್ ಹೆಲಿಪ್ಯಾಡ್‌ನಲ್ಲಿ ಇಬ್ಬರು ಇಳಿಯುತ್ತಿದ್ದಾರೆ ಎಂಬ ಸುದ್ದಿ ತಿಳಿದ ರೈತರು ಕಪ್ಪು ಬಾವುಟಗಳೊಂದಿಗೆ ಪ್ರತಿಭಟನೆ ವ್ಯಕ್ತಪಡಿಸಲು  ಅಲ್ಲಿಗೆ ಬಂದಿದ್ದರು. ರೈತರು ಹಿಂತಿರುಗುತ್ತಿದ್ದಂತೆ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ನೇತೃತ್ವದ ಎರಡು ವಾಹನಗಳು ರೈತರ ಮೇಲೆ ಹರಿದಿವೆ. ಟ್ರಕ್‌ಗೆ ವಾಹನ ಡಿಕ್ಕಿ ಹೊಡೆದು ನಾಲ್ವರು ರೈತರು ಸಾವನ್ನಪ್ಪಿದ್ದಾರೆ. ನಂತರದ ಹಿಂಸಾಚಾರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಸಾವಿಗೀಡಾಗಿದ್ದರು. ಆದಾಗ್ಯೂ ಉತ್ತರ ಪ್ರದೇಶದ ಚುನಾವಣೆಯಲ್ಲಿ ಲಖೀಂಪುರ ಖೇರಿ ಕೇಂದ್ರ ಬಿಂದುವಾಗಿತ್ತು. ಇಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಯೋಗೇಶ್ ವರ್ಮಾ 8572 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ಸಮಾಜವಾದಿ ಪಕ್ಷದ ಅಭ್ಯರ್ಥಿ ಉತ್ಕರ್ಷ್ ವರ್ಮಾ, ಕಾಂಗ್ರೆಸ್ ಅಭ್ಯರ್ಥಿ ರವಿಶಂಕರ್ ತ್ರಿವೇದಿ ಮತ್ತು ಬಿಎಸ್‌ಪಿ ಅಭ್ಯರ್ಥಿ ಮೋಹನ್ ಬಾಜ್‌ಪೇಯಿ ಕ್ರಮವಾಗಿ 5785, 136 ಮತ್ತು 1339 ಮತಗಳನ್ನು ಗಳಿಸಿ ಮುನ್ನಡೆ ಸಾಧಿಸಿದ್ದಾರೆ. 2017ರಲ್ಲಿ ಯೋಗೇಶ್ ವರ್ಮಾ 1,22,677 ಮತಗಳನ್ನು ಪಡೆದು ಗೆದ್ದಿದ್ದರು. 2017 ರಲ್ಲಿ, ಬಿಜೆಪಿ ಜಿಲ್ಲೆಯ ಎಲ್ಲಾ ಎಂಟು ಸ್ಥಾನಗಳನ್ನು (ಪಾಲಿಯಾ, ನಿಗಾಸನ್, ಗೋಲಾ ಖೋರಾನಾಥ್, ಶ್ರೀನಗರ, ಧೌರಾಹ್ರಾ, ಲಖಿಂಪುರ, ಕಸ್ತಾ ಮತ್ತು ಮೊಹಮ್ಮದಿ) ಗೆದ್ದುಕೊಂಡಿತು. ಯುಪಿಯಲ್ಲಿ ಬಿಜೆಪಿಯ ಅತ್ಯಂತ ಶಕ್ತಿಶಾಲಿ ನಾಯಕ ಅಜಯ್ ಮಿಶ್ರಾ ನೇತೃತ್ವದ ಪ್ರಚಾರದಲ್ಲಿ ಬಿಜೆಪಿ ಎಂಟು ಸ್ಥಾನಗಳನ್ನು ಗೆದ್ದಿದೆ. ಲಖೀಂಪುರ ಘಟನೆಯ ನಂತರ ಬಿಜೆಪಿ ಅವರನ್ನು ಈ ಬಾರಿ ಪ್ರಚಾರದಿಂದ ಹೊರಗಿಟ್ಟಿತ್ತು. ಅಜಯ್ ಮಿಶ್ರಾ ಜಿಲ್ಲೆಯ ಪ್ರಮುಖ ಬ್ರಾಹ್ಮಣ ಮುಖವಾಗಿದ್ದರು.

2022 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಲಖೀಂಪುರ ಖೇರಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳಲ್ಲಿ ಕಾಂಗ್ರೆಸ್‌ನ ರವಿಶಂಕರ್ ತ್ರಿವೇದಿ, ಬಿಜೆಪಿಯ ಯೋಗೇಶ್ ವರ್ಮಾ, ಎಸ್‌ಪಿಯ ಉತ್ಕರ್ಷ್ ವರ್ಮಾ, ಬಿಎಸ್‌ಪಿಯ ಮೋಹನ್ ಬಾಜ್‌ಪೈ, ಎಐಎಂಐಎಂನ ಮೊ. ಉಸ್ಮಾನ್ ಸಿದ್ದಿಕಿ ಸೇರಿದ್ದಾರೆ.

2017 ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಈ 59 ಕ್ಷೇತ್ರಗಳ ಪೈಕಿ 51 ಸ್ಥಾನಗಳನ್ನು ಗೆದ್ದಿತ್ತು. ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷ (ಎಸ್‌ಪಿ) ನಾಲ್ಕು ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಮಾಯಾವತಿ ಅವರ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಕೇವಲ ಮೂರು ಸ್ಥಾನಗಳನ್ನು ಪಡೆದುಕೊಂಡಿದೆ. ಬಿಜೆಪಿ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೆಲಾಲ್) ಒಂದು ಸ್ಥಾನವನ್ನು ಗೆದ್ದಿತ್ತು.

ಲಖಿಂಪುರ ಖೇರಿಯಲ್ಲಿ ಎಲ್ಲಾ ಎಂಟು ಅಸೆಂಬ್ಲಿ ಸ್ಥಾನಗಳು ಬಿಜೆಪಿ ಬಳಿ ಇದ್ದವು. ಲಖೀಂಪುರ ನಗರದಲ್ಲಿ ಹಾಲಿ ಶಾಸಕ ಯೋಗೇಶ್ ವರ್ಮಾ ಅವರು ಎಸ್‌ಪಿಯ ಉತ್ಕರ್ಷ್ ವರ್ಮಾ ಮಧುರ್ ವಿರುದ್ಧ ಕಣಕ್ಕಿಳಿದಿದ್ದರು. ಕಾಂಗ್ರೆಸ್ ತನ್ನ ಅಭ್ಯರ್ಥಿ ರವಿಶಂಕರ್ ತ್ರಿವೇದಿ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡು ಕಣದಲ್ಲಿತ್ತು. 2017ರಲ್ಲಿ ವರ್ಮಾ ವಿರುದ್ಧ ಮಧುರ್ 37,000 ಮತಗಳ ಅಂತರದಿಂದ ಸೋತಿದ್ದರು.

ಈ ಕ್ಷೇತ್ರದಿಂದ 2022ರ ಚುನಾವಣೆಯಲ್ಲಿ ಒಟ್ಟು 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 2017 ರಲ್ಲಿ, ಈ ಸ್ಥಾನಕ್ಕೆ 10 ಮತ್ತು 2012 ರ ಚುನಾವಣೆಯಲ್ಲಿ 11 ಸ್ಪರ್ಧಿಗಳು ಕಣದಲ್ಲಿದ್ದರು. 2022 ರ ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆಯಲ್ಲಿ, ಲಖಿಂಪುರ ಖೇರಿ ಕ್ಷೇತ್ರದಲ್ಲಿ ಅಂದಾಜು 65.18 ರಷ್ಟು ಮತದಾನವಾಗಿದೆ. 2017ರಲ್ಲಿ ಈ ಕ್ಷೇತ್ರದಲ್ಲಿ ಶೇ.65ರಷ್ಟು ಮತದಾನವಾಗಿದ್ದರೆ, 2012ರಲ್ಲಿ ಶೇ.58.27ರಷ್ಟು ಮತದಾನವಾಗಿತ್ತು.ಲಖೀಂಪುರ ಖೇರಿ ವಿಧಾನಸಭಾ ಕ್ಷೇತ್ರದ ಮತದಾನ ಫೆಬ್ರವರಿ 23, 2022 ರಂದು ನಡೆದಿತ್ತು.

ಇದನ್ನೂ ಓದಿ: Punjab Elections 2022 ಪಂಜಾಬ್​​ನಲ್ಲಿ ಕೇಜ್ರಿವಾಲ್​​​ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲುವಿನ ನಗು ಬೀರಲು ಕಾರಣವಾದ 5 ಸಂಗತಿಗಳಿವು

Published On - 2:27 pm, Thu, 10 March 22