UP Assembly Polls ಮತಗಟ್ಟೆಯಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ; ಮತದಾನದ ಗೌಪ್ಯತೆ ಉಲ್ಲಂಘಿಸಿದ ಕಾನ್ಪುರ್ ಮೇಯರ್

| Updated By: ರಶ್ಮಿ ಕಲ್ಲಕಟ್ಟ

Updated on: Feb 20, 2022 | 11:45 AM

ಪಾಂಡೆ ಅವರು ಕಾನ್ಪುರದ ಹಡ್ಸನ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅವರು ಮತದಾನ ಮಾಡುತ್ತಿರುವಾಗ ವಿಡಿಯೊವನ್ನು ಚಿತ್ರೀಕರಿಸಿದ್ದು ಹಲವಾರು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ.

UP Assembly Polls ಮತಗಟ್ಟೆಯಲ್ಲಿ ಫೋಟೊ, ವಿಡಿಯೊ ಚಿತ್ರೀಕರಣ; ಮತದಾನದ ಗೌಪ್ಯತೆ ಉಲ್ಲಂಘಿಸಿದ ಕಾನ್ಪುರ್ ಮೇಯರ್
ಮತದಾನ ಮಾಡುತ್ತಿರುವ ಕಾನ್ಪುರ್ ಮೇಯರ್
Follow us on

ಕಾನ್ಪುರ್: ಕಾನ್ಪುರ್ ಮೇಯರ್ ಪ್ರಮೀಳಾ ಪಾಂಡೆ (Pramila Pandey) ಭಾನುವಾರ ಮತಗಟ್ಟೆಯೊಳಗೆ ಚಿತ್ರಗಳು ಮತ್ತು ವಿಡಿಯೊಗಳನ್ನು ಕ್ಲಿಕ್ ಮಾಡಿ ವಿವಾದಕ್ಕೀಡಾಗಿದ್ದಾರೆ. ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ (UP Assembly Polls) ಮೂರನೇ ಹಂತದ ಮತದಾನದಲ್ಲಿ ವಿದ್ಯುನ್ಮಾನ ಮತಯಂತ್ರದ (EVM) ಫೋಟೋವನ್ನು ಪಾಂಡೆ ಹಂಚಿಕೊಂಡಿದ್ದಾರೆ. ಪಾಂಡೆ ಅವರು ಕಾನ್ಪುರದ ಹಡ್ಸನ್ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಅವರು ಮತದಾನ ಮಾಡುತ್ತಿರುವಾಗ ವಿಡಿಯೊವನ್ನು ಚಿತ್ರೀಕರಿಸಿದ್ದು ಹಲವಾರು ವಾಟ್ಸಾಪ್ ಗುಂಪುಗಳಲ್ಲಿ ಹಂಚಿಕೊಂಡಿದ್ದಾರೆ. ವಿಷಯ ತಿಳಿದು ಜಿಲ್ಲಾಧಿಕಾರಿಗಳು ಆಕೆಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ. “ಹಡ್ಸನ್ ಸ್ಕೂಲ್ ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಮೀಳಾ ಪಾಂಡೆ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.  ಉತ್ತರ ಪ್ರದೇಶದ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮತದಾನ ನಡೆಯುತ್ತಿದೆ. ರಾಜ್ಯದಲ್ಲಿ ಇದು ಮೂರನೇ ಹಂತದ ವಿಧಾನಸಭೆ ಚುನಾವಣೆಯಾಗಿದ್ದು, ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವಾಬ್ ಸಿಂಗ್ ವಿರುದ್ಧ ಎಫ್‌ಐಆರ್

ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರಾಗಿರುವ ಬಿಜೆಪಿ ನಾಯಕ ನವಾಬ್ ಸಿಂಗ್ ಅವರು ಕಾನ್ಪುರದ ಸಿಸಮಾವುನಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತಿರುವುದನ್ನು ಚಿತ್ರೀಕರಿಸಿದ್ದಾರೆ. ಇವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.


ಏಳು ಹಂತದ ಚುನಾವಣೆಯ ಮೂರನೇ ಹಂತದ ಮತದಾನ ಭಾನುವಾರ ನಡೆಯುತ್ತಿದ್ದು, ಉತ್ತರ ಪ್ರದೇಶದ ಒಟ್ಟು 59 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಇದು ಇಲ್ಲಿಯವರೆಗಿನ ಅತ್ಯಂತ ನಿರ್ಣಾಯಕ ಸುತ್ತಿನ ಚುನಾವಣೆಯಾಗಿದೆ.

ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರೂಕಾಬಾದ್, ಕನ್ನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ್ ಮತ್ತು ಮಹೋಬಾ ಈ 16 ನಿರ್ಣಾಯಕ ಜಿಲ್ಲೆಗಳಲ್ಲಿ ಮತದಾನ ನಡೆಯಲಿದೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಬಿಜೆಪಿ ಅಭ್ಯರ್ಥಿ ಮತ್ತು ಕೇಂದ್ರ ಸಚಿವ ಎಸ್ಪಿ ಸಿಂಗ್ ಬಘೇಲ್ ವಿರುದ್ಧ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.  ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: Punjab, UP Assembly Election 2022 Voting Live Updates: ಪಂಜಾಬ್​​-ಉತ್ತರ ಪ್ರದೇಶದಲ್ಲಿ ಮತದಾನ; ಉತ್ತರ ಪ್ರದೇಶದಲ್ಲಿ ಶೇ.8.15-ಪಂಜಾಬ್​​ನಲ್ಲಿ ಶೇ.4.8ರಷ್ಟು ಮತದಾನ