PM Modi Interview: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇದೆ: ಪ್ರಧಾನಿ ನರೇಂದ್ರ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 09, 2022 | 9:54 PM

Uttar Pradesh Assembly Elections 2022: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನದ ಮುನ್ನಾದಿನವಾದ ಬುಧವಾರ (ಫೆ.9) ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಶನ ನೀಡಿದ್ದಾರೆ

PM Modi Interview: ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆ ಇದೆ: ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ

Uttar Pradesh Assembly Elections 2022: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನದ ಮುನ್ನಾದಿನವಾದ ಬುಧವಾರ (ಫೆ.9) ಪ್ರಧಾನಿ ನರೇಂದ್ರ ಮೋದಿ ವಿಶೇಷ ಸಂದರ್ಶನ ನೀಡಿದದಾರೆ. ಈ ಸಂದರ್ಶದಲ್ಲಿ ಹಲವು ವಿಚಾರಗಳ ಬಗ್ಗೆ ಕೆಂದ್ರ ಸರ್ಕಾರದ ನಿಲುಗಳ ಬಗ್ಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲಖೀಂಪುರ ಖೇರಿ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ಸಮಿತಿ ರಚಿಸಿದರೂ ರಾಜ್ಯ ಸರ್ಕಾರ ಅದಕ್ಕೆ ತನ್ನ ಒಪ್ಪಿಗೆ ನೀಡಿದೆ. ರಾಜ್ಯ ಸರ್ಕಾರದ ನಿಲುವು ಈ ವಿಚಾರದಲ್ಲಿ ಈ ಬಗ್ಗೆ ಪಾರದರ್ಶಕವಾಗಿದೆ ಎಂದು ಹೇಳಿದ್ದಾರೆ. ಇದೀಗ ಚುನಾವಣೆ ನಡೆಯುತ್ತಿರುವ ಎಲ್ಲ ಐದು ರಾಜ್ಯಗಳಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ. ನಾವು ಭರ್ಜರಿ ಬಹುಮತ ಪಡೆಯುತ್ತೇವೆ. ಐದು ರಾಜ್ಯಗಳ ಜನರು ಸೇವೆ ಮಾಡುವ ಅವಕಾಶವನ್ನು ನಮಗೆ ನೀಡಲಿದ್ದಾರೆ. ಜನರ ಮನಸ್ಸು ಗೆಲ್ಲುವ ರಾಜಕಾರಣವನ್ನು ನಾವು ಮಾಡುತ್ತಿದ್ದೇವೆ ಎಂದಿದ್ದಾರೆ.

 

LIVE NEWS & UPDATES

The liveblog has ended.
  • 09 Feb 2022 09:05 PM (IST)

    ಮನಸು ಗೆಲ್ಲುವ ರಾಜಕಾರಣ

    ಜನರ ಮನಸು ಗೆಲ್ಲಲು ಬದುಕುತ್ತೇನೆ, ಜನರ ಮನಸು ಗೆಲ್ಲುವ ಕೆಲಸ ಮಾಡುತ್ತೇನೆ. ಅದೇ ನನ್ನ ರಾಜಕಾರಣದ ಮುಖ್ಯ ಉದ್ದೇಶ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಮುಕ್ತಾಯಗೊಳಿಸಿದರು.

  • 09 Feb 2022 09:02 PM (IST)

    ಪಂಜಾಬ್​ ಭದ್ರತಾ ಲೋಪದ ಬಗ್ಗೆ ಏನೂ ಹೇಳುವುದಿಲ್ಲ

    ಪಂಜಾಬ್​ಗೆ ಇತ್ತೀಚೆಗೆ ಭೇಟಿ ನೀಡಿದ್ದಾಗ ಭದ್ರತಾ ಲೋಪದ ಬಗ್ಗೆ ಇದೀಗ ಸುಪ್ರೀಂಕೋರ್ಟ್​ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ನಾನು ಆ ಬಗ್ಗೆ ಏನು ಹೇಳಿದರೂ ತನಿಖೆಗೆ ಸಮಸ್ಯೆಯಾಗುತ್ತದೆ. ಹೀಗಾಗಿ ನಾನೂ ಹೇಳುವುದಿಲ್ಲ.

  • 09 Feb 2022 09:01 PM (IST)

    ಪಂಜಾಬ್​ ಜನರ ಭಾವನೆಗಳು ಗೊತ್ತು

    ಪಂಜಾಬ್​ ಬಗ್ಗೆ ನನಗೆ ಸಾಕಷ್ಟು ಗೌರವವಿದೆ. ಅಲ್ಲಿನ ಜನರ ಹೋರಾಟ ಮನೋಭಾವವನ್ನು ನಾನು ಕಂಡಿದ್ದೇನೆ, ಗೌರವಿಸುತ್ತೇನೆ. ಹಿಂದೊಮ್ಮೆ ಪಂಜಾಬ್ ಪ್ರವಾಸ ಮಾಡುತ್ತಿದ್ದಾಗ ನನ್ನ ಕಾರ್ ಕೆಟ್ಟು ಹೋಗಿತ್ತು. ಅಲ್ಲಿನ ಹಳ್ಳಿ ಜನರೊಬ್ಬರು ನನ್ನನ್ನು ಮನೆಗೆ ಕರೆದೊಯ್ದು ಉಪಚರಿಸಿದ್ದರು. ಗುಜರಾತ್​ನಲ್ಲಿಯೂ ಸಾಕಷ್ಟು ಸಿಖ್ಖರಿದ್ದಾರೆ. ಅವರು ನನ್ನನ್ನು ಪ್ರೀತಿಯಿಂದ ಕಾಣುತ್ತಾರೆ. ಸಿಖ್ಖರು ನಮ್ಮ ದೇಶದ ಹೆಮ್ಮೆಯ ರೈತರು, ಹೆಮ್ಮೆಯ ಸೈನಿಕರು. ಅವರನ್ನು ಗೌರವಿಸಲು ನಾನು ಹಲವು ಕ್ರಮ ತೆಗೆದುಕೊಂಡಿದ್ದೇನೆ.

  • 09 Feb 2022 08:57 PM (IST)

    ಪಂಜಾಬ್ ರೈತರು ಖುಷಿಯಾಗಿದ್ದಾರೆ

    ಪಂಜಾಬ್​ನ ರೈತರು ಬಿಜೆಪಿ ಪರವಾಗಿ ಇದ್ದಾರೆ. ಮೋದಿ ಸರ್ಕಾರವು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್ ಯೋಜನೆ ಜಾರಿ ಮಾಡಿದ ಮೇಲೆ ಅವರಿಗೆ ಖುಷಿಯಾಗಿದೆ. ನನ್ನ ಭೂಮಿ ಇಷ್ಟೇ ಇತ್ತು. ಆದರೆ ಇಂದಿನಷ್ಟು ಆದಾಯ ಹಿಂದೆಂದೂ ಬಂದಿರಲಿಲ್ಲ ಎಂದು ಖುಷಿ ಪಡುತ್ತಿದ್ದಾರೆ. ಇದು ನನಗೆ ಸಂತೋಷದ ವಿಷಯ.

  • 09 Feb 2022 08:56 PM (IST)

    ರಾಜಕಾರಣ ಮತ್ತು ತನಿಖಾ ಸಂಸ್ಥೆಗಳು

    ದೇಶದಲ್ಲಿ ಚುನಾವಣೆ ಒಂದೇ ಸಲಕ್ಕೆ ನಡೆಯುವುದಿಲ್ಲ. ಸದಾ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಲೇ ಇರುತ್ತದೆ. ಹಾಗೆಂದು ತನಿಖಾ ಸಂಸ್ಥೆಗಳು ಕೆಲಸ ಮಾಡುವುದು ಬೇಡವೇ? ನಮ್ಮ ಎಲ್ಲ ತನಿಖಾ ಸಂಸ್ಥೆಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆ. ಅಕ್ರಮ ಹಣ ಸಂಪಾದಿಸಿದವರ ಮನೆಗಳ ಮೇಲೆ ದಾಳಿ ಮಾಡಿ ರಾಷ್ಟ್ರೀಯ ಸಂಪತ್ತು ವಸೂಲಿ ಮಾಡುತ್ತಿವೆ. ತನಿಖಾ ಸಂಸ್ಥೆಗಳ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. ಕೇಂದ್ರ ಸರ್ಕಾರದ ಪ್ರಭಾವದಲ್ಲಿ ಅವು ಕೆಲಸ ಮಾಡುತ್ತಿಲ್ಲ.

  • 09 Feb 2022 08:53 PM (IST)

    ಕೊರೊನಾ ವೇಳೆ ಕಾಂಗ್ರೆಸ್ ಜನರಲ್ಲಿ ಭಯ ಬಿತ್ತಿತು

    ಕೊರೊನಾ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಮೊದಲು ಲಾಕ್​ಡೌನ್ ಮಾಡಿದ್ದಲ್ಲ. ಮೊದಲು ರಾಜ್ಯ ಸರ್ಕಾರಗಳು ಲಾಕ್​ಡೌನ್ ಮಾಡಿದವು. ಇದರಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಇದ್ದ ರಾಜ್ಯಗಳೂ ಇದ್ದವು. ಆಮೇಲೆ ಕೇಂದ್ರ ಸರ್ಕಾರ ಅನಿವಾರ್ಯವಾಗಿ ಲಾಕ್​ಡೌನ್ ಘೋಷಿಸಿತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಆಪ್​ನಂಥ ಪಕ್ಷಗಳು ಜನರಲ್ಲಿ ಭಯ ಬಿತ್ತಿದವು. ಆದರೆ ಕೊರೊನಾ ಸಂದರ್ಭದಲ್ಲಿ ನಮ್ಮ ದೇಶಬಾಂಧವರು ಶಿಸ್ತಿನ ಬದುಕಿನಿಂದ ಕೊರೊನಾ ಪಿಡುಗು ಸೋಲಿಸಿದರು. ಭಾರತದ ಪರಿಸ್ಥಿತಿ ಹದಗೆಡಬಹುದು ಎಂಬ ಲೆಕ್ಕಾಚಾರಗಳನ್ನು ಭಾರತೀಯರು ವಿಫಲಗೊಳಿಸಿದರು. ಇದು ದೇಶದ ನೂರು ಕೋಟಿ ನಾಗರಿಕರ ಜಯ.

  • 09 Feb 2022 08:50 PM (IST)

    ದೇಶದ ಹಿತದೃಷ್ಟಿಯಿಂದ ಕೃಷಿ ಸುಧಾರಣೆ ಕಾನೂನು ಹಿಂಪಡೆದೆ

    ಕೃಷಿ ಸುಧಾರಣೆ ಕಾನೂನುಗಳನ್ನು ಹಿಂಪಡೆದದ್ದು ರೈತರ ಹಿತಕ್ಕಾಗಿ. ನಾನು ಅವರ ಮನಸ್ಸು ಗೆಲ್ಲಲು ಯತ್ನಿಸಿದೆ. ನಾನು ಭಾರತದ ರೈತರ ಮನಸ್ಸು ಗೆದ್ದಿದ್ದೇನೆ. ನಾನು ಅವರ ಪರವಾಗಿ ಹೆಜ್ಜೆಯಿಟ್ಟಿದ್ದೆ. ಆದರೆ ದೇಶದ ಹಿತಕ್ಕಾಗಿ ನಾನು ಕೃಷಿ ಕಾನೂನು ಹಿಂಪಡೆದೆ. ಇದೇ ಮಾತನ್ನು ಅಂದು ಟಿವಿಯಲ್ಲಿಯೂ ಹೇಳಿದ್ದೆ. ಸರ್ಕಾರದವರು ಜನರೊಂದಿಗೆ ಸಂವಾದ ನಡೆಸುತ್ತಲೇ ಇರುತ್ತೇವೆ. ನನ್ನ ಮಾತು, ನನ್ನ ಸರ್ಕಾರದ ಮಾತು ಜನರೂ ಕೇಳಬೇಕು. ಅದೇ ರೀತಿ ಜನರ ಮಾತನ್ನು ನಾವೂ ಕೇಳುತ್ತೇವೆ. ನಾವು ಎಲ್ಲ ವರ್ಗಗಳ ಅಭಿಪ್ರಾಯ ಕೇಳುತ್ತೇವೆ. ಪ್ರತಿ ನಾಗರಿಕನೂ ಜ್ಞಾನ ಭಂಡಾರವೇ ಆಗಿದ್ದಾನೆ ಎನ್ನುವುದನ್ನು ನಾನು ಒಪ್ಪುತ್ತೇನೆ.

  • 09 Feb 2022 08:47 PM (IST)

    ರಾಹುಲ್​ಗೆ ಮೋದಿ ತಿರುಗೇಟು

    ಸಂಸತ್‌ನಲ್ಲಿ ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ಟೀಕೆ ವಿಚಾರ ಕುರಿತು ಪ್ರಸ್ತಾಪಿಸಿದ ಅವರು, ಸಂಸತ್ ಕಲಾಪಕ್ಕೆ ಗೈರಾಗುವ ವ್ಯಕ್ತಿಗೆ ನಾನು ಹೇಗೆ ಉತ್ತರಿಸಲಿ ಎಂದು ತಿರುಗೇಟು ನೀಡಿದರು.

  • 09 Feb 2022 08:44 PM (IST)

    ಕಾಂಗ್ರೆಸ್ ಆಲೋಚನೆಗಳ ಬಗ್ಗೆ ತಕರಾರು ಇದೆ

    ಸಂಸತ್ತಿನಲ್ಲಿ ರಾಹುಲ್ ಗಾಂಧಿ ಮಾಡಿರುವ ಟೀಕೆ ಕುರಿತು ಪ್ರಸ್ತಾಪಿಸಿದ ನರೇಂದ್ರ ಮೋದಿ, ನಾನು ಯಾರ ತಾತ, ಅಜ್ಜಿ, ಅಪ್ಪನ ಬಗ್ಗೆ ಏನೂ ಮಾತಾಡಲಿಲ್ಲ. ನಾನು ಈ ದೇಶದ ಪ್ರಧಾನಿ ಸ್ಥಾನದಲ್ಲಿದ್ದವರ ವರ್ತನೆಯನ್ನು ವಿಮರ್ಶೆ ಮಾಡಿದ್ದೆ. ದೇಶದ ಇಂದಿನ ಪರಿಸ್ಥಿತಿಗೆ ಮುಖ್ಯ ಕಾರಣ ಕಾಂಗ್ರೆಸ್ ಪಕ್ಷ. ಅಟಲ್​ ಜಿ ಮತ್ತು ನನ್ನನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಕಾಂಗ್ರೆಸ್​ನವರೇ ಅಥವಾ ಕಾಂಗ್ರೆಸ್ ಪರವಾಗಿದ್ದವರೇ ಆಗಿದ್ದರು. ಹೀಗಾಗಿ ರಾಜಕಾರಣದ ಪ್ರಧಾನ ಧಾರೆಯಲ್ಲಿ ಕಾಂಗ್ರೆಸ್ ಪ್ರಭಾವ ವ್ಯಾಪಕವಾಗಿದೆ. ನಾನು ಕಾಂಗ್ರೆಸ್​ ಮುಕ್ತ ಭಾರತದ ಬಗ್ಗೆ ಮಾತನಾಡಿದರೆ ಅದರ ಅಪಾಯಗಳ ಬಗ್ಗೆ ಹೇಳುತ್ತಿದ್ದೇನೆ ಅಷ್ಟೇ. ಹೀಗಾಗಿ ಸಂಖ್ಯೆಯ ಬಗ್ಗೆ ನಾನು ಹೇಳುವುದಿಲ್ಲ. ನನಗೆ ತಕರಾರು ಇರುವುದು ಅವರ ಆಲೋಚನಾ ಶೈಲಿಯ ಬಗ್ಗೆ.

  • 09 Feb 2022 08:41 PM (IST)

    ಯುವಜನರಿಗೆ ಬಿಜೆಪಿ ಬಿಟ್ಟರೆ ಬೇರೆ ಆಯ್ಕೆಗಳಿಲ್ಲ

    ಕುಟುಂಬಗಳೇ ಹಲವು ರಾಜ್ಯಗಳಲ್ಲಿ ಪಕ್ಷ ನಡೆಸುತ್ತಿವೆ. ಇದು ಪ್ರಜಾತಂತ್ರಕ್ಕೆ ಅಪಾಯಕಾರಿ, ಇದು ದೊಡ್ಡ ಶತ್ರು. ಕುಟುಂಬವಾದಿ ರಾಜಕಾರಣ ನಡೆಯುವಾಗ, ದೇಶಕ್ಕಿಂತ, ರಾಜ್ಯಕ್ಕಿಂತ ಕುಟುಂಬವೇ ಮುಖ್ಯವಾಗುತ್ತದೆ. ಪ್ರತಿಭೆಗಳು ನಷ್ಟವಾಗುತ್ತವೆ. ಹೀಗಾಗಿಯೇ ರಾಜಕಾರಣದಲ್ಲಿ ಪ್ರಜಾತಂತ್ರ ವ್ಯವಸ್ಥೆ ಬರುವುದು ಅತಿ ಅಗತ್ಯ. ಹೊಸ ತಲೆಮಾರಿನ ನಾಯಕರಿಗೆ ಬಿಜೆಪಿ ಬಿಟ್ಟು ಬೇರೆ ಆಯ್ಕೆಯೇ ಇಲ್ಲದಂತೆ ಆಗಿದೆ. ಏಕೆಂದರೆ ಉಳಿದ ಪಕ್ಷಗಳಲ್ಲಿ ಅವರ ಕುಟುಂಬಕ್ಕೆ ಉಪಯೋಗಕ್ಕೆ ಬರುವವರು ಬಿಟ್ಟು, ರಾಜ್ಯ-ದೇಶಕ್ಕಾಗಿ ದುಡಿಯುವವರಿಗೆ ಅವಕಾಶವೇ ಸಿಗುತ್ತಿಲ್ಲ.

  • 09 Feb 2022 08:36 PM (IST)

    ಮೋದಿ ಕನಸಿನ ಸಮಾಜವಾದ

    ಜನಸಂಘದ ಕಾಲದಿಂದಲೂ ಬಿಜೆಪಿಯ ಆರ್ಥಿಕ ಸಿದ್ಧಾಂತಗಳು ಬದಲಾಗಿಲ್ಲ. ನಾವು ದೇಶದ ಜನರ ಪರವಾಗಿ ಯೋಚಿಸುತ್ತೇವೆ. ಅವರ ಅಗತ್ಯಕ್ಕೆ ತಕ್ಕಂಥ ನೀತಿಗಳನ್ನು ರೂಪಿಸುತ್ತೇವೆ. ಉದ್ದಿಮೆಗಳನ್ನು ನಡೆಸುವುದು ಸರ್ಕಾರದ ಕೆಲಸವಲ್ಲ ಎನ್ನುವುದು ನಮ್ಮ ನಿಲುವು. ಬಡವರಿಗೆ ಮನೆ, ರಸ್ತೆ, ನೀರು, ಪಡಿತರ ಕೊಡುವುದು ಸರ್ಕಾರದ ಕೆಲಸ. ನಮ್ಮ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸಲು ಏನು ಮಾಡಬೇಕು ಎನ್ನುವುದು ನನ್ನ ಆದ್ಯತೆ. ಬಡ ಮಕ್ಕಳಿಗೆ ಶಿಕ್ಷಣ ಸಿಗಬೇಕು, ಉದ್ಯೋಗ ಸಿಗಬೇಕು, ಅವರ ಬದುಕು ಚೆನ್ನಾಗಿ ಆಗಬೇಕು ಎನ್ನುವುದೇ ಸಮಾಜವಾದವಾದರೆ ಅದಕ್ಕೆ ನನ್ನ ಸಹಮತವಿದೆ. ಜಾರ್ಜ್ ಫರ್ನಾಂಡಿಸ್, ನಿತೀಶ್​ಕುಮಾರ್​ರಂಥ ನಾಯಕರನ್ನು ನಾನು ಒಪ್ಪುತ್ತೇನೆ. ಆದರೆ ಉತ್ತರ ಪ್ರದೇಶದಲ್ಲಿ ಸಮಾಜವಾದ ಎಂದರೆ ಕುಟುಂಬ ವಾದ ಎಂಬಂತೆ ಆಗಿದೆ. ಇದನ್ನು ನಾನು ಒಪ್ಪುವುದಿಲ್ಲ.

  • 09 Feb 2022 08:33 PM (IST)

    ಮಾಧ್ಯಮಗಳು ಮತ್ತು ದೇಶದ ಹಿತ

    ಭಾರತದಲ್ಲಿ ಅಲ್ಪಸಂಖ್ಯಾತರಿಗೆ ಭದ್ರತೆಯಿಲ್ಲ ಎಂಬ ವಾದವನ್ನು ಕೆಲ ಮಾಧ್ಯಮಗಳು ಮಾಡುತ್ತಿವೆ. ವಿದೇಶಗಳಲ್ಲೂ ಇದು ಬಿಂಬಿತವಾಗುತ್ತಿದೆ. ಇದರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಮಾಧ್ಯಮ ಜಗತ್ತಿನಲ್ಲಿಯೂ ಸಾಕಷ್ಟು ಸ್ಪರ್ಧೆಯಿದೆ. ವಿದೇಶಿ ಮಾಧ್ಯಮಗಳ ಬಗ್ಗೆ ನೋಡುವುದಾದರೆ, ಎಲ್ಲ ಮಾಧ್ಯಮಗಳೂ ಅವರ ದೇಶದ ಪರವಾಗಿ ಧ್ವನಿ ಎತ್ತುತ್ತವೆ. ನಾನು ಭಾರತದ ಬಗ್ಗೆ ಹೇಳುತ್ತಿಲ್ಲ, ವಿದೇಶಗಳ ಬಗ್ಗೆ ಹೇಳುತ್ತಿದ್ದೇನೆ.

  • 09 Feb 2022 08:30 PM (IST)

    ಬಿಜೆಪಿಯ ಸಿದ್ಧಾಂತ ಎಂದಿಗೂ ಬದಲಾಗಿಲ್ಲ

    ಸಬ್​ ಕಾ ಸಾಥ್, ಸಬ್​ ಕಾ ವಿಕಾಸ್ ಎನ್ನುವುದು ನಮ್ಮ ಪಕ್ಷದ ಮಂತ್ರ. ಇದು ಎಂದಿಗೂ ಬದಲಾಗಿಲ್ಲ. ಸಮಾಜದ ಎಲ್ಲ ವರ್ಗಗಳನ್ನೂ ಒಟ್ಟಿಗೆ ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದೇವೆ. ಆದರೆ ಮಾಧ್ಯಮಗಳಲ್ಲಿ ಇದು ಸರಿಯಾಗಿ ಬಿಂಬಿತವಾಗುತ್ತಿಲ್ಲ. ಮಾಧ್ಯಮಗಳಲ್ಲೂ ರಾಜಕೀಯ ಕಾಣಿಸುತ್ತಿದೆ. ಮಾಧ್ಯಮಗಳ ಭಾಷೆಯೂ ಬದಲಾಗಬೇಕಿದೆ. ದೇಶದ ಏಕತೆ ನಮ್ಮ ಮಂತ್ರ.

  • 09 Feb 2022 08:27 PM (IST)

    ಒಂದು ರಾಜ್ಯದಿಂದ ಅಸಹಕಾರ

    ದೇಶದ ಎಲ್ಲ ರಾಜ್ಯಗಳೂ ಕೇಂದ್ರ ಸರ್ಕಾರದೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಆದರೆ ಒಂದು ರಾಜ್ಯ ಮಾತ್ರ ದೂರ ಉಳಿದಿದೆ. ಇದು ದೌರ್ಭಾಗ್ಯದ ಸಂಗತಿ. ಎಲ್ಲ ಜಿಲ್ಲೆಗಳ ಆಶೋತ್ತರಗಳನ್ನು ಗುರುತಿಸಿ, ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿದ್ದೇವೆ.

  • 09 Feb 2022 08:26 PM (IST)

    ಸರ್ವಾಂಗೀಣ ಉನ್ನತಿಗೆ ನಮ್ಮ ಆದ್ಯತೆ

    ಭಾರತದಂಥ ದೇಶದಲ್ಲಿ ಹಲವು ಸಾಮಾಜಿಕ ವ್ಯವಸ್ಥೆಗಳಿವೆ. ಇಲ್ಲಿ ಏನೇ ಬದಲಾವಣೆ ಆಗಬೇಕು ಎಂದರೂ ಸಾಕಷ್ಟು ಯೋಚಿಸಬೇಕು. ಅತಿ ಸಣ್ಣ ಸಮುದಾಯಗಳಿಗೂ ಅಭಿವೃದ್ಧಿಗೆ ಅವಕಾಶ ಬೇಕು. ಅದೇ ರೀತಿ ದೇಶದ ಮಟ್ಟದಲ್ಲಿಯೂ ಒಂದು ಇಲಾಖೆ ಉತ್ತಮ ಸಾಧನೆ ಮಾಡಿ, ಮತ್ತೊಂದು ಇಲಾಖೆ ಹಿಂದೆ ಬಿದ್ದರೆ ದೇಶದ ಸರ್ವಾಂಗೀಣ ಉನ್ನತಿ ಸಾಧ್ಯವಾಗುವುದಿಲ್ಲ. ಹೀಗಾಗಿ ಎಲ್ಲ ಇಲಾಖೆಗಳ ಬಗ್ಗೆ ನಾವು ಗಮನ ಹರಿಸುತ್ತೇವೆ.

  • 09 Feb 2022 08:24 PM (IST)

    ವೈವಿಧ್ಯತೆ ನಮ್ಮ ಶಕ್ತಿ

    ಭಾರತದ ಅಭಿವೃದ್ಧಿಗಾಗಿ ಪ್ರಾದೇಶಿಕ ಆಶೋತ್ತರಗಳನ್ನು ಈಡೇರಿಸುವುದು ಅಗತ್ಯ ಎನ್ನುವುದು ಬಿಜೆಪಿಗೆ ತಿಳಿದಿದೆ. ನಾನೂ ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದವನು. ರಾಜ್ಯಗಳ ಆಶೋತ್ತರಗಳ ಬಗ್ಗೆ ನನಗೆ ಗೊತ್ತಿದೆ. ಮೊದಲು ಎಲ್ಲ ದೇಶಗಳ ಮುಖ್ಯಸ್ಥರು ದೆಹಲಿಗೆ ಬರುತ್ತಿದ್ದರು. ಆದರೆ ನಾನು ಇದನ್ನು ಬದಲಿಸಿದೆ. ಚೀನಾ ಅಧ್ಯಕ್ಷರನ್ನು ತಮಿಳುನಾಡಿಗೆ, ಅಮೆರಿಕ ಅಧ್ಯಕ್ಷರನ್ನು ಗುಜರಾತ್​ಗೆ, ಜರ್ಮನಿ ಛಾನ್ಸಲರ್​ರನ್ನು ಕರ್ನಾಟಕಕ್ಕೆ ಕರೆದೊಯ್ದಿದ್ದೆ. ತಮಿಳಿನ ಬಗ್ಗೆ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದೆ. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ದೊಡ್ಡ ಶಕ್ತಿ. ಆದರೆ ಕೆಲವರು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.

  • 09 Feb 2022 08:21 PM (IST)

    ಡಬಲ್ ಎಂಜಿನ್ ಸರ್ಕಾರದಿಂದ ಸಾಮರ್ಥ್ಯ ವೃದ್ಧಿ

    ಡಬಲ್ ಎಂಜಿನ್ ಸರ್ಕಾರದ ಔಚಿತ್ಯದ ಕುರಿತು ಪ್ರಸ್ತಾಪಿಸಿದ ಅವರು ಹಲವು ಯೋಜನೆಗಳನ್ನು ವಿವರಿಸಿದರು. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಕೇಂದ್ರ ಸರ್ಕಾರವು ಹಣ ಕೊಡುತ್ತದೆ. ರಾಜ್ಯ ಸರ್ಕಾರಗಳು ಅನುಷ್ಠಾನಕ್ಕೆ ತರಬೇಕು. ಕೆಲವು ರಾಜ್ಯಗಳಲ್ಲಿ ಅಲ್ಲಿನ ಸರ್ಕಾರಗಳು ಪ್ರತ್ಯೇಕ ಯೋಜನೆಗಳನ್ನು ತಂದಿವೆ. ನಾನು ಇದನ್ನು ತಪ್ಪು ಎನ್ನುವುದಿಲ್ಲ. ಆದರೆ ಉತ್ತರ ಪ್ರದೇಶದ ವ್ಯಕ್ತಿ ಕೇರಳದಲ್ಲಿ ಹುಷಾರು ತಪ್ಪಿದರೆ ಅವನಿಗೆ ಚಿಕಿತ್ಸೆ ಸಿಗುವುದು ಬೇಡವೇ? ಇದೇ ರೀತಿ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯ ಪರಿಸ್ಥಿತಿಯೂ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಯೋಗದಲ್ಲಿ ಕೆಲಸ ಮಾಡಬೇಕು. ಇದನ್ನೇ ನಾವು ಡಬಲ್ ಎಂಜಿನ್ ಸರ್ಕಾರ ಎಂದು ಕರೆಯುತ್ತೇವೆ.

  • 09 Feb 2022 08:17 PM (IST)

    ಪಾರದರ್ಶಕತೆಗೆ ಬದ್ಧವಾಗಿದೆ ಸರ್ಕಾರ

    ಉತ್ತರ ಪ್ರದೇಶದಲ್ಲಿ ಹಲವು ಅಪರಾಧಿಗಳು ಅಧಿಕಾರದಲ್ಲಿದ್ದಾರೆ ಎನ್ನುವುದನ್ನು ಒಪ್ಪಲು ಆಗುವುದಿಲ್ಲ. ಭಾರತದಲ್ಲಿ ನ್ಯಾಯಾಂಗ ಸಕ್ರಿಯವಾಗಿದೆ. ಸುಪ್ರೀಂಕೋರ್ಟ್​ನ ಹಲವು ತೀರ್ಪು ಮತ್ತು ಮಾರ್ಗದರ್ಶನದಂತೆ ಉತ್ತರ ಪ್ರದೇಶದಲ್ಲಿ ಸರ್ಕಾರ ನಡೆಯುತ್ತಿದೆ. ಪಾರದರ್ಶಕ ಸರ್ಕಾರ ನೀಡಿದ್ದೇವೆ ನಾವು.

  • 09 Feb 2022 08:15 PM (IST)

    ಸುರಕ್ಷೆಯ ಭರವಸೆ ಈಡೇರಿಸಿದ್ದೇವೆ

    ಉತ್ತರ ಪ್ರದೇಶದ ಯೋಗಿಜಿ ಸರ್ಕಾರ ಸೋದರಿಯರಿಗೆ ಸುರಕ್ಷೆಯ ಭರವಸೆ ಕೊಟ್ಟಿದೆ. ಅದನ್ನು ಈಡೇರಿಸಿದೆ. ಅಷ್ಟು ದೊಡ್ಡ ಕುಂಭಮೇಳ ನಡೆಸಿದೆವು. ಅಲ್ಲಿ ಯಾವುದೇ ಕಳ್ಳತನ ಅಥವಾ ಅಪರಾಧ ಕೃತ್ಯಗಳು ನಡೆಯಲಿಲ್ಲ. ಅಪರಾಧ ಮುಕ್ತ ಉತ್ತರ ಪ್ರದೇಶ ರಾಜ್ಯದ ಕನಸು ನನಸಾಗಿಸಲು ನಾವು ಬದ್ಧರಿದ್ದೇವೆ ಎಂದು ಮೋದಿ ಹೇಳಿದರು.

  • 09 Feb 2022 08:14 PM (IST)

    ಅಪರಾಧ ಮುಕ್ತ ಉತ್ತರ ಪ್ರದೇಶ

    ಅಪರಾಧ ಮುಕ್ತ ಉತ್ತರ ಪ್ರದೇಶದ ಕನಸು ಬಿತ್ತಿದ್ದೀರಿ. ಅದು ನನಸಾಗಬಲ್ಲದು ಎಂಬ ಆಶಯ ನಿಮಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಉತ್ತರ ಪ್ರದೇಶದ ಸಾಮಾನ್ಯ ಜನರು ಹಿಂದಿನ ಸರ್ಕಾರಗಳನ್ನು ರಕ್ಷಣೆ ಕೊಡುತ್ತವೆ ನಂಬಿದ್ದರು. ಆದರೆ ಗೂಂಡಾ ರಾಜ್ಯ ಅಲ್ಲಿ ನಡೆಯುತ್ತಿತ್ತು. ಇವೆಲ್ಲವನ್ನೂ ನಾನು ಹತ್ತಿರದಿಂದ ನೋಡಿದ್ದೇನೆ. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಅಲ್ಲಿನ ಹೆಣ್ಣುಮಕ್ಕಳು ರಾತ್ರಿ ಹೊತ್ತು ಧೈರ್ಯವಾಗಿ ಕೆಲಸಗಳಿಗೆ ಹೋಗುತ್ತಿದ್ದಾರೆ’ ಎಂದು ಮೋದಿ ವಿವರಿಸಿದರು.

  • 09 Feb 2022 08:11 PM (IST)

    ಜನರ ವಿಶ್ವಾಸವೇ ನಮ್ಮ ಬಲ

    ಚುನಾವಣೆಯನ್ನು ನಾವು ಕಲಿಕೆಗೆ ಅವಕಾಶ ಎಂದುಕೊಳ್ಳುತ್ತೇವೆ. ಇನ್ನೊಬ್ಬರಿಂದ ಪಾಠ ಕಲಿಯಲು ನಾನು ಅಥವಾ ನನ್ನ ಪಕ್ಷ ಎಂದಿಗೂ ಹಿಂಜರಿಯುವುದಿಲ್ಲ. ನಮಗೆ ಚುನಾವಣೆಗಳನ್ನು ಹೇಗೆ ಎದುರಿಸಬೇಕು ಎಂಬುದು ಗೊತ್ತು. ಏಕೆಂದರೆ ನಾವು ಜನರ ವಿಶ್ವಾಸವನ್ನು ಆಧರಿಸಿ ನಡೆಯುವವರು.

  • 09 Feb 2022 08:10 PM (IST)

    ಪ್ರತಿ ಚುನಾವಣೆಯೂ ನಮಗೆ ಒಂದು ಓಪನ್ ಯೂನಿವರ್ಸಿಟಿ.

    ಸೋಲು-ಗೆಲುವು ಎರಡೂ ಅನುಭವ ನಮಗಿದೆ

    ನಾವು ಪ್ರತಿಬಾರಿ ಚುನಾವಣೆ ಗೆಲ್ಲುವುದನ್ನು ಜನರ ವಿಶ್ವಾಸ ಗೆಲ್ಲುವುದು ಎಂದುಕೊಳ್ಳುತ್ತೇವೆ. ನಮ್ಮ ಎಲ್ಲ ಯೋಜನೆ, ಕಾರ್ಯಗಳು ಜನತಾ ಜನಾರ್ದನರ ಬದುಕು ಸುಧಾರಿಸುವ ಗುರಿ ಹೊಂದಿರುತ್ತದೆ. ಸೋಲು ಅಥವಾ ಗೆಲುವನ್ನು ನಾವು ಸಮಾನವಾಗಿ ತೆಗೆದುಕೊಳ್ಳುತ್ತೇವೆ. ಸೋತರೂ ನಾವು ಆಶಾ ಭಾವನೆ ಕಳೆದುಕೊಳ್ಳುವುದಿಲ್ಲ. ನಿರಾಶೆಯಿಂದ ಯಾರೊಬ್ಬರ ಮೇಲೂ ದೂರುವುದಿಲ್ಲ. ಎದುರಿಗೆ ಇರುವವರು ಅನುಸರಿಸಿತ ತಂತ್ರಗಳನ್ನು ವಿಶ್ಲೇಷಿಸಿ, ಪಾಠ ಕಲಿಯುತ್ತೇವೆ. ನಮ್ಮ ಸ್ಥಿತಿಗತಿ ಸುಧಾರಿಸಿಕೊಳ್ಳಲು ಯತ್ನಿಸುತ್ತೇವೆ. ಪ್ರತಿ ಚುನಾವಣೆಯೂ ನಮಗೆ ಒಂದು ಓಪನ್ ಯೂನಿವರ್ಸಿಟಿ.

  • 09 Feb 2022 08:07 PM (IST)

    ಐದೂ ರಾಜ್ಯಗಳಲ್ಲಿ ನಮಗೆ ಬಹುಮತ

    ಇದೀಗ ಚುನಾವಣೆ ನಡೆಯುತ್ತಿರುವ ಎಲ್ಲ ಐದು ರಾಜ್ಯಗಳಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ. ನಾವು ಭರ್ಜರಿ ಬಹುಮತ ಪಡೆಯುತ್ತೇವೆ. ಐದು ರಾಜ್ಯಗಳ ಜನರು ಸೇವೆ ಮಾಡುವ ಅವಕಾಶವನ್ನು ನಮಗೆ ನೀಡಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

  • 09 Feb 2022 08:06 PM (IST)

    ಆಡಳಿತ ಪರವಾದ ಅಲೆಯ ವಿಶ್ವಾಸ

    ಬಿಜೆಪಿಗೆ ಸ್ಥಿರತೆಯಿಂದ ಕೆಲಸ ಮಾಡುವ ಅವಕಾಶ ಸಿಕ್ಕಾಗ ಆಡಳಿತ ಪರವಾದ ಅಲೆ ಬಂದಿದೆ. ಅಧಿಕಾರ ವಿರೋಧಿ ಅಲೆ ಎಂದಿಗೂ ಬಂದಿಲ್ಲ. ಆಡಳಿತ ಪರವಾದ ಅಲೆಯೊಂದಿಗೆ ಬಿಜೆಪಿ ಪ್ರತಿ ಬಾರಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಯಾವಾಗಲೂ ಜನರ ಸೇವೆಯಲ್ಲಿ ಭಾಗಿಯಾಗುತ್ತದೆ. ನಾವು ಅಧಿಕಾರದಲ್ಲಿದ್ದಾಗ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಪರ ಅಲೆಯನ್ನು ನಾನು ನೋಡ್ತಿದ್ದೇನೆ ಎಂದು ಮೋದಿ ಹೇಳಿದರು.

Published On - 8:04 pm, Wed, 9 February 22

Follow us on